ಹೆಚ್ಚಾಗಿ ದ್ವಿಚಕ್ರ ವಾಹನದಲ್ಲೇ ಓಡಾಡುವ ನನಗೆ ಬಸ್ಸಿನಲ್ಲಿ ಪ್ರಯಾಣಿಸುವುದೆಂದರೆ ಒಂದು ರೀತಿಯ ಇರುಸು ಮುರುಸು. ಮೊನ್ನೆಯ ದಿನ ಬೇರೆ ಕೆಲಸವಿದ್ದ ಕಾರಣ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ.ಆ ದಿನ ಬೆಳಗ್ಗೆ ಮಂಗಳೂರಿಗೆ ಬಸ್ಸಿನಲ್ಲಿ ಹೋಗಿ ನಂತರ ಅಲ್ಲಿಂದ ಕಾಲೇಜಿನ ಬಸ್ಸಿನಲ್ಲಿ ಕಾಲೇಜಿಗೆ ಬರಬೇಕಾಯಿತು.
ಕೆಲಸವೆಲ್ಲಾ ಮುಗಿಯುವಾಗ ಸಂಜೆಯಾಗಿತ್ತು.ಯಾವಾಗಲೂ ಮೂಡುಬಿದ್ರೆಯಿಂದ ಕಿನ್ನಿಗೋಳಿ ಮಾರ್ಗವಾಗಿ ಸುರತ್ಕಲ್ ಗೆ ಹೋಗುವ ನನಗೆ ಆ ದಿನ ಬೇರೆ ಕೆಲಸವಿದ್ದ ಕಾರಣ ಮೂಡುಬಿದರೆಯಿಂದ ಕಾರ್ಕಳಕ್ಕೆ ಬಸ್ಸಿನಲ್ಲಿ ಹೋಗಿ ಅಲ್ಲಿ ಒಂದು ಕೆಲಸ ಮುಗಿಸಿ ತದನಂತರ ಕಾರ್ಕಳದಿಂದ ಸುರತ್ಕಲ್ ಗೆ ಪುನಃ ಬೇರೆ ಬಸ್ಸು ಹಿಡಿದು ಪ್ರಯಾಣಿಸಬೇಕಾದ ಅನಿವಾರ್ಯತೆ ಬಂದಿತು.
ಮೂಡುಬಿದರೆಯ ವಿದ್ಯಾಗಿರಿಯಲ್ಲಿ ಕಾರ್ಕಳಕ್ಕೆ ಹೋಗುವ ಬಸ್ಸು ಹತ್ತಿದರೆ ನನಗೆ ಇಪ್ಪತ್ತು ನಿಮಿಷದವರೆಗೆ ಕುಳಿತುಕೊಳ್ಳಲು ಅವಕಾಶ ಸಿಗಲಿಲ್ಲ. ಬಸು ಹತ್ತುವಾಗ ಜನವೋ ಜನ. ಆಗ ನಿರ್ವಾಹಕ ಒಮ್ಮೆ ಮುಂದೆ ಹೋಗಿ ಎನ್ನುತ್ತಾನೆ, ಸ್ವಲ್ಪ ಹೊತ್ತಿನ ನಂತರ ಮತ್ತೆ ಹಿಂದೆ ಹೋಗಿ ಎನ್ನುತ್ತಾನೆ. ಇದೆಲ್ಲದರ ನಡುವೆ ಮಧ್ಯದಲ್ಲಿ ನಿಂತವರ ಪಾಡು ಹೇಳತೀರದು. ನನಗೆ ಎಲ್ಲಿ ಇಳಿಯಬೇಕೆಂಬುದರ ಬಗೆಗೆ ಹೆಚ್ಚು ಅರಿವು ಇರದ ಕಾರಣ ನಿರ್ವಾಹಕನ ಬಳಿ ಆಗಾಗ ಎಲ್ಲಿ ಇಳಿಯಬೇಕು, ಎಷ್ಟು ಹೊತ್ತಿಗೆ ಆ ಜಾಗ ತಲುಪಬಹುದು ಎಂದೆಲ್ಲ ಕೇಳುತ್ತಲೇ ಇದ್ದೆ.
ಅವರವರು ಇಳಿಯುವ ಸ್ಥಳ ಬಂದಾಗ ಇಳಿಯುತ್ತಿದ್ದ ಇತರ ಪ್ರಯಾಣಿಕರು ಕುಳಿತಿದ್ದ ಆಸನವನ್ನು ನಾನು ಕುಳಿತುಕೊಳ್ಳದೆ ಒಮ್ಮೆ ಒಬ್ಬ ಗರ್ಭಿಣಿಗೆ ಮತ್ತೊಮ್ಮೆ ಒಬ್ಬರು ವಯಸ್ಸಾದವರಿಗೆ ಹೀಗೇ ಕೊಟ್ಟು ನಂತರ ಕಡೆಗೆ ನಾನೇ ಕುಳಿತುಕೊಳ್ಳುವ ಎಂದು ಕೂರುವಷ್ಟರಲ್ಲಿ ಅದಾಗಲೇ ಇಳಿಯುವ ಸ್ಥಳ ಬಂದಾಗಿತ್ತು. ಹೋದ ಕೆಲಸ ಮುಗಿಸಿ ಸುರತ್ಕಲ್ ಗೆ ಬರುವ ಬಸ್ಸಿಗೆ ಸುಮಾರು 15 ನಿಮಿಷಗಳ ಕಾಲ ಕಾದು ನಂತರ ಹತ್ತಿದಾಗ ಸಮಯ 6:30 ಗಂಟೆ.
ಬಸ್ಸು ಹತ್ತಿದ ನನಗೆ ತಕ್ಷಣವೇ ಕುಳಿತುಕೊಳ್ಳಲು ಆಸನ ಸಿಕ್ಕಿತು. ನಿಟ್ಟೆಯಲ್ಲಿ ಬಸ್ಸು ಹತ್ತಿದ ಒಬ್ಬ ವ್ಯಕ್ತಿ ಪರಿಚಿತರಂತೆ ಕಂಡರು. ಮಾತನಾಡಿಸುವುದೋ ಬೇಡವೋ ಮಾತನಾಡಿದರೆ ಪರಿಚಯ ಸಿಗಬಹುದೋ, ಅಥವಾ ನನಗೆ ಪರಿಚಿತರಿರುವವರಂತೆಯೇ ಇರುವ ಇವರು ಬೇರಾರೋ ಇರಬಹುದೋ, ಮಾತನಾಡಿ ಪರಿಚಯ ಸಿಗದಿದ್ದರೆ ಏನೆಂದುಕೊಳ್ಳಬಹುದೋ, ಎಂಬೆಲ್ಲಾ ಯೋಚನೆಗಳು ಮನಸ್ಸಿಗೆ ಬರುತ್ತಿತ್ತು. ಇವೆಲ್ಲ ಯೋಚನೆಗಳು ಮನಸ್ಸಿನಲ್ಲಿ ಹಾದು ಹೋಗುತ್ತಿರಬೇಕಾದರೆ ಅದಾಗಲೇ ಪಡುಬಿದ್ರೆ ಬಂದಾಗಿತ್ತು.
ಕೇಳುವುದೋ ಬೇಡವೋ ಎಂದು ಯೋಚಿಸುತ್ತಿರಬೇಕಾದರೆ ಅವರೇ ನೋಡಿ ಮುಗುಳ್ನಕ್ಕರು. ಇನ್ನೇನು ಮಾತನಾಡಲು ಬಾಯ್ತೆರೆಯಬೇಕು ಎನ್ನುವಷ್ಟರಲ್ಲಿ ಹಿಂದಿನ ಬಾಗಿಲಿನೆಡೆಗೆ ಸಾಗಿದ ಅವರು ನಂತರ ಬಸ್ಸು ಸುರತ್ಕಲ್ ಸಮೀಪಿಸುತ್ತಿರಬೇಕಾದರೆ ಪುನಃ ಮುಂದಿನ ಬಾಗಿಲಿನೆಡೆಗೆ ಬಂದ ಅವರಲ್ಲಿ ಕೇಳಿಯೇ ಬಿಟ್ಟೆ. "ನಿಮ್ಮನ್ನು ಎಲ್ಲಿಯೋ ನೋಡಿದ ನೆನಪು, ನೀವು ಸುರತ್ಕಲ್ ನವರೇ?"ಎಂದು. ಆಗ "ಹೌದು" ಎಂದು ಅವರು ವಾಸಿಸುವ ಸ್ಥಳದ ಕುರಿತು ಹೇಳಿದಾಗ "ಇಲ್ಲ ಗೊತ್ತಿಲ್ಲ" ಎಂದು ಹೇಳುವ ವೇಳೆಗೆ ಬಸ್ಸು ನಿಧಾನವಾಗಲು ಪ್ರಾರಂಭವಾಗಿ ನಿಂತೇ ಬಿಟ್ಟಿತು.
ನಂತರ ಇಳಿದು ನಾನು ಒಂದು ದಿಕ್ಕಿಗೆ ಅವರು ವಿರುದ್ಧ ದಿಕ್ಕಿಗೆ ಹೋದೆವು.ಏನೇ ಆಗಲಿ ಈ ಒಂದು ದಿನದ ಪ್ರಯಾಣವಂತೂ ಅವಿಸ್ಮರಣೀಯವಾಗಿತ್ತು.
-ವಂದನಾ ಭಟ್ ಸುರತ್ಕಲ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ