ಬದಿಯಡ್ಕ: ಶಿಷ್ಯರನ್ನು ಸಮರ್ಥರನ್ನಾಗಿಸುವ ಸಾಮರ್ಥ್ಯವಿರುವ ವ್ಯಕ್ತಿಗೆ ಮಾತ್ರ ಆಚಾರ್ಯ ಸ್ಥಾನ ಲಭಿಸಲು ಸಾಧ್ಯವಿದೆ. ಅನೇಕ ಕನಸುಗಳನ್ನು ಹೊತ್ತುಕೊಂಡು ವೇದಪಾಠ ಶಾಲೆಯನ್ನು ನಿರಂತರ ಮುನ್ನಡೆಸಬೇಕೆಂಬ ಮನೋಭಾವವನ್ನು ಹೊಂದಿದ, ಜೀವನವನ್ನು ವೇದಕ್ಕಾಗಿ ಮೀಸಲಿಟ್ಟ ವಿಶ್ವೇಶ್ವರ ಭಟ್ಟರ ಕಠಿಣ ಪರಿಶ್ರಮ ಇಂದು ಅವರನ್ನು ಆ ಸ್ಥಾನದಲ್ಲಿ ನಿಲ್ಲಿಸಿದೆ ಎಂದು ಶ್ರೌತಿ ಯಜ್ಞಪತಿ ಭಟ್ ಗೋಕರ್ಣ ನುಡಿದರು.
ವೇದಬ್ರಹ್ಮ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟರ ಶಿಷ್ಯವೃಂದದ ವತಿಯಿಂದ ಸೋಮವಾರ ನಡೆದ ನೀರ್ಚಾಲು ಶ್ರೀ ಶ್ರೀ ಶ್ರೀ
ಚಂದ್ರಶೇಖರೇಂದ್ರ ಸರಸ್ವತಿ ವೇದಪಾಠ ಶಾಲೆಯ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ವೇದಾನುಷ್ಠಾನವನ್ನು ಮಾಡಿ ವೇದದಲ್ಲಿ ಹೇಳಲ್ಪಟ್ಟ ಕಲ್ಪೋಕ್ತ ಫಲಗಳನ್ನು ನಾವು ಪಡೆಯಬೇಕು. ಅವಿಚ್ಛಿನ್ನವಾಗಿ ಈ ವೇದಪಾಠ ಶಾಲೆ ಮುನ್ನಡೆಯಬೇಕೆಂಬ ವಿಶ್ವೇಶ್ವರ ಭಟ್ಟರ ಸಂಕಲ್ಪ ಸಾಕಾರಗೊಳ್ಳಲಿ ಎಂದರು.
ವೇದಬ್ರಹ್ಮ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ ಮಾತನಾಡಿ, ಋಷಿಗೋತ್ರ ಪರಂಪರೆಗೆ ನಮ್ಮದಾಗಿದೆ. ನಮ್ಮೂರಿನಲ್ಲಿ ಸಂಪೂರ್ಣ ಅಧ್ಯಯನ ಕೇಂದ್ರ ಇರಬೇಕು ಎಂಬ ಮಹಾಸಂಕಲ್ಪವು ಸಾಕಾರಗೊಳ್ಳುವತ್ತ ಶಿಷ್ಯವೃಂದದವರ ಶ್ರಮ ಮುಂದುವರಿಯುತ್ತಿರುವುದು ಸಂತಸದ ವಿಚಾರವಾಗಿದೆ. ಮಂತ್ರವೈಭವ ಇಲ್ಲಿ ಇಂದು ನಡೆದಿದೆ, ಮುಂದೆಯೂ ನಡೆಯುತ್ತಿರಲು ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದು ಶಿಷ್ಯವೃಂದವನ್ನು ಆಶೀರ್ವದಿಸಿದರು.
ವೇದಪಾಠಶಾಲೆಗೆ ನಿರಂತರ ಸಹಕಾರವನ್ನು ನೀಡುತ್ತಿರುವ ಗೀತಾ ಮಾಮಿ ಹಾಗೂ ರಾಮಸ್ವಾಮಿ ದಂಪತಿಗಳು, ವೇದಬ್ರಹ್ಮ ಜಯರಾಮ ಭಟ್ ಬೆಂಗಳೂರು ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಬೆಳಗ್ಗೆ ಶತರುದ್ರ ಜಪ ಹೋಮ ನಡೆಯಿತು. ವೇದಮೂರ್ತಿ ಅಮೈ ಅನಂತಕೃಷ್ಣ ಭಟ್ ನಿರೂಪಿಸಿದರು. ವೇದಮೂರ್ತಿ ಶಂಭಟ್ಟ ಚಾವಡಿಬಾಗಿಲು, ಶಿಷ್ಯವೃಂದ ಹಾಗೂ ವೈದಿಕರು ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ