ಬೆಂಗಳೂರು: ಶ್ರೀ ಗುರು ರಾಘವೇಂದ್ರಸ್ವಾಮಿ ಸೇವಾ ಟ್ರಸ್ಟ್, ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಇದರ ಸಂಯುಕ್ತ ಆಶ್ರಯದಲ್ಲಿ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ಸಹಯೋಗದಲ್ಲಿ ರಾಯರ ಪಟ್ಟಾಭಿಷೇಕ ಮತ್ತು ವರ್ಧಂತಿ ಅಂಗವಾಗಿ ನಗರದ ಕನಕಪುರ ರಸ್ತೆಯ ಕೋಣನಕುಂಟೆಯ ಶ್ರೀ ಗುರು ರಾಘವೇಂದ್ರಸ್ವಾಮಿ ಮಠದಲ್ಲಿ ಫೆ. 22ರಿಂದ ಐದು ದಿನಗಳ ‘ಹರಿದಾಸ ಸಾಹಿತ್ಯ – ಶ್ರೀ ರಾಘವೇಂದ್ರ ಸ್ವಾಮಿಗಳು’ವಿಚಾರ ಗೋಷ್ಠಿ ಕಾರ್ಯಕ್ರಮ ನಡೆಯಲಿದೆ.
ಫೆ.22 ಬುಧವಾರ ಸಂಜೆ 6.00 ಗಂಟೆಗೆ ಕಾರ್ಯಕ್ರಮವನ್ನು ಡಾ.ಪಿ.ಭುಜಂಗ ರಾವ್, ಸಂಚಾಲಕರು, ಟಿಟಿಡಿ, ಹಿಂದೂ ಧರ್ಮ ಪ್ರಚಾರ ಪರಿಷತ್,ಬೆಂಗಳೂರು ರವರು ಉದ್ಘಾಟಿಸುವರು. ಹಿರಿಯ ದಾಸ ಸಾಹಿತ್ಯ ಸಂಶೋಧಕರು ಹಾಗು ಕೋಣನಕುಂಟೆ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ (ರಿ) ಅಧ್ಯಕ್ಷ ಡಾ.ಅನಂತಪದ್ಮನಾಭ ರಾವ್ ಅಧ್ಯಕ್ಷತೆ ವಹಿಸುವರು ಸಂಸ್ಕೃತಿ ಚಿಂತಕ ಹಾಗು ಪ್ರಣವ ಮೀಡಿಯಾ ಹೌಸ್ ಪ್ರಕಾಶನ ನಿರ್ದೇಶಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಆಶಯ ನುಡಿಗಳನ್ನಾಡುವರು.
ಗೋಷ್ಠಿ 1ರಲ್ಲಿ ಶಕುಂತಲಾದೇವಿ ಕಾಲೇಜು ಪ್ರಾಂಶುಪಾಲ ಡಾ|| ಎಸ್. ಆರ್ ರಾಘವೇಂದ್ರ ‘ಶ್ರೀ ವಿಜಯದಾಸರು ಕಂಡ ರಾಘವೇಂದ್ರ ಸ್ವಾಮಿಗಳು’ ಕುರಿತು ಪ್ರಬಂಧ ಮಂಡಿಸುವರು.
ಫೆ.23 ಗುರುವಾರ ಗೋಷ್ಠಿ 2 ರಲ್ಲಿ ಹರಿದಾಸ ಸಾಹಿತ್ಯ ಸಂಶೋಧಕರು ಹಾಗು ಸಮನ್ವಯಕಾರರಾದ ಡಾ. ನಿವೇದಿತ ಹಾವನೂರು ಹೊನ್ನತಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಅಧ್ಯಾತ್ಮ ಚಿಂತಕರು ಡಾ. ಭಾರತಿ ರವೀಂದ್ರ ‘ಮಹಿಳಾ ಹರಿದಾಸರು ಚಿತ್ರಿಸಿದ ಗುರುರಾಜರು’ಬಗ್ಗೆ ಮಾತನಾಡುವರು.
ಫೆ.24 ಶುಕ್ರವಾರ ಗೋಷ್ಠಿ 3 ಕ್ಕೆ ಜಯನಗರ 4ನೇ ಬ್ಲಾಕ್ ವಿಜಯಾ ಕಾಲೇಜು, ಕನ್ನಡ ವಿಭಾಗ ಮುಖ್ಯಸ್ಥ ಡಾ. ಎಸ್. ಎಲ್. ಮಂಜುನಾಥ್ ಮುಖ್ಯ ಅತಿಥಿಗಳಾಗಿ ಆಗಮಿಸುವರು ಇಂದಿರಾನಗರ ಜೈನ್ ಪದವಿಪೂರ್ವ ಕಾಲೇಜು ಕನ್ನಡ ವಿಭಾಗ ಉಪನ್ಯಾಸಕರು ‘ಶ್ರೀ ಮುತ್ತಗಿ ಶ್ರೀನಿವಾಸಾಚಾರ್ಯ ‘ಹರಿದಾಸ ಸಾಹಿತ್ಯಕ್ಕೆ ರಾಘವೇಂದ್ರಸ್ವಾಮಿಗಳ ಮಠದ ಕೊಡುಗೆ ‘ವಿಷಯ ಮಂಡಿಸುವರು.
ಫೆ.25 ಶನಿವಾರ ಗೋಷ್ಠಿ 4 ಕ್ಕೆ ಬಸವನಗುಡಿ, ವಿಜಯ ವಿಭಜಿತ ಪದವಿಪೂರ್ವ ಕಾಲೇಜು ಕನ್ನಡ ವಿಭಾಗ, ಮುಖ್ಯಸ್ಥ ಡಾ.ಎಸ್.ಎಲ್.ಶ್ರೀನಿವಾಸಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ತಾತಗುಣಿ ಜ್ಯೋತಿ ತಾಂತ್ರಿಕ ಮಹಾವಿದ್ಯಾಲಯ, ಮಾಹಿತಿ ತಂತ್ರಜ್ಞಾನ ವಿಭಾಗ ಉಪನ್ಯಾಸಕರು ಶ್ರೀ ಉತ್ತನೂರು ಶ್ರೀನಿದಿ: ‘ರಾಯರ ಮಠದ ಪರಂಪರೆಯ ಕೀರ್ತನಾಕಾರರು’ಉಪನ್ಯಾಸ ಮಾಡುವರು.
ಮಾ.26 ಭಾನುವಾರ ಬೆಳಗ್ಗೆ 10.30ಕ್ಕೆ ದಾಸವಾಣಿ : ಖ್ಯಾತ ಗಾಯಕಿ ವಿದುಷಿ ಶ್ರೀಮತಿ ಸಂಧ್ಯಾ ಶ್ರೀನಾಥ್‍ರವರಿಂದ.
ಸಂಜೆ 6 ಗಂಟೆಗೆ ಗೋಷ್ಠಿ 5 ಹಾಗು ಸಮಾರೋಪ ಸಮಾರಂಭದಲ್ಲಿ ವಿಜಯ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ|| ವಾದಿರಾಜ ಅಗ್ನಿಹೋತ್ರಿ, ‘ರಾಘವೇಂದ್ರ ಸ್ವಾಮಿಗಳ ಕೀರ್ತನೆಗಳ ಒಳ ಅರ್ಥಗಳು’ಬಗ್ಗೆ ತಿಳಿಸುವರು. ವಿಶ್ವ ಮಧ್ವ ಮಹಾಪರಿಷತ್, ಉತ್ತರಾದಿ ಮಠದ ಚಿಕ್ಕೆರೂರು ಮುಕ್ಕುಂದಿ ಶ್ರೀಕಾಂತಾಚಾರ್ಯ ಸಮಾರೋಪ ಭಾಷಣ ಮಾಡುವರು. ಖ್ಯಾತ ಶಿಕ್ಷಣ ತಜ್ಞ, ಶ್ರೀನಿಧಿ ಶ್ರೀನಿವಾಸ ದೇವಸ್ಥಾನ , ಕೋಣನಕುಂಟೆ, ಧರ್ಮದರ್ಶಿ ಡಾ.ಕೆ.ಎಸ್.ಸಮೀರಸಿಂಹ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ವಿಜಯ ಕಾಲೇಜು, ಕನ್ನಡ ವಿಭಾಗ, ಸಹಾಯಕ ಪ್ರಾಧ್ಯಾಪಕ ಡಾ.ಆರ್.ವಾದಿರಾಜು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ (ರಿ) ಕೋಣನಕುಂಟೆ ಕಾರ್ಯದರ್ಶಿಗಳಾದ ಶ್ರೀ ಪಿ.ಎನ್. ಫಣಿಕುಮಾರ್ ಅಧ್ಯಕ್ಷತೆ ವಹಿಸುವರು.
ಶ್ರೀರಾಘವೇಂದ್ರ ಸ್ವಾಮಿಗಳು
ಸನಾತನ ಸಂಸ್ಕೃತಿಯಲ್ಲಿ ಶ್ರೀರಾಘವೇಂದ್ರತೀರ್ಥರಿಗೆ ದೊರೆತಿರುವ ಪ್ರಾಶಸ್ತ್ಯ ಅತಿಶಯವಾದುದು. ಅವರ ಬಗ್ಗೆ ವಿದಿತವಾಗುವ ಭಕ್ತಿ ಗೌರವಗಳು ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಾಗದೇ ಸಮಸ್ತ ಮಾನವ ಸಮುದಾಯಕ್ಕೆ ವ್ಯಾಪಿಸಿರುವ ಅಂಶ ಶ್ರೀ ರಾಘವೇಂದ್ರತೀರ್ಥರಿಗೆ ಗುರುಸಾರ್ವಭೌಮ ಎಂಬ ವಿಶೇಷಣಕ್ಕೆ ಒಪ್ಪುವಂತಿದೆ. ಇಂಥ ಮಹಾತ್ಮರು ತಾವು ಪೀಠಾರೋಹಣ ಮಾಡಿದ ಧಾರ್ಮಿಕ ಸಂಸ್ಥೆಗೆ ಅಪೂರ್ವ ಕೀರ್ತಿ ಪ್ರತಿಷ್ಠೆಗಳನ್ನು ಗಳಿಸಿಕೊಟ್ಟಿದ್ದಲ್ಲದೆ ಅವರ ತರುವಾಯ ಅದಕ್ಕೆ ‘ರಾಯರ ಮಠ’ವೆಂಬ ಹೆಸರೇ ಬಳಕೆಯಲ್ಲಿ ಬಂದುದು ಅವರ ಹಿರಿಮೆಯೇನೆಂಬುದನ್ನು ತಾನಾಗಿಯೇ ಸಮರ್ಥಿಸುತ್ತದೆ. ಅವರು ಸಶರೀರರಾಗಿ ವೃಂದಾವನವನ್ನು ಪ್ರವೇಶಿಸಿದ ನಂತರ ಅವರಿದ್ದ ಪವಿತ್ರ ಸ್ಥಳ ‘ಮಂತ್ರಾಲಯ’ವೆಂಬ ಹೆಸರಿನಿಂದ ಎಲ್ಲಾ ಜನರಿಗೂ ತೀರ್ಥಕ್ಷೇತ್ರವಾಗಿ ಪರಿಣಮಿಸಿತು. ಇಂಥ ಮಹಿಮಾ ಪುರುಷರು ವ್ಯಾಸಕೂಟಕ್ಕೆ ಹೇಗೆ ಸ್ವತಃ ಸೇವೆ ಸಲ್ಲಿಸಿರುವರೋ ಹಾಗೆಯೇ ಕಾರಣಾಂತರದಿಂದ ಸ್ಥಗಿತವಾಗಿದ್ದ ದಾಸಕೂಟಕ್ಕೆ ನೂತನ ಸ್ಫೂರ್ತಿದಾಯಕರಾದರು.
‘ದೇವರೆಂದರೇ ತಿರುಪತಿ ತಿಮ್ಮಪ್ಪ, ಗುರುಗಳೆಂದರೇ ಮಂಚಾಲೆಯ ರಾಘಪ್ಪ’ಎಂಬುದು ಜನ ಸಾಮಾನ್ಯರ ಜನಜನಿತ ಉಕ್ತಿ. ಮಹಾ ಮಹಿಮರಾದ ಶ್ರೀ ರಾಘವೇಂದ್ರ ಸ್ವಾಮಿಗಳು ಭಗವಂತನ ಅಪ್ಪಟ ಭಕ್ತರಾಗಿ ತಾವು ಭಗವಂತನನನು ಸಾಕ್ಷಾತ್ಕರಿಸಿಕೊಳ್ಳುವುದರ ಜೊತೆಗೆ ತಮ್ಮ ಜೊತೆಗಿದ್ದವರನ್ನೂ ಸಹ ಆ ಭಕ್ತಿ ಮಾರ್ಗದಲ್ಲಿ ಪ್ರೇರೇಪಿಸಿ ಅವರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ತಾವಿರುವ ವಾತಾವರಣವನ್ನೇ ಆಧ್ಯಾತ್ಮಿಕಮಯವಾಗಿಸಲು ತುಂಗಭದ್ರೆಯ ತೀರದ ಮಂತ್ರಾಲಯ ಕ್ಷೇತ್ರ ಎಲ್ಲ ಹರಿದಾಸರಿಗೆ ಅದು ತವರೂರಾಯಿತು.
ಸ್ವತಃ ಶ್ರೀ ರಾಘವೇಂದ್ರ ಸ್ವಾಮಿಗಳು ವೇಣುಗೋಪಾಲ ಅಂಕಿತ ನಾಮದಿಂದ ಸುಳಾದಿ, ಕೀರ್ತನೆಗಳನ್ನು ತಮ್ಮ ಗ್ರಂಥ ಭಂಡಾರದಲ್ಲಿ ನೀಡಿ, ತನ್ಮೂಲಕ ನಮ್ಮ ಕನ್ನಡ ನಾಡಿನ ಶ್ರೀಮಂತ ಸಾಹಿತ್ಯವಾದ ಹರಿದಾಸ ಸಾಹಿತ್ಯದ ಕಂಪನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಇನ್ನೂ ವಿಶೇಷವೇನೆಂದರೆ ‘ಇಂದು ಎನಗೆ ಗೋವಿಂದ’ಎಂಬ ಬಹು ಪ್ರಸಿದ್ಧಿಯ ಕನ್ನಡದ ಕೃತಿಯನ್ನು ರಚನೆ ಮಾಡಿದ್ದೂ ಸ್ವತಃ ಹರಿದಾಸರೆ.
ಧಾರ್ಮಿಕ ಆಚರಣೆಗಳಿಗೆ ಬೆಂಗಳೂರು ಹೆಸರು ವಾಸಿಯಾಗಿದೆ. ಇಲ್ಲಿ ಪ್ರತಿ ಬಡಾವಣೆಯಲ್ಲೂ ರಾಯರ ಮಠಗಳಿದ್ದು ಆಧ್ಯಾತ್ಮಿಕ ವಾತಾವರಣವನ್ನು ಪಸರಿಸಿದೆ. ಯಾಂತ್ರಿಕ ಬದುಕಿನಲ್ಲಿ ಸಿಕ್ಕಿಕೊಂಡಿರುವ ಸಜ್ಜನರಿಗೆ ಈ ತಾಣಗಳು ದಾರಿದೀಪವಾಗಿವೆ. ಕನಕಪುರ ರಸ್ತೆಯ ಕೋಣನಕುಂಟೆಯ ಶ್ರೀ ಗುರು ರಾಘವೇಂದ್ರಸ್ವಾಮಿ ವಿಶಿಷ್ಟ ಸನ್ನಿಧಾನದಲ್ಲಿ ತಮ್ಮ ಅನಂತ ಪುಣ್ಯ ರಾಶಿಯನ್ನು ಧಾರೆಯೆರೆಯುತ್ತ, ಕಾಮಧೇನು ಕಲ್ಪವೃಕ್ಷ ಸದೃಶರಾಗಿ ಭಕ್ತ ಜನರ ಕಷ್ಟ ಕಳೆದು ಇಷ್ಟಾರ್ಥ ಕರುಣಿಸಿ ಉದ್ಧರಿಸುತ್ತಿರುವ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮಹೋತ್ಸವ ಹಾಗೂ ವರ್ಧಂತಿ ಮಹೋತ್ಸವವನ್ನು ವಿಶಿಷ್ಟವಾಗಿ ಗುರು ಭಕ್ತಿ ಸ್ಮರಣೋತ್ಸವವಾಗಿ ಆಚರಿಸಲಾಗುತ್ತಿದೆ.
ವಿವರಗಳಿಗೆ : 90356 18076/ 94802 63676
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ