ವಿಭಿನ್ನ, ವಿಶಿಷ್ಟ ವ್ಯಕ್ತಿತ್ವದ ಸಾಹಿತಿ ಗೊರೂರು ಅನಂತರಾಜ್‍

Upayuktha
0

ಕೆಲವು ಊರುಗಳಿಗೆ ವ್ಯಕ್ತಿಗಳಿಂದ ಹೆಸರು ಬರುತ್ತದೆ. ಕೆಲವೊಮ್ಮೆ ಊರಿನ ಹೆಸರಿನಿಂದ ವ್ಯಕ್ತಿ ಹೆಸರು ಗಳಿಸುತ್ತಾನೆ. ಹಾಸನ ಜಿಲ್ಲೆಯ ಗೊರೂರು ಎಂಬ ಗ್ರಾಮ ಸರಿಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಇದು ತನ್ನದೇ ಆದಂತಹ ಐತಿಹಾಸಿಕ ಹಿನ್ನಲೆ ಹೊಂದಿದೆ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಸಾಹಿತಿ, ಸ್ವಾತಂತ್ರ ಹೋರಾಟಗಾರರಾದ ಡಾ. ರಾಮಸ್ವಾಮಿ ಅಯ್ಯಂಗಾರ್ ಜನಿಸಿದ ಗ್ರಾಮ ಇದು. ಈ ಊರು ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ತನ್ನದೇ ಆದಂತಹ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಇಂತಹ ಪ್ರದೇಶದಲ್ಲಿ ಜನಿಸಿರುವ ಬಹುಮುಖ ವ್ಯಕ್ತಿತ್ವದ ಗೊರೂರು ಅನಂತರಾಜ್‍ ಅವರ ಕಿರು ಪರಿಚಯದ ಪ್ರಯತ್ನ.


ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬಂತಿರುವ ಗೊರೂರು ಅನಂತರಾಜ್‍ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೈ ಹಾಕಿ ಯಶಸ್ವಿಯಾಗಿ ಜಿಲ್ಲಾದ್ಯಂತ ಹೆಸರು ಮಾಡಿದಂತಹ ವ್ಯಕ್ತಿ. ಹೋರಾಟದ ಮನೋಭಾವ, ಸಾಹಿತ್ಯದಲ್ಲಿ ಹೊಸತನ್ನು ಹುಡುಕುವ ಪ್ರಯತ್ನ, ಹೊಸ ವಿಶ್ಲೇಷಣೆಗಳು, ಪ್ರತಿಭೆಗಳನ್ನು ಗುರುತಿಸಿ ವೇದಿಕೆಗೆ ಅವಕಾಶ ಮಾಡುವುದು, ಹಾಸನ ನಗರದಲ್ಲಾಗಲಿ ಗ್ರಾಮೀಣ ಪ್ರದೇಶದಲ್ಲಾಗಲಿ ನಡೆಯುವ ಕಾರ್ಯಕ್ರಮಗಳಿಗೆ ಭೇಟಿ ನೀಡಿ ವೀಕ್ಷಿಸಿ ನಂತರ ವಿಷಯಗಳನ್ನು ಪತ್ರಿಕೆಗೆ ಕಳುಹಿಸಿ ಕೊಡುವ ಮೂಲಕ ಪ್ರೋತ್ಸಾಹ ನೀಡುವುದು ಇವರ ವಿಭಿನ್ನ ವ್ಯಕ್ತಿತ್ವಕ್ಕೆ ಸಾಕ್ಷಿ.


ವೃತ್ತಿಯಲ್ಲಿ ಸರ್ಕಾರಿ ನೌಕರ, ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದ, ನಿರ್ದೇಶಕ, ನಾಟಕ ರಚನೆಗಾರ, ಕವಿ, ಲೇಖಕ, ಸಾಹಿತಿ, ಪತ್ರಕರ್ತ, ಚಿಂತಕರಾಗಿ ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡ ವ್ಯಕ್ತಿ . ವ್ಯಾಪರಸ್ಥರಾದ ಗೊರೂರು ಬಸವರಾಜು ಮತ್ತು ಪುಟ್ಟಲಕ್ಷ್ಮಮ್ಮರವರ ಪುತ್ರರಾಗಿ 1961 ಮೇ 13 ರಂದು ಜನನ. ಬಿ.ಕಾಂ.(ಎಲ್.ಎಲ್.ಬಿ) ಪದವೀಧರರು. ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರ. ವೀರಪ್ಪನ್ ಭೂತ, ತೋಳ ಬಂತು ತೋಳ, ಅರಳಿಕಟ್ಟೆ, ವ್ಯವಸ್ಥೆ ನಾಟಕಗಳು, ಸಣ್ಣ ಕಥೆಗಳು, ಮೇಳದ ಹಾಡುಗಳು, ನಮ್ಮೂರ ಚಾಮಯ್ಯ ಮೇಷ್ಟ್ರು ಕಥಾ ಸಂಕಲನ, ಬದುಕು ಸಂತೆ ಬಂಡಿ (15 ಕತೆಗಳ ಸಂಕಲನ) ಪ್ರಕೃತಿ (ಸಂಪಾದಿತ ಕಥಾ ಸಂಕಲನ) ಕಥೆಗೆ ವಸ್ತುವಾದಳು ಹುಡುಗಿ, ಸೋಮಾರಿಗಳ ಸಭೆಯಲ್ಲಿ ಹಾಸ್ಯ ಲೇಖನಗಳು, ಕಿರು ಹಾಸ್ಯ ಲೇಖನಗಳು, ಹಬ್ಬಗಳು ಮತ್ತು ಜನಪದ ಆಚರಣೆಗಳು, ಹೇಮೆಯ ಮಡಿಲಲ್ಲಿ, ಸಾರಸ್ವತ ಲೋಕದ ದಿಗ್ಗಜರು, ರಂಗ ಪ್ರಯೋಗ, ಅಭಿನಯ ಅಭಿವ್ಯಕ್ತಿ, ರಂಗಸಿರಿ ಕಥಾ ಐಸಿರಿ, ರಂಗಾಂತರಂಗ, ಕಾವೇರಿ ನದಿಯ ದಡದಲ್ಲಿ ಹಾಸನ ಜಿಲ್ಲೆಯ ದೇವಾಲಯಗಳ ದರ್ಶನ, ಹಾಸನ ತಾಲ್ಲೂಕು ದೇವಾಲಯಗಳ ದರ್ಶನ, ಗೊರೂರು ಹೇಮಾವತಿ ದರ್ಶನ ಸ್ಥಳ ಪುರಾಣ ಮುಂತಾದ 60 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.


ಸಾಕ್ಷರತಾ ಆಂದೋಲನದ ಕಾರ್ಯಕ್ರಮದಲ್ಲಿ ಅನಕ್ಷರಸ್ಥರಿಗೆ ಅರ್ಥವಾಗುವಂತೆ, ಕಲಿಕೆಗೆ ಪೂರಕವಾದ ಪದಗಳ ಜೋಡಣೆ ಮಾಡಿ ಸ್ಥಳದಲ್ಲೇ ಹಾಡು, ಹನಿಗವನ ಬರೆದು ಕಲಿಯುವಂತೆ ಮಾಡುತ್ತಿದ್ದುದಲ್ಲದೆ ಯುವಕರ ತಂಡವನ್ನು ಕಟ್ಟಿ ಸಾಕ್ಷರತಾ ಆಂದೋಲನದ ಬಗ್ಗೆ ನಾಟಕಗಳನ್ನು ಬರೆದು ಪ್ರದರ್ಶನ ಮಾಡುತ್ತಿದ್ದರು. ಖ್ಯಾತ ಹಾಸ್ಯ ಸಾಹಿತಿ ಕೋ.ಲ.ರಂಗನಾಥರಾವ್ ಜೊತೆಗೂಡಿ ರೋಟರಿ, ಲಯನ್ಸ್ ಸಂಸ್ಥೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಕಿರು ಹಾಸ್ಯ ಪ್ರಹಸನಗಳು ಕೃತಿ ಪ್ರಕಟಿಸಿದ್ದಾರೆ.


ಬಳ್ಳಾರಿಯಲ್ಲಿ 1988ರಲ್ಲಿ ನಡೆಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಣ್ಣಕತೆಗಳ ಕಮ್ಮಟದಲ್ಲಿ ಇವರು ಹಾಸನ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಹಾಸನ ಜಿಲ್ಲೆಯಲ್ಲಿ 1994-95ರಲ್ಲಿ ನಡೆದ ಸಾಕ್ಷರತಾ ಆಂದೋಲನದ ಸಂಪನ್ಮೂಲ ವ್ಯಕ್ತಿಯಾಗಿ, ಪಠ್ಯಪುಸ್ತಕ ರಚನಾ ಸಮಿತಿಯ ಕಾರ್ಯದರ್ಶಿಯಾಗಿ ಅಕ್ಷರ ಅಭಿಷೇಕ ಧಾರಾ-01 ಮತ್ತು ಧಾರ-2 ಮತ್ತು ಸಾಕ್ಷರೋತ್ತರ ಪಠ್ಯ ಪುಸ್ತಕ ರಚನೆಯಲ್ಲಿ ತಮ್ಮದೇ ಆದ ಜವಾಬ್ದಾರಿ ನಿಭಾಯಿಸಿದ್ದಾರೆ. ಇದಕ್ಕಾಗಿ ಅಂದಿನ ಜಿಲ್ಲಾಧಿಕಾರಿ ಶ್ರೀ ಮಹೇಂದ್ರ ಜೈನ್ ಅವರಿಂದ ಪ್ರಶಂಸನಾ ಪತ್ರ ಪಡೆದಿದ್ದಾರೆ.

ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮೈಸೂರಿನ ಪುರಭವನದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವದಲ್ಲಿ ವರ್ಷದ ವ್ಯಕ್ತಿ 2007 ಪ್ರಶಸ್ತಿ, ಗೊರೂರಿನಲ್ಲಿ ನಾಗರಿಕ ಸನ್ಮಾನ, ರಾಜ್ಯೋತ್ಸವ ಸನ್ಮಾನ, ಹೇಮಾವತಿ ಯೋಜನೆಯ ನೌಕರರ ಸಂಘದ ರಾಜ್ಯೋತ್ಸವ ಸಮಾರಂಭ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ ಡಾ.ಗೊರೂರು ಜನ್ಮ ಶತಮಾನೋತ್ಸವ ಸಾಹಿತ್ಯ ಗೋಷ್ಠಿಯಲ್ಲಿ ಎ.ಎನ್.ವಿ.ಕಾಲೇಜು ವತಿಯಿಂದ ಸನ್ಮಾನ, ಡಾ. ವಿಷ್ಣುವರ್ಧನ ಮತ್ತು ಡಾ. ಸಿ.ಅಶ್ವತ್ಥ್ ಸ್ಮರಣಾರ್ಥ ನಡೆದ ಸಮಾರಂಭದಲ್ಲಿ ಸನ್ಮಾನ, ಅಂಬಾ ಪ್ರಕಾಶನದ ಸುವರ್ಣಸಿರಿ ಕನ್ನಡಿಗ ಪ್ರಶಸ್ತಿ, ಮಂಡ್ಯದಲ್ಲಿ ಶ್ರೀ ರಂಜನಿ ಕಲಾವೇದಿಕೆಯಿಂದ ಸನ್ಮಾನ, ಹಾಸನ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಾಡೋಜ ಡಾ. ದೇಜಗೌ ಸಾಹಿತ್ಯ ಪ್ರಶಸ್ತಿ, ಹಾಸನದ ಅರುಣೋದಯ ವಿದ್ಯಾಸಂಸ್ಥೆ, ಜಾನಪದ ಮತ್ತು ರಂಗಭೂಮಿ ಕಲಾಸಂಘ, ಸೃಜನ ಸಿರಿ ಕಲಾಸಂಘ ವತಿಯಿಂದ ಸನ್ಮಾನ, ನೇಕಾರರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥೆಯ ನೇಕಾರ ರತ್ನ ಪ್ರಶಸ್ತಿ, ವಿಶ್ವ ವೀರಶೈವ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥೆಯ ಕರ್ನಾಟಕ ಭೂಷಣ ಪ್ರಶಸ್ತಿ, ಕರ್ನಾಟಕ ರಾಜ್ಯ ಬರಹಗಾರರ ಸಂಘದ ನುಡಿವೈಭವ (2022) ಸನ್ಮಾನ,  ಶ್ರೀಗಂಧ ಸೌರಭ ಸಂಸ್ಥೆ ವತಿಯಿಂದ ರಾಜ್ಯ ಪ್ರಶಸ್ತಿ, ಅರಕಲಗೊಡು ತಾಲ್ಲೂಕಿನಲ್ಲಿ ನಡೆದ ರಾಜ್ಯಮಟ್ಟದ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ರಾಜ್ಯ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿ ಭಾಜನರು.


ಇವರು ನನಗೆ ಕಳೆದ 30 ವರ್ಷಗಳಿಂದ ಪರಿಚಿತರು. ಇವರ ಜೊತೆ ಇದ್ದಷ್ಟು ದಿನಗಳ ಕಾಲ ಕಳೆದ ನೆನಪುಗಳು ಕವಿ ಸಮಯ. ಪರಿಚಯದ ಮೊದಲ ದಿನಗಳಲ್ಲಿ ವರದಕ್ಷಿಣೆ ಭೂತ ಎಂಬ ನಾಟಕದಲ್ಲಿ ಭೂತದ ಪಾತ್ರ ನೀಡಿ, ಪಾತ್ರದ ಸನ್ನಿವೇಶ ತಿಳಿಸಿ ಡೈಲಾಗ್‍ಗಳನ್ನು ಬರೆದುಕೊಟ್ಟು ನನ್ನಿಂದ ನಟನೆ ಮಾಡಿಸಿದ್ದರು. ಶಾಲೆಯ ಮೈದಾನದಲ್ಲಿ ನಡೆದ ಈ ಬೀದಿ ನಾಟಕದಿಂದ ಎಲ್ಲರ ಚಪ್ಪಾಳೆ ಗಿಟ್ಟಿಸಿ ಪ್ರಶಂಸೆಗೆ ಪಾತ್ರನಾದೆ. ಆದರೆ ಇದಕ್ಕೆ ಕಾರಣ ಅನಂತರಾಜ್‍ಸರ್ ಎಂದು ಹೇಳಲು ಬಹಳ ಹೆಮ್ಮೆಯೆನಿಸುತ್ತದೆ. ಇವರ ವ್ಯವಸ್ಥೆ ನಾಟಕದಲ್ಲಿ ನನ್ನ ನಟನೆಯ ಯುವಕನ ಪಾತ್ರ ನನ್ನ ಸಾಮಾಜಿಕ ನಾಟಕಗಳಲ್ಲಿ ಅತಿ ಹೆಚ್ಚು ಪ್ರಶಂಸೆ ಗಳಿಸಿದೆ. ನಾನು 15ಕ್ಕೂ ಹೆಚ್ಚು ನಾಟಕಗಳಲ್ಲಿ ಇವರ ಜೊತೆ ಅಭಿನಯಿಸಿದ್ದು, ನನ್ನಲ್ಲಿ ನಾಟಕದ ಕಿಚ್ಚು ಹಚ್ಚಿಸಿದ ಗುರುಗಳೆಂದರೆ ತಪ್ಪಾಗಲಾರದು.

- ಸುಂದರೇಶ್ ಉಡುವೇರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top