ಯಕ್ಷಗಾನ ವಿಶಿಷ್ಟವಾದ, ಆತ್ಮೀಯ ಕಲೆ

Upayuktha
0

 

ಪ್ರಥಮ ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ ಹಿನ್ನೆಲೆಯಲ್ಲಿ ವಿಶೇಷ ಲೇಖನ



ಭಾರತೀಯರ ರಂಗ ಕಲೆಗಳಲ್ಲಿ ಯಕ್ಷಗಾನ ಕಲೆಗೆ ವಿಶಿಷ್ಟವಾದ ಅಸ್ತಿತ್ವ ಹಾಗೂ ಆತ್ಮೀಯತೆ ಇದೆ. ಇದರ ಮೂಲವನ್ನು ನೋಡಲು ಹೊರಟಾಗ ಯಕ್ಷಗಾನ ಎಂಬುದು ನಾಟಕದ ಒಂದು ಪ್ರಕಾರ, ಇದು ತೆಲುಗು ದೇಶದಲ್ಲಿದೆ. ನಂತರ ಇದು ತಂಜಾವೂರಿಗೆ ಹೋಯಿತು ಎಂದು ತಿಳಿದುಬರುತ್ತದೆ. ಈ ನಾಟಕದಲ್ಲಿ ಯಕ್ಷಗಾನ ಸಂಗೀತವನ್ನು ಬಳಸಿ ಆಡುತ್ತಿದ್ದರು ಎನ್ನಲಾಗುತ್ತಿದೆ. ಈ ರೀತಿಯ ಯಕ್ಷಗಾನ ಸಂಗೀತವನ್ನು ಹಾಡುವವರನ್ನು ಎಕ್ಕಡಿಗರು ಅನ್ನುತ್ತಾರೆ. ಆಂಧ್ರದಲ್ಲಿ ಇವರನ್ನು ಜಕ್ಕುಲು ಅನ್ನುತ್ತಾರೆ. ಇವರು ಆಡುವ ಕಥಾನಕವೇ ಜಕ್ಕುಲು ಕಥಾ. ಇದು  ಒಂದು ಜಾತಿ ಸೂಚಕವಲ್ಲ; ವೃತ್ತಿ ಸೂಚಕ  ಅನ್ನುತ್ತಾರೆ, ಕಾರಂತರು. (ಯಕ್ಷಗಾನ 59)


ಕ್ರಿ.ಶ. 1620 ರಲ್ಲಿ ಗೋವಿಂದ ದೀಕ್ಷಿತರು ಯಕ್ಷಗಾನದ ಕುರಿತು ಈ ರೀತಿ ಹೇಳಿದ್ದಾರೆ -ಯಕ್ಷೌ ಘ  ಗೀತಮಪಿ. ಗೋವಿಂದ ದೀಕ್ಷಿತನಿಗಿಂತಲೂ ಹಿಂದಿನವನಾದ ಸಾರ್ಙದೇವನಿಂದ ವಿರಚಿತವಾದ ಸಂಗೀತ ರತ್ನಾಕರದಲ್ಲಿ ಜಕ್ಕ, ಎಕ್ಕ, ಜಕ್ಕಲು, ಯಕ್ಷ ಎಂಬುದು ಒಂದು ಸಂಗೀತದ ಶೈಲಿ ಎಂದು ಹೇಳುವ ದೆಸೆಯಿಂದ ಏಕಲ ಎಂಬುದರಿಂದ ' ಯಕ್ಷ ' ಪದ ಬಂತೆನ್ನುವುದು ಸರಿಯಲ್ಲ. ಹಾಗೆಯೇ ಎಂದಾದರೆ ಒಬ್ಬನೇ ಹಾಡುವ ಗಾನ ಪದ್ಧತಿಗಳೂ ಯಕ್ಷಗಾನವೇ ಆಗಲು ಸಾಧ್ಯತೆ ಇದೆ ಎನ್ನುತ್ತಾರೆ ಕಾರಂತರು. (ಯಕ್ಷಗಾನದ 59)


ಯಕ್ಷಗಾನವು ನಾಟಕ ರೂಪದಲ್ಲಿ ಕರ್ನಾಟಕ ಹಾಗೂ ಆಂಧ್ರದ ಮೇಲತ್ತೂರು ಎಂಬಲ್ಲಿಯೂ ಇತ್ತು. ಪೋಲುಘಂಟಿ ಚೆನ್ನಶೌರಿ ಎಂಬಾತ ಯಕ್ಷಗಾನದಲ್ಲಿ ಹಾಡಲು ಅನುಕೂಲವಾದ ಸೌಭರಿ ಚರಿತಮು ಎಂಬ ಜಕ್ಕಲು ಕಥೆಯನ್ನು ಬರೆದಿರುವನಂತೆ. ಈತ ಸಾಳುವ ನರಸಿಂಗ ರಾಯನ ಕಾಲದವನು ಎನ್ನಲಾಗುತ್ತದೆ. (ಯಕ್ಷಗಾನದ 59)

ಶಿಷ್ಯಾ ರಾಮಶಾಸ್ತ್ರಿಗಳು ತೆಲುಗು ವಾರ್ತಾಭಾರತಿಯಲ್ಲಿ ಬರೆದ (ಮಾರ್ಚ್ 1960) ಕೃಷ್ಣದೇವರಾಯನ ಅಷ್ಟ ದಿಗ್ಗಜರಲ್ಲಿ ಒಬ್ಬನಾದ ಆಂಧ್ರದ  ಕವಿ ಕಂದುಕೂರಿ ರುದ್ರಯ್ಯನೆಂಬಾತ 'ಸುಗ್ರೀವ ವಿಜಯ ' ಪ್ರಸಂಗ ಬರೆದಿರುವನು ಎಂದೂ, ಈತ ಬಹುಮನಿ ಸುಲ್ತಾನನಿಂದ ಗೌರವ ಪಡೆದಿರುವ ಬಗ್ಗೆಯೂ ಉಲ್ಲೇಖವಿದೆ. ಅಪ್ಪಾರಾವ್ ಪ್ರಕಾರ, ಮೆಚ್ಚುಪಲ್ಲಿ ಕೈಪಿಯತ್ತು ಪ್ರಕಾರ ಕೂಚಿಪುಡಿಯ ಬ್ರಾಹ್ಮಣ ಭಾಗವತ ವಿಜಯನಗರ ದೊರೆಯ ಮುಂದೆ ಆಡಿದ ಕೇಳಿಕಾ ರೂಪದ ನಾಟಕ ಕ್ರಿ. ಶ 1502 ವಿಜಯ ನಗರದ ಪತನವಾದ ಬಳಿಕ ತಂಜಾವೂರ ನಾಯಕ ದೊರೆಗಳ ಆಶ್ರಯ ಪಡೆದ ಇದೇ ಕೂಚಿಪುಡಿ ಬ್ರಾಹ್ಮಣರು, ಮುಂದೆ ಮೇಲತ್ತೂರು ಸೇರಿ ತೆಲುಗು ಯಕ್ಷಗಾನ ಪ್ರಚಾರ ಮಾಡಿದರಂತೆ (1561-1614). ಹೀಗೆ ಹೋದವರ ಪೈಕಿ ತೀರ್ಥನಾರಾಯಣ ಯತಿಯವರು ' ಶ್ರೀಕೃಷ್ಣ ಲೀಲಾ ತರಂಗಿಣಿ ' ಹಾಗೂ {ಅಚ್ಯುತಪುರ ನಿವಾಸಿ =ಮೇಲಾತ್ತೂರು} 'ಪಾರಿಜಾತ ಹರಣ' ನಾಟಕ ಯಕ್ಷಗಾನವನ್ನು ರಚಿಸಿದ. ಇದೇ ಸಮಯದಲ್ಲಿ ಸಿದ್ಧೇಂದ್ರ ಯತಿ ಪಾರಿಜಾತ ಹರಣ ನೃತ್ಯ ನಾಟಕ ರಚಿಸಿ ಕೂಚಿಪುಡಿ ಬ್ರಾಹ್ಮಣರಿಗೆ ಕಲಿಸಿದ. ಇವರಿಗೆ ಗೋಲ್ಕೊಂಡ ನವಾಬ ಅಬ್ದುಲ್ ಹಸನ್ ಕುತುಬ್ ಶಹಾ( 1672- 1687) ಒಂದು ಅಗ್ರಹಾರವನ್ನು ದಾನ ಕೊಟ್ಟ ಬಗ್ಗೆ ತಾಮ್ರ ಶಾಸನವಿದೆ. ಇದೇ ಕೂಚಿಪುಡಿ ಮೇಲತ್ತೂರು ಕಲಾವಿದರು ಆಡುವ  ಆಟಗಳ ಪ್ರಸಂಗಗಳು ತೆಲುಗು ಭಾಷೆಯಲ್ಲಿದೆ. ಇದನ್ನು ಬರೆದವರು  ವೆಂಕಟರಾಮ ಶಾಸ್ತ್ರಿಗಳು (1700-1800). ಕೂಚಿಪುಡಿ ಪ್ರಭಂದವು  ಕರ್ನಾಟಕ ಸಂಗೀತ ಪದ್ಧತಿಯಲ್ಲಿದೆ. ಇದರ ಸಂಗೀತವು ಮಾರ್ಗಸಂಗೀತ ಪದ್ಧತಿಯದು.


ಭರತಖಂಡದಲ್ಲಿರುವ ನೂರಾರು ಸಾಂಪ್ರದಾಯಿಕ ರಂಗಕಲೆಗಳಲ್ಲಿ ಜನಪದರಿಂದ ಕರ್ನಾಟಕದಾದ್ಯಂತ ದೊಡ್ಡಾಟ, ಸಣ್ಣಾಟ, ಘಟ್ಟದಕೋರೆ, ಮೂಡಲಪಾಯ, ಕೇಳಿಕೆ, ಮುಂತಾದ ಹತ್ತುಹಲವು ಪ್ರಕಾರಗಳು ಯಕ್ಷಗಾನ ಕಲೆಯಾಗಿ ಗುರುತಿಸಿಕೊಂಡಿವೆ. ಈ ಎಲ್ಲಾ ಕಲೆಗಳ ಮೂಲಗುಣವೇ ಆರಾಧನಾಗುಣ. ಇದರಲ್ಲಿ ಜನಪದರಿಗಾಗಿ ಹುಟ್ಟಿಕೊಂಡು ನಿತ್ಯನೂತನವಾಗಿ ಆರಾಧನಾಯುಕ್ತವಾಗಿ ಆಚರಿಸಿಕೊಂಡು ಬಂದು ರಂಜಿಸುತ್ತಿರುವ ಅದ್ಭುತವಾದ ರಮ್ಯಕಲೆಯೇ ಕರ್ನಾಟಕ ಕರಾವಳಿ ತೀರದ ಯಕ್ಷಗಾನ (ಪಡುವಲಪಾಯ) ಕಲೆ.


ಆ ಪ್ರಕಾರದಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುವ ಕರಾವಳಿ ತೀರದ ಗಂಡು ಕಲೆಯಾದ ಯಕ್ಷಗಾನ ಕಲೆಯು ಸಾಮಾಜಿಕರ ಜೀವನ ಸೆಲೆಯಾಗಿದೆ. ಕಲಾ ರಂಗದಲ್ಲಿ ದುಡಿಯುವ ಸಾವಿರಾರು ಕಲಾವಿದರ ಬದುಕಿಗೆ ನೆಲೆಕೊಟ್ಟಿದೆ. ಜಿಜ್ಞಾಸುಗಳಿಗೆ ವಿದ್ವಾಂಸರಿಗೆ ಗ್ರಾಸವಾಗಿದೆ. ಕರಾವಳಿಯಲ್ಲಿ ಯಕ್ಷಗಾನ ಕಲೆಗೆ ದೊರೆತ ಪ್ರೋತ್ಸಾಹದಲ್ಲಿ ಅಷ್ಟಮಠಗಳ ಪಾತ್ರ ಹಿರಿದು. ಇಲ್ಲಿಯ ಯತಿವರ್ಯ ರಾದ ಶ್ರೀ ನರಹರಿ ತೀರ್ಥರು  ಯಕ್ಷಗಾನ ಕಲೆಯನ್ನು ಆರಾಧನೆಯ ನೆಲೆಯಲ್ಲಿ ಗುರುತಿಸಿ ಪುನರುಜ್ಜೀವನಗೊಳಿಸಿ ಧರ್ಮ ಪ್ರಚಾರಕ್ಕಾಗಿ ಬಳಸಿಕೊಂಡು  ವಿಶೇಷವಾದ ಆಶ್ರಯ ಹಾಗೂ ಪ್ರೋತ್ಸಾಹವನ್ನು ನೀಡಿರುವ ಬಗ್ಗೆ ವಿದ್ವಾಂಸರಾದ ಶ್ರೀಯುತ ಬನ್ನಂಜೆ ಗೋವಿಂದಾಚಾರ್ಯರು ಉಲ್ಲೇಖಿಸಿರುತ್ತಾರೆ.


ಈ ರೀತಿಯಲ್ಲಿ ಸಮೃದ್ಧಗೊಂಡ ಯಕ್ಷಗಾನ ಕಲೆಯ ಕುರಿತಾಗಿ ಪ್ರಪ್ರಥಮವಾಗಿ ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವು 2023 ಫೆಬ್ರವರಿ ತಿಂಗಳ 11 ಮತ್ತು12 ರಂದು ಉಡುಪಿ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಕ್ಷಗಾನ ಅಕಾಡೆಮಿ ಹಾಗೂ ಜಿಲ್ಲಾಡಳಿತ ಉಡುಪಿ ಜಿಲ್ಲೆ ಇದರ ಆಯೋಜನೆಯಲ್ಲಿ ಎಂ.ಜಿ ಎಂ ಕಾಲೇಜಿನ ಆವರಣದ ಸಭಾಂಗಣದಲ್ಲಿ ನೆರವೇರುತ್ತಿರುವುದು ಹೆಮ್ಮೆಯ ಹಾಗೂ ಸಂತಸದ ವಿಚಾರವಾಗಿದೆ.


ಈ ಸಮ್ಮೇಳನ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರಿಂದ ಉದ್ಘಾಟನೆಗೊಂಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ   ಶ್ರೀ ವಿ . ಸುನಿಲ್ ಕುಮಾರ್  ಹಾಗೂ ಉಡುಪಿ ಶಾಸಕರಾದ ಶ್ರೀ ಕೆ .ರಘುಪತಿ ಭಟ್ಟರ ನೇತೃತ್ವದಲ್ಲಿ , ಡಾ ಎಂ.ಪ್ರಭಾಕರ್ ಜೋಷಿಯವರ ಸಮ್ಮೇಳನಾಧ್ಯಕ್ಷತೆಯಲ್ಲಿ ವೈಭವೋಪೇತವಾಗಿ ಸಂಪನ್ನಗೊಳ್ಳಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಡಾ . ಜಿ .ಎಲ್  ಹೆಗಡೆಯವರು ಕಾರ್ಯಾಧ್ಯಕ್ಷರಾಗಿ, ಪ್ರಧಾನ ಸಂಚಾಲಕರಾಗಿ ಶ್ರೀ  ಪಿ.ಕಿಶನ್ ಹೆಗ್ಡೆ, ಯಜಮಾನರು, ಸಾಲಿಗ್ರಾಮ ಮೇಳ ಇವರು ಸಮಿತಿಯ ಸರ್ವ ಸದಸ್ಯರ ಜೊತೆ ಸೇರಿಕೊಂಡು ಸಮ್ಮೇಳನದ ಕಾರ್ಯ ನಿರ್ವಹಿಸಲಿದ್ದಾರೆ.  


ಈ ಸಮ್ಮೇಳನವು ಸಮಗ್ರವಾಗಿ ಯಕ್ಷಗಾನ ಕಲೆಯ ಎಲ್ಲ ಮಜಲುಗಳನ್ನು ಒಳಗೊಂಡು, ಯಕ್ಷಗಾನ ಆಧಾರಿತ ಘಟ್ಟದ ಕೋರೆ, ಬೊಂಬೆಯಾಟ, ಮೂಡಲಪಾಯ, ಪಡುವಲಪಾಯ, ಕೇಳಿಕೆ, ಮುಂತಾದ ಎಲ್ಲಾ ಪ್ರಕಾರದ ಕಲಾತಂಡಗಳ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ. ಯಕ್ಷಗಾನ, ತಾಳಮದ್ದಳೆ, ಕಿಶೋರ ಯಕ್ಷಗಾನ, ಮಹಿಳಾ ಯಕ್ಷಗಾನಗಳು ಅಹೋರಾತ್ರಿ ಪ್ರದರ್ಶನಗೊಳ್ಳಲಿದೆ.


ಯಕ್ಷಗಾನ ಕಲೆ ಎದುರಿಸುತ್ತಿರುವ ಸವಾಲುಗಳು, ಯಕ್ಷಗಾನದ ಮೂಲ ಸ್ವರೂಪ, ಕಲಾವಿದರ ಸಮಸ್ಯೆಗಳ ಕುರಿತು ವಿದ್ವಾಂಸರ ಗೋಷ್ಠಿಗಳು ನಡೆಯಲಿದೆ. ಹೆಸರಾಂತ ಹಿರಿಯ ಯಕ್ಷಗಾನ ಕಲಾವಿದರ ನಾಮಫಲಕಗಳು ಉಳ್ಳ ಸುಮಾರು 50 ದ್ವಾರಗಳನ್ನು ರಚಿಸಿ ಸಮ್ಮೇಳನದ ಮೆರುಗು ಹೆಚ್ಚಿಸಲಾಗುವುದು. ಸ್ವಾತಂತ್ರದ 75ನೇ ಮಹೋತ್ಸವದ ವರ್ಷದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಈ ಯಕ್ಷಗಾನ ಸಮ್ಮೇಳನದಲ್ಲಿ ಯಕ್ಷಗಾನ ಎಲ್ಲ ಪ್ರಕಾರದಲ್ಲಿ ಅಪ್ರತಿಮ ಸಾಧನೆಗೈದ 75  ಹಿರಿಯ  ಕಲಾವಿದರನ್ನು ಗುರುತಿಸಿ ಸನ್ಮಾನಿಸಲಾಗುವುದು. ಜೊತೆಗೆ ಕಲೆಯಲ್ಲಿ ಸಹಾಯಕರಾಗಿ ದುಡಿದ ಕಲಾವಿದರಿಗೂ, ಮೇಳದ ಯಜಮಾನರು, ಮಹಿಳಾ ಕಲಾವಿದರು, ಸಂಶೋಧಕರು, ಯಕ್ಷಗಾನ ಕೇಂದ್ರಗಳು, ಸೇವಾ ಸಂಸ್ಥೆಗಳು, ಯಕ್ಷಗಾನ ಪತ್ರಿಕೋದ್ಯಮಗಳನ್ನು ಕೂಡ ಈ ಸಮ್ಮೇಳನದಲ್ಲಿ ಸನ್ಮಾನಿಸಲಾಗುವುದು.


ಯಕ್ಷಗಾನ ಕ್ಷೇತ್ರದಲ್ಲಿ ಸೇವೆಗೈದ ದೈವಾಧೀನರಾದ ಹಿರಿಯ ಕಲಾವಿದರ ಭಾವಚಿತ್ರ ಹಾಗೂ ವೇಷದ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಯಕ್ಷಗಾನ ಕಲೆಯ ಎಲ್ಲಾ ಪ್ರಕಾರಗಳ ಎಲ್ಲ ವಿಭಾಗಗಳ ವಿವರಗಳನ್ನು ಒಳಗೊಂಡ ಪುಸ್ತಕ ಪ್ರದರ್ಶನ , ವೇಷಭೂಷಣ ಹಾಗೂ  ಪುಸ್ತಕ ಮಾರಾಟದ  ವಿವಿಧ ಮಳಿಗೆಗಳನ್ನು ನಿರ್ಮಿಸಲಾಗುವುದು.


- ಸುರೇಂದ್ರ ಪಣಿಯೂರು

ಯಕ್ಷಗಾನ ಭಾಗವತರು, ವಿದ್ವಾಂಸರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top