ಕೆಟಿಎಮ್, ರಾಯಲ್ ಎನ್‌ಫೀಲ್ಡ್, ಯಮಹಾ ಹೀಗೆ ಹಲವಾರು ತರಹದ ಬೈಕ್‌ಗಳಿಂದ ಆಗುವ ಲವ್ ಸ್ಟೋರಿಗಳ ಮಧ್ಯೆ ಇದೊಂದು ಸೈಕಲ್ ಲವ್ ಸ್ಟೋರಿ. ಆಕೆ 9ನೇ ತರಗತಿಯಲ್ಲಿ ಓದುತ್ತಿದ್ದಳು. ಮೃದು ಸ್ವಭಾವದ ಹುಡುಗಿ, ಜಾಣೆ. ಅದರೊಂದಿಗೆ ಆ ವಯಸ್ಸಿನ ಮಕ್ಕಳಲ್ಲಿರಬೇಕಾದ ಚುರುಕು ಬುದ್ಧಿ. ಹೀಗೆಯೇ ಒಂದು ದಿನ ಶಾಲೆಗೆ ಹೋಗುವಾಗ ಅವಳ ತರಗತಿಯವನೊಬ್ಬ ಆಕೆಯ ಎದುರಿನಿಂದ ಕೆಂಪು ಬಣ್ಣದ ಸೈಕಲ್ ಮೇಲೆ ಹೋದ. ಅದೇನೋ ವಿಚಿತ್ರವಾದ ಭಾವ ಆಕೆಗೆ ತಿಳಿಯದು. ಹಾಗೆ ತರಗತಿಗೆ ಹೋದಳು ಆಗ ಅವನನ್ನು ನೋಡಿದರೆ ಸಾಕು ಅವಳೊಳಗೆ ಒಂದು ತಳಮಳ.
ದಿನಗಳೆದಂತೆ ಆಸೆಗಳು ಹೆಚ್ಚಾಗತೊಡಗಿದವು. ಇಷ್ಟೆಲ್ಲದರ ಮಧ್ಯೆ ಒಂದು ದಿನ ಒಂದು ಪತ್ರ ಅದರೊಂದಿಗೆ ಒಂದು ಚಾಕಲೇಟನ್ನು ತನ್ನ ಗೆಳತಿಯ ಕೈಗೆ ಕೊಟ್ಟು ಹೇಳುತ್ತಾಳೆ ಇದು ಅವನಿಗೆ ಕೊಡು, ನಾನು ಅವನ ಸ್ನೇಹಿತೆಯಾಗಲು ಬಯಸುತ್ತೇನೆಂದು ಹೇಳು ಎಂದು ಹೇಳಿ ಕಳುಹಿಸುತ್ತಾಳೆ. ಮಾರನೇ ದಿನ ಏನಾಗಬಹುದೆಂಬ ಕುತೂಹಲದಲ್ಲಿ ಕಾಯುತ್ತಿದ್ದಳು, ಹೆದರಿಕೆಯಲ್ಲಿ ಬಂದ ಗೆಳತಿಗೆ ಆಕೆಗೆೆ ಏನು ಹೇಳಬೇಕೆಂದು ತಿಳಿಯದು ಅವನ ತಿರಸ್ಕಾರದ ನಿರ್ಧಾರವನ್ನು ಇವಳು ಹೇಗೆ ಸ್ವೀಕರಿಸುತ್ತಾಳೋ ಅನ್ನುವ ಕಳವಳ. ಆದರೂ ಕಡೆಗೆ ಅವನ ನಿರ್ಧಾರವನ್ನು ತಿಳಿಸಿದಳು. ನಿರ್ಧಾರ ಕೇಳಿಸಿಕೊಂಡ ಆಕೆ ಒಂದು ಕ್ಷಣ ಗಾಬರಿಗೊಂಡಳು. ಆದರೆ ಸ್ವಲ್ಪ ಹೊತ್ತಿನಲ್ಲಿ ಆ ಗಾಬರಿಯಲ್ಲೂ ಕೊಟ್ಟ ಚಾಕಲೇ ತಾನೇ ತಿನ್ನುತ್ತಾ ನಗುತ್ತಿದ್ದಳು, ಇದು ನನಗೆ ಸಂಬಂಧಿಸಿದಲ್ಲ ಎಂದು ಆ ವಿಷಯವನ್ನು ಅಲ್ಲಿಗೆ ಬಿಟ್ಟಳು.
ಆದರೆ ಮಾರನೇ ದಿನ ಶಾಲೆಗೆ ಹೋಗುವಾಗ ಪಾರ್ಕಿಂಗ್‌ನಲ್ಲಿ ನಿಂತಿದ್ದ ಅವನ ಸೈಕಲ್ ಅನ್ನು ನೋಡಿದಾಗ ಅದೇನೋ ವಿಚಿತ್ರ ಹುಚ್ಚು ಪ್ರೀತಿ, ದಿನಾಲೂ ಬರುವಾಗ ಅದರ ಮೇಲೆ ಕೈಯಾಡಿಸುವುದು, ಅದರ ಮೇಲೆ ಕೂತುಕೊಳ್ಳುವುದು ಏನೋ ಒಂದು ವರ್ಣಿಸಲಾಗದ ಪ್ರೀತಿ. ಹೀಗೆ ನಡೆಯುತ್ತಲೇ ಹೋಯಿತು. ಕೆಲವೊಮ್ಮೆ ಕನಸಲ್ಲಿ ಸೈಕಲ್ ಬರಲು ಪ್ರಾರಂಭಿಸಿತು.
ಬೆಳಗ್ಗೆ ಯೋಚನೆ ಮಾಡಿದಾಗ ತಿಳಿದದ್ದು ಅವತ್ತು ಮೊದಲ ಬಾರಿ ಅವನನ್ನು ನೋಡಿದಾಗ ಆದ ಭಾವನೆ ಇವನ ಮೇಲಿಂದಲ್ಲ ಈ ಸೈಕಲ್ ಮೇಲಿಂದ ಎಂದು. ಯಾವುದೇ ಪಶ್ಚಾತ್ತಾಪಕ್ಕೂ ಒಳಗಾಗದೆ ನೆಮ್ಮದಿಯಿಂದ ಬದುಕಲು ಪ್ರಾರಂಭಿಸಿದ್ದ ಅವಳಿಗೆ ಅರ್ಥವಾದದ್ದು ಇಷ್ಟೇ. ನಾವು ಇರುವವರೆಗೂ ನಮ್ಮ ಜೀವನಕ್ಕೆ ಯಾರೂ ಆಗುವುದಿಲ್ಲ. ಆದರೆ ಕೆಲವೊಂದು ವಸ್ತುಗಳು ನಮ್ಮ ಮನಸ್ಸಿನಲ್ಲಿಯೂ, ನಮ್ಮ ಜೀವನದಲ್ಲಿಯೂ ಚಿರಾಯುವಾಗಿ ಉಳಿದುಬಿಡುತ್ತವೆ. ಇದಾದ 7 ವರ್ಷಗಳ ನಂತರ ಅದೇ ಹುಡುಗ ಇನ್ಸ್ಟಾಗ್ರಾಂನಲ್ಲಿ ಸಿಕ್ಕಾಗ ಆಕೆ ಅವನಿಗೆ ಹೇಳಿದ್ದಳಂತೆ- ಒಬ್ಬ ವ್ಯಕ್ತಿಗೆ ಇಲ್ಲದ ಬೆಲೆ ಒಂದು ವಸ್ತುವಿಗೆ ಇದೆ, ಅದನ್ನು ಪಡೆದುಕೊಳ್ಳುವ ಮತ್ತು ಕಳೆದುಕೊಳ್ಳುವ ಎರಡು ಗುಣವೂ ಮನುಷ್ಯನಲ್ಲೇ ಇದೆ. ಅವತ್ತು ನಿನ್ನಿಂದ ಆ ವಸ್ತುವಿನ ಬೆಲೆ ಗೊತ್ತಾಯಿತು ಇವತ್ತು ನೀನಿಲ್ಲದಿದ್ದರೂ ಆ ನಿನ್ನ ಕೆಂಪು ಸೈಕಲ್‌ನ ನೆನಪು ನನ್ನ ಜೊತೆ ಇಂದಿಗೂ ಅಚ್ಚಳಿಯದೇ ಉಳಿದಿದೆ.
-ಶ್ರಾವ್ಯಾ ಪೂಜಾರಿ
ಆಳ್ವಾಸ್ ಕಾಲೇಜು, ಮೂಡುಬಿದಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ