ಮಹಾಭಾರತ ನಡೆದದ್ದೇ ಸ್ಟ್ರಾಟಜಿಯ ಮೇಲೆ. ಕೃಷ್ಣನ ಪ್ರವೇಶದೊಂದಿಗೆ. ದ್ರೌಪದಿಯ ಆಗಮನದ ಬಳಿಕ ಮಹಾಭಾರತಕ್ಕೆ ಇನ್ನೊಂದೇ ಆಯಾಮ ಬರುತ್ತದೆ. ದ್ರೌಪದಿಯ ಜೊತೆ ಕೃಷ್ಣನೂ ಬರುತ್ತಾನೆ ಎಂಬುದೂ ಅವನ ಜೊತೆ ಸ್ಟ್ರಾಟಜಿಗಳೂ ಬಂದವು ಎಂಬುದೂ ಆಮೇಲೆ ಹಸ್ತಿನಾವತಿಯ ಕತೆಯಲ್ಲೂ ಬಹಳ ತುಂಬ ಸ್ಟ್ರಾಟಜಿಗಳೇ ತುಂಬುತ್ತಾ ಕುರುಕ್ಷೇತ್ರದ ಹದಿನೆಂಟನೆಯ ರಾತ್ರಿಗೆ ಸಮಾಪ್ತಿಯಾಯಿತು ಎಂದಿತ್ಯಾದಿ.
ಜೋಗಿ ಬರೆದ ‘ಹಸ್ತಿನಾವತಿ’ಯಲ್ಲೂ ಸ್ಟ್ರಾಟಜಿಗಳೇ.ಪುಟದಿಂದ ಪುಟಕ್ಕೆ ಓದುಗರನ್ನು ಸೆಳೆಯುವ ಕತೆಯಲ್ಲಿ ಪರಮ ವೇದಾಂತವೂ ಪರಮ ಸ್ಟ್ರಾಟಜಿಯೂ ಕಾಣಿಸುತ್ತವೆ. ಈ ಸ್ಟ್ರಾಟಜಿಸ್ಚ್ ಯಾರು?
ಅದು ಸಹದೇವ, ಚೀಫ್ ಎಂದು ನೀವು ಭಾವಿಸಿದರೆ you are wrong. ನಿಜವಾದ ಸ್ಟ್ರಾಟಜಿಸ್ಟ್ ಬೇರೆಯೇ. ಅದು ಯಾರೆಂದು ಪತ್ತೆ ಮಾಡಿದರೆ ಪರಿಪೂರ್ಣ ಓದುಗ.
ಉದಾತ್ತತೆ ಈ ಕಾದಂಬರಿಯ ಹೂರಣ. ಆರಂಭದಿಂದ ಅಂತ್ಯದ ತನಕ ಈ ಹಸ್ತಿನಾವತಿಯನ್ನು ಕಾಪಾಡಿಕೊಂಡದ್ದು ಅದುವೇ. ಪ್ರತಿ ಸ್ಟ್ರಾಟಜಿಗಳನ್ನು ಪರಮ ಉದಾತ್ತತೆ ಮುರಿದೂ ಮುರಿದೂ ಎಸೆಯುತ್ತದೆ.ಕೊನೆಗೂ ಅದೇ ಮುಂಚೂಣಿಗೆ ಬಂದು ನಿಲ್ಲುತ್ತದೆ.
Poetic Justice ಈ ಕಾದಂಬರಿಯ ವ್ಯಕ್ತಮಧ್ಯ.
‘ಹಸ್ತಿನಾವತಿ’ಓದಿ ಮುಗಿಸಿ ನಿಟ್ಟುಸಿರು ಬಿಡಬಾರದು. ಆಹಾ ಎಷ್ಟೆಲ್ಲಾ ಹೇಳಿದರು ಎಂದು ಸಂತೋಷಪಡಲೂ ಬಾರದು.
ಏಕೆಂದರೆ ‘ಹಸ್ತಿನಾವತಿ’ ಕತೆ ಮುಗಿದಿಲ್ಲ. ನಾವು ಓದಿರೋದು ನಾಲ್ಕುನೂರು ಪುಟ ಅಷ್ಟೇ. ಹಾಗಾಗಿ ಓದುಗ ಸಂತೃಪ್ತ ಸ್ಥಿತಿಗೆ ತಲುಪಿದ ಎಂದರೆ ತಲುಪಲಿಲ್ಲ, ತಲುಪಲಿಲ್ಲ ಎಂದರೆ ತಲುಪಿದ ಎಂಬ ಒಂದು ಪಗಡೆ ಹಾಸನ್ನು ಹಾಸಿ ಕಾದಂಬರಿಕಾರ ಮತ್ತೊಂದು ಕಡೆ ಕಂಠ ಪತ್ರ ಹಿಡಿದು ಕುಳಿತಿದ್ದಾನೆ.
ಥೇಟ್ ವ್ಯಾಸರಂತೆ.
ನನ್ನ ಟಿಪ್ಪಣಿಗಳಿರುವುದು ಮುಂದಿನ ಕಾದಂಬರಿಗಾಗಿ. ಅದು ಹಸ್ತಿನಾವತಿ ಭಾಗ ಎರಡಕ್ಕಾಗಿ. ಅದಕ್ಕೆ ಏನೇ ಹೆಸರಿರಲಿ, ಅಲ್ಲಿ ಸಹದೇವ,ಚಾರುಲತಾ, ಪ್ರದ್ಯುಮ್ನ ಜೋಶಿ, ವನಿತಾ, ಜಾಬಾಲಿ, ದೇವಯಾನಿ, ಚಿದಾನಂದ ಪಾಂಡೆ ಅಥವಾ ಸಾಕ್ಷಾತ್ ಸಂಜಯ್ ಸರ್ಕಾರ್ ಯಾರೇ ಇರಲಿ ನನಗೆ ಮುಖ್ಯರಲ್ಲ. ನಾನು ಮರಳಿ ಮರಳಿ ಆ ಕೃಷ್ಣದ್ವೈಪಾಯನನ್ನು ಹುಡುಕುತ್ತೇನೆ. ಅವನು ಮತ್ತೆ ಮತ್ತೆ ಬರೆಯುವ ಭಾರತ ಕತೆಯನ್ನು ಅರಸುತ್ತೇನೆ.
ಸನತ್ ಮತ್ತು ಸತ್ಯಕಾಮ ನನಗೆ ಮತ್ತೆ ಮಹಾಭಾರತವಾಗಿ ಬರಬೇಕು. ಅದನ್ನು ಕಾದಂಬರಿಕಾರ ಮಾಡಬೇಕಾಗಿಲ್ಲ, ಚಿರಂಜೀವಿ ವ್ಯಾಸ ಮಾಡಲಿ ಅಷ್ಟೇ.
-ಗೋಪಾಲಕೃಷ್ಣ ಕುಂಟಿನಿ, ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ