ಜ. 20 ರಿಂದ 22ರವರೆಗೆ ಪುರಂದರ ದಾಸರ ಆರಾಧನಾ ಮಹೋತ್ಸವ

Upayuktha
0

ಶ್ರೀನಿವಾಸ ಉತ್ಸವ ಬಳಗದಿಂದ ಬೆಂಗಳೂರು ಬಸವನಗುಡಿ ಉತ್ತರಾದಿ ಮಠದ ಆವರಣದಲ್ಲಿ  ಗಾನ- ಜ್ಞಾನ ಯಜ್ಞ ; 

ಖ್ಯಾತ ಗಾಯಕ ವಿದ್ವಾನ್ ಆರ್.ಕೆ.ಪದ್ಮನಾಭ ರವರಿಗೆ ‘ಮಧ್ವ ಪುರಂದರ ಸಂಗೀತ ಭಕ್ತಿ ಸುಧಾಕರ’ 

ಸಾಧಕರಿಗೆ ‘ಹರಿದಾಸಾನುಗ್ರಹ ’ಪ್ರಶಸ್ತಿ ಪ್ರದಾನ 


ದಾಸ ಸಾಹಿತ್ಯ ಪ್ರಚಾರ ಮಾಧ್ಯಮ - ಶ್ರೀನಿವಾಸ ಉತ್ಸವ ಬಳಗದಿಂದ ಶ್ರೀ ಉತ್ತರಾದಿ ಮಠಾಧೀಶರಾದ ಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಅನುಗ್ರಹದೊಂದಿಗೆ ದಾಸಸಾಹಿತ್ಯದ ಪಿತಾಮಹ ಶ್ರೀಪುರಂದರದಾಸರ ಬೃಹತ್ ಏಕಶಿಲಾ ವಿಗ್ರಹವನ್ನು ಬೆಂಗಳೂರು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಎದುರಿನ ಶ್ರೀಮದ್ ಉತ್ತರಾದಿಮಠದ     ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದೀಗ ಪ್ರತಿಷ್ಠಾಪನೆಯ ಮೂರನೇ ವರ್ಷದ ಸಂಭ್ರಮದಲ್ಲಿ ಕಲರ್ಬುಗಿಯ ದಾಸ ಸೌರಭ, ಶ್ರೀಮದ್ವಾದಿರಾಜ ಆರಾಧನಾ ಟ್ರಸ್ಟ್ ; ನಾದವೈಭವ ಸಂಗೀತ ವಿದ್ಯಾಲಯ , ಶಿವಮೊಗ್ಗದ ಶ್ರೀ ಗುರುಗುಹ ಸಂಗೀತ ಮಹವಿದ್ಯಾಲಯ ಮತ್ತು ಅನುಗ್ರಹ ಸಂಗೀತ ಮಹಾವಿದ್ಯಾಲಯದ  ಸಹಯೋಗದಲ್ಲಿ ಇದೇ ಜನವರಿ 20ರಿಂದ 22ರವರೆಗೆ ಪುರಂದರದಾಸರ ಆರಾಧನಾ ಮಹೋತ್ಸವವನ್ನು ಗಾನ-ಜ್ಞಾನ ಯಜ್ಞದೊಂದಿಗೆ ಆಚರಿಸಲಾಗುವುದು .

ಜ.20ರಂದು ಬೆಳಿಗ್ಗೆ 9.00ರಿಂದ ವಿದ್ವಾನ್ ಆರ್.ಕೆ.ಪದ್ಮನಾಭ ಮತ್ತು ಶಿಷ್ಯವೃಂದದಿಂದ ಪುರಂದರದಾಸರ ಕೃತಿಗಳ ಗೋಷ್ಠಿ ಗಾಯನದೊಂದಿಗೆ ಪುರಂದರ ದಾಸರ ಬೃಹತ್ ಶಿಲಾ ವಿಗ್ರಹಕ್ಕೆ  ವಿಶೇಷ ಅಭಿಷೇಕದೊಂದಿಗೆ ಚಾಲನೆ.

ಸಂಜೆ 5.45ಕ್ಕೆ  ಪೂಜ್ಯ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸುವರು, ಖ್ಯಾತ ಗಾಯಕ ಗಾನಕಲಾಭೂಷಣ ವಿದ್ವಾನ್ ಆರ್.ಕೆ.ಪದ್ಮನಾಭ ರವರಿಗೆ ‘ಮಧ್ವ ಪುರಂದರ ಸಂಗೀತ ಭಕ್ತಿ ಸುಧಾಕರ’ ಎಂಬ ಬಿರುದಿನೊಂದಿಗೆ ಮಧ್ವ ಪ್ಮರಂದರ ಪ್ರಶಸ್ತಿ ಪ್ರದಾನದ ಸಮಾರಂಭದ ಮುಖ್ಯ ಅತಿಥಿಗಳಾಗಿ ಕೋಣನಕುಂಟೆ ಶ್ರೀನಿಧಿ ಶ್ರೀನಿವಾಸ ದೇವಸ್ಥಾನದ ಧರ್ಮದರ್ಶಿ, ಖ್ಯಾತ ಶಿಕ್ಷಣ ತಜ್ಞ ಡಾ. ಕೆ.ಎಸ್. ಸಮೀರ್ ಸಿಂಹ, ಜಯತೀರ್ಥ ವಿದ್ಯಾಪೀಠದ ಕುಲಪತಿ ಪಂ.ಗುತ್ತಲ್ ರಂಗಾಚಾರ್ , ಪ್ರಾಂಶುಪಾಲ ಡಾ.ಸತ್ಯಧ್ಯಾನಾಚಾರ್ ಕಟ್ಟಿ ಭಾಗವಹಿಸುವರು. ನಂತರ ಆಕಾಶವಾಣಿ ಹಿರಿಯ ಕಲಾವಿದೆ ಡಾ.ಆರ್.ಚಂದ್ರಿಕಾ ರವರಿಂದ ಗಾಯನ ಆಯೋಜಿಸಲಾಗಿದೆ. 


ಜ.21 ಶನಿವಾರ ಬೆಳಗ್ಗೆ 9.15 ಕೆ.ಆರ್.ಪುರಂ , ಹರಿದಾಸ ಸಂಘ ಅಧ್ಯಕ್ಷ ಡಾ.ಹ.ರ.ನಾಗರಾಜದಾಸರಿಂದ ಮತ್ತು ಆಧ್ಯಾತ್ಮ ಚಿಂತಕರು ಪಂ.ಪ್ರಸನ್ನಚಾರ್ಯ ಕಟ್ಟಿ ರವರಿಂದ ವಿಶೇಷ ಉಪನ್ಯಾಸಗಳು ನಂತರ  ಪುರಂದರದಾಸರ ವಿಗ್ರಹದ ವೈಭವದ ಮರೆವಣಿಗೆ ಸಂಜೆ ಶ್ರೀವ್ಯಾಸ ಮಧ್ವ ಸೇವಾ ಪ್ರತಿಷ್ಠಾನದ ನಿರ್ದೇಶಕ ಡಾ.ಪ್ರಭಂಜನಾಚಾರ್ಯರಿಂದ ಉಪನ್ಯಾಸ , ಉತ್ತರಾದಿ ಮಠದ ವಿದ್ಯಾಧೀಶಾಚಾರ್ಯ ಗುತ್ತಲ್ , ಡಾ.ಎ.ಬಿ. ಶಾಮಾಚಾರ್, ಗಾಯನ ಸಮಾಜದ ಅಧ್ಯಕ್ಷ ಡಾ.ಎಂ.ಆರ್.ವಿ.ಪ್ರಸಾದ್ , ಶ್ರೀವಾರಿ ಫೌಂಡೇಷನ್‍ನ ಎಸ್.ವೆಂಕಟೇಶಮೂರ್ತಿ ರವರಿಂದ ಸಾಧಕರಿಗೆÉ ‘ಹರಿದಾಸ ಅನುಗ್ರಹ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನಂತರ ವಿದ್ವಾನ್ ಅಪೂರ್ವಲಕ್ಷ್ಮಿ ಪಿ.ವಿ. ಸಂಗೀತ, ವಿದುಷಿ ಪವಿತ್ರ ಎಸ್.ಎ ರವರಿಂದ ಭರತನಾಟ್ಯ ಕಾರ್ಯಕ್ರಮವಿದೆ

ಜ.22 ಭಾನುವಾರ ಸಂಜೆ ಉಡುಪಿಯ ಪುತ್ತಿಗೆ ಮಠದ ಶ್ರೀವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿದೇರ್ಶಕ ಡಾ. ಬಿ.ಗೋಪಾಲಾಚರ್ಯ , ಶಿವಮೊಗ್ಗದ ವಿದ್ವಾನ್ ಶೃಂಗೇರಿ ನಾಗರಾಜ್ ಹಾಗು ಕನ್ನಡ ಮತ್ತು ಸಂಸ್ಕೃತಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ವಿಜಯಕುಮಾರ್ ತೋರ್ಗಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಸಮಾರಂಭದಲ್ಲಿ ಸಾಧಕರಿಗೆ ಹರಿದಾಸಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುವುದು. ನಂತರ  ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ, ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವಿದ್ವಾನ್ ಜೆ.ಎಸ್. ಶ್ರೀಕಂಠಭಟ್ ನೇತೃತ್ವದಲ್ಲಿ ಪುರಂದರದಾಸರ ನವರತ್ನಮಾಲಿಕ ಕೃತಿಗಳ ಗೋಷ್ಠಿ ಗಾಯನ ಇದೆ ಎಂದು ಕಾರ್ಯಕ್ರಮದ ಆಯೋಜಕರಾದ ಶ್ರೀನಿವಾಸ ಉತ್ಸವ ಬಳಗದ ಅಧ್ಯಕ್ಷ ಡಾ. ಟಿ. ವಾದಿರಾಜ್ ತಿಳಿಸಿರುತ್ತಾರೆ. 

ಪುರಂದರದಾಸ ಪ್ರತಿಮೆ ಸ್ಥಾಪನೆಯ ಹಿಂದೆ:

ಭಾರತೀಯ ಸನಾತನ ಪರಂಪರೆಗೆ ದ್ವೈತ ಸಿದ್ಧಾಂತದ ಕೊಡುಗೆ ಅಪಾರ ಮತ್ತು ಅನುಪಮ. ಜಗದ್ಗುರು ಮಧ್ವಾಚಾರ್ಯರ ತತ್ವ ಸಿದ್ಧಾಂತಗಳು ಜನಸಾಮಾನ್ಯರಿಗೆ ತಲುಪಿ ಅವರ ಬದುಕು ಸಾರ್ಥಕತೆಯನ್ನು ಪಡೆಯಲು ಅದನ್ನು ತಿಳಿಗನ್ನಡ ಭಾಷೆಯಲ್ಲಿ ಮನೆ ವiನೆಗೂ ತಲುಪಿಸಿದ ಕೀರ್ತಿ ಹರಿದಾಸರಿಗೆ ಸಲ್ಲುತ್ತದೆ. ಈ ಹರಿದಾಸ ಪರಂಪರೆಗೆ ಬುನಾದಿ ಹಾಕಿದವರು ಶ್ರೀಪುರಂದರದಾಸರು. ಮನುಕುಲದ ಉನ್ನತಿಗೆ ಅಗತ್ಯವಾದ ಆತ್ಮಶುದ್ಧಿ, ಆತ್ಮಜ್ಞಾನ, ಆತ್ಮವಿಶ್ವಾಸಕ್ಕಾಗಿ ತತ್ವಜ್ಞಾನದ ವಿಕೇಂದ್ರೀಕರಣವನ್ನು ಪದಗಳ ರೂಪದಲ್ಲಿ ಆವಿಷ್ಕಾರಗೊಳಿಸಿದ ಮಹಾಸಂತ ಪುರಂದರದಾಸರು. 


ಶ್ರೀ ವ್ಯಾಸರಾಜ ಯತಿಪುಂಗವರಿಂದ ದೀಕ್ಷೆ ಸ್ವೀಕರಿಸಿ, ದಾಸಕೂಟವನ್ನು ಸಂಘಟಿಸಿ, ಹರಿಪಾರಮ್ಯದ, ಘನಗರಿಮೆಯನ್ನು ತಮ್ಮ ಕೃತಿಗಳ ಮೂಲಕ ಜಗದಗಲ ನಿರಂತರವಾಗಿ ಪರಸರಿಸಿದ ವಿಭೂತಿ ಪುರುಷರು ಅವರು. ಕನ್ನಡ ಸಂಸ್ಕøತಿ-ಸಾಹಿತ್ಯ-ಕಲೆಗಳ ಉಳಿವು ಹಾಗೂ ಬೆಳವಣಿಗೆಗೆ ಕಾರಣೀಭೂತರಾದ ಶ್ರೇಷ್ಠ ದಾಸವರೇಣ್ಯರು. ಸಾರ್ವಕಾಲಿಕ- ಸಾರ್ವಜನಿಕವಾದ ಅವರ ಸಾಹಿತ್ಯ ಭಂಡಾರ ಜಗತ್ತಿಗೆ ದೊರೆತ ಅಪೂರ್ವನಿಧಿ. ಇವರ ಸ್ಮರಣೆ ನಮ್ಮ ಜೀವನವನ್ನು ಪಾವನನ್ನಾಗಿಸಿದರೆ, ಅವರ ಕೃತಿಗಳ ಚಿಂತನ-ಮಂಥನ ನಮ್ಮನ್ನು ಧರ್ಮಭೀರುಗಳನ್ನಾಗಿಸಿ, ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ. ಧಾರ್ಮಿಕರನ್ನಾಗಿಸಿ, ಅದರಿಂದಲೇ ಅವರ ಗುರುಗಳಾದ ವ್ಯಾಸತೀರ್ಥರು `ದಾಸರೆಂದರೆ ಪುರಂದರದಾಸರಯ್ಯ’ ಎಂದು ಹಾಡಿ ಹೊಗಳಿದ್ದಾರೆ. 


2012ರಲ್ಲಿ ಜನ್ಮತಳೆದ ಶ್ರೀನಿವಾಸ ಉತ್ಸವ ಬಳಗ ಅಂದಿನಿಂದ ಇಂದಿನವರೆಗೆ ಹರಿದಾಸ ಸಾಹಿತ್ಯ ಪ್ರಚಾರ ಕೈಂಕರ್ಯವನ್ನು ಹಾಗೂ ಅದಕ್ಕೆ ಪೂರಕವಾದ ವಿವಿಧ ಚಟುವಟಿಕೆಗಳನ್ನು ಅಭಿಮಾನಿಗಳ ಹಾಗೂ ಹಿತೈಷಿಗಳ ಕಾಯಾ, ವಾಚಾ, ಮನಸಾ ಸಹಕಾರದಿಂದ ಬಹು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. ಪ್ರತೀ ವರ್ಷ ಪುರಂದರ ದಾಸರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ನಿರಂತರವಾಗಿ ಸಂಗೀತ, ಭಜನೆ, ಉಪನ್ಯಾಸ, ಗಮಕ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ನಾಡಿನ ಬಹುತೇಕ ಎಲ್ಲಾ ಖ್ಯಾತ ಸಂಗೀತ ವಿದ್ವಾಂಸರು, ಕಲಾವಿದರು, ಭಜನಾ ಮಂಡಳಿಗಳು `ಸಂಗೀತ ಪಿತಾಮಹ’ ಪುರಂದರದಾಸರಿಗೆ ಸಂಗೀತ ಸೇವೆ ಸಮರ್ಪಣೆ ಮಾಡಿ ಧನ್ಯರಾಗುತ್ತಾರೆ. ಅಪಾರ ಜನಮನ್ನಣೆ ದೊರೆತಿರುವ ಈ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪುಲಕಿತರಾಗಿದ್ದಾರೆ. 


ಅಖಿಲ ಸಂಪತ್ತನ್ನೂ ಕ್ಷಣಮಾತ್ರದಲ್ಲಿ ತೊರೆದು ಕಾಲಿಗೆ ಗೆಜ್ಜೆಕಟ್ಟಿ ತಾಳ ತಂಬೂರಿ ಹಿಡಿದು, ಬೀದಿಬೀದಿಗಳಲ್ಲಿ ಹಾಡುತ್ತಾ ನಡೆದು ಲೋಕದ ಡೊಂಕನ್ನು ತಿದ್ದುತ್ತ ಜನಸಾಮಾನ್ಯರ ಬಾಳಿಗೊಂದು ನಂಬಿಕೆ ತಂದ ಪುರಂದರದಾಸರ ಶಿಲಾಪ್ರತಿಮಾ ಪ್ರತಿಷ್ಠಾಪನೆಯ ಕಲ್ಪನೆಯೇ ಒಂದು ರೋಮಾಂಚನ ಸಂಗತಿ. ಇದು ಸಾಕಾರವಾಗಿ ಕನ್ನಡಿಗರ ಮನದಲ್ಲಿ ಧನ್ಯತೆಯ ಭಾವ ಆವರಿಸಿದೆ. ಭಕ್ತ ಮಹಾಶಯರಿಂದ ಬಂದ ಈ ಅಭೂತಪೂರ್ವ ಬೆಂಬಲದಿಂದ ನಾಡಿನ ಸಂಗೀತ, ಸಾಹಿತ್ಯ, ಸಾಂಸ್ಕøತಿಕ ಪರಂಪರೆಯ ಪ್ರತೀಕವಾಗಿ `ಶ್ರೀ ಪುರಂದರದಾಸರ ಪ್ರತಿಮೆಯ ಸ್ಥಾಪಿಸುವ ಮಹತ್ಕಾರ್ಯವಾಗಿದೆ ಎಂದು ಇದರ ರೂವಾರಿ ಡಾ.ವಾದಿರಾಜ ಟಿ ವಿವರಿಸುತ್ತಾರೆ. ಕಲಾರಸಿಕರಾದ ಶ್ರೋತೃಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುರಂದರದಾಸರಿಗೆ  ನಮಿಸೋಣ ಬನ್ನಿ.


ದ್ವಿಸಪ್ತತಿ ಸರದಾರ, ಗಾನಕಲಾಭೂಷಣ, ಸಂಗೀತವಿದ್ಯಾನಿಧಿ ವಿದ್ವಾನ್ ಆರ್ ಕೆ ಪದ್ಮನಾಭ:

ಹಾಸನ ಜಿಲ್ಲೆಯ ಕಾವೇರೀ ನದಿಯ ದಡದಲ್ಲಿರುವ ರುದ್ರಪಟ್ಟಣಂ ಎಂಬುವ ಪುಟ್ಟ ಗ್ರಾಮದಲ್ಲಿ ದಿನಾಂಕ 26.09.1949 ರಲ್ಲಿ ಶ್ರೀಮತಿ ಶಾರದಾ ಮತ್ತು ಶ್ರೀಕೃಷ್ಣ ದೀಕ್ಷಿತ್ ದಂಪತಿಗಳಿಗೆ ಸುಪುತ್ರನಾಗಿ ಜನ್ಮ, ನಿಸರ್ಗದತ್ತ ಗ್ರಾಮೀಣ ಪರಿಸರದ ಪ್ರಭಾವದಿಂದ ಗಂಧರ್ವವಿದ್ಯೆಯ ಮಕರಂದಕ್ಕೆ ಆಕರ್ಷಿತರಾಗಿ . ಮೈಸೂರಿನಲ್ಲಿ ವಿದ್ವಾನ್ ನಂಜುಂಡಸ್ವಾಮಿ ಹಾಗೂ ವಿದ್ವಾನ್ ಸೀತಾರಾಮಶಾಸ್ತ್ರಿ ಇವರಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದು ಬೆಂಗಳೂರಿನ ವಿಜಯಾ ಸಂಗೀತ ವಿದ್ಯಾಲಯದಲ್ಲಿ ಪ್ರೋ. ಹೆಚ್ ವಿ ಕೃಷ್ಣಮೂರ್ತಿ ಇವರ ಮಾರ್ಗದರ್ಶನದಲ್ಲಿ  ಉನ್ನತ ಶಿಕ್ಷಣವನ್ನು ಪೂರೈಸಿ  ಅವಿರತ ಪರಿಶ್ರಮ - ಶ್ರದ್ಧೆ ಮತ್ತು ದೈವಬಲದಿಂದ ಇಂದು ಸಂಗೀತಕ್ಷೇತ್ರದಲ್ಲಿ  ಶ್ರೇಷ್ಠ ವಿದ್ವಾಂಸರಾಗಿ ಅಂತಾರಾಷ್ಟ್ರಮಟ್ಟದಲ್ಲಿ ಕಂಕೊಳಿಸುತ್ತಿದ್ದಾರೆ.

ಮಹಾ ಮಹಿಮರಾದ ಶ್ರೀವಾದಿರಾಜ ಗುರುಸಾರ್ವಭೌಮರ ಪರಮಾನುಗ್ರಹದ ಬಲದಿಂದ ದಾಸಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತಿದ್ದಾರೆ. ಹರಿದಾಸರ ಅದರಲ್ಲೂ ಶ್ರೀವಾದಿರಾಜರ ನೂರಾರು ಕೃತಿಗಳಿಗೆ ರಾಗಸಂಯೋಜನೆಯನ್ನು ಮಾಡಿ ಮನೆ ಮನೆಗಳಿಗೆ ಉಚಿತವಾಗಿ ಮುಟ್ಟಿಸಿದ ಕೀರ್ತಿ ಶ್ರೀಯುತರದು.  ಅಪಾರ ಪ್ರತಿಭಾಸಂಪನ್ನರಾದ ಆರ್.ಕೆ.ಪಿ ರಂಗಭೂಮಿಯಲ್ಲೂ ವಿಶಿಷ್ಟ ಸೇವೆಯನ್ನು ಸಲ್ಲಿಸಿ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿ. ಶಾಸ್ತ್ರೀಯ ಸಂಗೀತದಲ್ಲೇ ಹೊಸ ಮೈಲಿಗಲ್ಲಾದ ಇವರ  ಕಲ್ಪನೆಯ ಗೋಷ್ಠಿಗಾಯನ ಕಾರ್ಯಕ್ರಮವು ಸಂಗೀತ ದಿಗ್ಗಜರಿಂದ ಪ್ರಶಂಸಿಸಲ್ಪಟ್ಟಿದೆ. 

ಲಕ್ಷ್ಮೀಶೋಭಾನೆ, ಪುರಂದರದಾಸರ ನವರತ್ನಕೃತಿಗಳು, ಸಂತ ತ್ಯಾಗರಾಜರ ಪಂಚರತ್ನಕೃತಿಗಳು, ಇವೇ ಮೊದಲಾದ ಕೃತಿಗಳಿಗೆ ರಾಗಸಂಯೋಜನೆಯನ್ನು ಮಾಡಿ ಸಾವಿರಾರು ಕಂಠಗಳಿಂದ ಏಕಕಾಲದಲ್ಲಿ ಹಾಡಿಸಿ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಹೊಸ ಅಲೆಯನ್ನು ನಿರ್ಮಿಸಿ ಅಗ್ರಪಂಕ್ತಿ ಗಾಯಕರು. ಸಂಗೀತ ವಿದ್ಯಾರ್ಥಿಗಳೊಂದಿಗೆ ಭಾರತದ ಪವಿತ್ರಕ್ಷೇತ್ರಗಳಿಗೆ ಇವರು ಆಯೋಜಿಸುತ್ತಿರುವ “ಗಾನಯಾತ್ರೆ” ಅತ್ಯಂತ ಅನುಕರಣೀಯವಾಗಿ ಗಾನಕಲಾಭೂಷಣ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳನ್ನು ನಿಮ್ಮದಾಗಿಸಿಕೊಂಡು  ಪ್ರಬುದ್ಧ ಗಾಯಕರಾಗಿ, ನಾಯಕರಾಗಿ, ಸಂಘಟಕರಾಗಿ, ಪ್ರಕಾಶಕರಾಗಿ, ಚಿಂತಕರಾಗಿ, ಸಮಾಜಸುಧಾರಕರಾಗಿ ಶ್ರೀಯುತರು ಸಲ್ಲಿಸುತ್ತಿರುವ ಸೇವೆಯು ಅನುಪಮವಾದದ್ದು.

ಶ್ರೀಯುತರು ಸಲ್ಲಿಸುತ್ತಿರುವ ಧಾರ್ಮಿಕ-ಸಾಮಾಜಿಕ-ಶೈಕ್ಷಣಿಕ ಸೇವೆಯನ್ನು ಗುರುತಿಸಿದ ಬೆಂಗಳೂರು ಮಹಾನಗರ ಪಾಲಿಕೆ ಚಿಕ್ಕಲಸಂದ್ರದಲ್ಲಿ “ವಿದ್ವಾನ್ ಆರ್ ಕೆ ಪದ್ಮನಾಭ ರಸ್ತೆ” ಎಂದು ಘೋಷಿಸಿ ಗೌರವಿಸಿದ್ದಾರೆ. ಅನೇಕ ಪೀಠಾಧಿಪತಿಗಳ ಪರಮಾನುಗ್ರಹವನ್ನು ಪಡೆದು ಸಂಗೀತಕ್ಕೆಂದೇ ಅತ್ಯಂತ ಭವ್ಯವಾದ ಬಹುವೆಚ್ಚದ “ಶ್ರೀಮದ್ವಾದಿರಾಜ ಕಲಾಭವನ, ಶ್ರೀಭೂತರಾಜ ಶಕ್ತಮಂಟಪ, ಶ್ರೀವಾಸುದೇವ ಗಾನಮಂದಿರ” ನಿರ್ಮಿಸಿದ್ದಾರೆ. ಅದ್ವಿತೀಯವಾದ ಸಾಧನೆಯನ್ನು ಗೌರವಪೂರ್ವಕ ಪ್ರಶಂಸಿಸುತ್ತ ದಾಸಶ್ರೇಷ್ಠರಾದ ಶ್ರೀಪುರಂದರದಾಸರ ಆರಾಧನಾ ಮಹೋತ್ಸವದ ಸುಸಂದರ್ಭದಲ್ಲಿ ‘ಮಧ್ವ ಪುರಂದರ ಸಂಗೀತ ಭಕ್ತಿ ಸುಧಾಕರ’ ಎಂಬ ಬಿರುದಿನೊಂದಿಗೆ ಮಧ್ವ ಪುರಂದರ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುವುದು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top