ಉಜಿರೆ ಎಸ್.ಡಿ.ಎಂ ಕಾಲೇಜಿಗೆ ನ್ಯಾಕ್ ಅತ್ಯುನ್ನತ ಗ್ರೇಡ್

Upayuktha
0

ಉಜಿರೆ: ರಾಷ್ಟ್ರೀಯ ಮೌಲ್ಯಾಂಕನ ಹಾಗೂ ಮೌಲ್ಯಮಾಪನದ (ನ್ಯಾಕ್) ನಾಲ್ಕನೇ ಆವೃತ್ತಿಯಲ್ಲಿ ಉಜಿರೆ ಶ್ರೀ ಧ.ಮ ಕಾಲೇಜು ಅತ್ಯುನ್ನತ ಗ್ರೇಡ್‍ನೊಂದಿಗೆ ಎ ಪ್ಲಸ್ ಪ್ಲಸ್ (A++) ವಿಶೇಷ ಮನ್ನಣೆ ಗಳಿಸಿದೆ. ನ್ಯಾಕ್ ಪರಿಶೀಲನೆಯ ಪ್ರಕ್ರಿಯೆಯ ಭಾಗವಾಗಿ ಮೂವರು ತಜ್ಞ ಸದಸ್ಯರ ತಂಡವು ಕಳೆದ ತಿಂಗಳ 30 ಹಾಗೂ 31ರಂದು ಕಾಲೇಜಿಗೆ ಭೇಟಿ ನೀಡಿತ್ತು.


ಓರಿಸ್ಸಾದ ಕಲಹಂಡಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಂಜಯ ಕುಮಾರ್ ಸತಪತಿ ಅಧ್ಯಕ್ಷತೆಯ ನ್ಯಾಕ್ ಸಮಿತಿಯಲ್ಲಿ ಸದಸ್ಯ ಸಂಯೋಜಕರಾಗಿ ಗುರುನಾನಕ್ ದೇವ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಕರಣ್ ಜೀತ್ ಸಿಂಗ್ ಹಾಗೂ ಸದಸ್ಯರಾಗಿ ಮಹಾರಾಷ್ಟ್ರದ ಲಾತೂರಿನ ರಾಜಶ್ರೀ ಶಾಹು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಮಹಾದೇವ್ ಗವಹಾನೆ ಎರಡು ದಿನಗಳ ಕಾಲ ಕಾಲೇಜಿನ ಸಮಗ್ರ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಬೆಳವಣಿಗೆಯ ಸ್ವರೂಪದ ವಿಸ್ತೃತ ಮಾಹಿತಿ ಪಡೆದಿದ್ದರು. ಈ ಮಾಹಿತಿ ಆಧಾರದ ಮೇಲೆ ತಂಡವು ಕಾಲೇಜಿಗೆ ಅತ್ಯುತ್ತಮ ಗ್ರೇಡ್‍ನ ಮನ್ನಣೆ ನೀಡಿದೆ.


ನ್ಯಾಕ್ ನಿಗದಿಪಡಿಸಿದ ವಿವಿಧ ವಲಯಗಳಲ್ಲಿ ಕಳೆದ ಏಳು ವರ್ಷಗಳ ಅವಧಿಯಲ್ಲಿ ಕಾಲೇಜಿನ ಪ್ರಗತಿ ಮತ್ತು ಸಾಧನೆಯ ಹೆಜ್ಜೆಗಳು ಆಶಾದಾಯಕ ಎಂಬುದು ನ್ಯಾಕ್‍ನ ಅತ್ಯುನ್ನತ ಗ್ರೇಡ್‍ನ ಮೂಲಕ ನಿರೂಪಿತವಾಗಿದೆ. ಬೋಧನೆ ಮತ್ತು ಕಲಿಕಾ ವ್ಯವಸ್ಥೆ, ಪಠ್ಯಕ್ರಮ, ಅಧ್ಯಯನ ಮಂಡಳಿ, ಸಂಶೋಧನಾ ಮತ್ತು ವಿಸ್ತರಣಾ ಚಟುವಟಿಕೆ, ಮೂಲಭೂತ ಸೌಕರ್ಯ, ವಿದ್ಯಾರ್ಥಿ-ಸ್ನೇಹಿ ವ್ಯವಸ್ಥೆ, ಆಡಳಿತ ನಿರ್ವಹಣೆ ಮತ್ತು ಶೈಕ್ಷಣಿಕ ನಾಯಕತ್ವ, ಸಾಂಸ್ಥಿಕ ಮೌಲ್ಯಗಳು ಮತ್ತು ಅತ್ಯುತ್ತಮ ಮಾದರಿ ಪ್ರಯೋಗಗಳ ಬಗ್ಗೆ ನ್ಯಾಕ್‍ನ ತಂಡದ ಪರಿಣಿತ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ವಿದ್ಯಾರ್ಥಿಗಳ ಪೋಷಕರು ಹಾಗೂ ಹಳೆಯ ವಿದ್ಯಾರ್ಥಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿದ ತಂಡದ ಸದಸ್ಯರು ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದರು. ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೂ ಪ್ರತ್ಯೇಕವಾಗಿ ಸಭೆ ನಡೆಸಿದ್ದರು.


ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳು, ಅತಿಥಿ ಉಪನ್ಯಾಸ, ಹಳೆಯ ವಿದ್ಯಾರ್ಥಿಗಳೊಂದಿಗಿನ ಸಂವಾದ, ಸಮುದಾಯಕೇಂದ್ರಿತ ವಿಸ್ತರಣಾ ಚಟುವಟಿಕೆಗಳು ಹಾಗೂ ಅಧ್ಯಾಪಕರ ಸಂಶೋಧನೆ ಮತ್ತು ಬೋಧನ ಸಂಬಂಧಿತ ಸಾಧನೆಗಳು ನ್ಯಾಕ್‍ನ ಅತ್ಯುನ್ನತ ಶ್ರೇಯಾಂಕ ಪಡೆಯಲು ಪೂರಕವಾಗಿವೆ. ಕಾಲೇಜಿನ ವಿವಿಧ ವಿಭಾಗಗಳ ಪ್ರಯೋಗಾಲಯಗಳು, ಕ್ರೀಡಾ ಸೌಲಭ್ಯಗಳು, ಹಾಸ್ಟೆಲ್ ವ್ಯವಸ್ಥೆ, ಕಲಾಕೇಂದ್ರ ಸೇರಿದಂತೆ ವಿವಿಧ ಘಟಕಗಳ ಕ್ರಿಯಾಶೀಲ ಚಟುವಟಿಕೆಗಳು ಅತ್ಯುನ್ನತ ಶ್ರೇಯಾಂಕದ ಹಿರಿಮೆ ತಂದುಕೊಟ್ಟಿವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top