ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೆ ಅಗ್ರಸ್ಥಾನವಿದೆ. ಸಾಮಾನ್ಯವಾಗಿ ವಚನ ಸಾಹಿತ್ಯ ಎಂದಾಕ್ಷಣ ಸ್ಮರಣೆಗೆ ಬರುವುದು ಬಸವಣ್ಣನವರು ಮತ್ತು ಅವರ ಸಮಕಾಲೀನರು. ಆದರೆ ವಚನ ಸಾಹಿತ್ಯಕ್ಕೆ ಮುನ್ನುಡಿ ಹಾಡಿದವರು ದೇವರ ದಾಸಿಮಯ್ಯನವರು. ಇವರು ಕ್ರಿ.ಶ.1008 ರಿಂದ 1040ರ ಕಾಲಾವಧಿಯಲ್ಲಿ ಜೀವಿಸಿದ್ದರು.
ಬದುಕು ಎಂಬುದು ಸಂವಹನ ಸ್ವರೂಪಿ. ಹಾಗೆಯೇ ಸಾಹಿತ್ಯ ಕೂಡ. ಸರಳ ಸುಂದರ ವಚನ ಪ್ರಾಕಾರಕ್ಕೆ ಅಡಿಪಾಯ ಹಾಕಿದ್ದ ದಾಸಿಮಯ್ಯನವರು ಅರಿವಿನ ಸಿರಿಮನೆಯಾಗಿದ್ದರು. ‘ವಚನ ಸಾಹಿತ್ಯದ ನಂದಾದೀಪ ’ ಎಂದಿದ್ದಾರೆ ದಾಸಕುಲ ದೀಪಕ ದೇವರ ದಾಸಿಮಯ್ಯ ಕೃತಿಕಾರರಾದ ಡಾ.ಕವಿತಾಕೃಷ್ಣ. ಸಿರಿಕಾಂತ ವಿಠಲದಾಸ ಅಂಕಿತ ನಾಮದಿಂದ ಅವಕಗಳು ಬರೆದಿರುವ ಡಾ. ಬ.ಲ.ಸುರೇಶ ಅವರು ತಮ್ಮ ದೇವರ ದಾಸಿಮಯ್ಯ ಚಿತ್ರ ನಾಟಕದಲ್ಲಿ ದಾಸಿಮಯ್ಯರ ವ್ಯಕ್ತಿ ಚಿತ್ರಣ ದರ್ಶಿಸಿದ್ದಾರೆ.
ಶರಧಿಯ ಮೇಲೆ ಧರೆಯ ಕರಗದಂತಿರಿಸಿದೆ
ಅಂಬರಕೆ ಗದ್ದುಗೆ ಬೋದುಗೆ ಇಲ್ಲದಂತಿರಿಸಿದೆ
ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ
ನೊರೆವಾಲೊಳಗೆ ತುಪ್ಪದ ಕಂಪಿಲ್ಲದಂತಿರಿಸಿದೆ
ಶರೀರದೊಳಗೆ ಆತ್ಮನ ಆರೂ ಕಾಣದಂತಿರಿಸಿದೆ
ನೀ ಬೆರಸಿಹ ಬೆರಗಾದನಯ್ಯ ರಾಮನಾಥ
ಸೃಷ್ಟಿಕರ್ತ ಭಗವಂತನ ಲೀಲೆಯನ್ನು ಇದಮಿತ್ಥಂ ಎಂದು ಹೇಳಲುಬಾರದು. ಸಾರ ಅಂಬರ ಗಿಡ ಮರ ಹಾಲು ಶರೀರಗಳಲ್ಲಿ ಊಹಿಸಲಾಗದಷ್ಟು ಅಚ್ಚರಿ ಕಂಡು ಬೆರಗಾಗಿದ್ದಾರೆ ದಾಸಿಮಯ್ಯರು. ಪೌರಾಣಿಕ ಚಿತ್ರ ನಾಟಕದಲ್ಲಿ ಶಿವ, ಶಂಕರಿ, ನಾರದ, ಋಷಿಮುನಿಗಳೊಂದಿಗೆ ಕೈಲಾಸದಲ್ಲಿ ದೇವಲನೊಂದಿಗೆ ದೇವದತ್ತೆ ಕಾಣಿಸುತ್ತಾರೆ. ಶಿವ ಹೇಳುತ್ತಾನೆ ‘ಮಹರ್ಷಿ ಈ ಹಿಂದೆ ನೀನು ಮಾಡಿದ ಶಿವ ಮತೋದ್ದಾರ ಕಾರ್ಯ ಅಮೋಘವಾದುದು. ಅದೇ ಕಾರ್ಯ ಈಗ ನಿನ್ನಿಂದಲೇ ಮುಂದುವರಿಯಬೇಕಾಗಿದೆ. ಈಗಾಗಲೇ ಆರು ಅವತಾರವನ್ನು ಎತ್ತಿದ ನೀನು ಭೂಲೋಕದಲ್ಲಿ ಏಳನೇ ಅವತಾರವನ್ನೆತ್ತಿ ಶಿವಶಕ್ತಿಯ ಮಹತ್ವವನ್ನು ಪುನಶ್ಚೇತನಗೊಳಿಸಬೇಕು. ಭರತ ಖಂಡದ ದಕ್ಷಿಣ ಭೂಭಾಗದ ಮುದೆನೂರಿನಲ್ಲಿರುವ ಶಂಕರಿ ವೀರಭದ್ರ ದಂಪತಿಳು ಸಂತಾನವಿಲ್ಲದೆ ಕೊರಗುತ್ತಿದ್ದಾರೆ. ನಿನ್ನ ಕುಲ ಮತಸ್ಥರೇ ಆದ ಅವರ ಗರ್ಭಾಂಬುಧಿಯಲ್ಲಿ ಜನಿಸಿ ವಿಶ್ವಕ್ಕೆ ಶಿವ ತತ್ವ ಬೋಧನೆ ಮಾಡಿ ಆದ್ಯ ವಚನಕಾರನಾಗು ಎಂಬಲ್ಲಿಗೆ ದೇವಲನೇ ದಾಸಿಮಯ್ಯನೆಂದು ನಿರೂಪಿತವಾಗಿದೆ.
ಡಾ. ಈಶ್ವರಾನಂದ ಸ್ವಾಮೀಜಿಯವರು ದೇವರದಾಸಿಮಯ್ಯನವರ ವಚನಗಳು ಮತ್ತು ದಶೋಪನಿಷತ್ ಎಂಬ ಕೃತಿ ಪ್ರಕಟಿಸಿದ್ದಾರೆ ಮತ್ತು ಇದೇ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಲ್ಲದೇ ಇವರು ದಾಸಿಮಯ್ಯರ ಕನ್ನಡ ಮತ್ತು ಹಿಂದಿ ಭಾಷೆಯ 45 ಕೃತಿಗಳ ಮುಖ ಚಿತ್ರ ಸಂಗ್ರಹಿಸಿದ್ದಾರೆ. ದಾಸಿಮಯ್ಯನವರು ಸಗರ ನಾಡು ಎನಿಸಿಕೊಂಡ ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮುದನೂರಿನಲ್ಲಿ ಜನಿಸಿದರು. ಇವರು ದೇವಾಂಗ ಜನಾಂಗದ ಮೂಲ ಪುರುಷನಾದ ದೇವಲನ 7ನೇ ಅವತಾರವೆಂದು ವಿದ್ಯಾದರ, ಪುಷ್ಪದಂತ, ಬೇತಾಲ, ವರರುಚಿ, ಚಿತ್ರಯೋಗಿ, ದೇವಶಾಲಿ, ದೇವದಾಸರೆಂದು ಕಥೆಗಳಲ್ಲಿ ನಿರೂಪಿತವಾಗಿದೆ. ಈ ಸಪ್ತ ಅವತಾರ ಕುರಿತು ಬ್ರಹ್ಮಾಂಡ ಪುರಾಣದ ಶ್ಲೋಕ :
ವಿದ್ಯಾಧರೋ ದ್ರಾಪರಾದೌ ಮಧ್ಯೆಭೂತ್ ಪುಷ್ಪದಂತಕ:
ಅಂತೇವತಾರೋ ಬೇತಾಲ ಕಲೌವರರುಚಿ ಸ್ತಥಾ
ಚಿತ್ರಯೋಗಿ ದೇವಶಾಲೀ ದೇವದಾಸೋಭಿವಂ ಸಪ್ತ:
ಮುದನೂರಿನಲ್ಲಿರುವ ರಾಮತೀರ್ಥ, ಲಕ್ಷ್ಮಣತೀರ್ಥ, ಸಕ್ಕರೆ ತೀರ್ಥ, ಮರಳು ತೀರ್ಥ, ಪಾಂಡವ ತೀರ್ಥ, ಹಾಲುತೀರ್ಥ ಸಂಗಮ ತೀರ್ಥಗಳು (ಪುಷ್ಕರಣಿ) ದೇವಾಂಗನ ಸಪ್ತಾವತಾರಗಳ ದ್ಯೋತಕವೆನ್ನಲಾಗಿದೆ. ಸಪ್ತ ತೀರ್ಥಗಳ ಸುತ್ತಲೂ ಕೆತ್ತಿದ ಕಲಾಕೃತಿಗಳು ರಾಮಾಯಣ ಮಹಾಭಾರತದ ಕಥೆಗಳನ್ನು ತಿಳಿಸುತ್ತವೆ. ಈ ಗ್ರಾಮವು ಹಿಂದೆ ಗುಲ್ಬರ್ಗಾ ಜಿಲ್ಲೆಗೆ ಸೇರಿತ್ತು. ಯಾದಗಿರಿಯಿಂದ 90 ಕಿ.ಮೀ. ಸುರಪೂರದಿಂದ 37 ಕಿ.ಮೀ. ಮುಲ್ಲಾ ಹುಣಸಗಿ ರಸ್ತೆಯ ಮಧ್ಯದಲ್ಲಿ ಕೆಂಭಾವಿಯಿಂದ 7 ಕಿ.ಮೀ. ದೂರದಲ್ಲಿರುವ ಮುದನೂರನ್ನು ಮುದೇನೂರು, ಮುದ್ದಾಪುರ, ದೇವರ ಮುದನೂರು ಎಂದೆಲ್ಲಾ ಕರೆಯಲಾಗಿದೆ. ಶಿಲಾಶಾಸನಗಳು ರಾಷ್ಟ್ರಕೂಟರ, ಚಾಲುಕ್ಯರ ಕಲಚೂರಿಗಳ ಆಳ್ವಿಕೆಯ ಇತಿಹಾಸ ಹೇಳುತ್ತವೆ. ಈ ದೊರೆಗಳ ಕಾಲದಲ್ಲಿ ಈ ಗ್ರಾಮವು ಅಗ್ರಹಾರವಾಗಿತ್ತು. ಚಿಕ್ಕಮುದೇನೂರು ಗೋಪಾಲಸ್ವಾಮಿ ದೇವಾಲಯದ ಕಂಬದಲ್ಲಿರುವ ಶಿಲಾಶಾಸನದಲ್ಲಿ ದಕ್ಷಿಣ ವಾರಾಣಾಸಿ ಮುದನೂರು ಎಂದಿದೆ. ದೇವಾಲಯಗಳ ಸಮುಚ್ಚಯ ಹೊಂದಿ ನವ ಮಾತೃಕೆಯರ ಶಿಲಾಪಟ್ಟಿ, ಶಿವ-ಪಾರ್ವತಿಯರ ಉಬ್ಬು ಶಿಲ್ಪಗಳು, ಏಳು ಹೆಡೆಯ ನಾಗರ ಶಿಲ್ಪವಿದೆ. ದಾಸಿಮಯ್ಯನ ಆರಾಧ್ಯ ದೈವ ರಾಮನಾಥ ಮಂದಿರವೇ ರಾಮೇಶ್ವರ ದೇವಾಲಯವೆನ್ನಲಾಗಿದೆ. ಇದು ದ್ವಿಕೂಟವಾಗಿದ್ದು ಪೂರ್ವಕ್ಕೆ ಮುಖ ಮಾಡಿರುವ ಗರ್ಭಗೃಹದಲ್ಲಿ ಬೃಹತ್ತಾದ ರಾಮಲಿಂಗೇಶ್ವರ ಲಿಂಗವಿದೆ. ಪಂಚ ಶಾಖಾ ಬಾಗಿಲು ಹೊಂದಿರುವ ಗಜ ಲಕ್ಷ್ಮಿಯ ಲಲಾಟ ಪಟ್ಟಿಕೆಯಿದೆ. ಪಶ್ಚಿಮಾಭಿಮುಖವಾಗಿ ಉಮಾಮಹೇಶ್ವರಿ ಶಿಲ್ಪವಿದೆ. ಊರ ಹೊರಗೆ ಭದ್ರಪ್ಪಯ್ಯನ ಮಠವಿದೆ. ಮುಖ್ಯ ದ್ವಾರಕ್ಕೆ ಬ್ರಹ್ಮ, ನಟರಾಜ, ವಿಷ್ಣು ದೇವತೆಗಳುಳ್ಳ ಆಕರ್ಷಕ ಮಕರ ತೋರಣವಿದೆ. 18 ಕೈಗಳ ನಟರಾಜನ ಉಬ್ಬು ಶಿಲ್ಪ ಸುಂದರವಾಗಿದೆ.
ದಾಸಿಮಯ್ಯನವರು ಬಾಲ್ಯವನ್ನು ಆಟ ಪಾಠ ಶಿವ ಪೂಜೆ ಧ್ಯಾನದಲ್ಲಿ ಮುದನೂರಿನಲ್ಲಿ ಕಳೆದರು. ಶ್ರೀಶೈಲ ಪ್ರಸಿದ್ದ ವಿದ್ಯಾ ಕೇಂದ್ರವಾಗಿದ್ದು ಅಲ್ಲಿಗೆ ಹೋಗಿ ಸೂರ್ಯ ಸಿಂಹಾಸನ ಪೀಠದ 3ನೇ ಜಗದ್ಗುರು ಶ್ರೀ ಚಂದ್ರಗುಂಡ ಶಿವಾಚಾರ್ಯರಿಂದ ಶೈವದೀಕ್ಷೆ ಪಡೆದರು.
ಘಟದೊಳಗೆ ತೋರುವ ಸೂರ್ಯನಂತೆ
ಸರ್ವರಕ್ಕು ಶಿವನ ಚೈತನ್ಯವಿಪ್ಪುದು
ಇದ್ದರೇನು ಅದ ಕೊಡುವರೆ
ಗುರುವಿನಿಂದಲ್ಲದಾಗದು ಕಾಣಾ ರಾಮನಾಥ ಎಂದು ದಾಸಿಮಯ್ಯನವರು ಗುರು ಕರುಣೆಯಿಂದ ತಮ್ಮಲ್ಲಾದ ಪರಿವರ್ತನೆಯನ್ನು ತಿಳಿಸಿದ್ದಾರೆ.
ಬಸವಣ್ಣನವರು ದಾಸಿಮಯ್ಯನವರನ್ನು ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ.
ಭಕ್ತಿ ಎಂತಹದಯ್ಯ ದಾಸಯ್ಯ ಮಾಡಿದಂತಹದು
ಭಕ್ತಿ ಎಂತಹದಯ್ಯ ಸಿರಿಯಾಳ ಮಾಡಿದಂತಹದು
ಭಕ್ತಿ ಎಂತಹದಯ್ಯ ಸಿಂಧು ಬಲ್ಲಾಳ ಮಾಡಿದಂತಹದು
ಭಕ್ತಿ ಎಂತಹದಯ್ಯ ಕೂಡಲ ಸಂಗಮದೇವ
ನೀ ಬಾಣಾ ಬಾಗಿಲು ಕಾಯ್ದಂತಹದು
ಭಕ್ತಿಯ ಮಹತ್ವವನ್ನು ದಾಸಿಮಯ್ಯ ಮೊದಲಾದ ವ್ಯಕ್ತಿಗಳ ಉಲ್ಲೇಖದೊಂದಿಗೆ ಭಕ್ತಿಯ ವೈಶಿಷ್ಟ್ಯವನ್ನು ಅರಿತ ಮಹಾನುಭಾವಿ ಎಂದು ಸ್ತುತಿಗೆ ಒಳಪಡಿಸಿದ್ದಾರೆ. ದಾಸಿಮಯ್ಯ ತವನಿಧಿಯನ್ನು ಪಡೆದ ವಿಚಾರವನ್ನು ಬಸವಣ್ಣನವರು ತಮ್ಮ ವಚನದಲ್ಲಿ ಪ್ರಸ್ತಾಪಿಸಿದ್ದಾರೆ.
ಮುನ್ನಿನವರು ಹೋದ ದಾರಿ ಭಯ ಕಾಣಿರಣ್ಣ
ಬಲ್ಲಾಳನ ವಧುವಿನೊಡನೆ ಸರಸವಾಡಿದಂದಿಂದ ಭಯ ಕಾಣಿರಣ್ಣ
ಸಿರಿಯಾಳನ ಮಗನ ಬೇಡಿದಂದಿಂದ ಭಯ ಕಾಣಿರಣ್ಣ
ದಾಸನ ವಸ್ತ್ರವ ಸೀಳಿದಂದಿದ ಭಯ ಕಾಣಿರಣ್ಣ
ಅಘಟಿತ ಘಟಿತರು ವಿಪರೀತ ಚರಿತರು
ಕೂಡಲ ಸಂಗಮ ಶರಣರು ನಡೆದ ದಾರಿ ಭಯ ಕಾಣಿರಣ್ಣ
ತವನಿಧಿ ಎಂದರೆ ಅಕ್ಷಯ ಪಾತ್ರೆ. ಅದರಿಂದ ಬೇಕಾದಷ್ಟು ದವಸ ಧಾನ್ಯ ದೊರಕುತ್ತಿತ್ತಂತೆ. ತವನಿಧಿಯಿಂದ ದಾಸೋಹ ಕಾರ್ಯ ಸಾಂಗವಾಗಿ ಸಾಗುತ್ತದೆ. ದಾಸಿಮಯ್ಯ ತವನಿಧಿಯನ್ನು ಶಿವನಿಂದ ಪಡೆದ ಕಥೆ ಪವಾಡದಿಂದ ಕೂಡಿದೆ. ಒಮ್ಮೆ ದಾಸಿಮಯ್ಯ ಸುಂದರವಾದ ವಸ್ತ್ರವನ್ನು ನೇಯ್ದು ಮಾರಾಟ ಮಾಡಲು ಸಂತೆಗೆ ಹೋಗುತ್ತಾರೆ. ಸಂಜೆಯಾದರೂ ವ್ಯಾಪಾರವಾಗುವುದಿಲ್ಲ. ಆಗ ಶಿವನೇ ಜಂಗಮ ರೂಪಿಯಾಗಿ ಬಂದು ವಸ್ತ್ರವನ್ನು ಕೊಂಡು ದಾಸಿಮಯ್ಯನ ಎದುರಿನಲ್ಲೇ ಹರಿದುಹಾಕಿದನಂತೆ. ಆದರೆ ದಾಸಿಮಯ್ಯ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸದೆ ನಿಶ್ಚಲನಾಗಿ ನಿಂತಿದ್ದರಂತೆ. ಆಗ ಶಿವನು- ದಾಸಿಮಯ್ಯ, ಧರೆಯಲ್ಲಿ ನಿನ್ನಿಂದಾಗಬೇಕಾದ ಲೋಕಕಲ್ಯಾಣ ಕಾರ್ಯಗಳು ಬಹಳಷ್ಟಿದೆ. ಕರ್ತವ್ಯ ಪೂರ್ಣಗೊಳ್ಳುತ್ತಿರುವಂತೆಯೇ ನಿನ್ನ ಅವತಾರ ಸಮಾಪ್ತಿಯಾಗುತ್ತದೆ. ಇದು ತವನಿಧಿ. ಇದರಲ್ಲಿ ದವಸ ದಾನ್ಯಗಳು ಬತ್ತುವುದಿಲ್ಲ. ನೀನು ಬಯಸುವ ಪದಾರ್ಥವನ್ನು ತುಂಬಿ ಕೊಡುತ್ತದೆ. ಇದನ್ನು ಸಾಧು ಸಂತರ ದಾಸೋಹಕ್ಕೂ, ಸತ್ಕಾರ್ಯಕ್ಕೂ ಉಪಯೋಗಿಸು ಎಂದನಂತೆ.
ದಾಸನ ಕುಲವಾದಾತ ಈಶಂಗಲ್ಲದೆ ಶರಣೆನ್ನ
ಆಸೆ ಮಾಡ ನೋಡ ಅನ್ಯ ದೈವಂಳಿಗೆ
ದೇಶದ ಪಿಶಾಚಗಳಿಗೆ ಆಸೆ ಮಾಡ ನೋಡ
ಆಸೆ ಮಾಡಿದನಾದಡೆ ಅವ ದಾಸನ ಕುಲವಲ್ಲ
ಅವ ಅನ್ಯ ಕುಲ ಕಾಣ ರಾಮನಾಥ
ಶಿವನು ಶರಣನಾಗಿ ಬಂದು ಬೇಡುವೆನು ಎಂಬ ನಂಬಿಕೆ, ಶರಣರಿಗೆ ಇತ್ತರೆ ಅದು ಶಿವನಿಗೆ ಇತ್ತ ಪರಿಕಲ್ಪನೆ ಧರ್ಮದ ಹಿರಿಮೆ.
ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
ಸುಳಿಯ ಬೀಸುವ ವಾಯು ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥ
ದಾಸಿಮಯ್ಯ ಆದ್ಯ ವಚನಕಾರರು. ಬಸವಾದಿ ಶರಣರಿಗೆ ಸ್ಪೂರ್ತಿದಾಯಕರು. ದಾಸಿಮಯ್ಯನವರ ಬಗ್ಗೆ ಪ್ರಸ್ತಾಪಿಸಿದವರಲ್ಲಿ ಬಸವಣ್ಣನವರು ಮೊದಲಿಗರು. ಭಕ್ತಿಯಿಲ್ಲದ ಬಡವ ನಾನಯ್ಯ ಎಂದು ಹೇಳಿ ದಾಸಿಮಯ್ಯನ ಮನೆಯಲ್ಲೂ ಬೇಡಿದೆ ಎಲ್ಲಾ ಪುರಾತನರು ನೆರೆದು ಭಕ್ತಿಯ ಭಿಕ್ಷವನಿಕ್ಕಿದರೆ ಎನ್ನ ಪಾತ್ರೆ ತುಂಬಿತು ಎಂದಿದ್ದಾರೆ ಭಕ್ತಿ ಭಂಡಾರಿ ಬಸವಣ್ಣನವರು.
-ಗೊರೂರು ಅನಂತರಾಜು, ಹಾಸನ
(ಮಾ.26 ರಂದು ದೇವರ ದಾಸಿಮಯ್ಯ ಜಯಂತಿ ಹಿನ್ನೆಲೆಯಲ್ಲಿ ವಿಶೇಷ ಲೇಖನ)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ