ಪರ್ಕಳ ರಸ್ತೆ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Upayuktha
0

ಉಡುಪಿ : ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಉಡುಪಿ ಚತುಷ್ಪತ ರಸ್ತೆ ಕಾಮಗಾರಿಗೆ ಪರ್ಕಳ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಬಗೆಯ ಅಡೆತಡೆಗಳನ್ನು ಆದಷ್ಟು ಶೀಘ್ರದಲ್ಲಿ ಬಗೆಹರಿಸಿ, ನಿಗಧಿತ ಅವಧಿಯೊಳಗೆ ಕಾಮಗಾರಿಯನ್ನು ಮುಕ್ತಾಯಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು.


ಅವರು ಇಂದು ಉಡುಪಿ ತಾಲೂಕು ಕಚೇರಿಯಲ್ಲಿ, ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ-ಉಡುಪಿ ಚತುಷ್ಪತ ರಸ್ತೆ ಕಾಮಗಾರಿ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಪರ್ಕಳ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ನಡೆಸದಂತೆ ಕೋರ್ಟ್‍ನಿಂದ ತಡೆ ಇರುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ತಿಳಿಸಿದರು. ಕಾಮಗಾರಿಯ ಅನುಷ್ಠಾನಕ್ಕೆ ಈಗಾಗಲೇ ಸಾಕಷ್ಟು ಸಾರ್ವಜನಿಕ ಮೊತ್ತವನ್ನು ವೆಚ್ಚ ಮಾಡಿದ್ದು, ಕಾಮಗಾರಿಯು ಸ್ಥಗಿತಗೊಂಡರೆ ಮಳೆಗಾಲದ ವೇಳೆಯಲ್ಲಿ ಇದುವರೆಗೆ ಮಾಡಿರುವ ಕಾಮಗಾರಿ ಹಾಳಾಗುವ ಜೊತೆಗೆ ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ಸಹ ತೀವ್ರ ತೊಂದರೆಯಾಗಲಿದ್ದು, ಈ ಎಲ್ಲಾಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು, ಈ ಬಗ್ಗೆ ವಕೀಲರ ಮೂಲಕ ಚರ್ಚಿಸಿ, ಕಾನೂನು ವ್ಯಾಪ್ತಿಯಲ್ಲಿ ಪ್ರಕರಣವನ್ನು ಶೀಘ್ರದಲ್ಲಿ ಇತ್ಯರ್ಥಪಡಿಸಿ, ಕಾಮಗಾರಿ ಸುಗಮವಾಗಿ ನಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.


169ಎ ತೀರ್ಥಹಳ್ಳಿ-ಉಡುಪಿ ಚತುಷ್ಪತ ರಸ್ತೆಕಾಮಗಾರಿಯ ಭೂ-ಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಮೀನು ಮಾಲೀಕರುಗಳಿಗೆ ಸೂಕ್ತ ಪರಿಹಾರದ ಮೊತ್ತವನ್ನುಆದ್ಯತೆಯಲ್ಲಿ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಭೂ-ಸ್ವಾಧೀನಕ್ಕೆ ಸಂಬಂಧಪಟ್ಟ ದಾಖಲೆಗಳಲ್ಲಿ ದೋಷಗಳಿದ್ದಲ್ಲಿ ತಕ್ಷಣದಲ್ಲಿಇತ್ಯರ್ಥಪಡಿಸುವಂತೆ ಭೂ ಧಾಖಲೆಗಳ ಸಹಾಯಕ ನಿರ್ದೇಶಕರಿಗೆ ತಿಳಿಸಿದರು.


ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಕಾಮಗಾರಿ ನಡೆಸುವ ಕುರಿತಂತೆ ಇದ್ದ ಎಲ್ಲಾ ಸಮಸ್ಯೆಗಳು ಇತ್ಯರ್ಥಗೊಂಡಿದ್ದು, ಕಾಮಗಾರಿ ನಿರ್ವಹಣೆಗೆ ಒಂದು ವಾರದಲ್ಲಿ ಆದೇಶ ಬರಲಿದ್ದು, ಮಾರ್ಚ್ ಒಳಗೆ ಕಾಮಗಾರಿಯನ್ನು ಮುಕ್ತಾಯಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ತಿಳಿಸಿದರು.


ಸಭೆಯಲ್ಲಿ ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಉಡುಪಿ ತಹಸೀಲ್ದಾರ್ ಭೀಮಸೇನ, ಪೌರಾಯುಕ್ತ ಡಾ.ಉದಯ್ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ 169ಎ ನ ಇಂಜನಿಯರ್ ನಾಗರಾಜ್‍ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top