ಉಜಿರೆ: ಪ್ರೌಢಶಾಲಾ ಅಧ್ಯಯನದೊಂದಿಗೆ ಸಂಸ್ಕಾರಯುತ ಶಿಕ್ಷಣಾಧಾರಿತ ಜೀವನ ಶಿಕ್ಷಣಕ್ಕೆ ಪ್ರಸಿದ್ಧಿಯಾಗಿರುವ ಉಜಿರೆಯ ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ ಇತ್ತೀಚೆಗೆ ಗುರುವಂದನಾ ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪರೀಕ‍್ಷೆಗೆ ಶುಭ ಹಾರೈಸುವ ಕಾರ್ಯಕ್ರಮ ವಿಶಿಷ್ಟವಾಗಿ ಜರಗಿತು.
ಆರಂಭದಲ್ಲಿ ಮಕ್ಕಳು ಮತ್ತು ಹೆತ್ತವರ ನಡುವಿನ ಬಾಂಧವ್ಯದ ಪ್ರತೀಕವಾಗಿ ನಡೆದ ಸಾಮೂಹಿಕ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ, ಜೀವನದಲ್ಲಿ ಸಂಸ್ಕಾರದೊಂದಿಗೆ ಜವಾಬ್ದಾರಿಯುತ ಪ್ರಜೆಗಳಾಗಿ ಮುನ್ನಡೆಯುತ್ತೇವೆಂಬ ಸಂಕಲ್ಪದೊಂದಿಗೆ ಹೆತ್ತವರ ಕಾಲಿಗೆ ಮಕ್ಕಳು ನಮಸ್ಕರಿಸಿದರು. ನಂತರ ಪಾಲಕರು ವಿದ್ಯಾರ್ಥಿಗಳಿಗೆ ಗಂಧ, ಪುಷ್ಪ ನೀಡಿ ಉಜ್ವಲ ಭವಿಷ್ಯಕ್ಕೆ ಶುಭಕೋರಿದರು. ಇದೇ ವೇಳೆ, ವಿದ್ಯಾರ್ಥಿಗಳು ತಮ್ಮ ಶಿಕ್ಷಕ ವೃಂದವನ್ನು ಆರತಿ ಬೆಳಗಿ ಗೌರವಿಸುವ ಮೂಲಕ ಗುರುಶಿಷ್ಯ ಪರಂಪರೆಗೆ ಮೆರಗು ನೀಡಿದರು.
ಗುರುವಂದನೆ ಕಾರ್ಯಕ್ರಮಕ್ಕೆ ಪೂರಕವಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎಸ್. ಸತೀಶ್ಚಂದ್ರ ಅವರು ಮಾತನಾಡಿ, ವಿದ್ಯಾರ್ಥಿಯಲ್ಲಿ ಇರುವ ಸಾಮರ್ಥ್ಯವನ್ನು ಗುರುತಿಸಿ ಜೀವನದ ಪರೀಕ್ಷೆಯಲ್ಲಿ ಮುಂದೆತರುವುದು ಶಿಕ್ಷಕರ ಜವಾಬ್ದಾರಿ. ಇಂತಹ ಲೋಕ ಕಲ್ಯಾಣ ಕಾರ್ಯ ಮಾಡುತ್ತಿರುವ ಶಿಕ್ಷಕರನ್ನು ನಾವು ಮರೆಯಬಾರದು ಎಂದು ಹೇಳಿದರು.
ನಮಗೆ ವಿದ್ಯೆ ನೀಡಿ, ಸಮಾಜದಲ್ಲಿ ಸುಶಿಕ್ಷಿತನನ್ನಾಗಿ ಮಾಡುವ ಗುರುಗಳನ್ನು ನೆನೆಯುವುದೇ ಒಂದು ಪುಣ್ಯಕಾರ್ಯ. ಶಿಸ್ತು ಮತ್ತು ಸಂಸ್ಕಾರಯುತ ಜೀವನ, ವಿದ್ಯಾಭಾಸದ ಜೊತೆಗೆ ಕ್ರಿಯಾಶೀಲ ಚಟುವಟಿಕೆಗಳಿಗೂ ರತ್ನಮಾನಸ ಅವಕಾಶವನ್ನು ಕೊಟ್ಟಿದ್ದು, ಗುರುವಿಗೆ ಕ್ಷಮಾಗುಣವೇ ಅಗತ್ಯ ಸಾಧನ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ರುಡ್ ಸೆಟ್'ನ ಕಾರ್ಯನಿರ್ವಾಹಕ ಅಧಿಕಾರಿ ಗಿರಿಧರ್ ಅಭಿಪ್ರಾಯಪಟ್ಟರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಎಂ. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗ್ಗಡೆ, ಭಾರತೀಯ ಆಚರಣೆ ನಂಬಿಕೆಗಳಿಗೆ ವೈಜ್ಞಾನಿಕ ಕಾರಣಗಳಿದ್ದು ಅವುಗಳು ಇಂದು ಪಾಶ್ಚಾತ್ಯರಿಗೆ ಅರ್ಥವಾಗುತ್ತಿವೆ. ಅಂಕಗಳೇ ಜೀವನದ ಮೂಲ ಉದ್ದೇಶವಲ್ಲ, ನಾವು ಪಡೆದುಕೊಂಡ ಸಂಸ್ಕಾರ ಮುಖ್ಯ. ಹತ್ತನೇಯ ತರಗತಿಯ ನಂತರದ ಆಯ್ಕೆ ಸ್ಪಷ್ಟವಾಗಿರಲಿ ಎಂದು ನುಡಿದರು.
ಪಾಲಕ ಗುರುರಾಜ್ ಬೆಂಗಳೂರು ಅವರು ರತ್ನಮಾನಸದ ಸಂಸ್ಕಾರಯುತ ಶಿಕ್ಷಣವನ್ನು ಶ್ಲಾಘಿಸಿದರು. ಶ್ರೀ. ಧ. ಮ. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಸೋಮಶೇಖರ ಶೆಟ್ಟಿ,ಕಾಂಚನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಮೇಶ ಮಯ್ಯ , ಎಸ್.ಡಿ.ಎಂ ಸೆಕೆಂಡರಿ ಶಾಲೆಯ ಸಹ-ಶಿಕ್ಷಕ ಸುರೇಶ್ ಮಾತನಾಡಿ ಶುಭಹಾರೈಸಿದರು. ಸೆಕೆಂಡರಿ ಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು. ನಿಲಯ ಪಾಲಕ ಯತೀಶ್ ಅವರು ಪ್ರಾಸ್ತಾವಿಕ ನುಡಿಗಳ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು. ಶಿಕ್ಷಕ ತ್ರಿಭುವನ ನಿರೂಪಿಸಿದರು. ರವಿಚಂದ್ರ ಬಿ ಸ್ವಾಗತಿಸಿ, ಉದಯ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ