ಶ್ರೀ ಪೇಜಾವರ ಶ್ರೀಗಳಿಂದ ಶಿಲಾನ್ಯಾಸ; ಗಣ್ಯರ ಉಪಸ್ಥಿತಿ
-ಜಿ ವಾಸುದೇವ ಭಟ್ ಪೆರಂಪಳ್ಳಿ
ತ್ರೇತಾಯುಗದಲ್ಲಿ ಲಂಕಾಧಿಪತಿ ರಾವಣನು ಸೀತೆಯನ್ನು ಅಪಹರಿಸಿಕೊಂಡು ಪುಷ್ಪಕ ವಿಮಾನದಲ್ಲಿ ಲಂಕೆಯೆಡೆಗೆ ತೆರಳುತ್ತಿದ್ದ ವೇಳೆ ಸೀತೆಯ ಆಕ್ರಂದನವನ್ನು ಕೇಳಿ ರಾವಣನನ್ನು ಶಿಕ್ಷಿಸಿ ಸೀತೆಯನ್ನು ರಕ್ಷಿಸಲು ಜಟಾಯು ಎಂಬ ಪಕ್ಷಿರಾಜ ನಡೆಸಿದ ಹೋರಾಟದ ಕಥಾನಕ ನಮಗೆಲ್ಲ ಗೊತ್ತು.
ತನ್ನ ಶಕ್ತಿಯನ್ನೆಲ್ಲ ಪ್ರಯೋಗಿಸಿ ರಾವಣನೊಂದಿಗೆ ಕಾದಾಡಿದ ಜಟಾಯು, ಕೊನೆಗೆ ರಾವಣಾಸುರನ ಖಡ್ಗದಿಂದ ರೆಕ್ಕೆಯನ್ನು ಕಳೆದುಕೊಂಡು ಭೂಮಿಗೆ ಬೀಳುತ್ತದೆ.ಅಲ್ಲಿಗೆ ಜಟಾಯುವಿನ ವೀರಾವೇಷದ ಹೋರಾಟ ಒಂದು ದಾರುಣ ಅಂತ್ಯ ಕಾಣುತ್ತದೆ.
ಘಾಸಿಗೊಂಡ ಜಟಾಯುವು ಒಂದು ಪರ್ವತದ ಮೇಲೆ ಬಿದ್ದು ಮುಂದೆ ಸೀತಾನ್ವೇಷಣೆಗಾಗಿ ಅದೇ ಮಾರ್ಗದಲ್ಲಿ ಶ್ರೀರಾಮ ಬರುವನೆಂಬ ವಿಶ್ವಾಸದ ನಿರೀಕ್ಷೆಯಲ್ಲಿ ಅವನ ಸ್ಮರಣೆಯಲ್ಲೇ ಉಸಿರಿಟ್ಟುಕೊಂಡು ಕಾಯುತ್ತದೆ. ಜಟಾಯುವಿನ ಶ್ರದ್ಧಾಪೂರ್ವಕ ವಿಶ್ವಾಸ ನಿಜವಾಗಿ ರಾಮ ಅಲ್ಲಿಗೆ ಬಂದು ಆ ಪಕ್ಷಿರಾಜನ ದುಃಸ್ಥಿತಿಗೆ ಮರುಗಿ ಅದರ ಬಾಯಿಂದಲೇ ನಡೆದ ವೃತ್ತಾಂತವನ್ನು ತಿಳಿದು ಅದರ ಸಾಹಸವನ್ನು ಪ್ರಶಂಸಿಸುತ್ತಾನೆ. ರಾಮನ ತೊಡೆಯ ಮೇಲೆ ಜಟಾಯುವಿನ ವೀರಮರಣವಾಗುತ್ತದೆ.
ಜಟಾಯು ಮೋಕ್ಷದ ಈ ಪವಿತ್ರ ಪರ್ವತ ಕೇರಳದ ಕೊಲ್ಲಂ ಜಿಲ್ಲೆಯ ಚಡಯಮಂಗಲಮ್ ಎಂಬ ಸ್ಥಳದಲ್ಲಿದೆ. ಸಮುದ್ರ ಮಟ್ಟದಿಂದ 1000 ಅಡಿ ಎತ್ತರದ ಅತ್ಯಂತ ಸುಂದರ ನಿಸರ್ಗ ಸ್ಥಳವಾಗಿರುವ ಇದೇ ಸ್ಥಳದಲ್ಲಿ ಶ್ರೀರಾಮನ ಪಾದದ ಚಿಹ್ನೆ ಅಲ್ಲದೇ ರಾಮನ ಆಗಮನದ ನಿರೀಕ್ಷೆಯಲ್ಲಿ ಕೊನೆ ಉಸಿರಿನವರೆಗೂ ಜಟಾಯುವು ನೀರು ಕುಡಿಯುತ್ತಾ ತೃಷೆ ನೀಗಿಸಿಕೊಳ್ಳುತ್ತಿದ್ದ ನೀರಿನ ಸೆಲೆಯೂ ಇದೆ.
ಬಹುಕಾಲ ಅಗೋಚರ ಸ್ಥಳವಾಗಿಯೇ ಇದ್ದ ಈ ಸ್ಥಳವನ್ನು 1973 ರಲ್ಲಿ ಕೇರಳದ ಚೆನ್ಕೊಟ್ಟುಕೋಣಮ್ ನ ಶ್ರೀ ರಾಮದಾಸಾಶ್ರಮದ ಶ್ರೀ ಸ್ವಾಮಿ ಸತ್ಯಾನಂದ ಸರಸ್ವತಿಯವರು ಈ ಸ್ಥಳದ ಬಗ್ಗೆ ಅನ್ವೇಷಣೆ ನಡೆಸಿ ಬಹಳ ಕಷ್ಟ ಪಟ್ಟು ಬೆಟ್ಟ ಹತ್ತಿ ಅಲ್ಲಿ ರಾಮನ ಪಾದ, ಜಟಾಯು ಪುಷ್ಕರಿಣಿ (ನೀರಿನ ಸೆಲೆ) ಮುಂತಾದವುಗಳನ್ನು ಅನ್ಷೇಷಿಸಿ ಲೋಕಕ್ಕೆ ಪರಿಚಯಿಸುತ್ತಾರೆ. ನಂತರ ಅದೇ ಸ್ಥಳದಲ್ಲಿ 13 ಅಡಿ ಎತ್ತರದ ಶ್ರೀ ಕೋದಂಡರಾಮನ ಪಂಚಲೋಹದ ವಿಗ್ರಹವನ್ನು ಪ್ರತಿಷ್ಠಾಪಿಸಿ ಶ್ರೀ ಜಟಾಯು ರಾಮನ ಮಂದಿರ ನಿರ್ಮಿಸುತ್ತಾರೆ. ರಾಮನ ಪಾದವಿರುವ ಪವಿತ್ರ ಜಾಗವನ್ನು ಪೂಜನೀಯವಾಗಿ ಸಂರಕ್ಷಿಸುತ್ತಾರೆ. ನಂತರ ಈ ಮಂದಿರದಲ್ಲಿ ಶ್ರೀರಾಮನ ಜೊತೆಗೆ ಸೀತಾಮಾತೆ, ವೀರ ಜಟಾಯು, ಲಕ್ಷ್ಮಣ, ಸುಗ್ರೀವ ಆಂಜನೇಯ, ದಕ್ಷಿಣಾಮೂರ್ತಿಯ ವಿಗ್ರಹಗಳನ್ನೂ ಪ್ರತಿಷ್ಠಾಪಿಸಲಾಗಿದೆ. ನಿತ್ಯ ಪೂಜೆಯನ್ನೂ ವ್ಯವಸ್ಥೆಗೊಳಿಸಲಾಗಿದೆ. ನಂತರದ ದಿನಗಳಲ್ಲಿ ಅನೇಕ ಭಕ್ತರು ಬಹಳ ಕಷ್ಟಪಟ್ಟು ಈ ದುರ್ಗಮ ಬೆಟ್ಟ ಹತ್ತಿ ಪವಿತ್ರ ಸ್ಥಳದ ಸಂದರ್ಶನ ಗೈದು ರಾಮಾಯಣದಲ್ಲಿ ಉಲ್ಲೇಖಿಸಲ್ಪಟ್ಟ ಶ್ರೀ ಜಟಾಯುಸ್ತುತಿಯನ್ನು ಜಪಿಸಿ ಭಕ್ತಿಯನ್ನು ಅರ್ಪಿಸುತ್ತಿದ್ದಾರೆ.
ಆದರೆ ಈ ಕ್ಷೇತ್ರವನ್ನು ಒಂದು ಪವಿತ್ರ ತೀರ್ಥ ಸ್ಥಳವಾಗಿ ರೂಪಿಸಬೇಕೆನ್ನುವ ಬಯಕೆ ಶ್ರೀ ಸ್ವಾಮಿ ಸತ್ಯಾನಂದ ಸರಸ್ವತಿಯವರು ಮತ್ತು ದೇವಳವನ್ನು ನಡೆಸುತ್ತಿರುವ ಅವರ ನೇತೃತ್ವದ ಟ್ರಸ್ಟ್ ಗೆ ಇತ್ತು. ಈಗ್ಗೆ 16 ವರ್ಷಗಳ ಹಿಂದೆ ಶ್ರೀ ಸ್ವಾಮಿ ಸತ್ಯಾನಂದರು ಪರಂಧಾಮ ಸೇರಿದರು. ಈಗ ಶ್ರೀ ಜಯಕುಮಾರ್ ಟ್ರಸ್ಟ್ ಅಧ್ಯಕ್ಷರಾಗಿದ್ದು ಮಿಜೋರಾಂ ಮಾಜಿ ರಾಜ್ಯಪಾಲ ಕುಮ್ಮನಮ್ ರಾಜಶೇಖರನ್ ಕಾರ್ಯದರ್ಶಿಯಾಗಿದ್ದಾರೆ.
ಟ್ರಸ್ಟ್ ನ ಕನಸಿಗೆ ಆಗ ಕಾಲಕೂಡಿ ಬಂದಿರಲಿಲ್ಲ. ಆದರೆ ಕೌತುಕ ಎಂಬಂತೆ ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಭೂಮಿ ಹೋರಾಟಕ್ಕೆ ಯಶಸ್ಸು ದೊರೆತು ಅಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುವ ಪವಿತ್ರ ಸಂದರ್ಭಕ್ಕೆ ಪೂರಕವಾಗಿ ಅನೇಕ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ಕರ್ನಾಟಕದ ಕೊಪ್ಪಳದ ಹನುಮಂತ ಅವತರಿಸಿದ ಸ್ಥಳ ಅಂಜನಾದ್ರಿಯ ಅಭಿವೃದ್ಧಿಗೆ ಸಂಬಂಧಪಟ್ಟವರಿಗೆ ಪ್ರೇರಣೆ ದೊರೆತು ಚಾಲನೆ ದೊರೆತಿದೆ. ಅತ್ತ ಕಡೆ ಅಯೋಧ್ಯೆಯ ಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಡುವ ಶ್ರೀರಾಮ ಸೀತೆಯ ವಿಗ್ರಹಕ್ಕಾಗಿ ಜನಕನ ಮಿಥಿಲಾಪುರಿ (ನೇಪಾಳ) ದಿಂದ ಸಾಲಿಗ್ರಾಮ ಶಿಲೆಯ ಆಗಮನವಾಗಿದೆ.
ಅದೇ ರೀತಿ ಜಟಾಯು ಮೋಕ್ಷದ ಬೆಟ್ಟವನ್ನು ತೀರ್ಥಕ್ಷೇತ್ರವಾಗಿ ರೂಪಿಸುವ ಕನಸಿಗೂ ಪುಷ್ಟಿದೊರೆಯುತ್ತಿದೆ.
ಎತ್ತರದಲ್ಲಿರುವ ಈ ಸ್ಥಳಕ್ಕೆ ಯಾತ್ರಿಗಳು ತೆರಳಲು ಅನುಕೂಲವಾಗುವಂತೆ 1008 ಶಿಲಾ ಮೆಟ್ಟಿಲುಗಳನ್ನು ನಿರ್ಮಿಸುವ ಯೋಜನೆ ಸಿದ್ಧವಾಗಿದೆ. ನಾಳೆ ದಿನಾಂಕ 3/3/2023 ಶುಕ್ರವಾರದಂದು ಬೆಳಿಗ್ಗೆ ಸುಮೂಹೂರ್ತದಲ್ಲಿ. ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯ ಮಂತ್ರಿ ಅರ್ಜುನ್ ರಾಮ್ ಮೇಘರ್ ವಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಈ ಕುಮ್ಮನಮ್ ರಾಜಶೇಖರನ್ ಮತ್ತವರ ನೇತೃತ್ವದ ರಾಮಭಕ್ತರ ತಂಡ ಈ ಕಾರ್ಯದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಈ ಯೋಜನೆಗೆ ಸಮಸ್ತ ರಾಮಭಕ್ತರ ಸಹಕಾರ ಪಡೆಯಬೇಕೆಂಬ ಇಚ್ಛೆಯಿಂದ ಪಾದಂ ಪಾದಂ ರಾಮಪಾದಂ ಎಂಬ ಶೀರ್ಷಿಕೆಯಲ್ಲಿ ಆಸಕ್ತ ರಾಮಭಕ್ತರು ಪ್ರತೀ ಮೆಟ್ಟಿಲಿನ ನಿರ್ಮಾಣವೆಚ್ಚವನ್ನು ಭರಿಸುವ ಅವಕಾಶ ನೀಡಲಾಗಿದೆ ಪ್ರತೀ ಮೆಟ್ಟಿಲುಗಳಿಗೆ ತಲಾ 11000 ರೂ ನೀಡಿ ಸೇವೆ ಸಲ್ಲಿಸಬಹುದು. ಎಲ್ಲವೂ ಸುಸೂತ್ರವಾದರೆ ರಾಮಮಂದಿರ ನಿರ್ಮಾಣದ ಒಳಗೆ ಈ 1008 ಮೆಟ್ಟಿಲು ನಿರ್ಮಾಣ ಯೋಜನೆಯನ್ನು ಮುಗಿಸಿ ರಾಮಾರ್ಪಣೆ ಹಾಗೂ ಲೋಕಾರ್ಪಣೆ ಮಾಡಬೇಕೆಂದು ಸಂಕಲ್ಪಿಸಲಾಗಿದೆ.
ಈ ಸ್ಥಳವು ತಿರುವನಂತಪುರದಿಂದ ಉತ್ತರಕ್ಕೆ 48 ಕಿಮೀ ದೂರದ ಕೊಲ್ಲಂ ಜಿಲ್ಲೆಯಲ್ಲಿದೆ.
ಮಹಿಳೆಯ ರಕ್ಷಣೆ ಆಕೆಯ ಮಾನ ಪ್ರಾಣಗಳ ಸಂರಕ್ಷಣೆಗೆ ಏನ ಕೇನ ಪ್ರಕಾರೇಣ ಆದ್ಯತೆ ನೀಡಬೇಕೆಂಬ ರಾಮಾಯಣಾದಿ ಗ್ರಂಥಗಳ ಮೂಲಕ ನಮ್ಮ ಪ್ರಾಚೀನರು ನೀಡಿದ ದಿವ್ಯ ಸಂದೇಶಕ್ಕೆ ಸಾಕ್ಷಿಯೆಂಬಂತಿರುವ ಈ ಜಟಾಯುರಾಮನ ಬೆಟ್ಟ ಅತೀ ಶೀಘ್ರ ಸುಂದರ ತೀರ್ಥ ಯಾತ್ರಾ ಸ್ಥಳವಾಗಿ ರೂಪಿಸುವಲ್ಲಿ ಈ ಯೋಜನೆ ಸಾಕಾರವಾಗಲಿ ಎಂದು ಶ್ರೀ ರಾಮನಲ್ಲಿ ಪ್ರಾರ್ಥಿಸೋಣ.
1008 ಮೆಟ್ಟಿಲು ನಿರ್ಮಾಣ ಯೋಜನೆಗೆ ಮೆಟ್ಟಿಲೊಂದರ ತಲಾ 11000 ರೂ ನೀಡಿ ಸೇವೆ ಸಲ್ಲಿಸಬಯಸುವವರು ಈ ಕೆಳಗಿನ ಖಾತೆಗೆ ಸಲ್ಲಿಸಬಹುದು ಎಂದು ಟ್ರಸ್ಟ್ ವಿನಂತಿಸಿದೆ.
Jatayupura Sri Kodandarama Kshetra TrustState Bank of India
Chadayamangalam Branch
A/c no: 40862289435
Ifsc: SBIN0061701
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ