ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನಕ್ಕೆ ಬೇರೆ ಸಾಕ್ಷಿ ಬೇಕೆ?: ಮೋನಪ್ಪ ಭಂಡಾರಿ

Upayuktha
0

ಕರುನಾಡ ಕದನ- ಮಹಾಪ್ರಚಾರ ಅಭಿಯಾನ | ಒಡೆದಾಳುವ ರಾಜಕಾರಣದ ವಿರುದ್ಧ ಬಿಜೆಪಿ ವಾಗ್ದಾಳಿ


ಮಂಗಳೂರು: ಸೋಲಿನ ಭೀತಿಯಿಂದ ಕಾಂಗ್ರೆಸ್‌ ಹತಾಶವಾಗಿ ವಿಭಜನಕಾರಿ ಸಂಂಘಟನೆ ಎಸ್‌ಡಿಪಿಐ ಜತೆಗೆ ಹಾಗೂ ರಾಜ್ಯದಲ್ಲಿ ಅಸ್ತಿತ್ವದಲ್ಲೇ ಇಲ್ಲದಿರುವ ಸಿಪಿಐ ಜತೆಗೆ ಹೊಂದಾಣಿಕೆಗೆ ಮುಂದಾಗಿರುವುದು ಅದರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ಮೋನಪ್ಪ ಭಂಡಾರಿಯವರು ವಾಗ್ದಾಳಿ ನಡೆಸಿದರು.


ಸಮಾಜವನ್ನು ಒಡೆಯುವ ತನ್ನ ಮುಸ್ಲಿಂ ತುಷ್ಟೀಕರಣದ ಮುಂದುವರಿದ ಭಾಗವಾಗಿ, ಮಾಫಿಯಾ ಡಾನ್ ಅತೀಕ್ ಅಹ್ಮದ್‌ನನ್ನು ಹಾಡಿ ಹೊಗಳಿದ ಅಪ್ರಬುದ್ಧ ಕವಿ ಇಮ್ರಾನ್ ಪ್ರತಾಪ್ ಘಡಿಯನ್ನು ತನ್ನ ಸ್ಟಾರ್ ಪ್ರಚಾರಕರನ್ನಾಗಿ ನೇಮಿಸಿರುವುದು ಕೂಡ ಕಾಂಗ್ರೆಸಿನ ಬೌದ್ಧಿಕ ದಾರಿದ್ರ್ಯಕ್ಕೆ ಮತ್ತೊಂದು ನಿದರ್ಶನ ಎಂದು ಅವರು ನುಡಿದರು.


ವಿಚ್ಛಿದ್ರಕಾರಿ ಶಕ್ತಿಗಳನ್ನು ಮೊದಲಿನಿಂದಲೂ ಬೆಂಬಲಿಸುತ್ತ, ಬೆಳೆಸುತ್ತಲೇ ಬಂದಿರುವ ಕಾಂಗ್ರೆಸ್, ಕರಾವಳಿ ಜಿಲ್ಲೆಗಳನ್ನು ಭಯೋತ್ಪಾದಕರ ಅಡ್ಡೆಯನ್ನಾಗಿ ಮಾಡಲು ಹವಣಿಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಗಲಭೆಕೋರರು, ವಿಧ್ವಂಸಕರನ್ನು 'ನನ್ನ ಸಹೋದರರು' ಎನ್ನುವ ಡಿ.ಕೆ. ಶಿವಕುಮಾರ್, ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಸಿಕ್ಕಿಬಿದ್ದ ಶಾರೀಕ್ ಮೊಹಮ್ಮದ್‌ನನ್ನು 'ಅಮಾಯಕ' ಎನ್ನುತ್ತಾರೆ. ರಾಜ್ಯದ ಪೊಲೀಸ್ ಮಹಾನಿರ್ದೇಶಕರೇ ಈತನಿಗೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಐಸಿಸ್‌ ಜತೆಗೆ ನಿಕಟ ಸಂಪರ್ಕವಿದೆ ಎಂಬುದನ್ನು ಬಹಿರಂಗಪಡಿಸಿದ ಬಳಿಕವೂ ಕುಕ್ಕರ್ ಬಾಂಬ್ ಶಾರೀಕ್‌ನನ್ನು ಅಮಾಯಕ, ಮುಗ್ದ ಎಂದೆಲ್ಲ ಬಣ್ಣಿಸುವುದು, ಭಯೋತ್ಪಾದಕರನ್ನು ಬೆಂಬಲಿಸುವ ಕಾಂಗ್ರೆಸ್‌ನ ಮನಸ್ಥಿತಿಗೆ ಪುರಾವೆ. ಆದರೆ ಆ ಬಡ ರಿಕ್ಷಾ ಚಾಲಕ ಪುರುಷೋತ್ತಮ ಅವರು ಅಮಾಯಕನೆಂಬ ಹೇಳಿಕೆ ಕಾಂಗ್ರೆಸ್ ರಾಜ್ಯಾಧ್ಯಕ್ಷರಿಂದ ಬಾರದಿರುವುದು ವಿಪರ್ಯಾಸ.  ಕಾಂಗ್ರೆಸ್‌ನ ನೀತಿ ಏನು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಮೋನಪ್ಪ ಭಂಡಾರಿ ಹೇಳಿದರು.


ಚುನಾವಣೆಗೆ ಮೊದಲೇ ಅಧಿಕಾರಕ್ಕೆ ಗುದ್ದಾಟ:

ಚುನಾವಣೆಗೆ ಮೊದಲೇ ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್‌ನಲ್ಲಿ ಗುದ್ದಾಟ ನಡೆದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತೊಮ್ಮೆ ಗದ್ದುಗೆ ಏರುವ ಕನಸಾದರೆ, ಡಿ.ಕೆ ಶಿವಕುಮಾರ್ ಅವರಿಗೆ ಈ ಬಾರಿ ಹೇಗಾದರೂ ಮುಖ್ಯಮಂತ್ರಿ ಪಟ್ಟ ಪಡೆಯಲೇಬೇಕು ಎಂಬ ಆಸೆ. ಅವರಿಬ್ಬರ ನಡುವೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕೂಡ ಮುಖ್ಯಮಂತ್ರಿ ರೇಸಿನಲ್ಲಿದ್ದೇನೆ ಎನ್ನುವ ಸಂಕೇತಗಳನ್ನು ರವಾನಿಸಿದ್ದಾರೆ. ಆ ಮೂಲಕ ಕಾಂಗ್ರೆಸ್‌ನ ಪರಿಸ್ಥಿತಿ  'ಮನೆಯೊಂದು ಮೂರು ಬಾಗಿಲು' ಎನ್ನುವಂತೆ ಆಗಿದೆ ಎಂದು ಭಂಡಾರಿ ಅವರು ಟೀಕಿಸಿದರು.


ಬಿಜೆಪಿ ಈ ಚುನಾವಣೆಯಲ್ಲಿ ಕೇಂದ್ರ ಹಾಗೂ ರಾಜ್ಯದ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಆಧಾರದಲ್ಲಿ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಕಲ್ಪನೆಯೊಂದಿಗೆ ರಾಜ್ಯ ಮತ್ತು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಯ ಆಶಯದೊಂದಿಗೆ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಸಬ್ ಕಾ ವಿಶ್ವಾಸ್” ಎನ್ನುವ ಧ್ಯೇಯದೊಂದಿಗೆ ಅಮೃತಕಾಲದ ಮುನ್ನೋಟವನ್ನು ಇಟ್ಟುಕೊಂಡು ಮುಂದುವರಿಯುತ್ತಿದೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಭಾಜಪದ ಎಲ್ಲಾ ಶಾಸಕರು ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಜತೆಗೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟು ಕಾರ್ಯವೆಸಗುವ ಮೂಲಕ ಜಿಲ್ಲೆಯ ಜನತೆಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷವಾಗಿ ಮಂಗಳೂರು ನಗರ ದಕ್ಷಿಣದ ಶಾಸಕರಾದ ಡಿ. ವೇದವ್ಯಾಸ ಕಾಮತ್ ರವರು ಅವರ ಕ್ಷೇತ್ರದಲ್ಲಿ ಸುಮಾರು 4,500 ಕೋಟಿಗೂ ಗೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಅದರಿಂದ ಈ ಬಾರಿ ವೇದವ್ಯಾಸ ಕಾಮತ್‌ರವರು ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳಿಂದ ಗೆದ್ದು ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ರಾಜ್ಯದ ಜನತೆ ಈ ಚುನಾವಣೆಯ ಸಂದರ್ಭದಲ್ಲಿ  ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ. ಭಾರತೀಯ ಜನತಾ ಪಾರ್ಟಿ ಸ್ಪಷ್ಟ ಬಹುಮತದೊಂದಿಗೆ ವಿಜಯ ಶಾಲಿಯಾಗಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.


ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ಮಾತ್ರವಲ್ಲ, ದೇಶದ ಯಾವ ಭಾಗಕ್ಕೂ ಯಾವಾಗ ಬೇಕಾದರೂ ಹೋಗಬಹುದು. ಅವರ ಪ್ರವಾಸಕ್ಕೆ ಕಾಂಗ್ರೆಸ್ ನಾಯಕರ ಅನುಮತಿ ಅಗತ್ಯವಿಲ್ಲ. ಆದರೆ, ಮೋದಿಯವರ ಪ್ರವಾಸವನ್ನು ಟೀಕಿಸುವ ಕಾಂಗ್ರೆಸ್‌, ಪ್ರಸ್ತುತ ಕಾಂಗ್ರೆಸ್‌ನಲ್ಲಿ ಏನೂ ಅಲ್ಲದ ರಾಹುಲ್ ಗಾಂಧಿಯವರನ್ನು ಕರೆಸಿ ಕರ್ನಾಟಕದಲ್ಲಿ ಪ್ರವಾಸ ಮಾಡಿಸುವುದರ ಔಚಿತ್ಯವೇನು? ದೇಶದ ಪ್ರಧಾನಿಯವರು ಕರ್ನಾಟಕಕ್ಕೆ ಬರುತ್ತಾರೆ ಎಂದ ಕೂಡಲೇ ಕಾಂಗ್ರೆಸ್‌ಗೆ ಚಳಿಜ್ವರ ಬರುವುದು ಏಕೆ? ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಬಯಸಿರುವ ಕಾಂಗ್ರೆಸ್‌ಗೆ ನಡುಕ ಉಂಟಾಗುವುದು ಏಕೆ?

-ಮೋನಪ್ಪ ಭಂಡಾರಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು


ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ವಕ್ತಾರ ಜಗದೀಶ್ ಶೇಣವ, ಮೂಡಾ ಅಧ್ಯಕ್ಷ ರವಿಶಂಕರ ಮಿಜಾರ್, ಕರ್ನಾಟಕ ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್ ಮತ್ತು ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಇವರು ಉಪಸ್ಥಿತರಿದ್ದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top