ಹೇಮಾವತಿ ಜಲಾಶಯ ಯೋಜನೆಯಿಂದ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಗೊರೂರು ಐತಿಹ್ಯ ಸ್ಥಳವಾಗಿದೆ. ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಾಹಿತ್ಯ ಸಾಧನೆಯಿಂದ ನಾಡಿನಾದ್ಯಂತ ಪ್ರಸಿದ್ಧಿ ಹೊಂದಿರುವ ಗೊರೂರಿನಲ್ಲಿ ನೆನೆಗುದಿಯಲ್ಲಿ ಬಿದ್ದಿರುವ ಕಾರ್ಯಗತವಾಗದ ಕಾಗದದಲ್ಲೇ ಉಳಿದಿರುವ ಹೇಮಾವತಿ ಯೋಜನೆಯ ಬ್ಲೂ ಪ್ರಿಂಟ್ ಕಡೆ ಸರ್ಕಾರಗಳು ಗಮನ ಹರಿಸಬೇಕಾಗಿದೆ. ಡಾ.ಗೊರೂರರು ಶ್ರೀ ಯೋಗಾನೃಸಿಂಹ ದೇವಾಲಯ ಮಹಿಮೆ ಚರಿತ್ರೆ ಎಂಬ ಪುಸ್ತಕವೊಂದನ್ನು ಬರೆದಿದ್ದಾರೆ. ಜ.28ರಂದು ಗೊರೂರಿನಲ್ಲಿ ಶ್ರೀ ಯೊಗನರಸಿಂಹಸ್ವಾಮಿ ಜಾತ್ರೆ ರಥೋತ್ಸವ. ಈ ಸಂದರ್ಭ ನಾನು ಹಿಂದಿನ ಜಾತ್ರಾ ವೈಭವವನ್ನು ನೆನೆಯುತ್ತಾ ಜನಪದರ ಹಾಡುಗಳಲ್ಲಿ ನಮ್ಮೂರು ಜಾತ್ರೆ ಹೇಗಿತ್ತು ಎಂದರೆ-
ಅಂದಕ್ಕೆ ಅರಕಲಗೊಡು ಚಂದಕ್ಕೆ ನರಸೀಪುರ
ಚಿತ್ತರದ ಗೊಂಬೆ ಗೊರವೂರು
ಚಿತ್ತರದ ಗೊಂಬೆ ಗೊರವೂರ ಬೀದಿಯ
ಹದಿನಾರು ತೇರು ಹರಿದಾವೆ
ಗೊರೂರಿಗೆ ಐತಿಹಾಸಿಕ ಹಿನ್ನೆಲೆ ಹಾಗೂ ಧಾರ್ಮಿಕ ಪರಂಪರೆ ಇದೆ. ಎಫಿಗ್ರಾಫಿಯಾ ಆಫ್ ಕರ್ನಾಟಿಕ ಹಾಸನ ತಾಲ್ಲೂಕಿನ 176, 182ನೇ ಶಾಸನಗಳಲ್ಲಿ ಉಕ್ತವಾಗಿರುವಂತೆ ಗೊರವರ ಉರಾಗಿದೆ. ಕನ್ನಡ ವಿಶ್ವಕೋಶದ ಪ್ರಕಾರ ಗೊರವರು ಎಂದರೆ ಗುರುಗಳು ಎಂದಿದೆ. ಗೋಕರ್ಣ ಋಷಿಗಳು ಗುರುಗಳಾಗಿದ್ದುಕೊಂಡು ಧಾರ್ಮಿಕ ಆಚರಣೆ ನಡೆಸಿದರೆಂದು ಹಾಸನ ಜಿಲ್ಲಾ ಗೆಝೆಟಿಯರ್ ತಿಳಿಸುತ್ತದೆ. ಹಯವದನರಾಯರ ಮೈಸೂರು ಗೆಝೆಟಿಯರ್‍ನಂತೆ ಕ್ರಿ.ಶ.1300 ರಿಂದ 100 ವರ್ಷಗಳವರೆಗೆ ಹೊಯ್ಸಳರಸರ ಅಧೀನದ ಅಗ್ರಹಾರವಾಗಿತ್ತು.
ಬೇಸಿಗೆಯ ದಿವಸಕ್ಕೆ ಬೇವಿನ ಮರ ತಂಪು
ಹೇಮಾವತಿಯೆಂಬ ನದಿ ತಂಪು
ನೀ ತಂಪು ನನ್ನ ತವರಿಗೆ - ಹಡೆದವ್ವ
ನೀ ತಂಪು ನನ್ನ ತವರಿಗೆ
ಕ್ರಿ.ಶ.11ನೇ ಶತಮಾನದಿಂದ 14ನೇ ಶತಮಾನದವರೆಗೆ ಹೊಯ್ಸಳ ಸಾಮಂತರಿಗೆ ನಂತರದಲ್ಲಿ ವಿಜಯನಗರದ ಅರಸರ ಅಧೀನಕ್ಕೆ ಒಳಪಟ್ಟಿತ್ತು. ಕ್ರಿ.ಶ.1575ರಲ್ಲಿ ಅರಕಲಗೊಡು ಕೃಷ್ಣಪ್ಪ ನಾಯಕನ ಅಧೀನಕ್ಕೆ ಒಳಪಟ್ಟಿತು. ಕ್ರಿ.ಶ.1780ರಲ್ಲಿ ಕೊಡಗಿನ ಲಿಂಗರಾಜೇಂದ್ರನು ಮರಣ ಹೊಂದಿದ ನಂತರ ಹೈದರಾಲಿ ಮಡಿಕೇರಿ ರಾಜ ಕುಟುಂಬವನ್ನು ಗೊರೂರಿನ ಕೋಟೆಯಲ್ಲಿ ಬಂಧಿಸಿದ್ದನೆಂದು ಕೃಷ್ಣಯ್ಯನವರ ಮಡಿಕೇರಿ ಇತಿಹಾಸದಿಂದ ತಿಳಿದುಬರುತ್ತದೆ.
ಹಿಂದೆ ಗೊರೂರಿನಲ್ಲಿ ಕೋಟೆಯಿತ್ತು. ಹಳೇ ಗೊರೂರು ಗ್ರಾಮವನ್ನು ಕೋಟೆ ಮತ್ತು ಪೇಟೆ ಎಂದು ವಿಭಾಗಿಸಿದೆ. ಇಂದು ಕೋಟೆ ಸರ್ವನಾಶವಾಗಿದೆ. ಈ ಕೋಟೆಯ ಸನಿಹ ಇರುವ ಈಶ್ವರ ಮತ್ತು ತ್ರಿಕೂಟೇಶ್ವರ ದೇವಾಲಯಗಳ ನಿರ್ಮಾಣ ದಿನಾಂಕ 2-3-1167. ತ್ರಿಕೂಟೇಶ್ವರ ದೇವಾಲಯ ಪ್ರವೇಶ ದ್ವಾರದಲ್ಲಿನ ಶಾಸನವು ಹೊಯ್ಸಳರ ಆಶ್ರಿತನಾದ ವಿಜಯಾದಿತ್ಯ ಹೆಗ್ಗಡೆ ಶತರುದ್ರಯಾಗಪುರ ಗೊರವೂರಿನಲ್ಲಿ ತ್ರಿಕೂಟಲಿಂಗವನ್ನು ಸ್ಥಾಪಿಸಿದನೆಂದು ಈ ದೇವಾಲಯಕ್ಕೆ ಮಾವಿನ ಕೆರೆಯಲ್ಲಿ ಭೂಮಿಯನ್ನು ಬಿಟ್ಟಿರುವುದನ್ನು ತಿಳಿಸುತ್ತದೆ. ಡಾ. ಗೊರೂರರ ಗರುಡಗಂಬದ ದಾಸಯ್ಯ ಕಥೆ ಓದಿದರೆ ಅವರ ಕಾಲದಲ್ಲಿ ರೈಲಿನಿಂದ ಬಂದ ಪ್ರಯಾಣಿಕರು ಗೊರೂರಿಗೆ ಬರಬೇಕೆಂದರೆ ಮಾವಿನಕೆರೆಯಲ್ಲಿ ಇಳಿದು ಅಲ್ಲಿಂದ ಅಂದಾಜು 13 ಕಿ.ಮೀ.ದೂರವಿರುವ ಗೊರೂರಿಗೆ ನಡೆದೆ ಬರಬೇಕಿತ್ತು. ಇತ್ತ ಅರಕಲಗೋಡಿನಿಂದ ಬರಬೇಕೆಂದರೆ ನದಿಗೆ ಸೇತುವೆ ಇರಲ್ಲಿಲ್ಲವಾಗಿ ನದಿ ದಾಟಲು ಹರಿಗೋಲು ನೆರವು ಬೇಕಿತ್ತು.
ಗೌರಿಯ ದಿನದಾಗೆ ತುಂಬಿ ಹರಿವ ಗಂಗೆ ಪೂಜೆ
ದೀವಳಿಗೆ ದಿನದಾಗೆ ಮಿರುಗುವ ಗೋ ಪೂಜೆ
ಸಂಕ್ರಾಂತಿ ದಿನದಾಗೆ ಭೂ ತಾಯ ಬೆಳೆ ಪೂಜೆ
ಸುಗ್ಗಿಯ ದಿನದಾಗೆ ಗೊರವೂರ ದೇವರ ಪೂಜೆ
ಡಾ. ರಾಮಸ್ವಾಮಿ ಅಯ್ಯಂಗಾರರ ಮನೆಯ ಎದುರು ಇರುವ ಪರವಾಸು ದೇವಾಲಯವು ಪುರಾತ£ ವಾದದ್ದೆ. ಕ್ರಿ.ಶ.1575ರ ಶಾಸನವೊಂದರಲ್ಲಿ ಈ ದೇವಸ್ಥಾನಕ್ಕೆ ಸೇರಿದ ಕೆಲವು ಜಮೀನುಗಳ ಆದಾಯವನ್ನು ರಿಯಾಯ್ತಿ ಮಾಡಿದೆ. ಹೇಮಾವತಿ ನದಿ ದಡದ ಶ್ರೀ ಯೋಗನರಸಿಂಹಸ್ವಾಮಿ ದೇವಾಲಯ ಪುರಾಣ ಪ್ರಸಿದ್ಧಿಯಾಗಿದೆ. ಇಲ್ಲಿ ತಪಸ್ಸನ್ನಚರಿಸಿದ ಗೋಕರ್ಣ ಋಷಿಗಳಿಗೆ ಅರ್ಚಾವತಾರ ರೂಪಿನಲ್ಲಿ ಪರಮಾತ್ಮನು ಪ್ರತ್ಯಕ್ಷನಾಗಿ ತಪಸ್ವಿಯ ಇಚ್ಛೆಯಂತೆ ಶ್ರೀ ಕ್ಷೇತ್ರದಲ್ಲಿ ನೆಲೆಸಿರುವನೆಂದು ಪ್ರತೀತಿ. ಅರಕಲಗೊಡು ಕೃಷ್ಣಪ್ಪ ನಾಯಕನು ನರಸಿಂಹಸ್ವಾಮಿಗೆ ಗರ್ಭಗುಡಿಯನ್ನು ಕಟ್ಟಿಸಿ 6 ಅಡಿ ಎತ್ತರದ ಪೀಠವನ್ನು ಇದ್ದಲ್ಲಿಯೇ ನಿರ್ಮಿಸಿ ಸುತ್ತ ಕಲ್ಲುಗೋಡೆಯನ್ನು ಕಟ್ಟಿಸಿ ಕಾಡು ಕಡಿದು ಊರು ನಿರ್ಮಿಸಿ ಗೋಕರ್ಣ ಋಷಿ ಸ್ಮರಣಾರ್ಥ ಗೋಕರ್ಣನಗರವೆಂದು ಕರೆದಿದ್ದಾನೆ.
ಡಾ.ಗೊರೂರರ ಆತ್ಮೀಯ ಮಿತ್ರರು ನಿವೃತ್ತ ಎಗ್ಸಿಕ್ಯುಟಿವ್ ಇಂಜನಿಯರ್ ಗೊರೂರು ಸೋಮಶೇಖರ್ ತಮ್ಮ ಗೊರೂರು ನೆನಪುಗಳು ಕೃತಿಯಲ್ಲಿ ಜಾತ್ರೆ ಹಬ್ಬ ಅಧ್ಯಾಯದಲ್ಲಿ ಬರೆಯುತ್ತಾರೆ.
ಪ್ರತಿ ವರ್ಷ ಜಾತ್ರೆ ಬಂತೆಂದರೆ ಊರಿಗೆಲ್ಲಾ ಸಂಭ್ರಮ. ಕೇರಿಯವರಿಗೆ ಹೊಸ ಹುರುಪು. ಕೋಲು ತಮಟೆ ಇತರ ವಾದ್ಯ ಸಾಮಗ್ರಿಗಳನ್ನೆಲ್ಲಾ ಸಿದ್ಧ ಮಾಡಿಟ್ಟುಕೊಳ್ಳುತ್ತಿದ್ದರು. ಕಷ್ಟವೆಷ್ಟೇ ಇರಲಿ ಹೊಸ ಬಟ್ಟೆ ಕೊಳ್ಳುವುದು ಈ ಕಾಲದಲ್ಲಿಯೇ. ಕೇರಿ ಯುವಕರ ಕೋಲಾಟದ ಗುಂಪು ಒಳ್ಳೆ ಪರಿಣಿತಿ ಪಡೆದಿತ್ತು. ಇವರು ಜಾತ್ರೆಯಲ್ಲಿ ಪ್ರದರ್ಶನ ನೀಡುವಾಗ ಒಮ್ಮೆಮ್ಮೆ ಕೇರಿ ವಾದ್ಯದವರೂ ಸೇರಿಕೊಂಡು ಕೋಲಾಟಕ್ಕೆ ಒಳ್ಳೆ ಮೆರಗು ನೀಡುತ್ತಿದ್ದರು. ರೈತರು ಒಳ್ಳೆ ರಾಸುಗಳನ್ನು ಜಾತ್ರೆಗೆ ಮಾರಲು ತರುವಾಗ ಈ ಕೇರಿ ವಾದ್ಯಗಳ ಸಮೇತ ಬಂದು ಜನರ ಗಮನ ಸೆಳೆಯುತ್ತಿದ್ದರು. ಸಮೀಪದೂರಗಳವರು ರಥ ಸಪ್ತಮಿಯ ದಿನ ತೇರಳೆದ ನಂತರ ಊರಿಗೆ ಹೋಗಿ ರಾಸುಗಳನ್ನು ಜಾತ್ರೆಗೆ ತರುತಿದ್ದುದು ವಾಡಿಕೆಯಾಗಿತ್ತು. ವ್ಯವಹಾರ ಕುದುರುತ್ತಿದ್ದು ನಂತರವೇ. ಹಾಸನ ದನಗಳ ಜಾತ್ರೆಗೆ ಸೇರುವ ಪ್ರಸಿದ್ಧ ರಾಸುಗಳು ಇಲ್ಲಿ ಅಪರೂಪವಾದರೂ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ ಉಳುಮೆ ಮಾಡಲು ಸಾಕಾಗುವ ಸಾಮಾನ್ಯ ರಾಸುಗಳು ಇಲ್ಲಿ ಸೇರುತ್ತಿದ್ದವು. ಕೆಲವರು ಹಾಸನ ಜಾತ್ರೆಯಲ್ಲಿ ಮಾರಿ ಈ ಜಾತ್ರೆಯಲ್ಲಿ ಕೊಳ್ಳುತ್ತಿದ್ದರು.
ಹಾರುವರ ಕೇರಿಯ ತೇಗದ ತೇರು
ಯಾರ್ಯಾರು ನೂಕಿದರು ಮಲಕೊಲ್ದು
ಗೊರವೂರ ಹೊಲೆಯರು ಮುಟ್ಟಿದ್ರೆ ನಲಿಯುವ..
ಈ ಜನಪದ ಗೀತೆಯನ್ನು ಊರಿನವರೇ ರಚಿಸಿರಬೇಕೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೇ. ಇದನ್ನು ಊರಿನ ವಾದ್ಯದವರೊಡನೆ ಅನುಭವಿಸಿ ಹಾಡುವಾಗ ರೋಮಾಂಚಿತನಾಗಿದ್ದೇನೆ. ಈಗಲೂ ಈ ವಾದ್ಯದ ಶಬ್ಧ ಕೇಳಿಸಿದ ಕೂಡಲೇ ಗೊರೂರಿನ ತೇರು ಕಣ್ಣ ಮುಂದೆ ಬಂದಂತಾಗುತ್ತದೆ.
ಜಾತ್ರೆ ಎಂದ ಮೇಲೆ ಅಂಗಡಿ ಮುಂಗಟ್ಟುಗಳು ಬರಲೇ ಬೇಕಷ್ಟೇ. ಮೈಸೂರು, ಹಾಸನ, ಅರಕಲಗೊಡು ಮುಂತಾದ ಕಡೆಯ ವರ್ತಕರು ಪಾತ್ರೆ ಅಂಗಡಿ, ಮಿಠಾಯಿ ಖರ್ಜೂರ, ಮಂಡಕ್ಕಿಯಂತಹ ತಿನಿಸುಗಳ ಅಂಗಡಿಗಳು, ಗಿಲೀಟು ಸಾಮಾನುಗಳ ಅಂಗಡಿಗಳು ಇತ್ಯಾದಿಯೊಡನೆ ಮನರಂಜನೆಯ ಮೋಜಿನ ಅಂಗಡಿಗಳು ಬರುತ್ತಿದ್ದವು. ಸಂದಿಗಳಲ್ಲಿ ಮುಗ್ಧ ಹಳ್ಳಿಗರಿಗೆ ನಾಮ ಹಾಕುವ ಜೂಜುಕೋರರೂ ಇರುತ್ತಿದ್ದರು. ಜಾತ್ರೆಗೆ ಹೋದವರು ಮಕ್ಕಳಿಗೆ ಕನಿಷ್ಠ ಒಂದು ಪೀಪಿಯನ್ನಾದರೂ ಕೊಡಿಸುತ್ತಾರಾಗಿ ಜಾತ್ರೆಯ ಮೈದಾನವೆಲ್ಲಾ ಪೀಪಿಮಯವಾಗಿರುತ್ತಿತ್ತು.
ಪೀಪಿಯ ಊದುತ್ತಾ ಬತ್ತಾಸು ಚೀಪುತ್ತಾ
ಹೈಕಳು ನಲಿದಾರೋ..
ದನಕರು ನೋಡುತ್ತಾ ಕಳ್ಳೆ ಪುರಿ ಮೆಲ್ಲುತ್ತಾ
ಮನೆ ಕಡೆ ಹೊಂಟಾರೋ..
ತೇರಿನ ದಿನ ಆ ಒಂದೇ ದಿನ ಮಾತ್ರ ಮಡಿಯ ಬಗ್ಗೆ ಕೇರಿಯವರಿಗೆ ರಿಯಾಯ್ತಿ. ಆ ದಿನ ಕೇರಿಯವರೆಲ್ಲಾ ಶುಭ್ರವಾಗಿ ಹೊಸ ಬಟ್ಟೆ ತೊಟ್ಟು ಸಂಭ್ರಮ ಸಡಗರಗಳಿಂದ ವಾದ್ಯ ಮೇಳದವರ ಸಮೆತ ಮೆರವಣಿಗೆಯಲ್ಲಿ ಬರುತ್ತಾರೆ. ತೇರಿನ ಸುತ್ತ ಮೂರು ಸುತ್ತು ಹಾಕುತ್ತಾರೆ. ಉತ್ಸವ ಮೂರ್ತಿಗೆ ಮಂಗಳಾರತಿ ಮಾಡಿ ಇವರುಗಳಿಗೆ ಹೂಮಾಲೆ ಹಾಕುತ್ತಾರೆ. ತೇರಿನ ಸುತ್ತ ಸೇರಿರುವ ಜನಸ್ತೋಮದಲ್ಲಿ ಭಕ್ತರು ತೇರಿನ ಹಗ್ಗ ಹಿಡಿದು ನಿಲ್ಲುತ್ತಾರೆ. ಕೇರಿಯವರು ಬರದೆ ತೇರನ್ನು ಎಳೆಯುವುದಿಲ್ಲ.
ನೃಸಿಂಹ ಬರುವನೋ ರಥವನೇರ್ವನೋ
ಹೂವ ಮುಡಿವನೋ ಪೂಜೆಗೊಳ್ವನೋ
ಕಾಯ ಒಡೆವರೋ ಕರ್ಪೂರ ಬೆಳಗ್ವರೋ
ಹಗ್ಗ ಹಿಡಿವರೋ ಮುದದಿ ಎಳೆವರೋ
ಶಕ್ತವಂತರಾದ ಕೇರಿಯವರು ಹಿಂಬದಿಯ ಚಕ್ರಗಳಿಗೆ ಉದ್ದವಾದ ತೊಲೆಗಳಿಂದ ಮೀಟಿದಾಗ ತೇರು ಕದಲುತ್ತದೆ. ಇದಕ್ಕೆ ಹೆದ್ನ ಹಾಕುವುದು ಎನ್ನುತ್ತಾರೆ. ಆಗ ಮುಂದಿರುವ ಹಗ್ಗದವರು ಎಳೆದರೆ ತೇರು ಮುಂದೆ ಸಾಗುತ್ತದೆ. ತೇರು ತಮ್ಮ ಮನೆಗಳ ಮೇಲೆ ನುಗ್ಗದಂತೆ ಯುಕ್ತಿವಂತರು ಗೊದಮ ಕೊಡುತ್ತಾರೆ. ಹೆದ್ನ ಹಾಕುವುದು ಗೊದಮ ಕೊಡುವುದು ಈ ಪ್ರಕ್ರಿಯೆಗಳು ಜೀವನ ಸೂತ್ರಗಳೂ ಆಗಿದೆಯಲ್ಲವೇ?
ಭಕ್ತಿಯ ಪರವಶ ಸಡಗರ ಸಂತ
ಸ್ವಾಮಿ ನನ್ನಪ್ಪ ಕಾಪಾಡೆಂದಾರೋ..
ಕೈಕೈ ಹಿಡ್ಕೊಂಡು ಜಾತ್ರೆ ಮಾಳ ಸುತ್ತುತ್ತಾ
ಕಣ್ತುಂಬಾ ನೋಡಿದರೋ..
ತೇರಿನ ಮನೆಯ ಸಮೀಪದ ಪೂರ್ಣಯ್ಯನ ಛತ್ರದಲ್ಲಿ ಅಯ್ಯಂಗಾರ್ ಸಂಘದವರು ಆಗ ಸಮಾರಾಧನೆ ಮಾಡುತ್ತಿದ್ದರು. ಪರವಾಸು ದೇವರ ಪಡಸಾಲೆಯಲ್ಲಿ ಇತರ ಬ್ರಾಹ್ಮಣರಿಗೆ ಏರ್ಪಾಟು ಮಾಡಿಕೊಂಡಿದ್ದಾರೆ. ಹೊಳೆಯ ದಡದಲ್ಲಿ ದೇವಸ್ಥಾನದ ಎದುರಿನ ಮಾವಿನ ತೋಪಿನಲ್ಲಿ ಅರಕಲಗೊಡು ಮುಂತಾದ ಕಡೆಯ ಈ ದೇವರು ಒಕ್ಕಲುಗಳಾದ ಆರ್ಯ ವೈಶ್ಯರಿಗೂ (ಇವರ ಕೆಲವು ಕುಟುಂಬ ಹಿಂದೆ ಗೊರೂರಿನಲ್ಲಿ ವಾಸಿಸುತ್ತಿದ್ದರು) ಆ ತೋಪಿನ ಪಕ್ಕದಲ್ಲಿ ಬಸವಾಪಟ್ಟಣ ಮುಂತಾದ ಕಡೆಗಳಿಂದ ಬರುವ ಈ ದೇವರ ನಾಮಧಾರಿ ನೇಕಾರರ ಒಂದು ಸಮೂಹ ಅಡಿಗೆ ಮಾಡಿಕೊಳ್ಳುತ್ತಾರೆ. ಈ ನಾಮಧಾರಿ ನೇಕಾರರು ಮೇಲುಕೋಟೆಯಲ್ಲಿ ಮಡಿ ಪಂಚೆ ಅಥವಾ ಮೇಲುಕೋಟೆ ಪಂಚೆ ತಯಾರಿಸುವುದರಲ್ಲಿ ಹೆಸರು ಮಾಡಿದ್ದಾರೆ. ಈ ಸಮ-ಆರಾಧನೆಗಳನ್ನು ನಡೆಸಲು ಬಹಳ ಹಿಂದೆಯೇ ಭಕ್ತರು ಜಮೀನುಗಳನ್ನು ದೇವರಿಗೆ ಬಳುವಳಿಯಾಗಿ ಕೊಟ್ಟಿದ್ದರು. ಪರಿಸ್ಥಿತಿಯಲ್ಲಿ ಬದಲಾವಣೆಗಳಾಗುತ್ತಿದ್ದರೂ ಸಮ-ಆರಾಧನೆಗಳು ಮುಂದುವರಿದಿವೆ. ಊರಿನ ಇತರ ಕೋಮಿನವರು ತೇರನೆಳೆದು ಮನೆಗೆ ಹೋಗಿ ನೆಂಟರಿಷ್ಟರೊಡನೆ ಹಬ್ಬದ ಊಟ ಮಾಡುತ್ತಾರೆ. ಹಳ್ಳಿಯವರು ತೇರನ್ನು ನೋಡಿಕೊಂಡು ಜಾತ್ರೆ ಮೈದಾನದಲ್ಲಿ ಸುತ್ತಾಡುತ್ತಾ ಕಡ್ಲೆ ಪುರಿಯನ್ನು ಕೊಂಡು ತಿನ್ನುತ್ತಾ ಚಂಗರವಳ್ಳಿ ನಾಲೆ ನೀರು ಕುಡಿದು ಊರುಗಳ ಕಡೆ ಮರಳುತ್ತಾರೆ.
ಅಪ್ಪನ ಹೆಗಲಲ್ಲಿ ಅವ್ವನ ಬಗಲಲ್ಲಿ
ಮಕ್ಕಳು ನಲಿದಾರೋ..
ತೇರಿನ ಕಳಸಕ್ಕೆ ಹಣ್ಣು ದವನವ
ಪ್ರಾಯ್ದೋರು ಒಗೆದಾರೋ..
ಶ್ರೀ ಯೋಗನರಸಿಂಹಸ್ವಾಮಿ ರಥೋತ್ಸವ ದೊಡ್ಡ ಜಾತ್ರೆ ಅದರೆ ಗೊರೂರಿನಲ್ಲಿ ಮತ್ತೆರಡು ಸಣ್ಣ ಜಾತ್ರೆಗಳು ನಡೆಯುತ್ತಿದ್ದವು. ಮಾರಮ್ಮನ ಜಾತ್ರೆ ನನ್ನ ಚಿಕ್ಕಂದಿನಲ್ಲಿಯೇ ನಿಲ್ಲಿಸಲ್ಪಟ್ಟಿತ್ತು. ಇನ್ನೊಂದು ಬಡ ವರ್ಗಗಳ ಕತ್ತರಿ ಘಟ್ಟ ಜಾತ್ರೆ. ಸೇತುವೆ ಆಚೆ ಪಕ್ಕದಲ್ಲಿನ ಆಂಜನೇಯನ ಗುಡಿಯಲ್ಲಿ ಅಂದಿನ ಪೂಜಾ ವಿಧಿಗಳು ನಡೆಯುತ್ತಿದ್ದವು. (ಇಂದು ಈ ದೇಗುಲವು ಜೀರ್ಣೋದ್ದಾರವಾಗಿದೆ) ತಿರುಪತಿಗೆ ಹೋಗಲಾಗದವರು ಇಲ್ಲಿಯೇ ಮುಡಿಕೊಟ್ಟು ಹೇಮಾವತಿ ನದಿಯಲ್ಲಿ ಮಿಂದು ದಂಡೆಯಲ್ಲಿ ಅಟ್ಟುಂಡು ಹೋಗುತ್ತಾರೆ. ಅಲ್ಲಿ ಒಬ್ಬ ದಾಸಯ್ಯ ಆನೆ ಗಾತ್ರದ ಬಸವನ ಮೇಲೆ ಭಾರಿ ನಗಾರಿಗಳನ್ನು ಹೇರಿಕೊಂಡು ಅವುಗಳನ್ನು ಬಡಿಯುತ್ತಾ ಬರುತ್ತಿದ್ದುದನು. ಆತನ ಪರಿವಾರ ಆ ಜಾತ್ರೆಯ ಮಾರನೆಯ ದಿನ ಗೊರೂರಿನ ಬೀದಿಗಳಿಗೆ ಕಾಣಿಕೆಗಾಗಿ ಬರುತ್ತಿತ್ತು. ತಮ್ಮ ತಮ್ಮ ಮನೆಗೆ ಬಂದಾಗ ಭಕ್ತರು ವಲ್ಲಿ ಹಾಸಿ ಸಕ್ಕರೆ ಕಡ್ಳೆ, ಸೌತೇಕಾಯಿ, ಕೋಸಂಬರಿ, ಬಾಳೆಹಣ್ಣಿನ ರಸಾಯನ ಇಂತಹದನ್ನೆನಾದರೂ ಮಾಡಿ ಐದು ಗುಡ್ಡೆಯಾಗಿ ಬಡಿಸಿ (ಬ್ಯಾಟೆ ಮಣೆ) ಓದಿಸುತ್ತಿದ್ದರು. ಆ ದಾಸಯ್ಯ ಆ ವಲ್ಲಿಯ ಸುತ್ತಾ ಕುಣಿದು ಆ ಗುಡ್ಡೆಗಳಿಗೆ ನೆರವಾಗಿ ಬಾಯಿ ಹಾಕಿ ತಿನ್ನುತ್ತಿದ್ದ. ನವಿಲುಗರಿ ಕೋಲಿನಿಂದ ತಲೆಗೆ ಬಡಿತು ಆಶೀರ್ವದಿಸುತ್ತಿದ್ದ.
ಡಾ.ಗೊರೂರರು ಈ ಸಂಗತಿಯನ್ನು ಕಥಾ ವಸ್ತುವಾಗಿಸಿ ಗೊರೂರಿನ ನಾಣಿ, ಶೀನ, ವೆಂಕರು ಸೇರಿ ಕತ್ತಾಳೆ ದಿಂಡನ್ನು ತಂದು ಕತ್ತರಿಸಿ ರಸಾಯನದಂತೆ ಮಾಡಿ ದಾಸಯ್ಯನಿಗೆ ಓದಿಸಿ ಏನೂ ಅರಿಯದ ಆತ ಎಂದಿನಂತೆ ಆ ಗುಡ್ಡೆಗಳಿಗೆ ಬಾಯಿ ಹಾಕಿ ಪಜೀತಿ ಪಟ್ಟ ಚಿತ್ರಣವಿದೆ.
ಒಬ್ಬ ಸಾಬಣ್ಣ ತೇರಿಗೆ ಜರ್ಬಾಗಿ ಬರುತ್ತಿದ್ದರು. ತೇರಿನ ಎರಡೂ ಬದಿಯೂ ಓಡಾಡುತ್ತಾ ಚಕ್ರ ಚರಂಡಿ ಕಡೆಗೆ ಸ್ವಲ್ಪ ವಾಲಿದಂತೆ ಕಂಡರೂ ಐಯ್ನೋರೇ ಗೊದಮ ಹಾಕಿ ಎಂದು ಕಿರುಚಿ ತೇರು ದಡಕ್ಕನೆ ನಿಲ್ಲುವಂತೆ ಮಾಡುತ್ತಿದ್ದನು. ಹಿಂದೆ ಹೋಗಿ ಕೇರಿಯವರನ್ನು ಹೆದ್ನ ಹಾಕಲು ಹುರಿದುಂಬಿಸುತ್ತಿದ್ದನು. ಬಯಲಾಟದಲ್ಲೂ ಅಷ್ಟೇ. ಅವರು ಎಲ್ಲರಿಗೂ ಬೇಕಾದವರಾಗಿದ್ದನು. ಗೊರೂರು ಪೇಟೆ ಕೋಟೆ ಕೇರಿಗಳಿಗೆ ಒಂದು ಸುತ್ತು ಹೋಗಿ ಬರುವುದರಲ್ಲಿ ಡಾ.ಗೊರೂರರು ಸೃಷ್ಟಿಸಿದ ಅದ್ಭುತ ಪಾತ್ರಗಳನ್ನು ಕಾಣಬಹುದು.
ನಾನು ಕಂಡ ಎರಡು ಮುಸ್ಲಿಂ ಪಾತ್ರ ಒಂದು ಸಲೀಂ ಖಾನ್. ಈತ ಮಹಾಭಾರತ ನಾಟಕದ ಶಕುನಿ ಪಾತ್ರಕ್ಕೆ ಹೆಸರಾಗಿದ್ದ. ನಡವಳಿಕೆಯೂ ಅಷ್ಟೇ. ಈತ ಜಾತ್ರೆ ದಿನ ಹೇಮಾವತಿ ನದಿಯ ಮೇಲೆ ಸೀನರಿ ಹಾಕಿಸಿ ಲಿಮ್ಕಾ ದಾಖಲೆ ಸೇರಲು ಪ್ರಯತ್ನಿಸಿದ. ಇನ್ನೊಬ್ಬ ಯಾಕೂಬ. ಈತ ಊರ ನಾಟಕ, ದೇವರ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾ ಬಂದ ವಾಲ್ ರೈಟರ್.
ಶಕುನಿ ಬಾಡ್ಕೋವ್ ಬಂದ್ಬಿಡ್ತು ಹಂಗು ಹಿಂಗೂ ಮಾಡ್ಬಿಡ್ತು
ಕೌರವರ್ಗೆ ಗೆಲ್ಸಿಬಿಡ್ತು ಪಾಂಡವರ್ಗೆ ಸೋಲಿಸ್ಬಿಡ್ತು
ಜಾತಾ ಹೂಂ ಮೈ ಜಂಗಲ್ ಕು..
ಧರ್ಮರಾಯಂದು ರಾಜ್ಯ ಹೋದ್ಮೇಕೆ ಈ ಕೌರವ್ರ ರಾಜ್ಯದಾಗೆ ಇರೋಕಾಯ್ತದಾ ಮೈ ಭೀ ವನವಾಸ್ ಜಾತಾ ಹೂಂ ಎಂದು ಹೇಳುತ್ತಾ ಮರೆಯಾಗುತ್ತಾನೆ. ಪ್ರೇಕ್ಷಕರಿಂದ ಸೀಟಿ ಮೆಚ್ಚುಗೆ. ಆತನೇ ಕರೀಂ ಸಾಬ್ (ಗೊರೂರು ನೆನಪುಗಳು) ನಾನು ಕಂಡಂತೆ ನಮ್ಮೂರ ಕಲಾವಿದರು ಜಾತ್ರೆ ಹೊತ್ತಿಗೆ ಶನಿ ಮಹಾತ್ಮೆ ನಾಟಕ ಪ್ರದರ್ಶಿಸುತ್ತಿದ್ದರು. ಬಿಗ್ ಬಾಸ್ ಖ್ಯಾತಿಯ ಕೆ.ಆರ್.ಪೇಟೆ ಶಿವರಾಜ್ ತಂದೆ ನಾಟಕ ಕಲಿಸುತ್ತಿದ್ದರು. ಈ ವರ್ಷ ನಮ್ಮೂರಿನ ಹುಡುಗರು ನಾಟಕ ಮಾಡಿಸಬೇಕೆಂಬ ಅಭಿಲಾಷೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಾನ್ಯ ಶಾಸಕರು ಕುಮಾರಸ್ವಾಮಿಯವರಿಂದ ಪತ್ರ ತಂದು ಕೊಟ್ಟಿದ್ದಾರೆ. ಆದರೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿಲ್ಲವೆಂದು ತಾಂತ್ರಿಕ ಅಡಚಣೆಯನ್ನು ಕೇಸ್ ವರ್ಕರ್ ಯಾಕೂಬ್ ಬಳಿ ತಿಳಿಸಿ ನಾನು ಜಾತ್ರೆಗೆ ಪ್ರದರ್ಶಿಸಬೇಕೆಂದಿದ್ದ ಅರಳಿಕಟ್ಟೆ ನಾಟಕ ಮುಂದೂಡಿದ್ದೇನೆ.
ರಾಜ ರಾಜರು ಕೂಡಿ ರಾಜ್ಯೆಲ್ಲ ಹುಡುಕಿದರು
ಮತ್ತೆಲ್ಲಿ ಕಂಡ್ಯೋ ಚೆಲುವೀಯಾ – ಗೊರವೂರ
ಆಗರದೊಳಗಿತ್ತೊಂದರಗಿಣಿ
1952ನೇ ಇಸವಿಯಲ್ಲಿ ಪ್ರಸಿದ್ಧ ಕಂಪನಿಯೊಂದರ (ಸುಬ್ಬಯ್ಯ ನಾಯ್ಡುರವರ ಕಂಪನಿ ಇರಬೇಕು) ಹಾಸನದ ಕ್ಯಾಂಪ್‍ನಿಂದ ಒಂದು ದಿನ ಹೆಣ್ಣು ನೋಡಲೆಂದು ಒಬ್ಬ ಯುವ ನಾಯಕ (ವರ ನಟ ಡಾ.ರಾಜಕುಮಾರ್) ನಟರು ಗೊರೂರಿಗೆ ಬಂದು ನಮ್ಮ ನೆರೆಯ ಕೊಲ್ಲಿ ಅಣ್ಣಪ್ಪನವರ ಮನೆಯಲ್ಲಿ ತಂಗಿದ್ದರು. ಯಾರ ಮನೆಯ ಹೆಣ್ಣು ನೋಡಲು ಬಂದಿರಬಹುದೆಂದು ನಮ್ಮ ಬೀದಿಯವರು ಊಹಾಪೋಹಗಳಲ್ಲಿ ತೊಡಗಿದ್ದರು.
ನಾರೀ ಗೆದಿಯಾಕೆ ನಿನ್ನಿಚ್ಯೆ ನನ್ನಿಚ್ಯೇ
ಮನೆ ದೇವರ ಕರುಣೆ ನಿನ ಮೇಲೆ ಇದ್ದರೆ
ನಾರೀ ಗೆದ್ದು ನಾಳೆ ಬರಹೋಗು.
--ಗೊರೂರು ಅನಂತರಾಜು, ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


