ನಾಲ್ಕನೇ ಸುತ್ತಿನ ಶೈಕ್ಷಣಿಕ ಮೌಲ್ಯಮಾಪನದಲ್ಲಿ ಸಿ.ಜಿ.ಪಿ ಎ 3.03 ಅಂಕ ಪಡೆದ ಕಾಲೇಜು
ಮಂಗಳೂರು : ನಗರದ ವಿಶ್ವವಿದ್ಯಾನಿಲಯ ಕಾಲೇಜು ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ನಿರ್ಧರಿಸುವ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿಯ (ನ್ಯಾಕ್) ನಾಲ್ಕನೇ ಸುತ್ತಿನ ಶೈಕ್ಷಣಿಕ ಮೌಲ್ಯಮಾಪನದಲ್ಲಿ ಸಿ.ಜಿ.ಪಿ ಎ 3.03 ಅಂಕಗಳೊಂದಿಗೆʼಎʼದರ್ಜೆ ಪಡೆದುಕೊಂಡಿದೆ.
ಕಾಲೇಜು 2004 ರಲ್ಲಿ ನಡೆದ ಮೊದಲ ಸುತ್ತಿನ ಮೌಲ್ಯಮಾಪನದಲ್ಲಿ ʼಬಿ ++ʼ ಗ್ರೇಡ್ ಪಡೆದುಕೊಂಡಿತ್ತು. ಬಳಿಕ 2010 ರಲ್ಲಿʼಎʼಗ್ರೇಡ್ ಪಡೆದಿದ್ದ ಕಾಲೇಜು, 2016 ರಲ್ಲಿ ನಡೆದ ದ್ವಿತೀಯ ಸುತ್ತಿನ ಮೌಲ್ಯಮಾಪನದಲ್ಲಿ ಅದನ್ನು ಉಳಿಸಿಕೊಂಡಿತ್ತು. ಫೆಬ್ರವರಿ 1 ಮತ್ತು 2 ರಂದು ನಡೆದ ನಾಲ್ಕನೇ ಸುತ್ತಿನ ಮೌಲ್ಯಮಾಪನದಲ್ಲಿ ಓಡಿಶಾ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಡಾ. ಹರಿಹರ ಹೋತಾ ಅವರ ನೇತೃತ್ವದ ಸಮಿತಿ ಕಾಲೇಜಿನ ಶೈಕ್ಷಣಿಕ ಸಾಧನೆ ಹಾಗೂ ಪೂರಕ ವ್ಯವಸ್ಥೆಗಳ ಕೂಲಂಕಷ ಅಧ್ಯಯನ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿತ್ತು. ಸಂಯೋಜಕ ಸದಸ್ಯರಾಗಿ ಮಹಾರಾಷ್ಟ್ರ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಾಲ್ಮೀಕಿ ಸರ್ವಡೆ ಹಾಗೂ ಸದಸ್ಯರಾಗಿ ಆಗ್ರಾಸ್ನಾತಕೋತ್ತರ ಪದವಿ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧರಾಶರ್ಮ ಅವರು ಆಗಮಿಸಿದ್ದರು.
ನ್ಯಾಕ್ ಮೌಲ್ಯಮಾಪನ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಅವರ ನೇತೃತ್ವದಲ್ಲಿ, ನ್ಯಾಕ್ ಸಂಯೋಜಕಿ ಡಾ. ಸುಧಾ ಎನ್ ವೈದ್ಯ ಅವರ ಮುಂದಾಳತ್ವದಲ್ಲಿ 7 ಸಮಿತಿಗಳನ್ನು ರಚಿಸಲಾಗಿತ್ತು. ಸಂಸ್ಕೃತ ವಿಭಾಗದ ಡಾ. ಕುಮಾರ ಸುಬ್ರಹ್ಮಣ್ಯ ಭಟ್, ಇತಿಹಾಸ ವಿಭಾಗದ ಡಾ. ಕುಮಾರಸ್ವಾಮಿ ಎಂ, ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಡಾ. ಭಾರತಿ ಪ್ರಕಾಶ್, ಗಣಿತಶಾಸ್ತ್ರ ವಿಭಾಗದ ಡಾ. ಸುಬ್ರಹ್ಮಣ್ಯ ಭಟ್, ಸಸ್ಯಶಾಸ್ತ್ರ ವಿಭಾಗದ ಡಾ. ಶೋಭಾ, ರಸಾಯನ ಶಾಸ್ತ್ರ ವಿಭಾಗದ ಡಾ. ಉಷಾ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಡಾ. ಎ ಸಿದ್ಧಿಕ್ ವಿವಿಧ ಸಮಿತಿಗಳ ನೇತೃತ್ವ ವಹಿಸಿದ್ದರು. ಡಾ. ಸುರೇಶ್ ಐ. ಕ್ಯೂ.ಎ. ಸಿ ಸಂಯೋಜಕರಾಗಿದ್ದರು.
ಕಾಲೇಜಿನ ವಿವಿಧ ವಿಭಾಗಗಳು, ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟ ಯೋಜನೆ, ಮಳೆಕೊಯ್ಲು, ವರ್ಮಿಕಾಂ ಪೋಸ್ಟ್ ಘಟಕ, ಎನ್ ಸಿ ಸಿ, ಎನ್ಎಸ್ಎಸ್, ಕ್ರೀಡಾ ವಿಭಾಗಗಳು, ಲೈಬ್ರರಿಗೆ ಭೇಟಿ ನೀಡಿದ್ದ ಸಮಿತಿ ಸದಸ್ಯರು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಮೆಚ್ಚಿಕೊಂಡಿದ್ದರು. ವಿದ್ಯಾರ್ಥಿಗಳು, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ʼಅವಲೋಕನಂʼಮೂಲಕ ವಿದ್ಯಾರ್ಥಿಗಳು ತಮ್ಮ ಕಲಾ ಪ್ರತಿಭೆ ಅನಾವರಣಗೊಳಿಸಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಸ್ಥಳೀಯ ಶಾಸಕ ಡಿ. ವೇದವ್ಯಾಸ ಕಾಮತ್, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ, ಕುಲಸಚಿವ ಡಾ. ಕಿಶೋರ್ ಕುಮಾರ್ ಸಿಕೆ, ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ ಮೊದಲಾದವರ ನಿರಂತರ ಪ್ರೋತ್ಸಾಹದೊಂದಿಗೆ ಕಾಲೇಜು ನ್ಯಾಕ್ ಮೌಲ್ಯಮಾಪನ ಎದುರಿಸಿತ್ತು. ಇದೇ ಸಂದರ್ಭದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ ಎಲ್ಲಾ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


