ಮಂಗಳೂರು: ಬಿಲ್ಲವ, ಈಡಿಗ, ನಾಮಧಾರಿ ಸಮುದಾಯದ ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರಕಾರವನ್ನು ಒತ್ತಾಯಿಸಿ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೂಜ್ಯರಾದ ಡಾ. ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಲಿರುವ 41 ದಿನಗಳ ಐತಿಹಾಸಿಕ ಪಾದಯಾತ್ರೆ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಜ.6 ರಂದು ಆರಂಭವಾಗಲಿದೆ.
658 ಕಿಮೀ ಹಾದಿಯ ಪಾದಯಾತ್ರೆಗೆ ಈಡಿಗ ಬಿಲ್ಲವ ಸಮುದಾಯದ ಮಹಾನ್ ನಾಯಕ, ಮಾಜಿ ಕೇಂದ್ರ ಸಚಿವರಾದ ಬಿ. ಜನಾರ್ದನ ಪೂಜಾರಿ, ತೆಲಂಗಾಣ ಸರಕಾರದ ಅಬಕಾರಿ ಹಾಗು ಪ್ರವಾಸೋದ್ಯಮ ಖಾತೆ ಸಚಿವ ಶ್ರೀನಿವಾಸ ಗೌಡ ಚಾಲನೆ ನೀಡಲಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಂಧ್ರಪ್ರದೇಶ ಸರಕರಾದ ಕೃಷಿಸಚಿವರಾದ ಜೋಗಿ ರಮೇಶ್, ಆಂಧ್ರಪ್ರದೇಶ ರಾಜಮುಂಡ್ರಿ ಸಂಸದ ಮರ್ಗಣಿ ಭರತ್, ಬಹುಭಾಷಾ ಚಿತ್ರನಟ ಸುಮನ್ ತಲ್ವಾರ್, ಈಡಿಗ ಮುಖಂಡರು, ಮಾಜಿ ವಿಧಾನಪರಿಷತ್ ಸದಸ್ಯರಾದ ಎಚ್. ಆರ್. ಶ್ರೀನಾಥ್, ಬಿಜೆಪಿ ಮುಖಂಡ ಗುಲ್ಬರ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ವಿಧಾನಪರಿಷತ್ ಸದಸ್ಯ ಪ್ರತಿಪಕ್ಷ ಮುಖಂಡ ಬಿ.ಕೆ.ಹರಿಪ್ರಸಾದ್, ಮಹಿಳಾ ನಾಯಕಿ, ಕಳಚೂರಿ ಸಮಾಜ ಒಕ್ಕೂಟದ ಅಧ್ಯಕ್ಷೆ ಅರ್ಚನಾ ಜೈಸ್ವಾಲ್, ಸಿಗಂದೂರು ಶ್ರೀಚೌಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಾಮಪ್ಪಜ್ಜ, ಸಮಾಜದ ಮುಖಂಡರು ಕರ್ನಾಟಕ ರಾಜ್ಯದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ.ಸುನೀಲ್ ಕುಮಾರ್, ಮಾಜಿ ಶಾಸಕರಾದ ವಸಂತ ಬಂಗೇರ , ವಿನಯ ಕುಮಾರ್ ಸೊರಕೆ, ಗೋಪಾಲ ಪೂಜಾರಿ ಬೈಂದೂರು, ಶಾಸಕರಾದ ಕೆ. ಹರೀಶ್ ಕುಮಾರ್, ಉಮಾನಾಥ ಕೋಟ್ಯಾನ್, ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಡಿ.ಸುವರ್ಣ, ಮೂಡಾ ಅಧ್ಯಕ್ಷ ರವಿಶಂಕರ ಮಿಜಾರ್, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್. ಸಾಯಿರಾಮ್, ಯುವವಾಹಿನಿ ಅಧ್ಯಕ್ಷ ರಾಜೇಶ್ ಬಂಟ್ವಾಳ್, ಮೂರ್ತೆದಾರರ ಸೇವಾ ಸಂಘ ಅಧ್ಯಕ್ಷ ಸಂಜೀವ ಪೂಜಾರಿ ಮುಂತಾದವರು ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಶ್ರೀ ವಿಖ್ಯಾತನಂದ ಸ್ವಾಮೀಜಿ, ಸೊಲೂರು ಮಠ, ಬೆಂಗಳೂರು, ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಬಂಜಾರ ಗುರುಪೀಠ ಚಿತ್ರದುರ್ಗ, ಶ್ರೀಬಸವಮೂರ್ತಿ ಕುಂಬಾರ ಗುಂಡಯ್ಯ ಮಹಾ ಸ್ವಾಮೀಜಿ,ಚಿತ್ರದುರ್ಗ, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರ, ಮಾಣಿಲ ವಿಟ್ಲ, ಶ್ರೀಮಹಾಬಲೇಶ್ವರ ಸ್ವಾಮೀಜಿ, ಶ್ರೀ ಕ್ಷೇತ್ರ ಕಣಿಯೂರು, ಶ್ರೀಕೃಷ್ಣ ಗುರೂಜಿ, ಕುಕ್ಕಾಜೆ ಶ್ರೀಕಾಳಿಕಾಂಬ ಆಂಜನೇಯ ಕ್ಷೇತ್ರ, ಮಾಣಿಲ, ಶ್ರೀಸಂಗಮನಾಂದ ಸ್ವಾಮೀಜಿ, ಪಿಂಜಾರ ಗುರುಪೀಠ, ಶ್ರೀನಿಶ್ಚಲ ನಿರಂಜನ ದೇಸಿಕೇಂದ್ರ ಮಹಾಸ್ವಾಮೀ, ಸರ್ವ ಧರ್ಮಗುರುಪೀಠ ದೊಡ್ಡಬಳ್ಳಾಪುರ ಇವರು ಪಾಲ್ಗೊಳ್ಳಲಿದ್ದಾರೆ.
ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪೂಜ್ಯರಾದ ಡಾ. ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಐತಿಹಾಸಿಕ ಪಾದಯಾತ್ರೆ ನಡೆಯಲಿದ್ದು, ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ರಚನೆ ಮಾಡಿ 5೦೦ ಕೋಟಿ ರೂ ಅನುದಾನ ಮಂಜೂರು ಮಾಡಬೇಕು, ಕುಲಕಸುಬು ಸೇಂದಿ ನಿಷೇಧ ರದ್ದುಪಡಿಸಬೇಕು ಅಥವ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು, ಈಡಿಗ ಸಮುದಾಯದ ಧರ್ಮದರ್ಶಿ ಶ್ರೀ ರಾಮಪ್ಪಜ್ಜ ಆಡಳಿತದ ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದಲ್ಲಿ ಸರಕಾರದ ಹಸ್ತಕ್ಷೇಪ ನಿಲ್ಲಿಸಬೇಕು, ಸಾರಾಯಿ ಹಾಗೂ ಸೇಂದಿ ನಿಷೇಧದಿಂದ ನಿರ್ಗತಿಕರಾದ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಮೂರು ವರ್ಷಗಳಿಂದ ಸರಕಾರವನ್ನು ಒತ್ತಾಯಿಸಲಾಗುತ್ತಿದೆ. ಇದರೊಂದಿಗೆ ಬಿಲ್ಲವ ಈಡಿಗರ ಜನಸಂಖ್ಯೆ ಹೆಚ್ಚಿರುವ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ರಾಯಚೂರು, ಬೀದರ್, ಗುಲ್ಬರ್ಗ ಜಿಲ್ಲೆಗಳಲ್ಲಿ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಬೇಡಿಕೆ ಕೂಡ ಇರಿಸಲಾಗಿದೆ.
2ಎಯಲ್ಲಿ ಮೀಸಲಾತಿ ಹೊಂದಿರುವ ಕುರುಬ, ಈಡಿಗ, ಕುಂಬಾರ ಸೇರಿದಂತೆ 102 ಕಾಯಕ ಸಮುದಾಯದ ಜನರಿಗೆ ಮೀಸಲಾತಿಯಲ್ಲಿ ಯಾವುದೇ ತೊಂದರೆ ಆಗಬಾರದು ಎಂದು ಸರಕಾರವನ್ನು ಎಚ್ಚರಿಸಲು ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಡಾ. ಪ್ರಣವಾನಂದ ಸ್ವಾಮೀಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜ. 6ರಂದು ಶುಕ್ರವಾರ ಮಂಗಳೂರಿನ ಶ್ರೀ ಕುದ್ರೋಳಿ ಕ್ಷೇತ್ರದ ಆವರಣದಲ್ಲಿ ಬೆಳಿಗ್ಗೆ 10.30ಕ್ಕೆ ಪಾದಯಾತ್ರೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಧ್ಯಾಹ್ನ ಕುದ್ರೋಳಿಯಿಂದ ಪಾದಯಾತ್ರೆ ಹೊರಡಲಿದೆ. ಮೊದಲ ದಿನ ಕುಳಾಯಿಯಲ್ಲಿ ವಾಸ್ತವ್ಯ ಹೂಡಲಿದ್ದು, ಮರುದಿನ ಬೆಳಗ್ಗೆ ಕುಳಾಯಿಯಿಂದ ಪುನಾರಂಭವಾಗುವ ಪಾದಯಾತ್ರೆ ಅಂದು ಸಂಜೆ ಹೆಜಮಾಡಿ ತಲುಪಲಿದೆ. ಮಂಗಳೂರಿನಿಂದ ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು, ನೆಲಮಂಗಲ ಮಾರ್ಗವಾಗಿ ಬೆಂಗಳೂರು ತಲುಪುವ ಪಾದಯಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.