ಉಡುಪಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕರ್ನಾಟಕದ ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರು ಈ ಭಾಗದ ಸಂತ ವರೇಣ್ಯರ ಜತೆ ಸಂತ ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಔಪಚಾರಿಕ, ಅನೌಪಚಾರಿಕ ಮಾತುಕತೆಗಳ ಬಳಿಕ ಸಂವಾದ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 'ರಾಜ್ಯದ ಆಡಳಿತ ನಡೆಸುವ ಸರ್ಕಾರಗಳಿಂದ ಕರಾವಳಿಯ ಸಾಧು ಸಂತರಿಗೆ ಇರುವ ಅಪೇಕ್ಷೆಗಳ' ಪಟ್ಟಿಯನ್ನು ಜೆ.ಪಿ. ನಡ್ಡಾ ಅವರಿಗೆ ಹಸ್ತಾಂತರಿಸಲಾಯಿತು.
ಅಪೇಕ್ಷೆಗಳ ಪಟ್ಟಿಯಲ್ಲಿ ಮುಖ್ಯವಾದ ಅಂಶಗಳು ಈ ಕೆಳಗಿನಂತಿವೆ:
1. ಸನಾತನ ಧರ್ಮ ಸಂಸ್ಕೃತಿ ಸದ್ವಿಚಾರಗಳಿಗೆ ಸದಾ ಮನ್ನಣೆ ನೀಡುವುದು
2. ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಕ್ರಮ
3. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಆದ್ಯತೆ ನೀಡುವುದು
4. ಕರಾವಳಿಯ ಸಮೃದ್ಧ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಧಾರ್ಮಿಕ ಸಂಪನ್ಮೂಲಗಳಿಗೆ ಹಾನಿಯಾಗದಂತೆ ಔದ್ಯಮಿಕ ಔದ್ಯೋಗಿಕ ಪ್ರಗತಿಗೆ ಯೋಜನೆಗಳನ್ನು ಅನುಷ್ಠಾನಿಸುವುದು
5. ತುಳು ಭಾಷೆಗೆ ಸೂಕ್ತ ಮಾನ್ಯತೆ ನೀಡುವುದು
6. ದೇಶ ದ್ರೋಹಿ ಮತ್ತು ಉಗ್ರವಾದಿ ಚಟುವಟಿಕೆಗಳನ್ನು ಮಟ್ಟಹಾಕಲು ಕರಾವಳಿ ಮಲೆನಾಡು ಜಿಲ್ಲೆಗಳನ್ನು ಕೇಂದ್ರವಾಗಿಟ್ಟುಕೊಂಡು ರಾಷ್ಟ್ರೀಯ ತನಿಖಾ ದಳದ ವಿಭಾಗವನ್ನು ಶೀಘ್ರ ಆರಂಭಿಸುವುದು .
7. ಗೋ ಹತ್ಯಾ ನಿಷೇಧ ಕಾನೂನು ಸಮರ್ಪಕ ಜಾರಿಯ ಜೊತೆಗೆ ಗೋಸಂರಕ್ಷಣೆಗೆ ಪೂರಕ ಯೋಜನೆಗಳಿಗೆ ನೆರವು ನೀಡುವುದು .
8. ಭ್ರಷ್ಟಾಚಾರ ಮುಕ್ತ , ಸ್ವಚ್ಛ , ಪಾರದರ್ಶಕ ಆಡಳಿತ ನೀಡುವುದು.
9. ದೇವಸ್ಥಾನಗಳ ಭೂಮಿ ಅತಿಕ್ರಮಣ ತಡೆಗಟ್ಟಲು ಕ್ರಮಕೈಗೊಳ್ಳುವುದು .
ಸಭೆಯಲ್ಲಿ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ ಬೈಲೂರಿನ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ವಿನಾಯಕಾನಂದ ಸ್ವಾಮೀಜಿ, ಮಂಗಳೂರು ಚಿತ್ರಾಪುರ ಮಠದ ಶ್ರೀ ಶ್ರೀ ವಿದ್ಯೇಂದ್ರ ಸ್ವಾಮೀಜಿ, ಮೂಡಬಿದಿರೆ ಶ್ರೀ ಜೈನಮಠದ ಸ್ವಸ್ತಿ ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ, ಮಂಗಳೂರು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಉಡುಪಿಯ ಶ್ರೀ ಆನೆಗೊಂದಿ ಸರಸ್ವತಿ ಪೀಠದ ಶ್ರೀ ಶ್ರೀ ಕಾಳ ಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಮತ್ತು ಮಂಗಳೂರು- ಶ್ರೀ ಕ್ಷೇತ್ರ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ