ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮಕ್ಕೆ ಸೇರಿದ ಕೊರಂಗಬೆಟ್ಟಿನ ಶ್ರೀ ಭಾಸ್ಕರ್ ಶೆಟ್ಟಿಯವರ ಕುಟುಂಬದ ನಾಗಬನದಲ್ಲಿ ಅತ್ಯಂತ ಅಪರೂಪದ ನಾಗಬ್ರಹ್ಮ ಶಿಲ್ಪ ಪತ್ತೆಯಾಗಿದೆ ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವಶಾಸ್ತ್ರ ವಿದ್ವಾಂಸ ಪ್ರೊ. ಟಿ. ಮುರುಗೇಶಿ ಅವರು ತಿಳಿಸಿದ್ದಾರೆ.
ನಾಗಾರಾಧನೆ ತುಳುನಾಡಿನ ಅತ್ಯಂತ ಪ್ರಾಚೀನ ಆರಾಧನಾ ಸಂಪ್ರದಾಯವಾಗಿದ್ದು, ಇಲ್ಲಿನ ನೆಲಮೂಲ ಸಂಸ್ಕೃತಿಯ ದ್ಯೋತಕವಾಗಿದೆ. ಇದು ಬಹಳ ಪ್ರಾಚೀನ ಕಾಲದಿಂದಲೇ, ಜೈನ, ಬೌದ್ಧ, ಶೈವ, ವೈಷ್ಣವ ಹಾಗೂ ನಾಥ ಪಂಥಗಳ ಪ್ರಭಾವಕ್ಕೆ ಒಳಗಾಗಿದ್ದು ಆ ಸಂಸ್ಕೃತಿಗಳಲ್ಲಿಯೂ ಹಾಸುಹೊಕ್ಕಾಗಿದೆ. ಕೊರಂಗಬೆಟ್ಟಿನ ಶಿಲ್ಪವು, ಮೃದುವಾದ ಬಳಪದ ಶಿಲೆಯಲ್ಲಿ ರಚಿಸಲ್ಪಟ್ಟಿದೆ. ಆಯತಾಕಾರದ ಸುಮಾರು ಎರಡು ಅಡಿ ಎತ್ತರದ ಶಿಲೆಯ ಮೇಲ್ಭಾಗವನ್ನು ಕೋನಾಕೃತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ನಾಲ್ಕು ಪವಿತ್ರಗಂಟುಗಳನ್ನು ಒಳಗೊಂಡ ಮೂರು ಹೆಡೆಯ ನಾಗ, ಬೆರ್ಮರ ಮುಕುಟವಾಗಿ ಚಿತ್ರಿಸಲ್ಪಟ್ಟಿದೆ. ನಿಂತ ಭಂಗಿಯಲ್ಲಿರುವ ಬೆರ್ಮರು ತಮ್ಮ ಹಿಂದಿನ ಕೈಗಳಲ್ಲಿ ಗಂಡುಗೊಡಲಿ ಮತ್ತು ಗುರಾಣಿ ಹಿಡಿದಿದ್ದು ಮುಂದಿನ ಬಲಗೈಯಲ್ಲಿ ಹಾಕಿಯ ದೊಣ್ಣೆಯಂತಹ ದಂಡವನ್ನು ಹಾಗೂ ಎಡಗೈ ಮುಷ್ಠಿಯಲ್ಲಿ ರುಂಡವನ್ನು ಹಿಡಿದಂತೆ ಚಿತ್ರಿಸಲಾಗಿದೆ. ಸೊಂಟದ ಕೆಳಭಾಗದಲ್ಲಿ ಮೊಣಕಾಲಿನವರೆಗೆ ಅರ್ಧ ಧೋತರವಿದೆ. ಇಡೀ ಶಿಲ್ಪ, ಅತ್ಯಂತ ಕೌತುಕವಾದ ಸ್ಥಳೀಯ ಶೈಲಿಯ ಶಿಲ್ಪ ಲಕ್ಷಣದಿಂದ ಕುತೂಹಲವನ್ನು ಕೆರಳಿಸುತ್ತದೆ. ಶಿಲ್ಪದ ಈ ಲಕ್ಷಣಗಳು ನಿಸ್ಸಂಶಯವಾಗಿ ಕ್ಷತ್ರಿಯರನ್ನು ನಿರ್ಮೂಲನೆ ಮಾಡಿ ನಿಂತಿರುವ ಕ್ರೋಧಾವಿಷ್ಠ ಪರಶುರಾಮನನ್ನು ಹೋಲುತ್ತವೆ. ಆದ್ದರಿಂದ, ತುಳುನಾಡಿನ ಸೃಷ್ಠಿಕರ್ತ ಎಂದು ಕರೆಯಲ್ಪಡುವ ಪರಶುರಾಮನನ್ನೇ ನಾಗಬ್ರಹ್ಮ ಅಥವಾ ನಾಗಬೆರ್ಮರ್ ಎಂದು ಆರಾಧಿಸುವ ಸಂಪ್ರದಾಯ ಬೆಳೆದು ಬಂದಿರಬೇಕೆನ್ನುವುದಕ್ಕೆ ಈ ಶಿಲ್ಪ ಮಹತ್ವದ ದಾಖಲೆಯಾಗಿದೆ ಎಂದು ಅವರು ಹೇಳಿದ್ದಾರೆ.
ಕೊರಂಗುಬೆಟ್ಟಿನ ಶ್ರೀ ಭಾಸ್ಕರ್ ಶೆಟ್ಟಿ, ಶಶಿಕಾಂತ್ ಶೆಟ್ಟಿ, ದೀಪಕ್ ಶೆಟ್ಟಿ ಮತ್ತು ವಿದ್ಯಾರ್ಥಿಗಳಾದ ಪ್ರತಿಜ್ಞಾ, ಅಕ್ಷತಾ, ಮೈತ್ರಿ ಶೆಟ್ಟಿ, ಆದಿತಿ, ದಿಶಾಂತ್, ಕಾರ್ತಿಕ್, ಶ್ರೇಯಸ್ ಭಟ್ ಮತ್ತು ವಿಶಾಲ್ ರೈ ಮುಂತಾದವರು ಈ ಅಧ್ಯಯನಕ್ಕೆ ನೆರವಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


