ಘಟನೆ 1.... ಕಪ್ಪು ಶರ್ಟು ಮತ್ತು ಕಪ್ಪು ಪ್ಯಾಂಟು ಧರಿಸಿದ ಓರ್ವ ಡ್ಯಾನ್ಸ್ ಮಾಸ್ಟರ್ ಸುಮಾರು 40 ಕಿಲೋ ಮೀಟರ್ ದೂರವಿರುವ ತನ್ನ ನೃತ್ಯ ತರಬೇತಿ ಕೇಂದ್ರಕ್ಕೆ ದ್ವಿಚಕ್ರ ವಾಹನದಲ್ಲಿ ಬಂದು ಪಾಠ ಹೇಳಿಕೊಟ್ಟು ಮರಳಿ ತನ್ನೂರಿಗೆ ಹೊರಟ. ಆ ದಿನವಿಡೀ ಮೈಯಲ್ಲಿ ಕಸಿವಿಸಿ, ಹೇಳಿಕೊಳ್ಳಲಾಗದ ಸಂಕಟ, ಮೈಯೆಲ್ಲ ಬಿಸಿಯಾದ ಅನುಭವ. ಮರುದಿನ ಮುಂಜಾನೆಯ ಹೊತ್ತಿಗೆ ಸಂಪೂರ್ಣ ಅಸ್ವಸ್ಥನಾದ ಶಿಕ್ಷಕ ಮುಂದಿನ ಎರಡು ದಿನ ತರಗತಿಯಲ್ಲಿ ನೃತ್ಯ ಕಲಿಸಲು ಸಾಧ್ಯವಾಗದೆ ಹೋಯಿತು.
ಘಟನೆ 2... ಸಂಪೂರ್ಣ ಗಾಜಿನಿಂದ ಆವೃತವಾದ ತನ್ನ ತರಗತಿಯ ಕೋಣೆಯಲ್ಲಿ ಕೆಲವೇ ಗಂಟೆಗಳಲ್ಲಿ ಮಹಿಳಾ ಶಿಕ್ಷಕಿಯೋರ್ವರ ಅಂಗಾಲುಗಳು ಸಂಪೂರ್ಣ ಒಡೆದು ಹೋದದ್ದನ್ನು ಗಮನಿಸಿದರು. ಆ ದಿನ ಅದೆಷ್ಟೇ ನೀರು ಕುಡಿದರೂ ತಡೆಯದ ಬಾಯಾರಿಕೆ, ಸಂಕಟ. ಸಂಜೆಯ ಹೊತ್ತಿಗೆ ಕಾದ ಹೆಂಚಿನ ಮೇಲೆ ನೀರನ್ನು ಹಾಕಿದಾಗ ಶಾಖ ಹೊರಹೊಮ್ಮುವಂತೆಯೇ ತನ್ನ ದೇಹದಿಂದ ಬಿಸಿಯಾದ ಹೊಗೆ ಹೋಗುತ್ತಿರುವಂತಹ ಅನುಭವವಾಯಿತು ಆಕೆಗೆ. ತಕ್ಷಣ ವೈದ್ಯರನ್ನು ಸಂಪರ್ಕಿಸಿದಾಗ ಆಕೆಯಲ್ಲಿ ಡಿಹೈಡ್ರೇಶನ್ ಮತ್ತು ಸನ್ ಸ್ಟ್ರೋಕ್ ನ ಲಕ್ಷಣಗಳನ್ನು ಗುರುತಿಸಿದ ವೈದ್ಯರು ಓ.ಆರ್.ಎಸ್. ತಯಾರಿಸಿ ಕುಡಿಸಲು ಹೇಳಿದರು. ಓ ಆರ್ ಎಸ್ ನಲ್ಲಿರುವ ದೇಹಕ್ಕೆ ಅವಶ್ಯಕವಾದ ಖನಿಜಾಂಶಗಳನ್ನು ಹೊಂದಿರುವ ಎಲೆಕ್ಟ್ರೋಲೈಟ್ ಗಳು ತಕ್ಷಣ ಪರಿಣಾಮ ಬೀರಿ ವ್ಯಕ್ತಿಯನ್ನು ಬಿಸಿಲಿನ ಆಘಾತದಿಂದ ಮತ್ತು ನಿರ್ಜಲೀಕರಣದಿಂದ ಪಾರು ಮಾಡಬಲ್ಲವು.
ಘಟನೆ 3... ಸುಮಾರು 65 ರ ಪ್ರಾಯದ ಆ ಹೆಣ್ಣು ಮಗಳು ಅಂದು ಮುಂಜಾನೆಯಿಂದಲೇ ಸತತವಾಗಿ ವಾಂತಿಭೇದಿಯಿಂದ ಬಳಲಿ ಸುಸ್ತು ಆಯಾಸದಿಂದ ಕೈಕಾಲು ಸೋತಂತಾಗಿ ವೈದ್ಯರ ಬಳಿ ಹೋದಾಗ ನಿರ್ಜಲೀಕರಣದಿಂದ ಬಳಲುತ್ತಿದ್ದ ಆಕೆಗೆ ವೈದ್ಯರು ತಕ್ಷಣ ಸೂಕ್ತ ಚಿಕಿತ್ಸೆ ನೀಡಿದರು.
ಮೇಲಿನ ಎಲ್ಲ ಘಟನೆಗಳು ಒಂದೇ ವಿಷಯಕ್ಕೆ ಸಂಬಂಧಿಸಿದ್ದು. ಅದು ಸನ್ ಸ್ಟ್ರೋಕ್ ಅಥವಾ ಬಿಸಿಲ ಆಘಾತ.
ನೆತ್ತಿಯನ್ನು ಸುಡುವ ಸೂರ್ಯನ ಧಗೆಯಿಂದಾಗಿ ಮನುಷ್ಯನ ದೇಹ ಬೇಗನೆ ಬಳಲುತ್ತದೆ. ಜೊತೆಗೆ ಬೇಸಿಗೆಯಲ್ಲಿ ಮನುಷ್ಯನ ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಚಯಾಪಚಯ ಕ್ರಿಯೆಯು ಕ್ಷೀಣವಾಗಿದ್ದು ದೇಹಕ್ಕೆ ಯಾವುದನ್ನು ಅರಗಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಇದರ ಪರಿಣಾಮವಾಗಿಯೇ ಮನುಷ್ಯ ಡಿ ಹೈಡ್ರೇಶನ್ ಅಥವಾ ನಿರ್ಜಲೀಕರಣದಿಂದ ಬಳಲುತ್ತಾನೆ.
ಕೈ ಕಾಲಿನಲ್ಲಿ ಶಕ್ತಿ ಇಲ್ಲದಂತಾಗುವುದು, ನಿತ್ರಾಣ, ಬಳಲಿಕೆಯ ಪರಿಣಾಮವಾಗಿ ನಿದ್ದೆ ಬಂದಂತಾಗುವುದು, ಉರಿ ಮೂತ್ರ ಸಮಸ್ಯೆಗಳಿಂದ ಬಳಲುತ್ತಾನೆ. ಶೌಚಕ್ಕೆ ಹೋಗಲು ತೊಂದರೆ, ಬಿಸಿಲಿನ ಶಾಖದಿಂದಾಗಿ ವಾಂತಿ ಭೇದಿಗೆ ಒಳಗಾಗುತ್ತಾರೆ. ಸೂರ್ಯನ ಬಿಸಿಲಿನ ವೈಪರೀತ್ಯದಿಂದಾಗಿ ಚರ್ಮರೋಗದಂತಹ ತೊಂದರೆಗಳಿಗೂ ಈಡಾಗುತ್ತಾರೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ 35°ಗು ಹೆಚ್ಚು ಉಷ್ಣಾಂಶವು ದಾಖಲಾಗುತ್ತಿದ್ದು ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಹೊಲದಲ್ಲಿ ಕೆಲಸ ಮಾಡುತ್ತಿರುವವರಿಗೆ, ಗಾರೆ ಕೆಲಸ ಮಾಡುತ್ತಿರುವವರಿಗೆ ಬಿಸಿಲು ಬೀಳುವ ದೇಹದ ಭಾಗಗಳಲ್ಲಿ ಗುಳ್ಳೆಗಳು ಚರ್ಮದ ಸಮಸ್ಯೆಗಳು ಕಾಣುತ್ತವೆ. ಅತಿಯಾದ ಬೆವರುವಿಕೆಯಿಂದಾಗಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದಲ್ಲದೆ, ಚರ್ಮವು ಶುಷ್ಕತೆಯನ್ನು ಹೊಂದಿ ನವೆ, ತುರಿಕೆಗೆ ಕಾರಣವಾಗುತ್ತದೆ. ಕರುಳು ಬೇನೆ ಹೆಚ್ಚಾಗಿ ಕಾಣಿಸಿಕೊಳ್ಳುವುದಲ್ಲದೆ ಇನ್ನು ಕೆಲವರಿಗೆ ಪೈಲ್ಸ್ ವ್ಯಾಧಿ ಉಲ್ಬಣಿಸುತ್ತದೆ. ನಿರ್ಜಲೀಕರಣದ ಇನ್ನೊಂದು ಪ್ರಮುಖ ಸಮಸ್ಯೆ ತಲೆ ಸುತ್ತುವುದು. ಉಷ್ಣಾಂಶ ಹೆಚ್ಚಾಗಿರುವುದರಿಂದ ಮಕ್ಕಳು, ವೃದ್ಧರು ಎನ್ನದೆ ಎಲ್ಲರಿಗೂ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
ಬಿಸಿಲ ಆಘಾತ ಮತ್ತು ನಿರ್ಜಲೀಕರಣದಿಂದ ಪಾರಾಗುವ ಸರಳ ಸೂತ್ರಗಳು:
- ಅತಿ ಹೆಚ್ಚು ನೀರಿನ ಸೇವನೆ ನಿರ್ಜಲೀಕರಣವನ್ನು ತಡೆಯುತ್ತದೆ.
- ಎಳನೀರು ನಿಂಬೆಹಣ್ಣಿನ ಪಾನಕ, ಒ ಆರ್ ಎಸ್ ಗಳು ಕೂಡ ನಿರ್ಜಲೀಕರಣವನ್ನು ತಡೆಗಟ್ಟುತ್ತವೆ.
- ಮಿತವಾದ ಆಹಾರ ಸೇವನೆ ಸೂಕ್ತವಾದದ್ದು. ಕಡುಬೇಸಿಗೆಯ ದಿನಗಳಲ್ಲಿ ಎಣ್ಣೆಯಲ್ಲಿ ಕರಿದ ಮತ್ತು ಹೆಚ್ಚು ಮಸಾಲೆ ಭರಿತ ಆಹಾರ ಪದಾರ್ಥಗಳು ಜೀರ್ಣಕ್ರಿಯೆಗೆ ಸಹಕಾರಿಯಲ್ಲ.
- ಆದಷ್ಟು ಬಿಸಿಲಿಗೆ ಹೋಗದಂತೆ ಎಚ್ಚರಿಕೆ ವಹಿಸುವುದು ಉತ್ತಮ. ಬೆಳಗಿನ ಜಾವ ಇಲ್ಲವೇ ಸಂಜೆಯ ಸಮಯದಲ್ಲಿ ಮನೆಯಿಂದ ಹೊರಗೆ ಬರುವುದು ಸೂಕ್ತ. ತೀರಾ ಬಿಸಿಲಿಗೆ ಹೋಗಲೇಬೇಕಾದ ಸಂದರ್ಭವಿದ್ದರೆ ತಲೆಗೆ ಟೊಪ್ಪಿಗೆ ಮತ್ತು ಮುಖಕ್ಕೆ ಮಾಸ್ಕ್ ಧರಿಸುವುದು ಉತ್ತಮ. ಆದಷ್ಟು ಬಿಸಿಲು ತಾಕದಂತೆ ಎಚ್ಚರಿಕೆ ವಹಿಸಬೇಕು.
- ಸಾಧ್ಯವಾದಷ್ಟು ನೀರು, ಮಜ್ಜಿಗೆ, ಪಾನಕ ಮತ್ತು ಎಳನೀರುಗಳ ಮೊರೆ ಹೋಗುವುದು ಒಳಿತು. ರೆಫ್ರಿಜರೇಟರ್ನಲ್ಲಿರಿಸಿದ ನೀರಿಗಿಂತ ಮಣ್ಣಿನ ಗಡಿಗೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುವುದು ಒಳ್ಳೆಯದು.
- ತರಕಾರಿಗಳಲ್ಲಿ ಸೌತೆಕಾಯಿ, ಗಜ್ಜರಿ, ಊಟದಲ್ಲಿ ತಿಳಿಸಾರು, ತಂಬುಳಿ, ಕಟ್ಟಿನ ಸಾರುಗಳು, ಹಣ್ಣುಗಳಲ್ಲಿ ಕಲ್ಲಂಗಡಿ, ಕರಬೂಜ ಹಣ್ಣುಗಳು ದೇಹಕ್ಕೆ ತಂಪು ನೀಡುವ ಮತ್ತು ಹೆಚ್ಚು ನೀರಿನ ಅಂಶವನ್ನು ಹೊಂದಿದ್ದು ಅವೆಲ್ಲ ದೇಹದ ಆರೋಗ್ಯಕ್ಕೆ ಹಿತಕರ.
- ಅವಶ್ಯಕತೆ ಇದ್ದಾಗ ಮಾತ್ರ ಮನೆಯ ಹೊರಗೆ ಕಾಲಿಡಿ. ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಕಾಳಜಿಯನ್ನು ವಹಿಸಿ.
-ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ ಗದಗ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ