ಯಕ್ಷ ಕಲಾ ಕನ್ನಿಕೆ ಮೇಘಶ್ರೀ ಕಜೆ

Upayuktha
0

ಮಂಗಳೂರು ತಾಲೂಕಿನ ಕಿನ್ಯ ಗ್ರಾಮದ ಕಜೆ ನಿವಾಸಿ ಪುಷ್ಪಾವತಿ ಹಾಗೂ ನಾರಾಯಣ ಕಜೆ ಇವರ ಮಗಳು ಮೇಘಶ್ರೀ ಕಜೆ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಕಾಂ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ತಲಪಾಡಿಯ ಶಾರದ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನಲ್ಲಿ ಆಡಳಿತ ಕಚೇರಿಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಇವರ ತಂದೆ. ಅವರು ಕೂಡ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ. ತನ್ನ ಎಲ್ಲಾ  ಕನಸುಗಳಿಗೆ  ಬೆನ್ನೆಲುಬಾಗಿ ನಿಂತವರು ಅಪ್ಪ ಎಂದು ಹೆಮ್ಮೆಯಿಂದ ಹೇಳುತ್ತಾರೆ ಮೇಘಶ್ರೀ.


ಯಕ್ಷ ಶಿಕ್ಷಣ

ಯಕ್ಷಗಾನ ಬಾಲ ಪಾಠವನ್ನು ಕಿನ್ಯ ಕೇಶವ ಶಿಶು ಮಂದಿರದಲ್ಲಿ ಶ್ರೀ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಇವರಿಂದ ಕಲಿತು, ರವಿ ಅಲೆವೂರಾಯ ವರ್ಕಾಡಿ, ದಯಾನಂದ ಪಿಲಿಕೂರು ಇವರಿಂದ ರಂಗ ನಡೆಯನ್ನು ಕಲಿತು, ಪದವಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಶಾರದ ಕಾಲೇಜಿನ ಪ್ರಾಂಶುಪಾಲ ಅಷ್ಟಾವಧಾನಿ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಬಳಿ ರಂಗ ಮಾಹಿತಿ ಹಾಗೂ ಅರ್ಥಗಾರಿಕೆ ಅಧ್ಯಯನ.  ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣದ ಸಂದರ್ಭ ಯಕ್ಷ ಮಂಗಳದ ಯಕ್ಷ ಗುರು ಶ್ರೀ.ದೀವಿತ್ ಎಸ್.ಕೋಟ್ಯಾನ್ ಇವರಿಂದ ಹೆಚ್ಚಿನ ನಾಟ್ಯಗಾರಿಕೆ ಕಲಿತರು. ಅಭಿನವ ವಾಲ್ಮೀಕಿ ದಿ. ಬೊಟ್ಟಿಕೆರೆ ಪುರುಷೋತ್ತಮ ಪೂಂಜರವರಿಂದ ಯಕ್ಷಗಾನ ರಂಗದ ಹೆಚ್ಚಿನ ಮಾಹಿತಿ ಮತ್ತು ಪರಿಷ್ಕೃತ ಹಾಗೂ ವಾಡಿಕೆಯಲ್ಲಿ ಇರುವ ತಾಳಗಳ ಕುರಿತು ಕಲಿತು, ಪ್ರಸ್ತುತ ಅಶ್ವಥ್ ಮಂಜನಾಡಿ ಇವರಿಂದ ಶ್ರೀ ದುರ್ಗಾಪರಮೇಶ್ವರೀ ಕೃಪಾಶ್ರಿತ ಕಲಾಸಂಪದ ಕೇಶವ ಶಿಶುಮಂದಿರ ಕಿನ್ಯ ತಂಡದಲ್ಲಿ ಯಕ್ಷಗಾನ ನಾಟ್ಯವನ್ನು ಅಧ್ಯಯನ ಮಾಡುತ್ತಿದ್ದಾರೆ ಹಾಗೂ ಅರ್ಥಗಾರಿಕೆಯನ್ನು ಯಕ್ಷಗಾನ ತರಬೇತಿ ದುಬೈ ಯಕ್ಷ ಗುರುಗಳು ಶೇಖರ್ ಡಿ ಶೆಟ್ಟಿಗಾರ್ ಇವರ ಬಳಿ ಕಲಿಯುತ್ತಿದ್ದಾರೆ.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂಬುದಕ್ಕೆ, ಪ್ರಸಂಗ ಹಾಗೂ ರಂಗದ ನಡೆಯ ಎಲ್ಲಾ ಮಾಹಿತಿಗಳನ್ನು ಗುರುಗಳಿಂದ ಕೇಳಿ ತಿಳಿದು, ಪಾತ್ರಕ್ಕೆ ಬೇಕಾದ ಅರ್ಥಗಾರಿಕೆ, ನಾಟ್ಯ ಹಾಗೂ ಅಭಿನಯ ಇದೆಲ್ಲದರ ಪೂರ್ವ ತಯಾರಿಯನ್ನು ಮಾಡಿ, ಸಿಕ್ಕಿದ ಪಾತ್ರದ ಜೊತೆಗೆ ಸಹಕಲಾವಿದರ ಪಾತ್ರದ ಜೊತೆಗೂ ಸಂಭಾಷಣೆಯನ್ನು ಮಾಡಿ, ಪಾತ್ರಕ್ಕೆ ಹೇಗೆ ಜೀವ ತುಂಬಬಹುದು ಎಂದು ಮಾನಸಿಕವಾಗಿ ಸಿದ್ಧತೆಯನ್ನು ಮಾಡಿ ರಂಗ ಪ್ರವೇಶವನ್ನು ಮಾಡುತ್ತೇನೆ ಎಂದು ಹೇಳುತ್ತಾರೆ. ದೇವಿ ಮಹಾತ್ಮೆ, ಮಾನಿಷಾದ, ಕೃಷ್ಣಲೀಲೆ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು. ಕೃಷ್ಣ, ವಿಷ್ಣು, ದೇವಿ, ಮೋಹಿನಿ, ಭ್ರಮರ ಕುಂತಲೆ, ಸ್ವೈರಿಣಿ ಇತ್ಯಾದಿ ನೆಚ್ಚಿನ ವೇಷಗಳು.


ಯಕ್ಷಗಾನ ಒಂದು ಶ್ರೀಮಂತ ಹಾಗೂ ಪಾರಂಪರಿಕ ಕಲೆ. ಮಾಡರ್ನ್ ಕಾಲಘಟ್ಟದಲ್ಲೂ ಇಂದಿನ ಯುವಜನಾಂಗ ಹೆಚ್ಚು ಆಕರ್ಷಿತರಾಗಿ ನಮ್ಮ ಕರುನಾಡ ಗಂಡು ಕಲೆಯನ್ನು ಜಗತ್ಪ್ರಸಿದ್ಧಿಗೊಳಿಸಿ ವಿಶ್ವಮಾನ್ಯ ಕಲೆಯನ್ನಾಗಿಸಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಆದರೆ ಆಧುನಿಕರಿಸುವ ನಿಟ್ಟಿನಲ್ಲಿ ನಮ್ಮ ಯಕ್ಷಗಾನ ಕಲೆ ಎಲ್ಲಿಯೂ ಚೌಕಟ್ಟನ್ನು ಮೀರಿ ದುರ್ಬಳಕೆ ಆಗದಿರಲಿ ಎಂಬುದು ಇವರ ಮನದಾಳದ ಮಾತು. ಇಂದು ರಾತ್ರಿ ಇಡೀ ನಿದ್ದೆ ಬಿಟ್ಟು ಯಕ್ಷಗಾನ ನೋಡುವಂತ ಪ್ರೇಕ್ಷಕರು ಬಹಳ ವಿರಳ ಆದರೆ ಕಾಲಮಿತಿ ಯಕ್ಷಗಾನಗಳಿಗೆ ಹೆಚ್ಚಿನ ಪ್ರೇಕ್ಷಕರನ್ನು ನಾವು ಕಾಣುತ್ತೇವೆ ಎನ್ನುತ್ತಾರೆ.


ಹೆಣ್ಣಾಗಿ ಎಲ್ಲಾ ರೀತಿಯ ಚೌಕಟ್ಟನ್ನು ನಿಭಾಯಿಸಿ ಮನೆಯವರ ಪ್ರೋತ್ಸಾಹದಿಂದ ಈ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಬಂದಿದ್ದೇನೆ. ಮುಂದಿನ ಜೀವನದಲ್ಲೂ ಪ್ರೋತ್ಸಾಹ ಸಿಕ್ಕರೆ ಮುಂದುವರಿಸುತ್ತೇನೆ. ಸದ್ಯಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ತಲಪಾಡಿಯಲ್ಲಿ ಧರ್ಮ ಶಿಕ್ಷಣ ತರಬೇತಿಯನ್ನು, ಶಾರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ತಲಪಾಡಿಯಲ್ಲಿ ಭಜನೆ ತರಗತಿಯನ್ನು ಹಾಗೂ ಯಕ್ಷ ಶಾರದ ಎಂಬ ಮಕ್ಕಳ ತಂಡಕ್ಕೆ ಯಕ್ಷಗಾನ ತರಗತಿಯನ್ನು ಗುರುಗಳ ಹಾಗೂ ಮನೆಯವರ ಆಶೀರ್ವಾದದಿಂದ ನಡೆಸುತ್ತಿದ್ದೇನೆ ಎಂದು ಮೇಘಶ್ರೀ ಕಜೆ ಹೇಳುತ್ತಾರೆ.





ಪ್ರಶಸ್ತಿ ಪುರಸ್ಕಾರಗಳು


♦ 2020 ಯಕ್ಷ ಬಿಂದು ಉಜಿರೆ ಆಯೋಜಿಸಿದ "ದಿತ್ತ..ದಿಮಿ...ಗೆಜ್ಜೆಯ - ಹೆಜ್ಜೆ" ಯಕ್ಷ ವಿಡಿಯೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.

♦ ಆನಂದಾಶ್ರಮ ಪ್ರೌಢಶಾಲೆ ಸೋಮೇಶ್ವರ ಕೋಟೆಕಾರ್ ಇಲ್ಲಿನ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಯಕ್ಷಗಾನದಲ್ಲಿ ಸತತ ಮೂರು ಬಾರಿ ಉತ್ತಮ ವೇಷಧಾರಿ ಪ್ರಶಸ್ತಿ.

♦ ಪ್ರತಿಭಾ ಕಾರಂಜಿ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ.

♦ ಶ್ರೀ ಬಾಲಕೃಷ್ಣ ಮಂದಿರ ಕುಂಪಲ ಇದರ ವತಿಯಿಂದ ಪುರಸ್ಕಾರ.

♦ ಕಿನ್ಯ ಕೇಶವ ಶಿಶುಮಂದಿರದ ವತಿಯಿಂದ ಪ್ರತಿಭಾ ಪುರಸ್ಕಾರ.

♦ ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ), ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಸೋಮೇಶ್ವರ ಇದರ 43ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ.

♦ ಶ್ರೀ ರಕ್ತೇಶ್ವರಿ ಸೇವಾ ಟ್ರಸ್ಟ್ ಗಂಗಾಪೂರ ದೇವಿನಗರ ತಲಪಾಡಿ ಇವರಿಂದ ಪ್ರತಿಭಾ ಪುರಸ್ಕಾರ.

♦ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ಯಕ್ಷ ಮಂಗಳ ತಂಡದಿಂದ ಅಭಿನಂದನೆ.

♦ ಬಿ.ಜೆ.ಪಿ ಯುವ ಮೋರ್ಚಾ ಉಳ್ಳಾಲ ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ.

♦ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ತಲಪಾಡಿ ಇಲ್ಲಿನ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಪ್ರತಿಭಾ ಪುರಸ್ಕಾರದಲ್ಲಿ ಸನ್ಮಾನ.


ಶಾಲಾ ಕಾಲೇಜು ದಿನಗಳಲ್ಲಿ ಕಬ್ಬಡ್ಡಿ, ಖೋಖೋ, ರಿಲೇ, ತ್ರೋಬಾಲ್, ವಾಲಿಬಾಲ್, ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ್ದಾರೆ. ಕಾಲೇಜು ಕಬ್ಬಡ್ಡಿ ತಂಡದ ಜಿಲ್ಲಾ ಮಟ್ಟದ ತಂಡದ ಸದಸ್ಯೆಯಾಗಿದ್ದರು. ನೃತ್ಯ, ನಾಟಕ, ದೇಶಭಕ್ತಿ ಗೀತೆ, ಭಜನೆ, ಚಿತ್ರಗೀತೆ, ಭಾಷಣ, ಪ್ರಬಂಧ, ಲೇಖನ ಬರೆಯುವುದು, ನಿರೂಪಣೆ, ಭರತನಾಟ್ಯ, ಸೆಮಿ ಕ್ಲಾಸಿಕಲ್ ನೃತ್ಯ ಇವರ ಹವ್ಯಾಸಗಳು. ಕೇಶವ ಶಿಶುಮಂದಿರ ಕಿನ್ಯ, ತಂದೆ, ತಾಯಿ, ಅಣ್ಣಂದಿರು, ಯಕ್ಷಗಾನ ಗುರುಗಳು, ಶಿಕ್ಷಕರು, ಕುಟುಂಬಸ್ಥರು, ಸ್ನೇಹಿತರ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತಾರೆ ಮೇಘಶ್ರೀ ಕಜೆ.


ಇವರಿಗೆ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ

ಫೋಟೋ: ಸುಮುಖ ಫೋಕಸ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top