ಭಾರತಕ್ಕೆ ಮಸಿ ಬಳಿಯಲೆತ್ನಿಸಿದ ಬಿಬಿಸಿ, ಇಂದಲ್ಲ ನಾಳೆ ತಾಗಿಸಿಕೊಳ್ಳಲಿದೆ ಬಿಸಿ

Upayuktha
0


ಡಾ. ವೈಶಾಲಿ ದಾಮ್ಲೆ; ಮಾಂಚೆಸ್ಟರ್, ಯು.ಕೆ

[20 ನಿಮಿಷಗಳ ಓದು; ಆಮೇಲೆ ದೀರ್ಘಕಾಲಿಕ ಚಿಂತನೆ] 

(ಶ್ರೀವತ್ಸ ಜೋಷಿ, ವಾಷಿಂಗ್ಟನ್‌ ಅವರ ಫೇಸ್‌ಬುಕ್ ವಾಲ್‌ನಿಂದ ಆಯ್ದುಕೊಳ್ಳಲಾಗಿದೆ)

ನವರಿ ತಿಂಗಳ 17 ಮತ್ತು 24 ನೇ ತಾರೀಕಿನಂದು ‘India: The Modi Question’ಎಂಬ ಡಾಕ್ಯುಮೆಂಟರಿಯೊಂದು ಬಿಬಿಸಿ-2 ಚ್ಯಾನೆಲ್‌ನಲ್ಲಿ ಎರಡು ಭಾಗಗಳಲ್ಲಿ ಬಿತ್ತರವಾಯಿತು. ಮೊದಲ ಕಂತು ಪ್ರಸಾರವಾದ ದಿನವೇ ಯುಕೆ ಯಲ್ಲಿರುವ ಅನಿವಾಸಿ ಭಾರತೀಯರ ಸಂಘಟನೆಗಳು ಡಾಕ್ಯುಮೆಂಟರಿಯಲ್ಲಿ ತೋರಿಸಲಾದ ಹಲವಾರು ವಿಷಯಗಳ ಸತ್ಯಾಸತ್ಯತೆಗಳನ್ನು, ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದುವು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹಲವು ಮೆಸೇಜ್‌ಗಳು ಹರಿದಾಡಿದುವು. ಡಾಕ್ಯುಮೆಂಟರಿಯಲ್ಲಿ ಬಿಂಬಿಸಲಾದ ಪ್ರಸಕ್ತ ಭಾರತೀಯ ಸಮಾಜದ, ಮತ್ತು ಪ್ರಧಾನಮಂತ್ರಿ ಮೋದೀಜಿಯವರ ಹೀನ ಚಿತ್ರಣವು ಇಲ್ಲಿಯ ಬಹಳಷ್ಟು ಭಾರತೀಯರನ್ನು, ಭಾರತೀಯ ಸಂಘಟನೆಗಳನ್ನು ಖೇದಕ್ಕೊಳಪಡಿಸಿತು. ಈ ಡಾಕ್ಯುಮೆಂಟರಿಯು ಭಾರತದ ಹಿಂದೂಗಳನ್ನು ಮತ್ತು ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿಯನ್ನು ಸುಳ್ಳು ಸಾಕ್ಷ್ಯಾಧಾರಗಳೊಂದಿಗೆ ಏಕಪಕ್ಷೀಯವಾಗಿ ಟೀಕಿಸುತ್ತದೆ, ಮಾತ್ರವಲ್ಲ, ಹಿಂದೂ ಫೋಬಿಯಾವನ್ನು ಪ್ರಚೋದಿಸಿ, ಇಲ್ಲಿರುವ ಭಾರತೀಯ ಹಿಂದೂಗಳ ಜೀವನವನ್ನು ದುರ್ಭರವಾಗಿಸುತ್ತದೆ ಎಂದು ಅವರೆಲ್ಲರ ಅಭಿಪ್ರಾಯವಾಗಿತ್ತು. ಹಾಗಾಗಿ ಡಾಕ್ಯುಮೆಂಟರಿಯ ಎರಡನೇ ಭಾಗವನ್ನು ಬಿಬಿಸಿ ಪ್ರಸಾರ ಮಾಡಬಾರದು ಎಂದು ಹಲವಾರು ಪೆಟಿಶನ್‌ಗಳು ಪ್ರಾರಂಭವಾದುವು. ಬಿಬಿಸಿಗೆ ಕಂಪ್ಲೇಂಟ್‌ಗಳು ಹೋದುವು. ಆದರೂ ಬಿಬಿಸಿ ಮಾತ್ರ ಎಂದಿನಂತೆ ಬೇಜವಾಬ್ದಾರಿಯಿಂದ, ಮತ್ತು ನನಗನಿಸುವ ಪ್ರಕಾರ, ಉದ್ದೇಶಪೂರ್ವಕವಾಗಿ, ಎರಡನೇ ಕಂತನ್ನೂ ಪ್ರಸಾರಮಾಡಿಯೇ ಬಿಟ್ಟಿತು. ಇದಾದ ನಂತರ, ಇಲ್ಲಿ ನೆಲೆಸಿರುವ ಭಾರತೀಯ ಹಿಂದೂಗಳು, ಲಂಡನ್, ಮಾಂಚೆಸ್ಟರ್, ಗ್ಲ್ಯಾಸ್ಗೋ, ಬರ್ಮಿಂಗ್‌ಹ್ಯಾಮ್, ನ್ಯೂ ಕಾಸಲ್ ಸೇರಿದಂತೆ ಯುಕೆಯ ವಿವಿಧ ನಗರಗಳಲ್ಲಿ ಬಿಬಿಸಿಯ ವಿರುದ್ಧ ಶಾಂತಿಪೂರ್ವಕ ಪ್ರತಿಭಟನೆಯನ್ನು ನಡೆಸಿದರು. ಈ ಕಂಪ್ಲೇಂಟ್‌ಗಳ, ಪ್ರತಿಭಟನೆಯ ಪರಿಣಾಮ ಏನಾಗುತ್ತದೋ, ಕಾಲವೇ ಹೇಳಬೇಕು. ಆದರೂ ಹಿಂದೂಗಳ ವಿರುದ್ಧ ದ್ವೇಷವನ್ನು ಹರಡುವ, ಸಮಾಜದಲ್ಲಿ ಪ್ರತ್ಯೇಕತೆಯನ್ನು ಸೃಷ್ಟಿಸುವ ಬಿಬಿಸಿಯ ಇರಾದೆ ಇಲ್ಲಿರುವ ಎಲ್ಲಾ ಜವಾಬ್ದಾರಿಯುತ ಹಿಂದೂಗಳ ಗಮನಕ್ಕೆ ಬಂದಿದೆ ಎಂಬುದರ ಮನವರಿಕೆಯನ್ನು ನಾವು ಬಿಬಿಸಿಗೆ ಮಾಡಿಕೊಟ್ಟದ್ದಂತೂ ನಿಜ. ಹಾಗಾದರೆ, ಇಷ್ಟೆಲ್ಲ ವಿವಾದಕ್ಕೊಳಗಾದ ಆ ಡಾಕ್ಯುಮೆಂಟರಿಯಲ್ಲಿ ಇದ್ದದ್ದೇನು? ಏಕಪಕ್ಷೀಯ ವಿಚಾರಧಾರೆಯ ಡಾಕ್ಯುಮೆಂಟರಿಯ ಹಿಂದಿರುವ ಉದ್ದೇಶ ಏನಿರಬಹುದು? ಬನ್ನಿ, ಒಂದಷ್ಟು ವಿಮರ್ಶೆ ಮಾಡೋಣ. 

ಸುಮಾರು 2 ಗಂಟೆಗಳ ಅವಧಿಯ ಆ ಸಾಕ್ಷ್ಯಚಿತ್ರದಲ್ಲಿ ಅರ್ಧಕ್ಕೂ ಹೆಚ್ಚಿನ ಕಾಲಾವಧಿಯಲ್ಲಿ2002ರ ಗುಜರಾತ್ ದಂಗೆಯನ್ನು ತೋರಿಸಲಾಗುತ್ತದೆ. ಗುಜರಾತಿನಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರ ಹತ್ಯೆ, ಮುಸ್ಲಿಮ್ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದುವೆಂದೂ, ಇದಕ್ಕೆ ಗುಜರಾತಿನ ಆಗಿನ ಮುಖ್ಯಮಂತ್ರಿಯಾಗಿದ್ದ ಮೋದೀಜಿಯವರು ನೇರವಾಗಿ ಕಾರಣೀಭೂತರೆಂದೂ ಬಿಬಿಸಿ ನೇರ ಆಪಾದನೆ ಮಾಡುತ್ತದೆ. ಹೀಗೆ ಮಾಡುವಲ್ಲಿ, ಅದು ತನ್ನ narrative ಗೆ ಹೊಂದುವ ವಿಚಾರಗಳನ್ನು ಮಾತ್ರ ವೈಭವೀಕರಿಸಿ, ಇನ್ನುಳಿದ ಸಾಕ್ಷ್ಯಾಧಾರಗಳನ್ನು ನಗಣ್ಯ ಮಾಡುತ್ತದೆ. ಗುಜರಾತ್‌ನ ದಂಗೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಹಿಂದೂಗಳೂ, ಮುಸ್ಲಿಮರೂ ಹಾನಿಗೊಳಗಾಗಿದ್ದರೂ, ಬಿಬಿಸಿ ಎಂದಿನಂತೆ, ಹಿಂದೂಗಳ ಕೊಲೆ, ಅವರ ಮೇಲಾದ ಅತ್ಯಾಚಾರ ಇವುಗಳ ಬಗ್ಗೆ ಜಾಣಮೌನ ವಹಿಸುತ್ತದೆ. ಗುಜರಾತಿನಾದ್ಯಂತ ದಂಗೆಯಲ್ಲಿ ಭಾಗವಹಿಸಿದ ಹಿಂದೂಗಳನ್ನು ಒಂದು ಚೂರೂ ಹಿಂಜರಿಕೆಯಿಲ್ಲದೆ ‘ಹಿಂದೂ ಉಗ್ರಗಾಮಿ’ಗಳೆಂದು ಕರೆಯುತ್ತದೆ. ಆದರೆ ಗೋಧ್ರಾ ಎಕ್ಸ್ ಪ್ರೆಸ್ ನಲ್ಲಿ ಹಿಂದೂ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿ, ಹಲವು ಮುಗ್ಧ ಹಿಂದೂ ಹೆಂಗಸರನ್ನೂ, ಮಕ್ಕಳನ್ನೂ ಬರ್ಬರವಾಗಿ ಹತ್ಯೆಮಾಡಿದವರು ಯಾರು ಎಂಬುದನ್ನು ಇಡೀ ಡಾಕ್ಯುಮೆಂಟರಿಯಲ್ಲಿ ಎಲ್ಲಿಯೂ ಹೇಳುವುದಿಲ್ಲ. ಇಡೀ ಗುಜರಾತ್ ದಂಗೆಗೆ ಕಿಡಿಹಚ್ಚಿದ್ದು ಮುಸ್ಲಿಂ ಉಗ್ರಗಾಮಿಗಳ ಈ ಕೃತ್ಯ ಎಂದು ಗೊತ್ತಿದ್ದರೂ, ಇದು ಕೋರ್ಟಿನಲ್ಲಿ ಸಾಬೀತಾಗಿದ್ದರೂ, ‘ರೈಲಿಗೆ ಬೆಂಕಿಯಿಟ್ಟದ್ದು ಯಾರು ಎಂಬುದು  ನಿಖರವಾಗಿ ತಿಳಿಯಲೇ ಇಲ್ಲ. ಆದರೆ ಮುಸ್ಲಿಮರ ಮೇಲೆ ಆಪಾದನೆಯನ್ನು ಹೊರಿಸಲಾಯಿತು’ ಎಂಬ ಸುಳ್ಳನ್ನು ಪ್ರಸಾರ ಮಾಡುತ್ತದೆ. ಇಡೀ ಘಟನೆಯಲ್ಲಿ ಹಿಂದೂಗಳೇ ತಪ್ಪಿತಸ್ಥರು, ಮುಸ್ಲಿಮರು ಮಾತ್ರ ಸಂತ್ರಸ್ತರು ಮತ್ತು ಇದಕ್ಕೆಲ್ಲಾ ನೇರ ಕಾರಣ ಮೋದೀಜಿಯವರು ಎಂದು ಅವರ ಮೇಲೆ ಗೂಬೆ ಕೂರಿಸುತ್ತದೆ.

ಗುಜರಾತ್ ದಂಗೆಯ ಕೇಸು ಭಾರತದ ನ್ಯಾಯವ್ಯವಸ್ಥೆಯ ಹಲವಾರು ಸ್ತರಗಳಲ್ಲಿ ಹಲವು ವರ್ಷಗಳ ಕಾಲ ವಿಚಾರಣೆಗೆ ಒಳಗಾಗಿ, ಮೋದಿಜೀಯವರಿಗೆ ಕ್ಲೀನ್ ಚಿಟ್ ಸಿಕ್ಕಿದ್ದರೂ ಕೂಡ ‘ಮುಸ್ಲಿಮರ ಮಾರಣಹೋಮಕ್ಕೆ ಮೋದಿಜೀಯವರು ನೇರವಾಗಿ ಕಾರಣೀಕರ್ತರು’ ಎಂಬ ಹಳೇ ವರಾತವನ್ನೇ ಮತ್ತೆಮತ್ತೆ ಬಿಬಿಸಿ ಬಿತ್ತರಿಸುತ್ತದೆ. 2002ರಲ್ಲಿ ಕೇಂದ್ರದಲ್ಲಿದ್ದದ್ದು UPA ಸರಕಾರವಾಗಿದ್ದು, ಅದರ ಆಡಳಿತಾವಧಿಯಲ್ಲಿ ಸುಪ್ರೀಂ ಕೋರ್ಟು ಮೋದಿಜೀಯವರಿಗೆ ಕ್ಲೀನ್ ಚಿಟ್ ಕೊಟ್ಟದ್ದು ಎಂಬುದನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ, ಮೋದಿಜೀಯವರು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿ ನ್ಯಾಯಾಲಯದಿಂದ ಖುಲಾಸೆಗೊಂಡರು ಎಂಬ ಕಪೋಲಕಲ್ಪಿತ ಕಥೆಯನ್ನು ಚಿತ್ರಿಸುತ್ತದೆ. ಹರೇನ್ ಪಾಂಡ್ಯ, ಸಂಜೀವ್ ಭಟ್ ಮುಂತಾದವರ ಹೇಳಿಕೆಗಳನ್ನು ಕೂಲಂಕಷವಾಗಿ ತನಿಖೆ ಮಾಡಿ, ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ (SIT) ಹಾಗೂ ಭಾರತದ ಸರ್ವೋಚ್ಚ ನ್ಯಾಯಾಲಯವು ಗುಜರಾತ್‌ನ ದಂಗೆಯಲ್ಲಿ ಮೋದೀಜೀಯವರ ಕೈವಾಡ ಇರುವುದಕ್ಕೆ ಯಾವ ಸಾಕ್ಷ್ಯಾಧಾರಗಳೂ ಇಲ್ಲ ಎಂದು ಮತ್ತೆಮತ್ತೆ ಸಾಬೀತುಪಡಿಸಿದರೂ, ಬಿಬಿಸಿ ಮತ್ತದೇ ಹಳೇ ಕಡತವನ್ನೇ ಬಿಚ್ಚಿ ವೀಕ್ಷಕರನ್ನು ಪ್ರಚೋದಿಸುವ, ಅವರಲ್ಲಿ ಹಿಂದೂ ದ್ವೇಷವನ್ನೂ, ಮೋದೀ ದ್ವೇಷವನ್ನೂ ಬಿತ್ತುವ ಪ್ರಯತ್ನ ಮಾಡುತ್ತದೆ. ಹರೇನ್ ಪಾಂಡ್ಯ,  ಸಂಜೀವ್ ಭಟ್ ಮುಂತಾದವರ ಸಾಕ್ಷಿ ಸುಳ್ಳೆಂದು ಸುಪ್ರೀಂ ಕೋರ್ಟ್‌ನಲ್ಲಿ ಸಾಬೀತಾಗಿತ್ತು ಎಂದು ಗೊತ್ತಿಲ್ಲದ ವೀಕ್ಷಕರು, ಬಿಬಿಸಿ ಹೇಳಿದ್ದೇ ಪರಮಸತ್ಯ ಎಂದು ನಂಬಬೇಕು, ತನ್ಮೂಲಕ ಇನ್ನಷ್ಟು ಮೋದಿ ದ್ವೇಷವನ್ನು ಬೆಳೆಸಿಕೊಳ್ಳಬೇಕು ಎಂಬ ಬಿಬಿಸಿಯ ದುರುದ್ದೇಶ ಇಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. 

ಗುಜರಾತ್ ದಂಗೆ ನಡೆದ ಮರುವರ್ಷ, ಅಂದರೆ 2003ರಲ್ಲಿ ಹರೇನ್ ಪಾಂಡ್ಯರ ಹತ್ಯೆಯಾಯಿತು. ‘ಮೋದಿ ಸರ್ಕಾರದ ವಿರುದ್ಧ ಸಾಕ್ಷಿ ಹೇಳಿದ್ದರ ಕಾರಣ ಅವರನ್ನು ಮೋದಿ ಸರ್ಕಾರವೇ ಹತ್ಯೆ ಮಾಡಿತು’ ಎಂಬ implied meaning ಅನ್ನು ಬಿಬಿಸಿ ಕೊಡುತ್ತದೆ. ಆದರೆ ಹರೇನ್ ಪಾಂಡ್ಯರ ಕೊಲೆ ಮಾಡಿದವರ ವಿಚಾರಣೆ ಕೋರ್ಟಿನಲ್ಲಿ ನಡೆದು, ಅವರಿಗೆ ಜೈಲುಶಿಕ್ಷೆ ಆಗಿದ್ದರೂ, ಆ ಕೊಲೆಗಾರರು ಯಾರು ಎಂಬ ಸತ್ಯವನ್ನು ಬಿಬಿಸಿಯು ಅತ್ಯಂತ ಚಾಕಚಕ್ಯತೆಯಿಂದ ಮರೆಮಾಚುತ್ತದೆ. ಸುಬ್ರಹ್ಮಣ್ಯಂ ಸ್ವಾಮಿಯವರ ಹೇಳಿಕೆಗೆ ತಮಗೆ ಬೇಕಾದ ಅರ್ಥವನ್ನು ಕಲ್ಪಿಸಿ, ಹರೇನ್ ಪಾಂಡ್ಯರ ಕೊಲೆಯ ಪಾಪವನ್ನು ಮೋದಿಜೀಯವರ ತಲೆಗೆ ಕಟ್ಟಲಾಗುತ್ತದೆ. ‘ಮೋದಿಯ ಭಾರತದಲ್ಲಿ ಮುಸ್ಲಿಮರ ನರಮೇಧ ನಡೆಯುತ್ತಿದೆ, ಮುಸ್ಲಿಮರು ಭಾರತ ಬಿಟ್ಟು ಓಡಿಹೋಗಬೇಕೆಂಬುದು ಮೋದಿಯ ಮತ್ತು ಭಾರತದ ಹಿಂದೂಗಳ ಉದ್ದೇಶವಾಗಿದೆ’ ಎಂಬ ಅತ್ಯಂತ ಗಂಭೀರವಾದ ಸುಳ್ಳು ಆಪಾದನೆಯನ್ನು ಹೊರಿಸುತ್ತದೆ. ಗುಜರಾತ್ ದಂಗೆಯ ಸಂದರ್ಭದಲ್ಲಿ ಪೊಲೀಸರು ಸುಮ್ಮನೆ ನಿಂತರು, ಹಿಂದೂ ದಂಗೆಕೋರರನ್ನು ಉತ್ತೇಜಿಸಿದರು, ಯಾರನ್ನೂ ಅರೆಸ್ಟ್ ಮಾಡಲಿಲ್ಲ, ಮುಂತಾದ ಹಾಸ್ಯಾಸ್ಪದ ಹೇಳಿಕೆಗಳು ಸಾಕ್ಷ್ಯಚಿತ್ರದುದ್ದಕ್ಕೂ ತುಂಬಿಕೊಂಡಿವೆ. ಇಷ್ಟಕ್ಕೂ, ಈ ಆಪಾದನೆಗಳನ್ನು ಮಾಡಲು ಬಿಬಿಸಿ ವರದಿಗಾರ್ತಿಯ ಬಳಿ ಇದ್ದದ್ದು, ಪೊಲೀಸ್ ಪಡೆಯನ್ನು ಹತ್ತಿರದಿಂದ ಬಲ್ಲ ಸಹೋದ್ಯೋಗಿಯ ಒಬ್ಬ ಸ್ನೇಹಿತ ಕೊಟ್ಟ ಗುಪ್ತ ಮಾಹಿತಿಯಂತೆ! ಹಾಗಾದರೆ ಬಿಬಿಸಿ ಇದೇ ಅಂತಿಮ ತೀರ್ಮಾನ ಎನ್ನುವಂತೆ ವರದಿ ಮಾಡುವ ವಿಷಯಗಳ ನಿಖರತೆ, ವಿಶ್ವಾಸಾರ್ಹತೆ ಎಷ್ಟು ಮಟ್ಟಿನದು ಎಂದು ನೀವೇ ಆಲೋಚಿಸಿ.  

ಗುಜರಾತ್‌ನ ದಂಗೆಗೆ ಸಂಬಂಧಿಸಿದಂತೆ ಆದ ಅರೆಸ್ಟ್‌ಗಳ ಸಂಖ್ಯೆ 27,000 ದಷ್ಟಿದ್ದು, ಅದರಲ್ಲಿ 19,000 ಜನ ಹಿಂದೂಗಳೂ. 8,000 ಮುಸ್ಲಿಮರೂ ಇದ್ದರು. ಹಾಗಾಗಿ ಮೋದಿ ಸರಕಾರವು ದಂಗೆಯನ್ನು ನಿಲ್ಲಿಸುವ ಪ್ರಯತ್ನ ಮಾಡಲಿಲ್ಲ, ಪೋಲೀಸರು ತಮ್ಮ ಕೆಲಸ ಮಾಡಲಿಲ್ಲ ಎನ್ನುವುದು ಮಿಥ್ಯಾರೋಪವಾಗುತ್ತದೆ. ಆದರೆ ಕಣ್ಣೆದುರಿಗಿರುವ ಅಂಕಿ-ಅಂಶಗಳನ್ನು ಕಡೆಗಣಿಸಿ ತಮ್ಮ ಸಂಕುಚಿತ ಬುದ್ಧಿಗೆ ದಕ್ಕುವ ಜೊಳ್ಳನ್ನಷ್ಟೇ ಅವರು ಪ್ರಸಾರಮಾಡಿದ್ದಾರೆ. ಮೋದೀಜೀಯವರ ಆಡಳಿತ ಬಂದ ಮೇಲೆ, ಭಾರತದಲ್ಲಿ ತಮಗೆ ವಿಶೇಷ ಹಕ್ಕುಗಳು ಬೇಕು ಎಂದು ಆಗ್ರಹಿಸುವ ಧೈರ್ಯ ಹಿಂದೂಗಳಿಗೆ ಬಂದಿದೆ. ಇದರಿಂದ ಮುಸ್ಲಿಮರಿಗೆ ಭಾರತದಲ್ಲಿ ಯಾವ ಸ್ಥಾನಮಾನವೂ ಇಲ್ಲದಾಗಿದೆ. ಮುಸ್ಲಿಮರೊಂದಿಗೆ ಅವರು ಸೆಕೆಂಡ್ ಕ್ಲಾಸ್ ಸಿಟಿಜನ್ಸ್ ಎಂಬಂತೆ ವ್ಯವಹಾರ ಮಾಡಲಾಗುತ್ತದೆ ಎಂಬ ಸಾಕ್ಷಿರಹಿತ ಸುಳ್ಳನ್ನು ಬಿಬಿಸಿ ಯಾವುದೇ ಮುಚ್ಚುಮರೆ ಇಲ್ಲದೆ ಹೇಳುತ್ತದೆ. ತನ್ಮೂಲಕ ಮೋದೀಜೀಯವರ ಮೇಲೆ ಹಾಗೂ ವಿಶ್ವದಾದ್ಯಂತ ಇರುವ ಎಲ್ಲಾ ಹಿಂದೂಗಳ ಮೇಲೆ ಇಲ್ಲಸಲ್ಲದ ಗಂಭೀರ ಆಪಾದನೆಗಳನ್ನು ಮಾಡಿ, ಎಲ್ಲರೂ ನಮ್ಮನ್ನು ಸಂಶಯದ ದೃಷ್ಟಿಯಿಂದ ನೋಡುವಂತೆ ಮಾಡಿದ್ದಾರೆ. ಗುಜರಾತ್‌ನ ದಂಗೆ ಭಾರತದ ಇತಿಹಾಸದ ಒಂದು ಕರಾಳ ಕ್ಷಣವಾಗಿತ್ತು. ಎರಡೂ ಕಡೆಯೂ ಹಲವು ಅಮಾಯಕರ ಹತ್ಯೆ ನಡೆದು ಸಾಕಷ್ಟು ಸಾವು-ನೋವುಗಳಾಗಿದ್ದುವು ಎಂಬುದು ಅನೇಕ ವರದಿಗಳಲ್ಲಿ, ಕೋರ್ಟುಗಳಲ್ಲಿ ಸಾಬೀತಾಗಿದ್ದರೂ ಕೂಡ, ದಂಗೆ ನಡೆದು 20 ವರ್ಷಗಳ ನಂತರ ಸತ್ತವರ ಗೋರಿ ಅಗೆದು, ಅವರ ಜಾತಿಯನ್ನು, ಮತವನ್ನು ಕಂಡುಹಿಡಿಯುವ ಹೀನಾಯ ಕೆಲಸವನ್ನು ಬಿಬಿಸಿ ಮಾಡಿದೆ. ಕೇವಲ ಏಕಪಕ್ಷೀಯ ದೃಷ್ಟಿಯಿಂದಷ್ಟೇ ದಂಗೆಗಳನ್ನು ವಿಮರ್ಶಿಸಿ, ಒಂದಷ್ಟು ಅರ್ಧಸತ್ಯಗಳ, ಸುಳ್ಳುಗಳ ಲೇಪ ಮಾಡಿ, ಭಾರತದಲ್ಲಷ್ಟೇ ಅಲ್ಲ, ಪ್ರಪಂಚದಾದ್ಯಂತ ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಧಕ್ಕೆ ತರುವ ಅಪಾಯವನ್ನು ಡಾಕ್ಯುಮೆಂಟರಿ ಸೃಷ್ಟಿಸಿದೆ.  ಒಂದು ಸುಳ್ಳನ್ನೇ ನೂರು ಬಾರಿ ಹೇಳಿದರೆ ಅದನ್ನೇ ಜನರು ಸತ್ಯವೆಂದು ನಂಬುವ ಸಾಧ್ಯತೆ ಇದೆ ಎಂದು ಅರ್ಥಮಾಡಿಕೊಂಡಿರುವ ಬಿಬಿಸಿ, ವರ್ಷಗಳ ಹಿಂದೆ ನಡೆದ, ಕೋರ್ಟಿನಲ್ಲಿ ವಿಚಾರಣೆಯಾಗಿ ಪರಿಹರಿಸಲ್ಪಟ್ಟ ವಿದ್ಯಮಾನವನ್ನು ಮತ್ತೆ ಕೆದಕಿ, ಅದಕ್ಕೊಂದು ಏಕಪಕ್ಷೀಯ ವ್ಯಾಖ್ಯಾನವನ್ನು ಕೊಟ್ಟಿದೆ. ಭಾರತದ ನ್ಯಾಯವ್ಯವಸ್ಥೆಯ ಸಮಗ್ರತೆಯನ್ನು ಹಾಗೂ ಜಗತ್ತಿನ ಅತೀ ದೊಡ್ಡ ಗಣತಂತ್ರದ ಪ್ರಧಾನಿಯ ಚಾರಿತ್ರ್ಯವನ್ನು ಪ್ರಶ್ನಿಸುವ ಧಾರ್ಷ್ಟ್ಯವನ್ನು ಬಿಬಿಸಿ ತೋರಿಸಿದೆ.

ಬಿಬಿಸಿಯು, ತನ್ನ ಅಂಕಿ-ಅಂಶಗಳು ಮತ್ತು ಸಾಕ್ಷಿಗಳನ್ನು, ಯುಕೆ ಸರಕಾರವು 2002 ರಲ್ಲಿ ಗುಜರಾತ್ ದಂಗೆಗಳನ್ನು ತನ್ನದೇ ರೀತಿಯಲ್ಲಿ ತನಿಖೆ ಮಾಡಿ, ಬಿಡುಗಡೆ ಮಾಡಿದ ಸೀಕ್ರೆಟ್ ರಿಪೋರ್ಟ್‌ನಿಂದ ಪಡೆದುಕೊಂಡಿದೆ ಎಂದು ಹೇಳಿದೆ. ಆಗಿನ ಯುಕೆಯ ವಿದೇಶಾಂಗ ಸಚಿವರಾಗಿದ್ದ ಜ್ಯಾಕ್ ಸ್ಟ್ರಾ ಅವರು ‘ಗುಜರಾತ್ ದಂಗೆಗೆ ಮೋದೀಜೀ ನೇರವಾಗಿ ಕಾರಣ. ಅವರು ಮುಸ್ಲಿಮರ ನರಮೇಧವನ್ನು ಬೆಂಬಲಿಸಿದರು. ಪೊಲೀಸ್ ಕಾರ್ಯಾಚರಣೆಗೆ ತಡೆ ಒಡ್ಡಿದರು’ ಮುಂತಾದ ಸುಳ್ಳು ಮತ್ತು ಸಾಕ್ಷ್ಯಾಧಾರರಹಿತ ಆರೋಪಗಳನ್ನು ಮೋದೀಜೀಯವರ ಮೇಲೆ ಹೊರಿಸುತ್ತಾರೆ. ಇದು ಹಲವು ರೀತಿಯ ಪ್ರಶ್ನೆಗಳನ್ನು ವೀಕ್ಷಕರಲ್ಲಿ ಮೂಡಿಸುತ್ತದೆ. ಮೊದಲಿಗೆ, ಸ್ವತಂತ್ರ ರಾಷ್ಟ್ರವಾದ ಭಾರತದಲ್ಲಿ, ಸರ್ಕಾರದ ಅಥವಾ ನ್ಯಾಯಾಲಯದ ಅನುಮತಿಯಿಲ್ಲದೆ ಈ ರೀತಿಯ secret investigation ನಡೆಸುವ ಹಕ್ಕನ್ನು ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟವರು ಯಾರು ಎಂಬುದನ್ನು ನಾವು ಯೋಚಿಸಬೇಕಾಗುತ್ತದೆ. ‘ಇದು ಕಾನೂನುಬದ್ಧ ರೀತಿಯಲ್ಲ, ಸ್ವತಂತ್ರ ಭಾರತದ ಆಂತರಿಕ ವ್ಯವಹಾರದಲ್ಲಿ ಈ ರೀತಿ ಮೂಗು ತೂರಿಸುವ ಯಾವ ಅಧಿಕಾರವೂ ಬ್ರಿಟಿಷ್ ಸರ್ಕಾರಕ್ಕಿಲ್ಲ’ ಎಂದು ಆಗಿನ ಭಾರತ ಸರ್ಕಾರದ ವಿದೇಶಾಂಗ ಸಚಿವರಾಗಿದ್ದ ಕಮಲ್ ಸಿಬಲ್‌ರವರು ಹೇಳಿದ್ದಾರೆ. ಬ್ರಿಟಿಷ್ ಸರ್ಕಾರಕ್ಕೆ ಗುಜರಾತ್ ನಲ್ಲಿ ನಡೆಯುತ್ತಿದ್ದ ಹಿಂಸಾಚಾರದ ಬಗ್ಗೆ, ಸರ್ಕಾರದ ಕ್ರಮಗಳ ಬಗ್ಗೆ ನಿಜಕ್ಕೂ ಕಾಳಜಿ ಇದ್ದಿದ್ದರೆ, ಹೈಕಮಿಷನ್‌ನ ಅಥವಾ ಬ್ರಿಟಿಷ್ ರಾಯಭಾರಿಯ ಗಮನಕ್ಕೆ ಇದನ್ನು ತಂದು ಮುಂದುವರಿಯಬೇಕಿತ್ತೇ ವಿನಾ, ಜಗತ್ತಿನ ಯಾವುದೇ ಸ್ವತಂತ್ರ ದೇಶದಲ್ಲಿ ಈ ರೀತಿಯ ಗುಪ್ತ ರಿಪೋರ್ಟ್ ತಯಾರಿಸುವ ಯಾವ ಹಕ್ಕೂ ಬ್ರಿಟಿಷ್ ಸರ್ಕಾರಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಡಾಕ್ಯುಮೆಂಟರಿಯ ಎರಡನೇ ಭಾಗವು 2019ರಲ್ಲಿ ಮೋದೀಜೀಯವರು ಎರಡನೇ ಬಾರಿಗೆ ಪ್ರಧಾನಿಯಾಗಿ ಜನಮತದಿಂದ ಆಯ್ಕೆಯಾದ ನಂತರದ ವಿದ್ಯಮಾನಗಳನ್ನು ತೋರಿಸುತ್ತದೆ. ಇಲ್ಲಿಯೂ ಏಕಪಕ್ಷೀಯ ದೃಷ್ಟಿಕೋನದ ಹಾಗೂ ತಿರುಚಿದ ಸಾಕ್ಷ್ಯಾಧಾರಗಳನ್ನೊಳಗೊಂಡ ವರದಿಗಳೊಂದಿಗೆ ಕೆಲವು ಘಟನೆಗಳನ್ನು ಪ್ರಸ್ತುತಪಡಿಸುತ್ತದೆ. ಮೊದಲನೆಯದಾಗಿ Citizenship Amendment Act (CAA) ಅನ್ನು ತನ್ನ ಸಾಮ್ರಾಜ್ಯಶಾಹಿ ಮನಸ್ಥಿತಿಯ ಲೆನ್ಸ್ ಮೂಲಕವಷ್ಟೇ ವಿಮರ್ಶಿಸಿ, CAA ಯು ಮುಸ್ಲಿಮ್ ವಿರೋಧಿ, ಇದರಿಂದ ಭಾರತೀಯ ಮುಸ್ಲಿಮರ ನಾಗರಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬ ಊಹೆಗೂ ನಿಲುಕದ ಸುಳ್ಳನ್ನು ಪ್ರಸ್ತುತಪಡಿಸುತ್ತದೆ. ಪ್ರಪಂಚದ ಬಹುತೇಕ ಮುಂದುವರಿದ ರಾಷ್ಟ್ರಗಳಲ್ಲಿ ಆ ದೇಶದ ಪ್ರಜೆಗಳೆಲ್ಲರ ರಿಜಿಸ್ಟರ್ ಎನ್ನುವುದು ಒಂದಲ್ಲ ಒಂದು ಹೆಸರಿನಲ್ಲಿದೆ. ಅದೇ ರೀತಿ ಬ್ರಿಟನ್, ಇತರ ಐರೋಪ್ಯ ದೇಶಗಳು, ಅಮೆರಿಕಾ ಮುಂತಾದ ದೇಶಗಳಲ್ಲಿ illegal immigration ಅನ್ನು ಮೊಟಕುಗೊಳಿಸುವ ಹಲವು ಕಾನೂನುಗಳು ಜಾರಿಯಲ್ಲಿವೆ. ಆದರೆ ಭಾರತ ತನ್ನ National registry ಯನ್ನು ನಿಖರಗೊಳಿಸಬೇಕು, ಅದರೊಂದಿಗೆ ಕಾನೂನುಬಾಹಿರ ವಲಸೆಯನ್ನು ತಡೆಗಟ್ಟಬೇಕು, ಮಾತ್ರವಲ್ಲ, ಭಾರತದ ಸುತ್ತಲಿನ ದೇಶಗಳಲ್ಲಿ ಮತೀಯ ಕ್ರೌರ್ಯಗಳಿಗೆ ಒಳಗಾಗುವ ಮುಗ್ಧ ನಾಗರಿಕರಿಗೆ ಆಶ್ರಯ ಕೊಡಬೇಕು ಎಂಬ ಆಶಯದಿಂದ CAA ಅನ್ನು ಹೊರತಂದರೆ, ಇದು ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದೆಂಬ ಬಾಲಿಶ ವಾದವನ್ನು ಬಿಬಿಸಿ ಮಂಡಿಸುತ್ತದೆ. ಒಟ್ಟಿನಲ್ಲಿ ಭಾರತೀಯರ ವಿಷಯ ಬಂದಾಗ ‘ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ’ ಎಂಬ ಮಾತಿನಂತೆ, ತಾವು ಮಾಡಿದರೆ ಅದು ಕಾನೂನು, ಭಾರತದ ಸರ್ಕಾರ ಮಾಡಿದರೆ ಅದು ಮುಸ್ಲಿಂ ವಿರೋಧಿ ಚಟುವಟಿಕೆ ಎಂಬ ತೀರ್ಮಾನವನ್ನು ಬಿಬಿಸಿ ಮಾಡುತ್ತದೆ.

Anti-CAA protest ನ ಸಮಯದಲ್ಲಿ ಭಾರತ ವಿರೋಧಿ ಸ್ಲೋಗನ್‌ಗಳನ್ನು ಕೂಗುವುದು, ರಸ್ತೆಗಳಿಗೆ ಅಡಚಣೆ ಉಂಟುಮಾಡುವುದು ಮುಂತಾದ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಿ ಬಂಧಿತರಾದ ಜಾಮಿಯಾ-ಮಿಲಿಯಾ-ಇಸ್ಲಾಮಿಯಾ, JNU ಮುಂತಾದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಮೋದಿ ಸರ್ಕಾರವು ಅವರು ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಬಂಧಿಸಿತು ಎಂಬ ಹಾಸ್ಯಾಸ್ಪದ ವ್ಯಾಖ್ಯಾನವನ್ನು ಬಿಬಿಸಿ ಕೊಡುತ್ತದೆ. Anti-CAA protest ನ ಹೆಸರಿನಲ್ಲಿ ಆ ವಿದ್ಯಾರ್ಥಿಗಳು ಮಾಡಿದ ಸಾರ್ವಜನಿಕ ಆಸ್ತಿಯ ಹಾನಿ, ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿ ಹಿಡಿಯುವಂತೆ ಪ್ರಚೋದಿಸುವ ಅವರು ಕೊಟ್ಟ ಹೇಳಿಕೆಗಳು, ಇವೆಲ್ಲವನ್ನೂ ಅದು ನಗಣ್ಯ ಮಾಡುತ್ತದೆ. ಒಟ್ಟಿನಲ್ಲಿ ದಂಗೆಯ ಸಮಯದಲ್ಲಿ ದೇಶದ ಎಲ್ಲಾ ಸಮುದಾಯಗಳಲ್ಲೂ ಉಂಟಾದ ಮಾನಹಾನಿ, ಪ್ರಾಣಹಾನಿ ಇವನ್ನು ನಡೆದಂತೆ ವರದಿಮಾಡುವುದನ್ನು ಬಿಟ್ಟು, ಆ ಘಟನೆಯಲ್ಲಿ ನೊಂದವರ ನೋವಿನಲ್ಲಿ ತನ್ನ ರಾಜಕೀಯ ಅಜೆಂಡಾದ ಬೇಳೆಬೇಯಿಸಿಕೊಳ್ಳುವ ಹೀನಾಯ ಕೃತ್ಯವನ್ನು ಬಿಬಿಸಿ ಮಾಡಿದೆ.

ಸಾಕ್ಷ್ಯಚಿತ್ರದ ಎರಡನೇ ಭಾಗವು ಕಾಶ್ಮೀರದಲ್ಲಿ370 ನೇ ವಿಧಿಯನ್ನು ರದ್ದು ಮಾಡಿದ್ದರ ಬಗ್ಗೆಯೂ ವರದಿ ಮಾಡುತ್ತದೆ. ‘Mr Modi then turned his attention to Kashmir, the only part of India with a Muslim majority’ ಎಂದು ಪ್ರಾರಂಭ ಮಾಡಿ, ಕಾಶ್ಮೀರದಲ್ಲಿ, ಮುಸ್ಲಿಮರಲ್ಲಿ ಭೀತಿ ಹುಟ್ಟಿಸಲು, ಅವರನ್ನು ಶೋಷಣೆ ಮಾಡಲೆಂದೇ 370ನೇ ವಿಧಿಯನ್ನು ರದ್ದು ಮಾಡಲಾಯಿತು ಎಂದು ಅನೇಕ ಬಾರಿ ಒತ್ತಿ-ಒತ್ತಿ ಹೇಳುತ್ತದೆ. ಮತ್ತೆಮತ್ತೆ, ಕಾಶ್ಮೀರವು ಮುಸ್ಲಿಂ ಬಾಹುಳ್ಯವಿರುವ ಪ್ರದೇಶ ಎಂದು ಹೇಳುವ ಬಿಬಿಸಿ, 1990 ರವರೆಗೂ ಕಾಶ್ಮೀರದಲ್ಲಿ ಗಣನೀಯ ಸಂಖ್ಯೆಯಲ್ಲಿದ್ದ ಹಿಂದೂಗಳ ಪರಿಸ್ಥಿತಿ ಏನಾಯಿತು, ಅವರೀಗ ಎಲ್ಲಿದ್ದಾರೆ ಎನ್ನುವ ಯಾವ ವಿಷಯದ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಸಂವಿಧಾನದ 370 ನೇ ವಿಧಿಯ ಹಿನ್ನೆಲೆ ಏನು, ಆ ವಿಶೇಷ ಸ್ಥಾನಮಾನವನ್ನು ಕಾಶ್ಮೀರಕ್ಕೆ ಯಾಕೆ ಕೊಡಲಾಯಿತು, ಅದು ಒಂದು ತಾತ್ಕಾಲಿಕ ವಿಧಿಯಾಗಿತ್ತೇ ಹೊರತು, ಎಂದೂ ಬದಲಾಗಬಾರದ ಸಾಂವಿಧಾನಿಕ ವಿಧಿ ಅದಾಗಿರಲಿಲ್ಲ ಎನ್ನುವುದನ್ನು ಎಲ್ಲೂ ಬಿಬಿಸಿ ಪ್ರಸ್ತುತಪಡಿಸುವುದಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವ ಪದಪುಂಜವನ್ನು ಬಳಸಿದರೆ ಸಾಕು, ಅಂತಹ ಸುದ್ದಿ  ಇಂದಿನ ಯುಗದಲ್ಲಿ ಬಿಸಿ ಬೋಂಡಾ-ಬಜ್ಜಿಯಂತೆ ಮಾರಾಟವಾಗುತ್ತದೆ. ನಿಜಕ್ಕೂ ಮಾನವ ಹಕ್ಕುಗಳ ಉಲ್ಲಂಘನೆ ಆಯಿತೋ ಇಲ್ಲವೋ, ಒಂದು ಘಟನೆಯ ಮೂಲ ಸ್ವರೂಪ, ಅದರ ಹಿನ್ನೆಲೆ, ಅದರ ಒಟ್ಟು ಪರಿಣಾಮ ಇವೆಲ್ಲವೂ ಏನಾಗಿತ್ತು ಎಂದು ಯೋಚನೆ ಮಾಡುವ ತಾಳ್ಮೆ ಯಾರಿಗೂ ಈ ಕಾಲದಲ್ಲಿಲ್ಲ, ಹಾಗಾಗಿ ಸುದ್ದಿಯ ಹೆಸರಿನಲ್ಲಿ ಎಂತಹ ಕಸವನ್ನು ಜನರತ್ತ ಎಸೆದರೂ, ಅವರು ಅದನ್ನು ಹಿಂದೆ-ಮುಂದೆ ನೋಡದೆ ಸ್ವೀಕರಿಸುತ್ತಾರೆ ಎಂಬ ಧಾರ್ಷ್ಟ್ಯದಿಂದ ಬಿಬಿಸಿ ಈ ವಿಷಯವನ್ನು ಪ್ರಸಾರ ಮಾಡಿದ್ದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಡಾಕ್ಯುಮೆಂಟರಿಯ ಉದ್ದಕ್ಕೂ ಮೋದೀಜಿಯವರ ಚಾರಿತ್ರ್ಯಹರಣ ಮಾಡುವ ಎಲ್ಲಾ ಪ್ರಯತ್ನವನ್ನೂ ಬಿಬಿಸಿ ಮಾಡುತ್ತದೆ. ಮೋದಿಜೀಯವರು ಹಿಂದೂ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದು, ಅವರ ಗುರಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಿ, ಮುಸ್ಲಿಮರನ್ನು ದೇಶದಿಂದ ಓಡಿಸುವುದು ಎಂದು ನೇರವಾಗಿ ಮತ್ತು ಪರೋಕ್ಷವಾಗಿ ಆರೋಪಿಸುತ್ತದೆ. ಸರಿಯಾಗಿ ಹೇಳುವುದಾದರೆ, ಆರೋಪ ಮಾತ್ರವಲ್ಲ, ಮೋದೀಜೀಯವರು ಅಪರಾಧಿ ಎಂಬ ನಿರ್ಣಯವನ್ನು ತಾನೇ ಇಡೀ ಜಗತ್ತಿನ ನ್ಯಾಯಾಲಯವೇನೋ ಎನ್ನುವ ರೀತಿಯಲ್ಲಿ ಬಿಬಿಸಿ ಮಾಡುತ್ತದೆ.  ಭಾರತದಲ್ಲಿ ‘ಹರಹರ ಮಹಾದೇವ್’ ಘೋಷಣೆಯನ್ನು ಸಾರ್ವಜನಿಕವಾಗಿ ಹೇಳುವುದೇ ತಪ್ಪು ಎಂಬ ಧಾಟಿಯಲ್ಲಿ, ಮೋದೀಜೀಯವರು ಯಾವುದೋ ಭಾಷಣದಲ್ಲಿ ಈ ಘೋಷಣೆಯನ್ನು ಹೇಳಿದ ಒಂದೇ ಕ್ಲಿಪ್ ಅನ್ನು ಹಲವು ಬಾರಿ ತನಗೆ ಎಲ್ಲಿ ಬೇಕೋ ಅಲ್ಲಿ ತುರುಕಿಸಿ ತೋರಿಸುತ್ತದೆ. ಆದರೆ Anti-CAA protest ಗಳ ಸಮಯದಲ್ಲಿ ದಂಗೆಕೋರರು ಕೂಗಿದ ಭಾರತ ವಿರೋಧೀ ಘೋಷಣೆಗಳಿಗೆ ಬಿಬಿಸಿಯ ಕಿವಿಗಳು ಕಿವುಡಾಗುತ್ತವೆ. ಪ್ರಪಂಚದ ಬಹುತೇಕ ದೇಶಗಳಲ್ಲಿ ದೇಶವಿರೋಧೀ  ಘೋಷಣೆಗಳನ್ನು ಕೂಗುವುದು ಕಾನೂನುರೀತ್ಯಾ ಅಪರಾಧ ಎಂದು ಗೊತ್ತಿದ್ದರೂ, ಆ ದಂಗೆಕೋರರನ್ನು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಸರಕಾರ ಬಂಧಿಸಿತು ಎಂದು ಹೇಳದೆ, ಇಲ್ಲಿಯೂ ಮತೀಯ ಭಾವನೆಗಳ ಲೇಪ ಕೊಟ್ಟು, ದಂಗೆಕೋರರನ್ನು ಅವರು ಮುಸ್ಲಿಂ ಎಂಬ ಕಾರಣಕ್ಕೆ  ಬಂಧಿಸಲಾಯಿತು ಎಂಬ ಅಪಾಯಕಾರೀ ತೀರ್ಮಾನಕ್ಕೆ ಬಿಬಿಸಿ ಬರುತ್ತದೆ. ಮೋದೀಜೀಯವರು ಗುಜರಾತ್ ದಂಗೆಗಳನ್ನು ನಿಯಂತ್ರಿಸಲಿಲ್ಲ, ಅದು ತಪ್ಪು ಎಂದು ಹೇಳಲಿಲ್ಲ ಎಂದು ಆರೋಪಿಸುತ್ತಲೇ ಹೋಗುವ ಡಾಕ್ಯುಮೆಂಟರಿಯ ಉದ್ದಕ್ಕೂ, ಮೋದೀಜೀಯವರು ‘ಈ ರೀತಿಯ ಹಿಂಸಾಚಾರ ಸರಿಯಲ್ಲ, ಎಲ್ಲರೂ ಶಾಂತಿಯಿಂದ ವರ್ತಿಸಿ. ಹಿಂಸಾಚಾರ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳುವ ಕ್ಲಿಪ್‌ಗಳು ಹಲವು ಬಾರಿ ಕಾಣಸಿಗುತ್ತವೆ. ಆದರೂ ಮೋದೀಜೀಯವರು ಹಿಂಸಾಚಾರವನ್ನು ಉತ್ತೇಜಿಸಿದರು ಎಂಬ ಬಿಬಿಸಿಯ ಅಂತಿಮ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಅದು ಹೇಳುವಂತಿದೆ. 

ಈ ಸಾಕ್ಷ್ಯಚಿತ್ರದಲ್ಲಿ ಬಿಂಬಿಸಲಾದ ವಿಚಾರಗಳು ಸಂಪೂರ್ಣವಾಗಿ ಏಕಪಕ್ಷೀಯವಾಗಿದ್ದವು, ಹಿಂದೂ ವಿರೋಧಿಗಳಾಗಿದ್ದವು, ಡಾಕ್ಯುಮೆಂಟರಿಯ ಮುಂದಿನ ಭಾಗವನ್ನು ಪ್ರಸಾರ ಮಾಡಬೇಡಿ ಎಂಬ ಇಲ್ಲಿ ನೆಲೆಸಿರುವ ಭಾರತೀಯ ಹಿಂದೂಗಳ ಶಾಂತಿಪೂರ್ವಕ ಮನವಿಗೆ ಪ್ರತಿಕ್ರಿಯಿಸಿದ ಬಿಬಿಸಿ, ತಾನು ಬಹಳ ರಿಸರ್ಚ್ ಮಾಡಿ, ಎಲ್ಲಾ ಸಾಕ್ಷ್ಯಾಧಾರಗಳನ್ನೂ ಪರಿಗಣಿಸಿ, ಹಿಂದೂ ಪರ ಹಾಗೂ ಹಿಂದೂ ವಿರೋಧಿ ಎರಡೂ ಕಡೆಯ ವಿಚಾರಧಾರೆಗಳಿಗೂ ಸಮಾನ ಪ್ರಾಮುಖ್ಯ ಕೊಟ್ಟು ಈ ಡಾಕ್ಯುಮೆಂಟರಿಯನ್ನು ಮಾಡಿದ್ದಾಗಿ ಹೇಳಿಕೆ ಕೊಟ್ಟಿತು. ಡಾಕ್ಯುಮೆಂಟರಿಯಲ್ಲಿ,  ಮೋದೀಜೀಯವರ ಪ್ರತೀ ನಡೆಯನ್ನೂ ಟೀಕಿಸುವ, ಹಿಂದೂಗಳನ್ನು ಅಪರಾಧೀ ಸ್ಥಾನದಲ್ಲಿ ನಿಲ್ಲಿಸುವ ವಿಚಾರಧಾರೆಯ ಸುಮಾರು 8 ರಿಂದ 10 ಜನರ ವಿಚಾರಗಳನ್ನು ಬಿಬಿಸಿ ವಿಶದವಾಗಿ ಪ್ರಸ್ತುತಪಡಿಸಿತು. ಆದರೆ ಮೋದೀ ಸರಕಾರದ ನಿಲುವನ್ನು ಸ್ಪಷ್ಟಪಡಿಸಬಲ್ಲ, ಹಾಗೂ ಹಿಂದೂಗಳ ದೃಷ್ಟಿಕೋನವನ್ನು ಪ್ರತಿನಿಧಿಸಬಲ್ಲ ಕೇವಲ ಮೂರು ಜನರನ್ನು ಬಿಬಿಸಿ ಸಂದರ್ಶನ ಮಾಡಿತ್ತು. ಅವರಿಗೆ ಮಾತನಾಡಲು ದೊರಕಿದ ಸಮಯಾವಕಾಶ ಕೂಡಾ ಬಹಳ ನಗಣ್ಯವಾಗಿತ್ತು. ‘ನನ್ನ ಸಂದರ್ಶನವನ್ನು ಸುಮಾರು ಒಂದು ಗಂಟೆಯ ಕಾಲ ಮಾಡಿದ ಬಿಬಿಸಿ, ನನಗೆ ಕೇವಲ ಎರಡರಿಂದ ಮೂರು ನಿಮಿಷದ screen time  ಕೊಟ್ಟು, ಅದರಲ್ಲೂ, ನನ್ನ ಮಾತುಗಳಿಗೆ ತನಗೆ ಬೇಕಾದ ಅರ್ಥವನ್ನು ಆವಾಹಿಸಿ, ತಿರುಚಿದ narrative ಅನ್ನು ಕೊಟ್ಟಿದೆ’ ಎಂದು ಸಂದರ್ಶಿತರಲ್ಲಿ‌ಒಬ್ಬರಾದ, ಬಿಜೆಪಿಯ ಮಾಜಿ ಸಂಸದ ಸ್ವಪನ್ ದಾಸ್ ಗುಪ್ತಾರವರು ಹೇಳಿಕೆ ಕೊಟ್ಟರು.  

ಈ ಡಾಕ್ಯುಮೆಂಟರಿಯಲ್ಲಿ ಬಿಂಬಿಸಲಾದ, ‘ಮೋದೀಜೀಯವರು ಹಾಗೂ ಹಿಂದೂಗಳು ರಾಕ್ಷಸೀಪ್ರವೃತ್ತಿಯವರು’ ಎಂಬ narrative ಅನ್ನು ಖಂಡಿಸಿ ಬಹಳ ಜನ ದನಿಯೆತ್ತಿದರು. ಬ್ರಿಟನ್ನಿನ House of Lords ನ ಗೌರವಾನ್ವಿತ ಸದಸ್ಯರಾದ ಲಾರ್ಡ್ ರಾಮಿ ರೇಂಜರ್ ಅವರು ಬಿಬಿಸಿಯ ಮುಖ್ಯಸ್ಥರಾದ ಟಿಮ್ ಡೇವಿ ಅವರಿಗೆ ಬರೆದ ಪತ್ರದಲ್ಲಿ, ‘ಮೋದೀಜೀಯವರನ್ನು ಗುಜರಾತ್ ದಂಗೆಗಳಿಗೆ ತಪ್ಪಾಗಿ ಬಾಧ್ಯಸ್ಥರನ್ನಾಗಿ ಮಾಡುವ, ಹಿಂದೂಗಳನ್ನು ಟೀಕಿಸುವ, ಕೇವಲ ಏಕಪಕ್ಷೀಯ ನಿಲುವುಗಳನ್ನು ಯಾವುದೇ ಸಂಕೋಚವಿಲ್ಲದೆ ಬಿತ್ತರಿಸುವ ಬಿಬಿಸಿಯ ಈ ನಡೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದ್ದು’  ಎಂದು ಹೇಳಿದರು. ಅಷ್ಟೇ ಅಲ್ಲ, ‘ಬ್ರಿಟನ್ ಮತ್ತು ಭಾರತದ ನಡುವೆ ಫ್ರೀ ಟ್ರೇಡ್ ನ ಒಪ್ಪಂದ ಮಾಡಿಕೊಳ್ಳುವ ಮಾತುಕತೆಗಳು ನಡೆಯುತ್ತಿರುವ, ಭಾರತವು G-20 ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಹಾಗೂ ಮೊತ್ತಮೊದಲ ಬಾರಿಗೆ ಭಾರತ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್ನಿನ ಪ್ರಧಾನಿಯಾಗಿರುವ ಈ ಕಾಲಘಟ್ಟದಲ್ಲಿ ಭಾರತದ ಪ್ರಜಾಪ್ರಭುತ್ವವನ್ನೂ, ಅಲ್ಲಿನ ಪ್ರಧಾನಿಯನ್ನೂ ಪ್ರಶ್ನಿಸುವ, ಅವರನ್ನು ಅಪರಾಧೀ ಸ್ಥಾನದಲ್ಲಿ ನಿಲ್ಲಿಸುವ, ಇಂತಹ ಪೂರ್ವಾಗ್ರಹದಿಂದ ಕೂಡಿದ ಡಾಕ್ಯುಮೆಂಟರಿಯನ್ನು ಪ್ರಸಾರ ಮಾಡುವುದರ ಹಿಂದಿನ ಉದ್ದೇಶ ಏನಿರಬಹುದು ಎಂಬುದು ಗಂಭೀರವಾಗಿ ಯೋಚಿಸಬೇಕಾದ ವಿಚಾರ’  ಎಂದು ಅಭಿಪ್ರಾಯಪಟ್ಟರು. ಬ್ರಿಟನ್ನಿನಲ್ಲಿ ಭಾರತೀಯ ಮೂಲದ ಹಾಗೂ ಪಾಕಿಸ್ತಾನಿ ಮೂಲದ ಪ್ರಜೆಗಳ ನಡುವೆ ಸಾಮರಸ್ಯವನ್ನು ಹೆಚ್ಚಿಸಲು, ಅವರ ನಡುವಿನ ಭಿನ್ನಾಭಿಪ್ರಾಯಗಳನ್ನು ದ್ವಿಪಕ್ಷೀಯ ಮಾತುಕತೆಗಳಿಂದ ಪರಿಹರಿಸಲು ತಾನು ಬಹಳ ಪ್ರಯತ್ನ ಪಡುತ್ತಿದ್ದು, ಈ ಡಾಕ್ಯುಮೆಂಟರಿಯು ಆ ಎಲ್ಲಾ ಪ್ರಯತ್ನಗಳಿಗೆ ನೀರೆರಚಿ ಬ್ರಿಟನ್ನಿನಲ್ಲಿ ಹಿಂದೂ ವಿರೋಧೀ ಭಾವನೆಗಳನ್ನು ಪ್ರಚೋದಿಸುವ, ಹಿಂದೂ-ಮುಸ್ಲಿಮರ ನಡುವಿನ ಕಂದಕವನ್ನು ಹೆಚ್ಚಿಸುವ ಅಪಾಯವನ್ನು ಸೃಷ್ಟಿಸಿದೆ ಎಂದೂ ಅವರು ಹೇಳಿದರು. 

ಪ್ರಧಾನಿ ಮೋದಿಯವರಿಗೆ ತಮ್ಮ ಬೆಂಬಲವನ್ನು ಸೂಚಿಸಿದ ಬ್ರಿಟಿಷ್ ಸಂಸದ ಲಾರ್ಡ್ ಕರಣ್ ಬಿಲ್ಲಿಮೋರಿಯಾ ಅವರು ‘ಪ್ರಧಾನಿ ಮೋದಿಯವರು ಇಂದು ಪ್ರಪಂಚದ ಅತ್ಯಂತ ಪ್ರಭಾವೀ ರಾಜಕಾರಣಿಯಾಗಿದ್ದಾರೆ. ಬಾಲಕನಾಗಿದ್ದಾಗ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೋದಿಯವರು, ಭಾರತದ ಪ್ರಧಾನಿಯಾಗಿ ಆಯ್ಕೆಯಾಗಿ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ, ಅದರ ಹಿರಿಮೆಗೆ ಜೀವಂತ ನಿದರ್ಶನವಾಗಿದ್ದಾರೆ. ಭಾರತವು ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ಜಗತ್ತಿನ ಎರಡನೇ ಅತೀ ದೊಡ್ಡ economy ಯಾಗಿ ಬೆಳೆಯಲಿದೆ. ಇಂತಹ ಪ್ರಮುಖ ಘಟ್ಟದಲ್ಲಿ ಭಾರತದೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಬ್ರಿಟನ್ನಿನ ಪ್ರಗತಿಗೆ ಬಹಳ ಮುಖ್ಯ’ ಎಂದು ಸಂಸತ್ತಿನಲ್ಲಿ ಹೇಳಿದರು. 

ಭಾರತದಲ್ಲಿ ಏನೇ ನಡೆದರೂ ಅದರಲ್ಲಿ ಮೂಗು ತೂರಿಸುವುದನ್ನು, ಭಾರತದ ಪ್ರತಿಷ್ಠೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಡಿ ಎರಚುವುದನ್ನು ಪಾಕಿಸ್ತಾನವು ತನ್ನ ಕಾಯಕವಾಗಿ ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆ ಪ್ರಕಾರ, ಬಿಬಿಸಿ ಡಾಕ್ಯುಮೆಂಟರಿಯ ವಿಷಯವನ್ನು ಬ್ರಿಟನ್ನಿನ ಸಂಸತ್ತಿನಲ್ಲಿ ಎತ್ತಿ, ಮೋದೀಜೀಯವರ ಮೇಲೆ ಇನ್ನಷ್ಟು ಆರೋಪಗಳನ್ನು ಮಾಡಹೊರಟ ಪಾಕಿಸ್ತಾನಿ ಮೂಲದ ಸಂಸದನ ಅಧಿಕಪ್ರಸಂಗತನಕ್ಕೆ, ‘ಪ್ರಧಾನಿ ಮೋದೀಜೀಯವರ ಈ ರೀತಿಯ ಚಾರಿತ್ರ್ಯಹರಣವನ್ನು ನಾನು ಒಪ್ಪುವುದಿಲ್ಲ’ ಎಂದು ಎರಡೇ ಮಾತುಗಳಲ್ಲಿ ಖಡಾಖಂಡಿತವಾಗಿ ಉತ್ತರಕೊಟ್ಟು ಬ್ರಿಟನ್ನಿನ ಪ್ರಧಾನಿ ರಿಷಿ ಸುನಕ್ ಆ ಸಂಸದನ ಬಾಯಿ ಮುಚ್ಚಿಸಿದರು. ಬ್ರಿಟಿಷ್ ಸಂಸದ ಬಾಬ್ ಬ್ಲಾಕ್ ಮನ್ ಅವರು ಈ ಸಾಕ್ಷ್ಯಚಿತ್ರವನ್ನು disgraceful and a hatchet job ಎಂದು ಕಟುವಾಗಿ ಟೀಕಿಸಿದರು.

ಭಾರತದ ಪ್ರಜ್ಞಾವಂತ ಮುಸ್ಲಿಂ ಸಮುದಾಯದಿಂದಲೂ ಈ ಡಾಕ್ಯುಮೆಂಟರಿಯ ಬಗ್ಗೆ ಹಲವು ಟೀಕೆಗಳು ಬಂದವು. ಅಲೀಘರ್ ಮುಸ್ಲಿಂ ಯುನಿವರ್ಸಿಟಿಯ ಉಪಕುಲಪತಿಗಳಾದ ತಾರೀಕ್ ಮನ್ಸೂರ್ ಅವರು ಈ ಸಾಕ್ಷ್ಯಚಿತ್ರದ ಹಿಂದಿರುವ ಅಜೆಂಡಾವನ್ನು ‘ವೈಟ್‌ಮ್ಯಾನ್ಸ್ ಬರ್ಡನ್’ ಎಂಬ ಉಪಮೆಯೊಂದಿಗೆ ವಿವರಿಸಿದರು. ‘ವರ್ಷಗಳ ಹಿಂದೆ ಬ್ರಿಟಿಷರು ಭಾರತ ಬಿಟ್ಟು ಹೋದರೂ ಸಹ, ಅವರು ತಾವು ಮಾತ್ರ ಮಾನವೀಯ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರುವವರು, ಪ್ರಪಂಚದ ಎಲ್ಲೇ ಏನೇ ರಾಜಕೀಯ ವಿದ್ಯಮಾನಗಳು ನಡೆದರೂ, ಅಲ್ಲಿ ಮೂಗುತೂರಿಸಿ, ಅದನ್ನು ಪರಿಹರಿಸುವ ಜವಾಬ್ದಾರಿ ಮತ್ತು ತಾಕತ್ತು ತಮಗೆ ಮಾತ್ರ ಇದೆ ಎಂದು ತಿಳಿದುಕೊಂಡಿದ್ದಾರೆ. ಈ ಮನಸ್ಥಿತಿಯ ಕೆಟ್ಟ ಉದಾಹರಣೆಯೇ ಈ ಡಾಕ್ಯುಮೆಂಟರಿ. ಬರಿಯ ಪೂರ್ವಗ್ರಹಗಳೇ ತುಂಬಿರುವ ಈ ಡಾಕ್ಯುಮೆಂಟರಿ ಅತ್ಯಂತ ಅನಾವಶ್ಯಕವೂ, ಆಧಾರರಹಿತವಾದದ್ದೂ ಆಗಿದೆ. ಬಿಬಿಸಿಯು ‘ಭಾರತದ ನ್ಯಾಯವ್ಯವಸ್ಥೆಗಿಂತಲೂ ಮೇಲ್ಮಟ್ಟದವರು ನಾವು’ ಎಂಬ ಭ್ರಮೆಯಲ್ಲಿದೆ. ಬಿಬಿಸಿಯ ಅಜೆಂಡಾವು ಭಾರತದ ಪ್ರಜಾಪ್ರಭುತ್ವದ ಭಾವನೆಗಳನ್ನು ಅರ್ಥ ಮಾಡಿಕೊಂಡಿಲ್ಲ ಮತ್ತು ಅದು ಭಾರತದ ನಿಜವಾದ ರಾಜಕೀಯ ಸ್ಥಿತಿಗತಿಗಳನ್ನು ಪ್ರಸಾರ ಮಾಡುವುದಿಲ್ಲ. ಎರಡು ಬಾರಿ ಭರ್ಜರಿ ಬಹುಮತದಿಂದ ಪ್ರಧಾನಿಯಾಗಿ ಆಯ್ಕೆಯಾದ ಮೋದೀಜೀಯವರು ಅಲ್ಪಸಂಖ್ಯಾತರ ವಿರುದ್ಧವಾಗಿದ್ದಾರೆ ಎಂಬುದು ಸರಿಯಲ್ಲ. ಅಲ್ಪಸಂಖ್ಯಾತರ ಬೆಂಬಲ ಇಲ್ಲದೆ, ಅವರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳದೆ ಮೋದೀಜೀಯವರು ಈ ಮಟ್ಟದ ವಿಜಯ ಸಾಧಿಸುವುದು ಸಾಧ್ಯವೇ ಇರಲಿಲ್ಲ. ಮೋದೀಜೀಯವರು ದೊಡ್ಡಮಟ್ಟಿನಲ್ಲಿ ಮುಸ್ಲಿಂ ಸಮುದಾಯದ, ಅದರಲ್ಲೂ ಮಹಿಳೆಯರ ಮತ್ತು ಯುವಕರ ಮನ ಗೆದ್ದಿದ್ದಾರೆ. ಮೋದೀಜೀಯವರ ಹಲವಾರು ಯೋಜನೆಗಳಿಂದ ಮುಸ್ಲಿಂ ಸಮುದಾಯಕ್ಕೆ ದೊಡ್ಡ ಪ್ರಯೋಜನವಾಗಿದೆ. ಮುಸ್ಲಿಂ ಸಮುದಾಯದ ಭಾವನೆಗಳನ್ನು, ದೌರ್ಬಲ್ಯವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ, ಮೀಡಿಯಾಗಳ, ‘ಗಾಡ್ ಪೇರೆಂಟ್’ಗಳ ಸಂಖ್ಯೆ ಬಹಳಷ್ಟಿದೆ. ಆದರೆ ಅವರೆಲ್ಲರೂ ಮುಸ್ಲಿಮರನ್ನು ಶೋಷಿಸಿದ್ದಾರೆಯೇ ಹೊರತು, ಮುಸ್ಲಿಮರ ಪ್ರಗತಿಯನ್ನು ಯಾವತ್ತೂ ಬಯಸಿಲ್ಲ. ಮುಸ್ಲಿಮರ ಮೌಲ್ಯಗಳನ್ನು ಅರ್ಥ ಮಾಡಿಕೊಂಡು ನಮಗೆ ಉಪಕಾರವಾಗುವ ಕೆಲಸವನ್ನು ಮಾಡುತ್ತಿರುವ ಮೊದಲ ರಾಜಕಾರಣಿ ಮೋದೀಜಿ. ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಇರುವ ಅನೇಕ ಮುಸ್ಲಿಂ ರಾಷ್ಟ್ರಗಳೊಂದಿಗೆ ಭಾರತದ ರಾಜತಾಂತ್ರಿಕ ಸಂಬಂಧಗಳು ಈಗ ಹಿಂದೆಂದಿಗಿಂತಲೂ ಗಟ್ಟಿಯಾಗಿವೆ. ಇಸ್ಲಾಮಿಕ್ ರಾಷ್ಟ್ರಗಳು ಮೋದೀಜೀಯವರನ್ನು ಬಹಳ ಗೌರವದಿಂದ ಕಾಣುತ್ತವೆ. ಮೋದೀಜೀಯವರು ಮುಸ್ಲಿಮರ ವಿರೋಧಿಯಾಗಿದ್ದರೆ, ಭಾರತದಲ್ಲಿ ಮುಸ್ಲಿಂ ಸಮುದಾಯದ ಸ್ಥಿತಿ ಮೋದೀಜೀಯವರ ಆಡಳಿತದಲ್ಲಿ ಹದಗೆಟ್ಟಿದ್ದರೆ, ಮುಸ್ಲಿಮ್ ರಾಷ್ಟ್ರಗಳು ಮೋದೀಜೀಯವರನ್ನು ಬೆಂಬಲಿಸುತ್ತಿದ್ದರೇ? ಭಾರತದ ಮುಸ್ಲಿಮರಿಗೆ ಮೋದೀಜೀಯವರು ಒಂದು ಪ್ರಶ್ನೆಯಲ್ಲ, ಮುಸ್ಲಿಮರ ಸಮಸ್ಯೆಗಳಿಗೆ ಮೋದೀಜೀಯವರೇ ಸಮಂಜಸವಾದ ಉತ್ತರ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಇನ್ನೂ ಹಲವು ಜನ ಭಾರತೀಯ ಮುಸಲ್ಮಾನರು, ‘ಬ್ರಿಟಿಷರ ಒಡೆದು ಆಳುವ ನೀತಿ ಈ ಸಾಕ್ಷ್ಯಚಿತ್ರದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಇಂತಹ ಕುತಂತ್ರಗಳಿಗೆ ಭಾರತದ ಮುಸ್ಲಿಂ ಸಮುದಾಯ ಬಲಿಯಾಗದೆ, ನಾವೆಲ್ಲರೂ ಐಕ್ಯತೆಯಿಂದ, ಸಾಮರಸ್ಯದಿಂದ ಬದುಕಬೇಕು’ ಎನ್ನುವಂಥ ಸಂದೇಶ ಕೊಡುವ ಲೇಖನಗಳನ್ನು ಬರೆದಿದ್ದಾರೆ. ತಮ್ಮ ನಿಲುವುಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.    

ಒಟ್ಟಿನಲ್ಲಿ, ಬಿಬಿಸಿಯ ಈ ಡಾಕ್ಯುಮೆಂಟರಿಯ ಹಿಂದಿರುವ ಉದ್ದೇಶ ಮೋದೀಜೀಯವರ ಹೆಸರಿಗೆ ಮಸಿ ಬಳಿಯುವುದು ಮತ್ತು ಹಿಂದೂ ದ್ವೇಷದ ಕಿಡಿಯನ್ನು ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಹಚ್ಚುವುದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಭಾರತದಲ್ಲಿ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಈ ರೀತಿಯ ಅಜೆಂಡಾ ಭರಿತ ಕಳಪೆ ಕಾರ್ಯಕ್ರಮಗಳು ಇನ್ನೂ ಹೆಚ್ಚುಹೆಚ್ಚಾಗಿ ಬಂದರೆ ಆಶ್ಚರ್ಯವೇನಿಲ್ಲ. ಭಾರತವು ಪ್ರಪಂಚದ ಐದನೇ ಬಲಿಷ್ಠ ಇಕಾನಮಿಯಾಗಿ ಬೆಳೆದಿರುವ, G-20 ನಾಯಕತ್ವವನ್ನು ವಹಿಸಿಕೊಂಡಿರುವ,  ಜಗತ್ತಿನ ಅನೇಕ ದೇಶಗಳೊಡನೆ ಉತ್ತಮ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸಿಕೊಂಡು, ಒಂದು ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಈ ಕಾಲಘಟ್ಟದಲ್ಲಿ, ಇನ್ನೂ ತಮ್ಮ ವಸಾಹತುಶಾಹಿ ವಿಚಾರಧಾರೆಗಳಿಂದ ಹೊರಬರದ ಬಿಬಿಸಿಯಿಂದ ನಾವು ಇನ್ನೇನು ಅಪೇಕ್ಷೆ ಮಾಡಲು ಸಾಧ್ಯ? ಆದರೆ ಬಿಬಿಸಿಯ ಯೋಚನಾಕ್ರಮವನ್ನು, ಅದರ ಏಕಪಕ್ಷೀಯ ನಿಲುವನ್ನು ಅರ್ಥ ಮಾಡಿಕೊಂಡು, ಅದನ್ನು ಪ್ರಶ್ನಿಸುವ ಧೈರ್ಯ ಮತ್ತು ಬುದ್ಧಿಮತ್ತೆ ಭಾರತದ ಪ್ರಜ್ಞಾವಂತ ಪ್ರಜೆಗಳಲ್ಲಿ, ಅನಿವಾಸಿ ಭಾರತೀಯರಲ್ಲಿ, ಕೆಲವು ಜವಾಬ್ದಾರಿಯುತ ಮೀಡಿಯಾಗಳಲ್ಲಿ ಮತ್ತು ರಾಜಕಾರಣಿಗಳಲ್ಲಿ ಇರುವುದು ಸುದೈವ. ಬಿಬಿಸಿಯ ಭಾರತ ವಿರೋಧೀ ಮತ್ತು ಹಿಂದೂ ವಿರೋಧೀ ನಿಲುವು ಇಂದು ನಿನ್ನೆಯದಲ್ಲ. ಇಂತಹ ಬೇಜವಾಬ್ದಾರಿಯ ಕೆಲಸಗಳನ್ನು ಬಿಬಿಸಿ ಇನ್ನು ಮುಂದೆ ಮಾಡುವುದನ್ನು ನಿಲ್ಲಿಸುತ್ತದೆ ಎಂಬ ಯಾವ ಭ್ರಮೆಯೂ ನನಗಿಲ್ಲ. ಆದರೆ ಬಿಬಿಸಿಯ ವಸ್ತುನಿಷ್ಠತೆಯಿಲ್ಲದ, ಪೂರ್ವಗ್ರಹಪೀಡಿತ ನಿಲುವನ್ನು ಮತ್ತೆಮತ್ತೆ ಪ್ರಶ್ನಿಸಿ, ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಪ್ರಪಂಚದಾದ್ಯಂತ ಇರುವ ಪ್ರಜ್ಞಾವಂತ ಭಾರತೀಯರು ಮಾಡುತ್ತಲೇ ಇರುತ್ತಾರೆ ಎನ್ನುವ ವಿಶ್ವಾಸ ನನ್ನದು.



- ಡಾ. ವೈಶಾಲಿ ದಾಮ್ಲೆ; ಮಾಂಚೆಸ್ಟರ್, ಯು.ಕೆ

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top