'ಅಕ್ಷರ ಅಧ್ಯಯನಕ್ಕೆ ಮಾನ್ಯತೆ ನೀಡಿ' ಹಿರಿಯ ವಿದ್ವಾಂಸ ಡಾ.ಎಚ್.ವಿ.ನಾಗರಾಜ ರಾವ್

Upayuktha
0

‘ಕಾಳಿದಾಸ ಕೃತಿ ಸಮೀಕ್ಷಾ’ ರಾಷ್ಟ್ರೀಯ  ಕಾರ್ಯಾಗಾರ ಸಮಾರೋಪ


ಮೈಸೂರು: ಸಂಶೋಧನೆಯಿಂದ ಹೊರಬರುವ ಪುಸ್ತಕಗಳ ಸಂಖ್ಯೆಗಿಂತಲೂ ಅಲ್ಲಿ ನಡೆಯುವ ಅಕ್ಷರ ಅಧ್ಯಯನಗಳು ಮಾನ್ಯತೆ ಪಡೆದುಕೊಳ್ಳಬೇಕು ಎಂದು ಹಿರಿಯ ವಿದ್ವಾಂಸ ಡಾ.ಎಚ್.ವಿ.ನಾಗರಾಜ ರಾವ್ ನುಡಿದರು.


ಶ್ರೀ ವ್ಯಾಸ ತೀರ್ಥ ಸಂಶೋಧನಾ ಪ್ರತಿಷ್ಠಾನ ಮತ್ತು ಪ್ರಾಚ್ಯ ವಿದ್ಯಾ ಸಂಶೋಧನಾಲಯ ಸಂಯುಕ್ತವಾಗಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ  ‘ಕಾಳಿದಾಸ ಕೃತಿ ಸಮೀಕ್ಷಾ’ ರಾಷ್ಟ್ರೀಯ  ವಿಚಾರ ಸಂಕಿರಣದಲ್ಲಿ ಅವರು  ಸಮಾರೋಪ ಭಾಷಣ ಮಾಡಿದರು.


ಹಲವು ಸಂಶೋಧಕರು ಮತ್ತು ವಿದ್ವಾಂಸರು ಭಾರತೀಯ ಪರಂಪರೆಗೆ ಅನನ್ಯ ಕೊಡುಗೆ ನೀಡಿದ್ದಾರೆ. ನಾಲ್ಕೂ ವೇದಗಳಿಗೆ ಭಾಷ್ಯ ಬರೆದ ಏಕೈಕ ವಿದ್ವಾಂಸ ಸಾಯನಾಚಾರ್ಯ, ಟಿಪ್ಪು ಸುಲ್ತಾನನ ಕಾಲದಲ್ಲಿ ಆಡಳಿತ ಸಮಿತಿಯಲ್ಲಿ ಗುರುತಿಸಿಕೊಂಡಿದ್ದ ಪ್ರಧಾನ್ ವೆಂಕಪ್ಪಯ್ಯ ಅವರು ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆಗಳನ್ನು ನೀಡಿದ್ದಾರೆ. ಜನರಿಗೆ ಅಪರಿಚಿತರಾಗಿಯೇ ಉಳಿದ ಈ ಸಾಧಕರ ಕುರಿತು ಸಂಶೋಧನೆಯ ಕಾರ್ಯ ಹೆಚ್ಚಾಗಿ ನಡೆಯಬೇಕು ಎಂದು ಅವರು ಆಶಿಸಿದರು.


ವಿಶ್ವದ ಎಲ್ಲ ಕವಿ ಮತ್ತು ದಾರ್ಶನಿಕರು ಕಾಳಿದಾಸನ ವಿಭಿನ್ನ ಕಾವ್ಯಶೈಲಿಯನ್ನು, ವಸ್ತು-ವಿಷಯ ಆಯ್ಕೆಯನ್ನು, ಸಮಯೋಚಿತ ವಿಚಾರಧಾರೆಯನ್ನು ಒಪ್ಪಿಕೊಂಡಿದ್ದಾರೆ. ಮಹಾಕವಿ ಕಾಳಿದಾಸನ  ಕುರಿತು ಈವರೆಗೆ 500 ಕ್ಕಿಂತಲೂ ಹೆಚ್ಚು ಪಿಎಚ್.ಡಿ ಸಂಶೋಧನೆಗಳು, ಲೆಕ್ಕವಿಲ್ಲದಷ್ಟು ಕೃತಿಗಳು ಪ್ರಕಟಣೆ ಕಂಡಿವೆ. ಇವು ನಮ್ಮ ನಾಡಿನ ಅಗ್ರಪಂಕ್ತಿಯ ಕವಿ ಕಾಳಿದಾಸನ ಮಹತ್ವ ಮತ್ತು ಶ್ರೇಷ್ಠತೆಗೆ ಹಿಡಿದ ಕನ್ನಡಿ ಎಂದರು.


ಸಮಾರಂಭದಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್, ಎಸ್‌ವಿಎಸ್‌ಪಿ ನಿರ್ದೇಶಕ  ಪ್ರೊ.ಸಿ.ಎಚ್.ಶ್ರೀನಿವಾಸ ಮೂರ್ತಿ, ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಡಿ.ಪಿ.ಮಧುಸೂದನಾಚಾರ್ಯ, ಪ್ರಭಾರ ನಿರ್ದೇಶಕಿ ಡಾ.ಸಿ.ಪವಿತ್ರಾ, ಸಂಶೋಧಕರಾದ ವಂಶಿಕೃಷ್ಣ ಮತ್ತು ಕೃಷ್ಣಾಚಾರ್ಯ ನಾಗಸಂಪಿಗೆ ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top