ಸಾಹಿತ್ಯದಿಂದ ವ್ಯಕ್ತಿತ್ವದ ವಿಕಾಸ, ಸ್ವಂತಿಕೆಯ ಪ್ರಕಾಶ: ಶಿವಕುಮಾರ್ ಸಾಯ

Upayuktha
0

ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯಲ್ಲಿ ಸಾಹಿತ್ಯ ಕಮ್ಮಟ


ಅಡ್ಯನಡ್ಕ: ಅಡ್ಯನಡ್ಕ ಜನತಾ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 'ಶನಿವಾರ ಸಂಭ್ರಮ' ಸರಣಿ ಕಾರ್ಯಕ್ರಮದ ಅಂಗವಾಗಿ ಜನವರಿ 28ರಂದು ಸಾಹಿತ್ಯ ರಚನಾ ಕಮ್ಮಟ ಜರುಗಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜನತಾ ಪ್ರೌಢಶಾಲೆಯ ಕನ್ನಡ ಅಧ್ಯಾಪಕ, ಕವಿ, ಸಾಹಿತಿ ಶಿವಕುಮಾರ್ ಸಾಯ ಅವರು ಮಕ್ಕಳಿಗೆ ಸಾಹಿತ್ಯ ಮತ್ತು ಕವನ ರಚನೆಯ ತರಬೇತಿ ಮತ್ತು ಮಾರ್ಗದರ್ಶನ ನೀಡಿದರು. ಅವರು ಮಾತನಾಡುತ್ತಾ, ಮಕ್ಕಳ ಕವನಗಳನ್ನು ಬರೆಯುವಾಗ ಪ್ರಾಸಬದ್ಧತೆ, ಲಯ, ಛಂದಸ್ಸಿನ ಬಳಕೆ ಇದ್ದಾಗ ಬರವಣಿಗೆಯ ಕ್ರಮ ಆಕರ್ಷಕವಾಗುತ್ತದೆ. ವ್ಯಕ್ತಿತ್ವದ ವಿಕಾಸ ಹಾಗೂ ಸ್ವಂತಿಕೆಯ ಪ್ರಕಾಶಕ್ಕೆ ಸಾಹಿತ್ಯ ಪೂರಕ. ಸಾಹಿತಿಯು ತನ್ನ ಪ್ರತಿಭೆಯನ್ನು ಬಳಸಿ ಪದಗಳ ಮೂಲಕ ದೈನಂದಿನ ಜೀವನದಲ್ಲಿ ಕಂಡುಬರುವ ಆಶ್ಚರ್ಯ, ಕುತೂಹಲವನ್ನು ಹೊರಹಾಕುತ್ತಾನೆ. ಕವನ- ಕತೆಗಳನ್ನು ರಚಿಸುವುದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಬಹುದು ಎಂದು ಹೇಳಿದರು.

ಸ್ವಂತಿಕೆಯು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನ. ಸುಲಭವಾಗಿ ಅನುಭವಕ್ಕೆ ದಕ್ಕುವ ವಿಷಯಗಳನ್ನು ಸಾಹಿತ್ಯ ರಚನೆಗೆ ಆರಿಸುವುದು ಸೂಕ್ತ. ಬರೆಯುವ ರೀತಿ, ಶೈಲಿ, ವರ್ಣನೆ, ಶಬ್ದ - ಅರ್ಥಾಲಂಕಾರಗಳ ಬಳಕೆ ಇವುಗಳಿಂದ ಪ್ರಬುದ್ಧ ಮತ್ತು ಜನಪ್ರಿಯವಾಗುವಂತೆ ಬರೆಯಬಹುದು. ಓದು ಮತ್ತು ಬರಹ ಎರಡೂ ಜೊತೆಯಾಗಿ ಸಾಗಬೇಕು. ಬರೆಯುತ್ತಾ ಬರೆಯುತ್ತಾ ವ್ಯಾಕರಣಕ್ಕೆ ತೊಂದರೆಯಾಗದಂತೆ ತಿದ್ದಿಕೊಂಡು ಭಾಷಾ ಪ್ರಯೋಗದಲ್ಲಿ ಪಕ್ವತೆಯನ್ನು ಸಾಧಿಸಬಹುದು ಎಂದರು. ಮಕ್ಕಳಿಗೆ ಕವನಗಳನ್ನು ಉದಾಹರಣೆಯಾಗಿ ನೀಡಿ, ಸ್ವತಂತ್ರವಾಗಿ ಬರೆಯಲು ಪ್ರೇರಣೆ ನೀಡಿದರು. ಪುಸ್ತಕ ಪ್ರಕಟಣೆ, ಪತ್ರಿಕೆಗಳು, ಟಿವಿ, ರೇಡಿಯೋ, ಅಂತರ್ಜಾಲ ತಾಣಗಳ ಮೂಲಕವೂ ಸಾಕಷ್ಟು ಅವಕಾಶಗಳಿವೆ ಎಂದು ತಿಳಿಸಿದರು.

ಜನತಾ ಪದವಿಪೂರ್ವ ಕಾಲೇಜಿನ ಗಣಿತ ಉಪನ್ಯಾಸಕರಾದ ಗಣೇಶ್ ಕೆ. ಆರ್. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಹಕರಿಸಿದರು. ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಶಾಂತ ಮುಳಿಯ ಅವರು ಸ್ವಾಗತಿಸಿ, ಪರಿಚಯಿಸಿದರು. ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮಾಧವ ನಾಯ್ಕ್ ಪುಸ್ತಕ ಸ್ಮರಣಿಕೆ ನೀಡಿ, ವಂದಿಸಿದರು. ಸಹಶಿಕ್ಷಕಿ ಹರಿಣಾಕ್ಷಿ ಎ. ಅವರು ಕಾರ್ಯಕ್ರಮ ಸಂಯೋಜಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top