ಪ್ರತಿ ವರ್ಷ ದೇಶದಾದ್ಯಂತ ಜನವರಿ ತಿಂಗಳ ಕೊನೆ ಭಾನುವಾರದಂದು ಕುಷ್ಟರೋಗ ನಿರ್ಮೂಲನಾ ದಿನ ಎಂದು ಆಚರಿಸಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಮತ್ತು ಈ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕುವ ಪ್ರಯತ್ನ ಮಾಡಲಾಗುತ್ತದೆ. ಅತ್ಯಂತ ಪುರಾತನವಾದ ಖಾಯಿಲೆ ಇದಾಗಿದ್ದು “ದೊಡ್ಡ ರೋಗ” ಎಂಬ ಕುಖ್ಯಾತಿಯನ್ನು ಈ ಕುಷ್ಟರೋಗ ಪಡೆದಿರುತ್ತದೆ. ಈ ರೋಗದ ಬಗ್ಗೆ ಜನರಲ್ಲಿ ತಮ್ಮ ಕಲ್ಪನೆ ತೊಡೆದು ಹಾಕಲು ಮತ್ತು ಕಪೋಲಿ ಕಲ್ಪಿತ ಮೂಡ ನಂಬಿಕೆಗಳನ್ನು ಅಳಿಸಿ ಹಾಕಲು 30-01-2023 ರಿಂದ 13-02-2023 ರವರೆಗೆ ಕುಷ್ಟ ರೋಗ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. 2023 ರ ಈ ಕುಷ್ಟ ರೋಗದ ನಿರ್ಮೂಲನ ದಿನದ ಆಚರಣೆಯ ಘೋಷವಾಕ್ಯ “ಕುಷ್ಟ ರೋಗದ ವಿರುದ್ದ ಹೋರಾಡೋಣ ಮತ್ತು ಕುಷ್ಟ ರೋಗವನ್ನು ಇತಿಹಾಸವಾಗಿಸೋಣ” ಎಂಬುದಾಗಿದೆ. ರಾಷ್ಟ್ರೀಯ ಕುಷ್ಟ ರೋಗ ನಿರ್ಮೂಲನ ಕಾರ್ಯಕ್ರಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರದ ವತಿಯಿಂದ ಈ ಅಭಿಯಾನವನ್ನು ಆರಂಭಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಈ ರೋಗದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದರೂ ಈ ಕುಷ್ಟ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲು ಸರಕಾರ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತಂದಿದೆ.
ಏನಿದು ಲೆಪ್ರಿಸಿ ರೋಗ:
ಅಚ್ಚ ಕನ್ನಡದಲ್ಲಿ ಕುಷ್ಟ ರೋಗ ಎಂದು ಕರೆಯಲ್ಪಡುವ ಈ ರೋಗವನ್ನು ಹಾನ್ ಸೆನ್ಸ್ ಡಿಸೀಸ್ ಎಂದೂ ಕರೆಯಲಾಗುತ್ತದೆ. ಆಡು ಭಾಷೆಯಲ್ಲಿ ‘ದೊಡ್ರೋಗ’ ಎಂದು ಕರೆಯುತ್ತಾರೆ. ಇದೊಂದು ದೀರ್ಘಕಾಲಿಕ ಸೋಂಕು ರೋಗವಾಗಿದ್ದು, ಮೈಕೋ ಬ್ಯಾಕ್ಟೀರಿಯಮ್ ಲೆಪ್ರೇ ಎಂಬ ಬ್ಯಾಕ್ಟೀರಿಯಾದಿಂದ ನಮ್ಮ ಮನುಷ್ಯನ ದೇಹಕ್ಕೆ ಸೇರಿಕೊಂಡು ಇತರರಿಗೂ ಹರಡುತ್ತದೆ. ಸೋಂಕಿತ ಕುಷ್ಟ ರೋಗಿಗಳ ಮುಖಾಂತರ ಮೂಗು, ಬಾಯಿಯಿಂದ ಸಿಡಿದ ನೀರಿನ ಹನಿಗಳ ಮುಖಾಂತರ (ಡ್ರಾಪ್‍ಲೆಟ್ಸ್) ಈ ರೋಗ ಹರಡುತ್ತದೆ. ಸರಿಯಾಗಿ ಚಿಕಿತ್ಸೆ ಪಡೆಯದ ಮತ್ತು ರೋಗದಿಂದ ಬಳಲುತ್ತಿರುವ ವ್ಯಕ್ತಿಗಳ ಅತ್ಯಂತ ಸನಿಹದ ಸಂಪರ್ಕದಿಂದ ಈ ರೋಗ ಹರಡುವ ಸಾಧ್ಯತೆ ಇರುತ್ತದೆ. ಹಾಗೆಂದ ಮಾತ್ರಕ್ಕೆ ಸೋಂಕಿತ ರೋಗಿಯ ಸ್ಪರ್ಷದಿಂದ ಈ ರೋಗ ಹರಡುವುದಿಲ್ಲ. ಈ ಕಾರಣದಿಂದ ಶಂಕಿತ, ಸೋಂಕಿತ ರೋಗಿಗಳನ್ನು ಅಸ್ಪಶ್ಯರಂತೆ ಕಾಣುವುದು ಸರ್ವತಾ ಸಹ್ಯವಲ್ಲ. ಸಕಾಲದಲ್ಲಿ ಗುರುತಿಸಿ, ಸೂಕ್ತ ಸಮರ್ಪಕ ಚಿಕಿತ್ಸೆ ನೀಡದಿದ್ದಲ್ಲಿ ರೋಗಿಯ ಚರ್ಮ, ನರಗಳು, ಕಾಲುಗಳು ಮತ್ತು ಕಣ್ಣುಗಳು ಹೀನವಾಗಿ ಕೊಳೆತುಹೋಗುವ ಸಾಧ್ಯತೆ ಇರುತ್ತದೆ. ಶಾಶ್ವತ ಅಂಗ ವೈಕಲ್ಯಕ್ಕೆ ಕಾರಣವಾಗುವ ರೋಗಗಳಲ್ಲಿಯೂ ಒಂದಾಗಿದೆ. ಸ್ನಾಯುಗಳು ಬಲಹೀನವಾಗುವುದು, ನರಗಳು ದಪ್ಪವಾಗಿ ಸ್ಪರ್ಶ ಜ್ಞಾನ ಕಳೆದುಕೊಳ್ಳುವುದು, ಕಣ್ಣಿನ ದೃಷ್ಟಿ ಕಳೆದು ಹೋಗುವುದು ಮತ್ತು ಚರ್ಮ ಕೊಳೆತು ಹೋಗುವುದು ಈ ರೋಗದ ಮುಖ್ಯ ಲಕ್ಷಣವಾಗಿರುತ್ತದೆ.
ಹಿಂದಿನ ಕಾಲದಲ್ಲಿ ಸರಿಯಾದ ಮೂಲ ಸೌಕರ್ಯದ ಕೊರತೆ ಅಶುದ್ಧ ಗಾಳಿ, ನೀರು ಮತ್ತು ಅಪೌಷ್ಠಿಕ ಕಾರಣದಿಂದಾಗಿ ಈ ರೋಗದ ಕಾಟ ಜೋರಾಗಿತ್ತು. ಆದರೆ ಮುಂದುವರೆದ ತಂತ್ರಜ್ಞಾನ, ಆಂಟಿಬಯೋಟಿಕ್‍ಗಳ ಲಭ್ಯತೆ, ಸುಧಾರಿಸಿದ ಮೂಲ ಸೌಕರ್ಯ ಶುದ್ದ ಗಾಳಿ ಬೆಳಕು ನೀರಿನ ಲಭ್ಯತೆಯಿಂದಾಗಿ ಈ ರೋಗ ಬಹಳಷ್ಟು ಕಡಿಮೆಯಾಗಿದ್ದು, ಆದರೂ ಅಲ್ಲಲ್ಲಿ ಒಂದೊಂದು ರೋಗಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ವರದಿಗಳ ಪ್ರಕಾರ 2022 ಮೇ ತಿಂಗಳ ಅಂಕಿ ಅಂಶಗಳ ವರದಿಯಂತೆ ಜಾಗತಿಕವಾಗಿ ವಿಶ್ವದಲ್ಲಿ 20,28,000 ಮಂದಿ ಈ ಕುಷ್ಟ ರೋಗದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈಗ ಈ ರೋಗ ಮಾರಣಾಂತಿಕವಲ್ಲ ಎಂಬುದು ನಮಗೆಲ್ಲಾ ತಿಳಿದೇ ಇದೆ. ಸಂಪೂರ್ಣವಾಗಿ ಚಿಕಿತ್ಸೆಗೆ ಸ್ಪಂದಿಸುವ ರೋಗ ಇದಾಗಿದ್ದು, ಪರಿಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಆದರೆ ಒಮ್ಮೆ ಅಂಗ ವೈಪಲ್ಯ ಉಂಟಾದ ಬಳಿಕ, ಆ ಅಂಗವಿಕಲತೆಯನ್ನು ಸರಿಪಡಿಸಲು ಸಾಧ್ಯವಿಲ್ಲ. ರೋಗವನ್ನು ಪತ್ತೆ ಹಚ್ಚುವ ಮೊದಲೇ ಉಂಟಾಗುವ ಸ್ನಾಯುಗಳ ದುರ್ಬಲ, ನರದ ದೌರ್ಲಬ್ಯ ಮತ್ತು ಚರ್ಮದ ವೈಪಲ್ಯವನ್ನು ಸರಿಪಡಿಲಸು ಸಾಧ್ಯವಾಗದು. ಈ ಕುಷ್ಟ ರೋಗಕ್ಕೆ ನಿರ್ದಿಷ್ಟ ಲಸಿಕೆ ಇಲ್ಲದಿದ್ದರೂ ಬಿಸಿಜಿ ಲಸಿಕೆ ಹಾಕಿಸಿದವರಿಗೆ ಶೇಕಡಾ 50ರಷ್ಟು ರಕ್ಷಣೆ ಈ ಕುಷ್ಟರೋಗದಿಂದ ಸಿಗುತ್ತದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಮಾರಣಾಂತಿಕವಲ್ಲದ ಶಾಶ್ವತ ಅಂಗ ವೈಫಲ್ಯಕ್ಕೆ ಕಾರಣವಾಗುವ ಚಿಕಿತ್ಸೆಗೆ ಸ್ಪಂದಿಸುವ ಈ ರೋಗ ಬರದಂತೆ ಎಚ್ಚರ ವಹಿಸುವುದರಲ್ಲಿಯೇ ಜಾಣತನ ಅಡಗಿದೆ.
ತಪ್ಪು ಕಲ್ಪನೆಗಳು ಮತ್ತು ವಾಸ್ತವ ವಿಚಾರಗಳು:
1) ಕುಷ್ಟ ರೋಗ ದೇವರ ಶಾಪವಲ್ಲ. ಯಾವುದೇ ದೇವರ ಶಾಪದಿಂದ ಈ ರೋಗ ಬರುವುದಿಲ್ಲ. ಬ್ಯಾಕ್ಟೀರಿಯಾದಿಂದ ಈ ರೋಗ ಬರುತ್ತದೆ.
2) ಅನುವಂಶಿಕವಾಗಿ ಈ ರೋಗ ತಂದೆ ತಾಯಿಯರಿಂದ ಮಕ್ಕಳಿಗೆ ಬರುವುದಿಲ್ಲ. ಈ ಬ್ಯಾಕ್ಟೀರಿಯಾ ಸೋಂಕಿನಿಂದ ಬರುತ್ತದೆ.
3) ಸ್ಪರ್ಶದಿಂದ ಈ ಕುಷ್ಟ ರೋಗ ಹರಡುವುದಿಲ್ಲ. ದೀರ್ಘಕಾಲದ ದೈಹಿಕ ಸಂಪರ್ಕ ಅಥವಾ ಅತ್ಯಂತ ಸನಿಹದಿಂದ ಚಿಕಿತ್ಸೆ ನೀಡದ ಕುಷ್ಟ ರೋಗಿಗಳ ಒಡನಾಟದಿಂದ ಈ ರೋಗ ವ್ಯಕ್ತಿಯಿಂದ ವ್ಯಕ್ತಿಗೆ ಸಿಡಿದ ನೀರ ಹನಿಗಳ ಮುಖಾಂತರ ಹರಡುವ ಸಾಧ್ಯತೆ ಇದೆ. ಈ ಕಾರಣದಿಂದ ಕುಷ್ಟ ರೋಗಿಗಳನ್ನು ಅಸ್ಪಷ್ಯರಂತೆ ನೋಡಬಾರದು. ಅವರೂ ನಮ್ಮ ಹಾಗೇ ಮನುಷ್ಯರು ಮತ್ತು ಅವರಿಗೆ ಸಕಲ ಸೌಕರ್ಯಗಳನ್ನು ನೀಡತಕ್ಕದ್ದು. ಅವರನ್ನು ಬೇರೆಯಾಗಿಸಿ ಅವರನ್ನು ನಿಕೃಷ್ಟರಂತೆ ಕಾಣುವುದು ಸರಿಯಲ್ಲ.
4) ಜಿರಳೆ ಮತ್ತು ಇನ್ನಿತರ ಕೀಟಗಳಿಂದ ಈ ರೋಗ ಹರಡುವ ಸಾಧ್ಯತೆ ಇರುತ್ತದೆ. ಇದು ಭಾಗಶ: ಸತ್ಯವಾದ ವಿಚಾರ ಜಿರಳೆ ಮತ್ತು ಇತರ ಕೀಟಗಳು ದೇಹದಲ್ಲಿ ಮೈಕೋಬ್ಯಾಕ್ಟೀರಿಯಾ ಲೆಪ್ರೆ ಎಂಬ ಬ್ಯಾಕ್ಟೀರಿಯಾ ಸೇರಿಕೊಂಡು ಅವುಗಳು ತಮ್ಮ ಮಲಮೂತ್ರ ಮುಖಾಂತರ ರೋಗ ಹರಡುವ ಸಾಧ್ಯತೆ ಇರುತ್ತದೆ.
ರೋಗದ ಲಕ್ಷಣಗಳು:
ಈ ರೋಗ ಸಣ್ಣ ಮಕ್ಕಳಿಂದ ಹಿಡಿದು ಮುದುಕರವರೆಗೆ ಗಂಡು ಹೆಣ್ಣು ಎಂಬ ಬೇಧವಿಲ್ಲದೆ ಎಲ್ಲಾ ವಯಸ್ಸಿನ ಜಾತಿಯ ಮತ್ತು ಧರ್ಮದ ಜನರನ್ನು ಬಾಧಿಸುತ್ತದೆ. ಆದರೆ ಬಡವರು ಮತ್ತು ಅನಕ್ಷರಸ್ಥರಲ್ಲಿ ಈ ರೋಗ ಹೆಚ್ಚು ಕಂಡುಬರುತ್ತದೆ. ಮೈಕೋಬ್ಯಾಕ್ಟೀರಿಯಾ ಲೆಫ್ರೇ ಎಂಬ ಬ್ಯಾಕ್ಟೀರಿಯ ನಮ್ಮ ದೇಹಕ್ಕೆ ಸೇರಿದ ಬಳಿಕ ರೋಗ ಪ್ರಕಟಗೊಳ್ಳಲು 5 ವರ್ಷಗಳು ತಗಲಬಹುದು. ಬಹಳ ನಿಧಾನವಾಗಿ ಈ ರೋಗಾಣುಗಳು ಸಂತಾನೋತ್ಪತ್ತಿ ಮಾಡುತ್ತದೆ. ರೋಗಾಣು ದೇಹ ಸೇರಿದ ಒಂದು ವರ್ಷದ ಬಳಿಕವೂ ಪ್ರಕಟಗೊಳ್ಳಬಹುದು ಅಥವಾ 20 ವರ್ಷಗಳ ಬಳಿಕವೂ ಪ್ರಕಟಗೊಳ್ಳಬಹುದು. ಇದೊಂದು ದೀರ್ಘಕಾಲಿಕ ಸೋಂಕು ರೋಗವಾಗಿರುತ್ತದೆ. ಜಾಗತಿಕವಾಗಿ 140 ರಾಷ್ಟ್ರಗಳಲ್ಲಿ ಈ ರೋಗ ಕಂಡು ಬಂದಿದೆ. ಆದರೆ ಬ್ರಿಜಿಲ್, ಕೀನ್ಯ, ಏಷ್ಯಾ ಖಂಡದ ಭಾರತ, ಇಂಡೋನೇಷ್ಯಾ, ಶ್ರೀಲಂಕಾ ಮುಂತಾದ ರಾಷ್ಟ್ರಗಳಲ್ಲಿ ಹೆಚ್ಚು ಕಂಡು ಬಂದಿದೆ. 2020 ರಲ್ಲಿ 1,27,000 ದಷ್ಟು ರೋಗಿಗಳು ಜಾಗತಿಕವಾಗಿ ಇತ್ತು. 2022 ರಲ್ಲಿ ಈ ರೋಗಿಗಳ ಸಂಖ್ಯೆ 2,30,000 ರಷ್ಟಿದೆ ಎಂದು ತಿಳಿದುಬಂದಿದೆ. ಕೋವಿಡ್-19 ರೋಗದ ಕಾರಣದಿಂದಾಗಿ ಕಳೆದ 2 ವರ್ಷಗಳಲ್ಲಿ ಕುಷ್ಟ ರೋಗಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ರೋಗದ ಲಕ್ಷಣಗಳು ರೋಗದ ತೀವ್ರತೆಗೆ ಅನುಗುಣವಾಗಿ ಇರುತ್ತದೆ.
1) ದೇಹದ ಮೇಲೆ ಸ್ಪರ್ಷ ಜ್ಞಾನವಿಲ್ಲದ ಮಚ್ಚೆಗಳು
2) ತ್ವಚೆಯ ಮೇಲೆ ಕೆಂಪಾದ ಬಾವು.
3) ನೋವಿನಿಂದ ಕೂಡಿದ ಹಗ್ಗದ ಹಾಗೆ ಊದಿಕೊಂಡ ನರಗಳು
4) ಲೆಪ್ರೆ ರಿಯಾಕ್ಷನ್ ಅಥವಾ ಪ್ರತಿಕ್ರಿಯೆ
5) ಪಾದಗಳ ದೌರ್ಬಲ್ಯ, ಬೆರಳುಗಳ ದೌರ್ಬಲ್ಯ, ಸ್ನಾಯುಗಳ ದೌರ್ಬಲ್ಯ.
6) ಕಣ್ಣುಗಳ ದೃಷ್ಟಿಯಿಂದ ವೈಪರಿತ್ಯ, ಕಣ್ಣು ಮುಚ್ಚುವಲ್ಲಿ ತೊಂದರೆ.
7) ಚರ್ಮ ಕೊಳೆತು ಹೋಗಿ ದೈಹಿಕ ಅಂಗ ವೈಫಲ್ಯ ಉಂಟಾಗಬಹುದು.
8) ಚರ್ಮದಲ್ಲಿ ಒಣಗದೇ ಇರುವ ಸ್ಪರ್ಶ ಜ್ಞಾನವಿಲ್ಲದ ಹುಣ್ಣುಗಳು
ಚಿಕಿತ್ಸೆ ಹೇಗೆ?
ಕುಷ್ಟರೋಗ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ. ಯಮ್ ಡಿ ಎ ಅಂದರೆ ಮಲ್ಟಿ ಡ್ರಗ್ ತೆರಪಿ ಮುಖಾಂತರ ಚಿಕಿತ್ಸೆ ನೀಡಲಾಗುತ್ತದೆ. ಹಲವಾರು ಔಷಧಿಗಳನ್ನು ಜೊತೆಗೆ ಬಳಸಿ, ಬ್ಯಾಕ್ಟೀರಿಯಾವನ್ನು ನಿರ್ನಾಮ ಮಾಡಲಾಗುತ್ತದೆ. ಡಾಪ್ಸೋನ್, ರಿಫಾಂಪಿಸಿನ್ ಮತ್ತು ಕ್ಲೋಫಾಮೈನ್ ಎಂಬ ಮೂರು ಆಂಟಿಬಯೋಟಿಕ್‍ಗಳನ್ನು ರೋಗಿಯ ತೂಕಕ್ಕೆ ಅನುಗುಣವಾಗಿ ಮತ್ತು ರೋಗದ ತೀವ್ರತೆಗೆ ಅನುಗುಣವಾಗಿ ಔಷಧಿಯ ಪ್ರಮಾಣವನ್ನು ನಿಗದಿಪಡಿಸಿ 6 ರಿಂದ 12 ತಿಂಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ. ಲೆಪ್ರಸಿ ರೋಗ ಸಾಂಕ್ರಾಮಿಕವಲ್ಲದ ಕಾರಣ ಚಿಕಿತ್ಸೆ ಸಂದರ್ಭದಲ್ಲಿ ಈ ರೋಗಿಗಳು ತಮ್ಮ ಕುಟುಂಬದವರ ಜೊತೆಗೆ ವಾಸಿಸಬಹುದಾಗಿದೆ.
ತಡೆಗಟ್ಟುವುದು ಹೇಗೆ?
1) ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದ್ದಲ್ಲಿ ದೈಹಿಕ ಅಂಗ ವೈಕಲ್ಯ ಮತ್ತು ನರಗಳ ದೌರ್ಬಲ್ಯವನ್ನು ತಡೆಗಟ್ಟಬಹುದಾಗಿದೆ.
2) ಕುಷ್ಟ ರೋಗಿಗಳ ಜೊತೆ ಬದುಕುವ ಕುಟುಂಬಸ್ಥರಿಗೆ ಮತ್ತು ಒಡನಾಡಿಗಳಿಗೆ ರಿಫಾಂಪಿಸಿನ್ ಔಷಧಿ ನೀಡಿ ರೋಗ ಬರದಂತೆ ಮಾಡಬಹುದಾಗಿದೆ.
3) ಬಿಸಿಜಿ ಲಸಿಕೆ ನೀಡುವುದರಿಂದ 56 ಶೇಕಡಾ ಮಂದಿಗೆ ಕುಷ್ಟ ರೋಗದಿಂದ ರಕ್ಷಣೆ ಸಿಗುತ್ತದೆ ಎಂದು ತಿಳಿದು ಬಂದಿದೆ.
4) ಶಂಕಿತ ರೋಗಿಗಳ ಜೊತೆ ಜೀವಿಸುವವರಿಗೆ ಬಿಸಿಜಿ ಬೂಸ್ಟರ್ ಡೋಸ್ ನೀಡಬಹುದಾಗಿದೆ.
5) 2017 ರಲ್ಲಿ ‘ಲೆಪ್‍ವ್ಯಾಕ್ಸ್’ ಎಂಬ ಲಸಿಕೆಯನ್ನು 24 ಮಂದಿ ಸ್ವಯಂಸೇವಕರಲ್ಲಿ ಪ್ರಯೋಗಿಸಲಾಗಿದ್ದು, 2020 ರ ವರದಿಯಂತೆ ಉತ್ತಮ ಧನಾತ್ಮಕ ಫಲಿತಾಂಶ ಬಂದಿದೆ ಎಂದು ತಿಳಿದು ಬಂದಿದೆ.
ಕೊನೆಮಾತು:
ಶತ ಶತಮಾನಗಳಿಂದ ಕುಷ್ಟ ರೋಗ ಮನುಕುಲವನ್ನು ಬಾಧಿಸುತ್ತಿದೆ. ಗ್ರೀಕ್‍ನ ‘ಲೆಪ್ರ’ ಎಂಬ ಶಬ್ದದಿಂದ ಲೆಪ್ರಸಿ ಎಂಬ ಹೆಸರು ಬಂದಿದೆ. ನಾರ್ವೆ ದೇಶದ ಪಿನಿಷಿಯನ್ ಗೆರಾಲ್ಡ್ ಆರ್ಮರ್ ಹಾನ್ಸ್‍ನ್ ಎಂಬಾತ ಈ ರೋಗದ ಬಗ್ಗೆ ತೀವ್ರ ಸಂಶೋಧನೆ ಮಾಡಿದ ಕಾರಣದಿಂದ ಈ ರೋಗಕ್ಕೆ ‘ಹಾನ್ಸ್‍ನ್ ರೋಗ’ ಎಂದು ಕರೆಯಲಾಗುತ್ತಿದೆ. ವಿಶ್ವ ಲೆಪ್ರಸಿ ದಿನದ ಆಚರಣೆಯನ್ನು ವಿಶ್ವಸಂಸ್ಥೆ 1954 ರಲ್ಲಿ ಆರಂಬಿಸಿ, ರೋಗದ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸಿತ್ತು. ಲೆಪ್ರಸಿ ರೋಗ ಬಹಳ ಸುಲಭವಾಗಿ ಹರಡುವುದಿಲ್ಲ. ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತದೆ. ರೋಗ ಪ್ರಕಟಗೊಳ್ಳಲು ಬಹಳ ಸಮಯ ತಗಲುತ್ತದೆ. ನಮ್ಮ ದೇಹದ ರಕ್ಷಣಾ ವ್ಯವಸ್ಥೆ ಚೆನ್ನಾಗಿದ್ದಲ್ಲಿ ಈ ಬ್ಯಾಕ್ಟೀರಿಯಾ ಸಂಪರ್ಕಕ್ಕೆ ಬಂದರೂ ರೋಗ ಬರುವ ಸಾಧ್ಯತೆ ಕಡಿಮೆ. ಸೋಂಕಿತ ವ್ಯಕ್ತಿಗಳಲ್ಲಿ ಕಡಿಮೆ ಸೋಂಕಿತ ವ್ಯಕ್ತಿಗಳಲ್ಲಿ ಕೇವಲ 5 ಶೇಕಡಾ ಮಂದಿಯಲ್ಲಿ ಮಾತ್ರ ರೋಗ ಪ್ರಕಟವಾಗುತ್ತದೆ. ಉಳಿದ 75 ಶೇಕಡಾ ಮಂದಿ ತಮ್ಮ ರಕ್ಷಣಾ ವ್ಯವಸ್ಥೆಯ ಮುಖಾಂತರ ಬ್ಯಾಕ್ಟೀರಿಯಾವನ್ನು ನಿರ್ನಾಮ ಮಾಡುತ್ತಾರೆ. ಉಷ್ಣ ವಲಯ ರಾಷ್ಟ್ರಗಳಾದ ಭಾರತ, ಬ್ರಿಜಿಲ್, ಇಂಡೋನೇಷ್ಯ ಮತ್ತು ಆಫ್ರಿಕಾ ಹಾಗೂ ಏಷ್ಯಾ ಖಂಡದ ದೇಶಗಳಲ್ಲಿ ಮಾತ್ರ ಈ ರೋಗ ಹೆಚ್ಚು ಕಂಡು ಬರುತ್ತದೆ. 4ನೇ ಶತಮಾನದಲ್ಲಿ ಭಾರತಕ್ಕೆ ಬಂದ ಅಲೆಗ್ಸಾಂಡರ್ ದಿ ಗ್ರೇಟ್ ಕೂಡಾ ಈ ರೋಗಕ್ಕೆ ತುತ್ತಾಗಿದ್ದು ಮತ್ತು ಆತನೇ ಈ ರೋಗವನ್ನು ತನ್ನ ಜೊತೆ ಮಿಡ್ಲ್ ಈಸ್ಟ್ ರಾಷ್ಟ್ರಗಳಿಗೆ ಪಸರಿಸಿದ ಎಂದು ಚರಿತ್ರೆಯಲ್ಲಿ ದಾಖಲಾಗಿದೆ. ಚರಕ ಸುಶ್ರುತ ಸಂಹಿತೆಗಳಲ್ಲಿಯೂ ಈ ರೋಗದ ಬಗ್ಗೆ ಮಾಹಿತಿ ಇದೆ. ಒಟ್ಟಿನಲ್ಲಿ ಅತ್ಯಂತ ಪುರಾತನವಾದ ಈ ಖಾಯಿಲೆ ಈಗಲೂ ಕೂಡಾ ಮನಕುಲವನ್ನು ಕಾಡುತ್ತಿರುವುದು ಸೋಜಿಗದ ಸಂಗತಿ ಎಂದರೂ ತಪ್ಪಾಗಲಾರದು.
-ಡಾ|| ಮುರಲೀ ಮೋಹನ್ ಚೂಂತಾರು
Consultant Oral and Maxillofacial Surgeon
BDS, MDS,DNB, MBA,
MOSRCSEd(U.K), FPFA,
ಮೊ : 9845135787 drmuraleechoontharu@gmail.com
www.surakshadental.com
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ