ಡಾ. ಸತ್ಯವತಿ ಎಚ್. ಎ. ಅವರ 'ದಾಸ ದೀಪ್ತಿ' ಕೃತಿ ಲೋಕಾರ್ಪಣೆ

Upayuktha
0

 

ಬೆಂಗಳೂರು : ದಾಸಸಾಹಿತ್ಯದ ವಿಚಾರ ವೈಶಿಷ್ಟ್ಯ- ವಿಸ್ಮಯಗಳನ್ನು  ಪ್ರತಿಭಾನ್ವಿತ ಸಾಹಿತಿ, ಇತಿಹಾಸದ, ಶಾಸನಗಳ, ಪ್ರಾಚೀನ ಹಸ್ತಪ್ರತಿಗಳ ದಾಖಲೆಗಳನ್ನು ಪದರ ಪದರ ಬಿಡಿಸಿಟ್ಟು ತಮ್ಮ ಎಲ್ಲ ಬರಹಗಳನ್ನು ಅಧಿಕೃತ ಹಾಗೂ ಮೌಲಿಕ ಮಾಡಬಲ್ಲ ಜಾಣ್ಮೆ. ಸಾಮಾನ್ಯವಾಗಿ ಭಕ್ತಿ, ಮಹಿಮೆ, ಲೀಲೆಗಳಲ್ಲೇ ಮುಳುಗಬಹುದಾದ ವಿಷಯಗಳನ್ನು ಸಹ ವಾಸ್ತವಿಕ ನೆಲೆಗಟ್ಟಿನ ಮೇಲೆ, ಆಧಾರಗಳ ಅಡಿಯಲ್ಲಿ ಸಾಂದ್ರ ನಿರೂಪಣೆಯ ಪುಸ್ತಕವನ್ನಾಗಿ ಮಾಡಿದ್ದಾರೆ ಎಂದು ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಾ. ಗೀತಾಚಾರ್ಯ ಅಭಿಪ್ರಾಯ ಪಟ್ಟರು.


ಅವರು ಬೆಂಗಳೂರಿನ ಹನುಮಂತ ನಗರದ ಬಾಲಾಜಿ ಕಾಲೇಜಿನಲ್ಲಿ ನಡೆದ ಡಾ.ಎಚ್.ಎ.ಸತ್ಯವತಿ ರವರ ಕೃತಿ ದಾಸ ದೀಪ್ತಿ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ದಾಸಸಾಹಿತ್ಯದ ದಾರಿಯಲ್ಲಿ ಭಾವಾರ್ಥ, ಕಾವ್ಯಾರ್ಥ, ಸೂಚ್ಯಾರ್ಥಗಳನ್ನು ಪ್ರಮಾಣದ ಒರೆಗಲ್ಲಿಗೆ ಹಚ್ಚಿ ಅಲ್ಲಿ ಮೂಡುವ ಬೆಳಕಿನ ಸ್ಪಷ್ಟ ದಾರಿಯಲ್ಲಿ ತಮ್ಮ ಲೇಖನಗಳನ್ನು ಒಡಮೂಡಿಸುವ ಡಾ. ಸತ್ಯವತಿಯವರ ಸಾಹಿತ್ಯದ ಸೊಬಗು ಸಹೃದಯರ ಮನಸ್ಸನ್ನು ಮುಟ್ಟುತ್ತದೆ, ಗೆಲ್ಲುತ್ತದೆ, ನಿಲ್ಲುತ್ತದೆ. ಸತ್ಯವತಿಯವರ ಈ ಪುಸ್ತಕದ ಲೇಖನಗಳು ಶಿಸ್ತೀಯ ಹಾಗೂ ಶಾಸ್ತ್ರೀಯ ಗುಣಮಟ್ಟದಿಂದ ಕೂಡಿವೆ. ಒಂದೊಂದು ಲೇಖನವನ್ನು ಓದಿದಾಗಲೂ ಹೊಮ್ಮುವ ಪರಿಮಳ ಭಾವ, ದಾಸಸಾಹಿತ್ಯವನ್ನು ಪೂರ್ಣ ಆಸ್ವಾದಿಸಬೇಕೆಂಬ ಹಂಬಲದತ್ತ ತಂದು ನಿಲ್ಲಿಸುತ್ತದೆ. ದಾಸಸಾಹಿತ್ಯ ಕ್ಷೇತ್ರದಲ್ಲಿ ಮೂರು ದಶಕಗಳಿಂದಲೂ ಅಧ್ಯಯನ, ವಿಶ್ಲೇಷಣೆ ಹಾಗೂ ಪೃಥಕ್ಕರಣಗಳಲ್ಲಿ ತೊಡಗಿಕೊಂಡು, ಸಂಶೋಧನಾ ಮಾರ್ಗದಲ್ಲಿ ಹಲವಾರು ಅಮೂಲ್ಯ ಲೇಖನಗಳನ್ನು ನೀಡಿರುವ ಡಾ. ಸತ್ಯವತಿ ಅಭಿನಂದನೀಯರು ಎಂದು ಕೃತಿ ಪರಿಚಯ ಮಾಡಿಕೊಟ್ಟ ಸಂಸ್ಕೃತ ಪ್ರಾಧ್ಯಾಪಕ ಡಾ. ವಾದಿರಾಜ ಹೋತ್ರಿ ತಿಳಿಸಿದರು.


ಹನ್ನೊಂದು ತಿಂಗಳ ಮಗುವಾಗಿದ್ದಾಗಲೇ ಪೋಲಿಯೋ ಜ್ವರಕ್ಕೆ ಬಲಿಯಾಗಿ, ಎರಡೂ ಕಾಲುಗಳು ಶಕ್ತಿಗುಂದಿ, ನಡೆಯುವ ಶಕ್ತಿಯನ್ನು ಕಳೆದುಕೊಂಡರೂ ಜೀವನೋತ್ಸಾಹವನ್ನು ಕಳೆದುಕೊಳ್ಳಲಿಲ್ಲ .ಬದಲಾಗಿ  ದೈವಕ್ಕೆ ಶರಣಾಗಿ, ಭಕ್ತಿಯ ಮಾರ್ಗದಲ್ಲಿ  ನಡೆಯುತ್ತಿರುವ ಡಾ  ಸತ್ಯವತಿಯವರ ಈ ಕೃತಿ ಶೈಕ್ಷಣಿಕ ಗಾಂಭೀರ್ಯವನ್ನು ಕಂಡುಕೊಂಡಿದೆ, ಈ ಪುಸ್ತಕದುದ್ದಕ್ಕೂ ನಾವು ನೋಡಬಹುದಾದ ದೇಸೀ ದೃಷ್ಟಿಕೋನ ಹಾಗೂ ಭಾಷಾಪ್ರೌಢಿಮೆ ಯಿಂದಾಗಿ ಇದಕ್ಕೊಂದು ಅಕಾಡೆಮಿಕ್ ಘನತೆ ಒದಗಿ ಬಂದಿದೆ ಎಂದು ಡಾ. ಆರ್. ವಾದಿರಾಜ ತಿಳಿಸಿದರು.


ಡಾ. ಸತ್ಯವತಿ. ಮೂರು ದಶಕಗಳಿಗೂ ಮೀರಿ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ. ಸಾರ್ಥಕ ಸಮರ್ಥ ಸಾಹಿತಿಗಳಾಗಿ, ಸಂಘಟನಾ ಚತುರರಾಗಿ ಡಾ. ಸತ್ಯವತಿ ಪಡೆದಿರುವ ಅನುಭವ, ನೀಡಿರುವ ಕೊಡುಗೆ ಅನುಪಮವಾದುದು. ಕನ್ನಡ ಸಾಹಿತ್ಯ ಚರಿತ್ರೆಯ ರೂಪಶಿಲ್ಪಿ, ಮೇರು ವಿದ್ವಾಂಸ ಡಾ. ರಂ.ಶ್ರೀ. ಮುಗಳಿಯವರ ಮಾರ್ಗದರ್ಶನದಲ್ಲಿ ಡಾ. ಸತ್ಯವತಿ ಅವರು ಚೌಂಡರಸನ ಬಗ್ಗೆ ಮಾಡಿರುವ ಸಂಶೋಧನಾ ಸಂಪ್ರಬಂಧ ಇಂದಿಗೂ ಮೌಲಿಕ ಹಾಗೂ ಮಹತ್ವದ ಡಾಕ್ಟರೇಟ್ ಪ್ರಬಂಧಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಹಂಪಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ, ರಾಜ್ಯಮಟ್ಟದ ಅನೇಕ ಸಾಹಿತ್ಯಿಕ ವಿಚಾರ ಸಂಕಿರಣಗಳು ಹಾಗೂ ವಿದ್ಯಾರ್ಥಿ ಕವಿಗೋಷ್ಠಿಗಳ ಆಯೋಜನೆ, ಆಧುನಿಕ ಮನಸ್ಸುಗಳಿಗೆ ಮುಟ್ಟಬಲ್ಲ, ತಟ್ಟಬಲ್ಲ ಸಂವೇದನಾ ಬರಹದಿಂದಾಗಿ ಡಾ.ಸತ್ಯವತಿ ಸಮಕಾಲೀನ ದಾಸಸಾಹಿತ್ಯ ಸಂದರ್ಭದಲ್ಲಿ ಮಹತ್ವದ ಲೇಖಕಿಯೆನಿಸಿದ್ದಾರೆ ಎಂದು ಕೃತಿ ಲೋಕಾರ್ಪಣೆಗೊಳಿಸಿದ ಪ್ರೊ ಸಿದ್ದಾನಂದ ತಿಳಿಸಿದರು. ಸಂಸ್ಕೃತ ಚಿಂತಕ ಡಾ ಗುರುರಾಜ ಪೋಶೆಟ್ಟಿಹಳ್ಳಿ, ಕಾಲೇಜಿನ ಪ್ರಾಂಶುಪಾಲ ಪ್ರೊ|| ಉಮೇಶ್ ದಕ್ಷಿಣಾಮೂರ್ತಿ ಉಪಸ್ಥಿತರಿದ್ದರು. 


ಕೃತಿ ಕುರಿತು 

‘ದಾಸದೀಪ್ತಿ’  ಈ ಕೃತಿ ಡಾ. ಸತ್ಯವತಿ ಅವರ ದಾಸಚಿಂತನೆಯ ಘನ ವಿಚಾರಗಳ ಸಂಶೋಧನಾ ಫಲಶೃತಿಯಾಗಿ ಪ್ರಕಟವಾಗಿದೆ. ವಿಠಲ, ಪುಂಡಲೀಕ, ಚಂದ್ರಭಾಗಾನದಿ ಕುರಿತ ಇಲ್ಲಿನ ಲೇಖನಗಳು, ದಾಸ ಪರಂಪರೆಯ ಮೇಲೆ ವಿಠಲ ಹೇಗೆ ಅದ್ಭುತ ಛಾಪು ಮೂಡಿಸಿದ ಎನ್ನುವ ವಿಚಾರವನ್ನು ಬಿಚ್ಚಿಡುತ್ತಲೇ, ವಿಠಲ ಶಬ್ಧದ ವ್ಯಾಪ್ತಿ, ಹರಹು, ವಿಗ್ರಹ ವೈಶಿಷ್ಟ್ಯ, ವಿಠಲ ಪರಂಪರೆ, ಸಾಹಿತ್ಯ ತೋಟದಲ್ಲಿ ಅರಳಿದ ವಿಠಲ,’ ತುತ್ತಿನ ಅನ್ನದ, ಮಜ್ಜಿಗೆ ಹಿಟ್ಟಿ’ನ ವಿಠೋಬಾ ಹೇಗಾದ ಎನ್ನುವ ಸ್ವಾರಸ್ಯ ವಿವರಗಳಲ್ಲಿ ಅರ್ಥಪೂರ್ಣವಾಗಿ ಪಲ್ಲವಿಸಿದೆ. ಪುರಂದರರ ಹಾಡುಗಳಲ್ಲಿ ಬರುವ ‘ಪ್ರಾಣಿ ‘ ಗಳ ಪ್ರತಿಮೆ ಹಾಗೂ ಕನಕದಾಸರ ಕೀರ್ತನೆಗಳಲ್ಲಿ ಬರುವ ‘ ಆಹಾರ’ ಪರಿಕಲ್ಪನೆ ತುಂಬಾ ಸ್ವಾದಿಷ್ಟವಾಗಿದ್ದು , ಸ್ವಾರಸ್ಯಕರ ವಿಚಾರಗಳನ್ನು ಹೊರಹೊಮ್ಮಿಸುತ್ತವೆ. ಅತಿಮುಖ್ಯವಾಗಿ ‘ದಾಸಸಾಹಿತ್ಯ ಹಾಗೂ ಸಾಮಾಜಿಕ ಸ್ವಾಸ್ಥ್ಯ’ ಲೇಖನವು ಇಡೀ ಸಮುದಾಯದ ಆರೋಗ್ಯಕ್ಕೆ ಅಗತ್ಯ ವಾಗಿದೆ .


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top