ನಗರದ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ 100 ಕೋಟಿ ರೂ ಅನುದಾನ: ಶಾಸಕ ಕಾಮತ್
ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ 46ನೇ ಕಂಟೋನ್ಮೆಂಟ್ ವಾರ್ಡಿನ ವೈದ್ಯನಾಥ ನಗರದ ರಾಜ ಕಾಲುವೆಗೆ ಸುಭದ್ರ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಇಂದು ಶಿಲಾನ್ಯಾಸ ನೆರವೇರಿಸಿದರು. ಕುಸಿದಿರುವ ತಡೆಗೋಡೆಯ ಮರು ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಯೋಜನೆಯನ್ನು ತಯಾರಿಸಿದೆ. ಅದರಂತೆ ಇದೀಗ ಕಾಮಗಾರಿಗೆ ಶಿಲಾನ್ಯಾಸ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.
ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರು ನಗರದ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ 100 ಕೋಟಿ ರೂ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಮಳೆಗಾಲದಲ್ಲಿ ನಗರದಲ್ಲಿ ಉಂಟಾಗುವ ನೆರೆ ಹಾವಳಿಯನ್ನು ನಿವಾರಿಸಲು ರಾಜ ಕಾಲುವೆಗಳಿಗೆ ತಡೆಗೋಡೆ ನಿರ್ಮಾಣ, ಕಾಲುವೆಗಳ ಹೂಳೆತ್ತುವಿಕೆ, ಅಗಲಗೊಳಿಸುವಿಕೆ ಸೇರಿದಂತೆ ವಿವಿಧ ಯೋಜನೆಗಳಿಗೆ ಈ ಅನುದಾನವನ್ನು ಬಳಸಲಾಗುವುದು ಎಂದು ಹೇಳಿದರು.
ಮಳೆ ಬಂದಾಗ ನಗರದ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮಳೆ ನೀರಿನ ಚರಂಡಿ ಮತ್ತು ಕಾಲುವೆಗಳ ಹೂಳೆತ್ತುವಿಕೆ, ತಡೆಗೋಡೆ ನಿರ್ಮಾನ ಸೇರಿದಂತೆ ವಿವಿಧ ಯೋಜನೆಗಳ ರೂಪುರೇಷೆಗಳನ್ನುಮಂಗಳೂರು ಮಹಾನಗರ ಪಾಲಿಕೆ ತಯಾರಿಸಿದೆ. ಹಿಂದಿನ ಮೇಯರ್ ದಿವಾಕರ್ ಅವರು ಈ ನಿಟ್ಟಿನಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ. ಇಂದಿಗೂ ಈ ವಿಚಾರದಲ್ಲಿ ಅವರ ಅನುಭವ ಮತ್ತು ಸಹಕಾರಗಳು ನಮ್ಮ ನೆರವಿಗೆ ಬರುತ್ತಿವೆ ಎಂದು ಶಾಸಕ ಕಾಮತ್ ನುಡಿದರು.
ಪ್ರಸ್ತುತ ಈ ರಾಜ ಕಾಲುವೆಯ ತಡೆಗೋಡೆಯನ್ನು ಸ್ಥಳೀಯರ ಬೇಡಿಕೆ ಮತ್ತು ಮಾಜಿ ಮೇಯರ್ ದಿವಾಕರ್ ಅವರ ಮನವಿಯಂತೆ 10 ಅಡಿ ಅಗಲಕ್ಕೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಅಕ್ಕಪಕ್ಕದ 40 ಸೆಂಟ್ಸ್ ಜಾಗವನ್ನು ಸಹ ಬಿಟ್ಟುಕೊಡುವಂತೆ ಸ್ಥಳೀಯರ ಮನವೊಲಿಸಲಾಗಿದೆ. ಇಲ್ಲಿನ ಕಾಮಗಾರಿ ಪೂರ್ಣಗೊಂಡ ಬಳಿಕ ಈ ಭಾಗದ ಜನರಿಗೆ ಮಳೆ ನೀರಿನಿಂದ ಸಮಸ್ಯೆಯಾಗದು ಎಂದು ಶಾಸಕರು ತಿಳಿಸಿದರು.
ಮಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧವಾಗಿದ್ದು, ಮಹಾನಗರಪಾಲಿಕೆಯ ಎಲ್ಲ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಮಾಜಿ ಮೇಯರ್ ಹಾಗೂ ಸ್ಥಳೀಯ ಕಾರ್ಪೋರೇಟರ್ ದಿವಾಕರ್ ಪಾಂಡೇಶ್ವರ, ಮುಖಂಡರಾದ ಲಲ್ಲೇಶ್ ಅತ್ತಾವರ, ನಿತಿನ್ ಕಾಮತ್, ಅಮರ್ ಪಾಂಡೇಶ್ವರ, ಉಮೇಶ್ ರಾವ್, ಮಾಲತಿ ಶೆಟ್ಟಿ, ಸೌಭಾಗ್ಯ, ಕೀರ್ತಿ ಅತ್ತಾವರ, ಚಂದ್ರಹಾಸ್, ರಿತೇಶ್, ಹಿತೇಶ್ ಅತ್ತಾವರ, ಸ್ಥಳೀಯರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ