ದೇವಸ್ಥಾನ ಅಥವಾ ದೇವಾಲಯ ಎಂದರೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳ. ಅನೇಕ ಧರ್ಮಗಳ ನಂಬಿಕೆಯ ಪ್ರಕಾರ ದೇವಸ್ಥಾನವು ದೇವರು ನೆಲೆಸಿರುವ ಸ್ಥಳ. ದೇವಸ್ಥಾನ ಎಂದರೆ ಸಾತ್ವಿಕ ಕಂಪನ ವಿರುವ ಸ್ಥಳ. ಯಾವುದೇ ಒಂದು ದೇವಸ್ಥಾನದ ನಿರ್ಮಾಣಯಾಗಿ ಅದು ಮುಂದುವರಿಯಬೇಕಾದರೆ ಅಲ್ಲಿ ಸಾತ್ವಿಕ ಶಕ್ತಿಯ ವೃದ್ಧಿಗಾಗಿ ನಿರಂತರವಾಗಿ ಲೋಕೋದ್ಧಾರ ಕಾರ್ಯಗಳು ನೆರವೇರಬೇಕು. ಹಾಗಾದರೆ ಅಂತಹ ಕಾರ್ಯಗಳು ಯಾವುವು ಎಂಬುದನ್ನು ಪಟ್ಟಿ ಮಾಡುತ್ತಾ ಹೋದರೆ ಮುಖ್ಯವಾಗಿ, ದೇವಾಲಯವು ಪ್ರಕೃತಿಗೆ ಪೂರಕವಾಗಿರಬೇಕು. ಇತ್ತೀಚಿಗೆ ಸ್ವಚ್ಛತೆಯ ನೆಪದಲ್ಲಿ, ಆಧುನಿಕತೆಗೆ ಮಾರುಹೋಗಿ, ಸುತ್ತಲಿನ ಮರ-ಗಿಡಗಳನ್ನು ಕಡಿದು ಕಾಂಕ್ರೀಟ್- ಟೈಲ್ಸ್ ಅಳವಡಿಸಿ ಆಧುನಿಕವಾಗಿ ಮಾರ್ಪಡಿಸಲಾಗುತ್ತಿದೆ. ದೇವಾಲಯದ ಪ್ರಾಂಗಣದಲ್ಲಿರುವ ನಾಗಬನ ದೈವಸ್ಥಾನಗಳು ಈ ನೆಪದಲ್ಲಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿವೆ. ನಿಜವಾಗಿ ಯಾವ ಉದ್ದೇಶಕ್ಕಾಗಿ ಅವುಗಳ ನಿರ್ಮಾಣವಾಗಿವೆಯೋ ಅದಕ್ಕೆ ವಿರುದ್ಧವಾಗಿ ಇಂದು ನಿರ್ಮಾಣಗೊಳ್ಳುತ್ತಿವೆ. ಇದಕ್ಕೆ ಬದಲಾಗಿ ಇಂತಹ ದೈವ ಸಾನಿಧ್ಯ ವಿರುವ ಸ್ಥಳಗಳು ಪ್ರಕೃತಿಗೆ ಪೂರಕವಾಗಿ ಮರಗಿಡಗಳಿಂದ ಕೂಡಿಕೊಂಡು ಭಕ್ತರ ಮನಸ್ಸಿಗೆ ಶಾಂತತೆಯನ್ನು ನೀಡುವ ಸಾತ್ವಿಕ ಕಂಪನವನ್ನು ನೀಡುವಂತಿದ್ದರೆ ಉತ್ತಮ. ಎರಡನೆಯದು ದೇವಾಲಯವು ನಿತ್ಯವೂ ಧಾರ್ಮಿಕ ಆಧ್ಯಾತ್ಮಿಕ ಚಟುವಟಿಕೆಗಳಿಂದ ಕೂಡಿದ್ದು ದೇವಸ್ಥಾನಕ್ಕೆ ಸಂಬಂಧಪಟ್ಟ ಊರ ಜನತೆಗೆ ಸಂಸ್ಕಾರ ನೀಡುವ ಶ್ರದ್ಧಾ ಕೇಂದ್ರ, ಶಕ್ತಿಕೇಂದ್ರವಾಗಿರಬೇಕು.
ಮ್ಮ ಹಿಂದೂ ಸನಾತನ ಸಂಸ್ಕೃತಿಯ ಸಾರವನ್ನು ನಮ್ಮ ಮಕ್ಕಳು- ಪ್ರೌಢರೆಲ್ಲರಾದಿಯಾಗಿ ಎಲ್ಲರಿಗೂ ಮನನ ಮಾಡಿಸುವ ಶಕ್ತಿ ಕೇಂದ್ರವಾಗಬೇಕು. ಇದಕ್ಕೆ ಪೂರಕವಾಗಿರುವ ಯಕ್ಷಗಾನ, ತಾಳಮದ್ದಲೆ, ಭರತನಾಟ್ಯ, ಭಜನಾಕಮ್ಮಟ, ಹರಿಕಥೆ ಇವೇ ಮೊದಲಾದ ಸಂಸ್ಕೃತಿಯ ಸಂಪತ್ತನ್ನು ಪಸರಿಸುವ ಧಾರ್ಮಿಕ ಶಿಕ್ಷಣ ಕೇಂದ್ರವಾಗಬೇಕು. ಅಷ್ಟೇ ಅಲ್ಲದೆ ನಮ್ಮ ಪುಟ್ಟ ಮಕ್ಕಳಿಗೆ ಎಳವೆಯಲ್ಲಿಯೇ ನಮ್ಮ ಧರ್ಮದ ಮೂಲಸಾರವನ್ನು ಭಗವದ್ಗೀತೆ, ಹಾಡು, ಕಥೆ, ಶ್ಲೋಕ, ಭಜನೆ, ಆಟ, ನುಡಿಮುತ್ತುಗಳು, ಸುಭಾಷಿತಗಳು, ಗಾದೆ ಮಾತುಗಳು, ದೇವರ ನಾಮಾವಳಿಗಳು, ಇವೆಲ್ಲದರ ಮೂಲಕ ಅರ್ಥೈಸುವ ಬಾಲಗೋಕುಲ ದಂತಹ ಸಂಸ್ಕಾರ ಚಟುವಟಿಕೆಗಳನ್ನು ನಡೆಸುವ ಸಂಸ್ಕಾರ ಕೇಂದ್ರವಾಗಬೇಕು. ಇದರ ಜೊತೆಗೆ ಭಗವದ್ಗೀತೆ, ರಾಮಾಯಣ, ಮಹಾಭಾರತದಂತಹ ಗ್ರಂಥಗಳಲ್ಲಿ ಅಡಕವಾಗಿರುವ ಜೀವನ ಮೌಲ್ಯಗಳನ್ನು ಜನತೆಗೆ ಪಠ್ಯಕ್ರಮದಂತೆ ಬೋಧಿಸುವ ಕೆಲಸಗಳು ದೇವಾಲಯಗಳಲ್ಲಿ ನಡೆದುಕೊಂಡು ಬಂದು, ನಮ್ಮ ಧರ್ಮದ ಶ್ರೇಷ್ಠತೆಯನ್ನು ಪ್ರತಿಯೊಬ್ಬ ವ್ಯಕ್ತಿಗೂ ಕಲಿಸಿ, ಈ ಮೂಲಕ ದೇವಾಲಯವು ಊರ, ಸಮಾಜದ ಭಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರವಾಗಬೇಕು. ಮೂರನೆಯದಾಗಿ ದೇವಾಲಯವು, ಧಾರ್ಮಿಕ ಶಿಕ್ಷಣದ ಜೊತೆಗೆ ಸಾಮಾಜಿಕ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಬೇಕು. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ತೋರಿದ ನಮ್ಮ ಹಿಂದೂ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ, ಸನ್ಮಾನಿಸುವ ಕೇಂದ್ರವಾದರೆ ಅತ್ಯುತ್ತಮ.
ನಮ್ಮ ಭಾರತವು ಹಬ್ಬಗಳ ನಾಡು ಎಂದರೆ ತಪ್ಪಲ್ಲ. ಇಲ್ಲಿ ಪ್ರತಿದಿನವೂ ಹಬ್ಬವೇ. ದೇವಾಲಯಗಳಲ್ಲಿ ಕೇವಲ ವಿನಾಯಕ ಚತುರ್ಥಿ ಇಂತಹ ಸಾರ್ವಜನಿಕ ಹಬ್ಬಗಳನ್ನು ಮಾತ್ರ ಸಾರ್ವಜನಿಕವಾಗಿ ಆಚರಿಸದೆ ಸಂಕ್ರಮಣ, ದೀಪಾವಳಿ ಇವೇ ಮೊದಲಾದ ನಮ್ಮ ಧಾರ್ಮಿಕ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸಿ ನಮ್ಮ ಮುಂದಿನ ಪೀಳಿಗೆಯಾದ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯ ತಿರುಳನ್ನು ವರ್ಗಾಯಿಸುವ ಕಾರ್ಯ ದೇವಸ್ಥಾನಗಳಿಂದ ನಡೆಯಬೇಕು.
ಇತ್ತೀಚಿನ ದಿನಗಳಲ್ಲಿ ನಮ್ಮ ಹಬ್ಬಗಳು ಕೇವಲ ಮನೆಗಳಲ್ಲಿ ಭೋಜನಕ್ಕಾಗಿ ಸೀಮಿತವಾಗಿ ಹೋಗಿದೆ. ಹಬ್ಬಗಳ ಮಹತ್ವ ತಂದೆ ತಾಯಿಯರಿಗೂ ತಿಳಿಯದು, ಮಕ್ಕಳಿಗೂ ತಿಳಿಯದು. ಆದ್ದರಿಂದ ಈ ಕೆಲಸಗಳು ಮಠ ಮಂದಿರಗಳಿಂದ ನಡೆಯಬೇಕು. ಇದರ ಜೊತೆ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಘನತರವಾದ ಕರ್ತವ್ಯ ದೇವಾಲಯಕ್ಕೆ ಇದೆ. ಸಮಾಜದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ ಜವಾಬ್ದಾರಿಯೂ ದೇವಾಲಯಗಳ ಮೇಲಿದೆ. ಭಜನೆ- ಹರಿಕಥೆ ಇವೇ ಮೊದಲಾದವುಗಳಿಂದ ಸಮಾಜದ ವ್ಯಕ್ತಿಗಳ ಮಾನಸಿಕ ಆರೋಗ್ಯವು ವೃದ್ಧಿಗೊಂಡರೆ, ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ದೈಹಿಕ ಆರೋಗ್ಯವನ್ನು ವಿಚಾರಿಸುವ ಹಾಗೂ ಪರಿಹಾರ ನೀಡುವ ಕೆಲಸ ಕಾರ್ಯಗಳನ್ನು ದೇವಾಲಯಗಳು ಮಾಡಿದರೆ ಉತ್ತಮ.
ಇತ್ತೀಚೆಗೆ ಪಾಶ್ಚಾತ್ಯ ಪರಂಪರೆಗೆ ಮಾರುಹೋದ ನಮ್ಮ ಸಮಾಜ ಕ್ಕೆ ದೇವಾಲಯದೊಳಗೆ ವಸ್ತ್ರಸಂಹಿತೆಯು ಅತ್ಯಗತ್ಯ ಎಂಬುದು ನನ್ನ ಅಭಿಪ್ರಾಯ. ಇಂದು ಜನರು ಪಾರ್ಟಿ- ಮದುವೆಗಳಿಗೆ ಹೋದಂತೆ ದೇವಸ್ಥಾನಗಳನ್ನು ಸಂದರ್ಶಿಸುವ ಪರಿಪಾಠ ಮುಂದುವರಿದಿದೆ ಎಂದರೆ ತಪ್ಪಲ್ಲ. ದೇವಾಲಯದೊಳಗೆ ಕಾಲಿಡುವ ಪ್ರತಿ ಭಕ್ತನ ಮನಸ್ಸು ಶಾಂತತೆಯಿಂದ ಭಕ್ತಿಯ ಪರಾಕಾಷ್ಠೆ ಕಡೆಗೆ ಹೋಗಬೇಕು. ಹೀಗಾಗಿ ದೇವಾಲಯಗಳಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ತೊಡುವ ವಸ್ತ್ರ ಸಂಹಿತೆ ಜಾರಿಯಾಗಬೇಕು. ಹಾಗಾದರೆ ಮಾತ್ರ ನಮ್ಮ ಶ್ರೀಮಂತ ಪರಂಪರೆ ಉಳಿದಿತು ಇಲ್ಲವಾದಲ್ಲಿ ಬರೆ ಶೋಕಿಗಾಗಿ ಪ್ರದರ್ಶನಕ್ಕಾಗಿ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾ ದೀತು.
ಇವೆಲ್ಲ ಕಾರ್ಯ ಚಟುವಟಿಕೆಗಳನ್ನು, ಹಿಂದೂ ಸಮಾಜದ ಎಲ್ಲ ವರ್ಗಗಳನ್ನು ಸೇರಿಸಿಕೊಂಡು, ದೇವಾಲಯಗಳು ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಹಿಂದೆ ಜಾತಿಯ ಹೆಸರಿನಲ್ಲಿ, ವರ್ಣದ ಹೆಸರಿನಲ್ಲಿ, ತುಳಿದು ಆಳುವ ಕೆಲಸಗಳಾಗಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ದೇವಾಲಯವು ಎಲ್ಲರ ಶಕ್ತಿ ಕೇಂದ್ರ. ಭಗವಂತನಿಗೆ ಎಲ್ಲ ಭಕ್ತರು ಒಂದೇ. ಹೀಗಾಗಿ ದೇವರ ಎಲ್ಲ ಕಾರ್ಯಗಳಲ್ಲೂ ಭಾಗವಹಿಸುವ ಅವಕಾಶ ಎಲ್ಲರಿಗೂ ದೊರೆಯಬೇಕು. ಅದರ ಜೊತೆಜೊತೆಗೆ ಭಕ್ತರಲ್ಲಿ ನಿಷ್ಠೆಯು ಇರಬೇಕು. ಮಾತ್ರವಲ್ಲ ದೇವಾಲಯದೊಳಗೆ ರಾಜಕೀಯನು ನುಸುಳಬಾರದು. ಬಹುಶ: ನಮ್ಮ ಸುತ್ತಮುತ್ತ ಬ್ರಹ್ಮಕಲಶೋತ್ಸವ, ಜಾತ್ರೆ ಇತ್ಯಾದಿಗಳ ಸಂದರ್ಭ ರಾಜಕೀಯ ಸೇರಿಕೊಂಡಾಗ ಪರಿಣಾಮ ಏನಾಗಿದೆ ಎಂಬುದು ನಮ್ಮೆಲ್ಲರಿಗೂ ತಿಳಿದೇ ಇದೆ. ಅವರಿವರ ಕಾಲೆಳೆಯುವ ಕೆಲಸಗಳಷ್ಟೇ ನಡೆಯುತ್ತಿದೆ ಅಲ್ಲಿ. ಯಾವ ಅಭಿವೃದ್ಧಿಯೂ ಅಸಾಧ್ಯ. ಆದ್ದರಿಂದ ರಾಜಕೀಯ ರಹಿತವಾದಂತ ಕೆಲಸ ಕಾರ್ಯಗಳು ಊರ ಭಕ್ತರಿಂದ ನಡೆಯಬೇಕು ದೇವಸ್ಥಾನದ ಪರಿಸರ ಪ್ರಶಾಂತ ವಾತಾವರಣದಿಂದ ಕೂಡಿ ದೇವಾಲಯದೊಳಗೆ ಪ್ರವೇಶ ವಾದೊಡನೆ ಮನಸ್ಸು ಭಗವಂತನ ಜೊತೆ ತಲ್ಲೀನವಾಗುವ ವಾತಾವರಣ ದೇವಾಲಯದೊಳಗಿರಬೇಕು. ದೇವಾಲಯದಲ್ಲಿ ಭಗವಂತನೇ ಸರ್ವ ಶ್ರೇಷ್ಠ ಅವನ ಚಿಂತನೆ ಮಾತ್ರ ಅಲ್ಲಿ ನಡೆಯಬೇಕು. ದೇವಾಲಯದೊಳಗಿನ ಪರಿಸರ ಕುಶಲೋಪರಿಗಾಗಿ, ಅವರಿವರ ಬಗ್ಗೆ ಮಾತುಗಳನ್ನು ಆಡುವುದಕ್ಕಾಗಿ ಇರುವ ಸ್ಥಳವಲ್ಲ. ಇಲ್ಲಿ ದೇವರ ಜಪ ಒಂದೇ ನಡೆಯಬೇಕು. ಒಟ್ಟಿನಲ್ಲಿ ದೇವಾಲಯ ನಮ್ಮ ಸಂಪ್ರದಾಯ, ಸಂಸ್ಕ್ರೃತಿಗಳ ಪ್ರತೀಕವಾಗಿ ಊರ ಶಕ್ತಿ ಕೇಂದ್ರವಾಗಬೇಕು.
ಭಾರತೀಯ ಅಧ್ಯಾತ್ಮದ ಪರಂಪರೆಯನ್ನು ಗಮನಿಸಿದರೆ, ಇಲ್ಲಿನ ಜನರು ಪ್ರಕೃತಿಯನ್ನು ಆರಾಧಿಸುತ್ತಾ ಬಂದವರು. ಇಲ್ಲಿನ ಮಣ್ಣಿನ ಕಣಕಣದಲ್ಲಿಯೂ ದೈವತ್ವವನ್ನು ಕಂಡವರು ನಾವು. ಹರಿಯುವ ನದಿ, ಬೀಸುವ ಗಾಳಿ, ಸುರಿಯುವ ಮಳೆ, ಹೊಳೆಯುವ ಸೂರ್ಯಚಂದ್ರ ನಕ್ಷತ್ರಗಳು, ಹಸಿರಾದ ಗಿಡಮರಗಳು, ಬಾನೆತ್ತರಕ್ಕೆ ತಲೆಯೆತ್ತಿನಿಂತ ಗಿರಿಪರ್ವತಗಳು ನಮಗೆ ಪೂಜನೀಯವಾದವುಗಳು. ಕ್ರಮೇಣ ನಾವು ದೇವರನ್ನು ಕಲ್ಲಿನಲ್ಲಿ ಕೆತ್ತಿ ಶಿಲ್ಪಗಳನ್ನು ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಲು ಆರಂಭಿಸಿದೆವು. ದೇವಾಲಯಗಳು ನಮ್ಮ ಧಾರ್ಮಿಕ ಶ್ರದ್ಧೆಯ ಕೇಂದ್ರಗಳಾದವು. ಜನರೆಲ್ಲರನ್ನೂ ಒಗ್ಗೂಡಿಸುವ ಶಕ್ತಿಕೇಂದ್ರಗಳಾದುವು.
ದೇವಾಲಯಗಳು ಕ್ರಮೇಣ ಕಾರಣಾಂತರಗಳಿಂದಾಗಿ ಕೇವಲ ಎರಡೋ ಮೂರೋ ಹೊತ್ತು ಪೂಜೆ ಮತ್ತು ಪ್ರಸಾದ ವಿತರಣೆಯ ಕೇಂದ್ರವಾಗಿ ಮಾರ್ಪಾಟುಹೊಂದಿತು. ಶ್ರದ್ಧೆಗಿಂತ ಹೆಚ್ಚಾಗಿ ಆಡಂಬರ, ವ್ಯಕ್ತಿಪ್ರತಿಷ್ಠೆಯ ಪ್ರದರ್ಶನದ ಕೇಂದ್ರವಾಗತೊಡಗಿತು. ಬದಲಾವಣೆ ಬೇಡವೇ? ಸಕಾರಾತ್ಮಕ ಬದಲಾವಣೆ ಇಂದಿನ ತುರ್ತು ಅಗತ್ಯವಾಗಿದೆ. ನಾವು ನಮ್ಮ ದೇವಸ್ಥಾನಗಳನ್ನು ಸಮಾಜದ ಅವಿಭಾಜ್ಯ ಅಂಗವನ್ನಾಗಿಸಬೇಕು. ಗ್ರಹಗಳ ಕೇಂದ್ರ ಸೂರ್ಯನಿರುವಂತೆ, ಕೇಂದ್ರ ದೇವಾಲಯಗಳಾಗಬೇಕು. ನಮ್ಮ ಎಲ್ಲಾ ಚಟುವಟಿಕೆಗಳಿಗೂ ದೇವಾಲಯಗಳ ಮಾರ್ಗದರ್ಶನ, ಬೆಂಬಲ ಸಿಗಬೇಕು. ನಮಗೆ ನಮ್ಮ ಹಿರಿಯರು ಹಲಾವಾರು ಧಾರ್ಮಿಕ ಸಂಸ್ಕಾರಗಳನ್ನು ನಿರ್ದೇಶಿಸಿದ್ದಾರೆ. ಇಂದು ನಾವು ಈ ಸಂಸ್ಕಾರಗಳಲ್ಲಿ ಯಾವುದನ್ನೂ ದೇವಸ್ಥಾನಗಳಲ್ಲಿ ಆಚರಿಸುತ್ತಿಲ್ಲ. ಸೀಮಂತೋನ್ನಯನ, ಜಾತಕರ್ಮ, ನಾಮಕರಣ, ನಿಷ್ಕ್ರಮಣ ಸಂಸ್ಕಾರ, ಅನ್ನಪ್ರಾಶನ, ಚೂಡಾಕರ್ಮ, ವಿದ್ಯಾರಂಭ, ಉಪನಯನ, ಕೇಶಾಂತ ಸಂಸ್ಕಾರ, ಸಮಾವರ್ತನ, ಪಾಣಿಗ್ರಹಣ ಸಂಸ್ಕಾರ, ಅಂತ್ಯೇಷ್ಟಿ ಸಂಸ್ಕಾರ ಇವುಗಳನ್ನಾದರೂ ದೇವಾಲಯಗಳಲ್ಲಿ ನಡೆಸಬಹುದಲ್ಲವೇ? ನಾವು ವೈಭವೋಪೇತ ಆಚರಣೆಗಾಗಿ ಕಲ್ಯಾಣ ಮಂಟಪಗಳನ್ನಾಶ್ರಯಿಸುತ್ತೇವೆ.
ಪೇಟೆಯ ಬದಿಯಲ್ಲಿಯೇ ಕಾರ್ಯಕ್ರಮಗಳಾದರೆ, ಪಾರ್ಕಿಂಗ್ ವ್ಯವಸ್ಥೆಗಳಿರುತ್ತವೆ, ಬಹಳಷ್ಟು ಜನರನ್ನು ಸೇರಿಸಬಹುದು, ‘ಡೆಕೊರೇಷನ್’ ಮಾಡಿ ಮೆರೆಯಬಹುದು ಎಂಬೆಲ್ಲಾ ಕಾರಣಕ್ಕೆ, ದೇವಸ್ಥಾನಗಳನ್ನು ದೂರಮಾಡುತ್ತೇವೆ, ಹಾಲ್ ಗಳಲ್ಲಾದರೆ, ಯಾವು್ದೇ ಡ್ರೆಸ್ ಗಳಲ್ಲಿ ಬರಬಹುದು, ಚಪ್ಪಲಿಗಳನ್ನು ತೆಗೆಯಬೇಕೆಂದಿಲ್ಲ, ಡಿಜೆ ಸಂಗೀತಕ್ಕೆ ಹುಚ್ಚೆದ್ದು ಕುಣಿಯಬಹುದು... ಇತ್ಯಾದಿ ಕಾರಣಗಳನ್ನು ಹೇಳಬಹುದು. ದೇವಸ್ಥಾನಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿ, ಬೆಳಿಗ್ಗೆ ದೇವರ ಸ್ತುತಿಗಳನ್ನು ಸುಶ್ರಾವ್ಯವಾಗಿ ಹಾಡಿದಾಗ ಆ ಪರಿಸರವೆಲ್ಲವೂ ಧನಾತ್ಮಕ ತರಂಗಗಳಿಂದ ತುಂಬಿ ಮನಸ್ಸಿನಲ್ಲಿ ಹರ್ಷೋಲ್ಲಾಸ ತುಂಬುತ್ತದೆ. ಒಂದುಕಡೆ ವೇದಘೋಷ, ಇನ್ನೊಂದು ಕಡೆ ಶಂಖ ಜಾಗಟೆಗಳ ನಿನಾದ, ಮಂತ್ರೋಚ್ಚಾರಣೆ ಇತ್ಯಾದಿಗಳು ನಮ್ಮಲ್ಲಿ ಹೊಸ ಚೈತನ್ಯವನ್ನು ತುಂಬುತ್ತವೆ. ದೇವಸ್ಥಾನಗಳ ಕಾರ್ಯಕ್ರಮಗಳಲ್ಲಿ ಸ್ವಚ್ಛತೆ, ಶುದ್ಧಾಚಾರ, ನೈರ್ಮಲ್ಯ, ಮುಂತಾದ ಸದ್ಗುಣಗುಣಗಳ ಪಾಠ ನಮಗೆ ಪರೋಕ್ಷವಾಗಿ ಲಭಿಸುತ್ತದೆ. ನಮ್ಮ ಸಂಸ್ಕಾರ ಹೀಗೆಯೇ ಅಲ್ಲವೇ ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸಲ್ಪಡುವುದು?
ದೇವಾಲಯಗಳು ನಮ್ಮೆಲ್ಳರ ಸೊತ್ತು. ಅದನ್ನು ಶ್ರೀಮಂತಗೊಳಿಸುವುದು ನಮ್ಮ ಕರ್ತವ್ಯ. ತನು ಮನ ಧನದಿಂದ ಸಹಕರಿಸಿದರೆ ಮಾತ್ರ ಈ ದೇವಸ್ಥಾನಗಳು ಶ್ರೀಮಂತವಾಗುತ್ತವೆ. ಹಾಗೆಂದು ಹೆಚ್ಚು ಧನಸಹಾಯ ನೀಡಿದವರು ಮೇಲಲ್ಲ, ಕಡಿಮೆ ಧನಸಹಾಯ ನೀಡಿದವ ಕೀಳಲ್ಲ. ದೇವರ ೆದುರು ಎಲ್ಲರೂ ಸಮಾನರು. ಇನ್ನು, ಶ್ರೀಮಂತಗೊಂಡ ದೇವಸ್ಥಾನಗಳಿಗೂ ಕೆಲವು ಬದ್ಧತೆಗಳಿವೆ. ಅದು ಸಮಾಜದ ದೇವಸ್ಥಾನ. ಸಮಾಜದವರಿಂದಾಗಿ ಮೇಲೆ ಬಂದ ಶ್ರದ್ಧಾಕೇಂದ್ರ. ಸಮಾಜವನ್ನು ಉದ್ಧರಿಸುವ ಕರ್ತವ್ಯ ದೇವಸ್ಥಾನಗಳದ್ದಾಗಿದೆ. ಚಿನ್ನ ಬೆಳ್ಳಿ ಆಭರಣಗಳ ಸಂಗ್ರಹ ಕೇಂದ್ರಗಳಾಗದೆ, ಸಂಪತ್ತಿನ ಒಂದಂಶವನ್ನು ಸಮಾಜಕ್ಕಾಗಿ ಬಳಸಬೇಕು. ಸಮಾಜದಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸಬೇಕಾದದ್ದು ದೇವಸ್ಥಾನಗಳ ಕರ್ತವ್ಯವಾಗಿದೆ. ಆಹಾರ, ಅರಿವೆ, ಅರಿವು, ಔಷಧ, ಆಶ್ರಯ, ಮುಂತಾದ ಮೂಲಭೂತ ಸೌಕರ್ಯಗಳನ್ನು ಅರ್ಹರಿಗೆ ಒದಗಿಸುವಲ್ಲಿ ಸಹಕರಿಸಬೇಕು. ಅಂತೆಯೇ ಸಂಸ್ಕಾರ ಬೆಳೆಸುವ ವಿಷಯ ಬಂದಾಗ, ಭಜನಾ ತರಬೇತಿ, ಶ್ಲೋಕಪಠಣಾ ಸ್ಪರ್ಧೆ, ಒಗ್ಗಟ್ಟನ್ನು ಬೆಳೆಸಬಹುದಾದ ಆಟೋಟಗಳನ್ನು ಆಯೋಜಿಸಬೇಕು. ಮೆಡಿಕಲ್ ಕ್ಯಾಂಪ್‌ಗಳ ಯೋಜನೆ, ಸ್ವಯಂಸೇವಾ ತಂಡಗಳ ರಚನೆ, ಬಡವರಿಗೆ ಸಹಾಯ, ಉಚಿತ ವಿವಾಹಗಳನ್ನೇರ್ಪಡಿಸುವುದು, ಸಾರ್ವಜನಿಕ ನೆಲೆಯಲ್ಲಿ ಪೂಜೆಗಳು.. ಹೀಗೆ ಪಟ್ಟಿ ಮಾಡುತ್ತಾ ಹೋದರೆ ನೂರಾರು ಕಾ್ಯಕ್ರಮಗಳನ್ನು ಆಯೋಜಿಸಬಹುದಾಗಿದೆ. ನಮ್ಮ ಮಕ್ಕಳಿಗೆ ಇಂದು ನೀತಿಪಾಠಗಳು ಮನೆಯಲ್ಲಿ ಹೇಳಿಕೊಡಲು ಹಿರಿಯರಿಗೆ ‘ಪುರುಸೊತ್ತಿಲ್ಲ’, ಶಾಲೆಗಳ ಪಠ್ಯಕ್ರಮದಲ್ಲಿ ಪರೀಕ್ಷೆಗಳ ಧಾವಂತದಲ್ಲಿ ಅವಕಾಶವಿಲ್ಲ. ದೇವಸ್ಥಾನಗಳಲ್ಲಿ ವಾರದಲ್ಲಿ ಒಂದು ದಿನ ಸಂಜೆ ಸುಮಾರು ಒಂದು ಗಂಟೆಯಷ್ಟಾದರೂ ಇಂತಹ ವಿಷಯಗಳಿಗೆ ಅವಕಾಶವನ್ನಿತ್ತರೆ ನಮ್ಮ ಮಕ್ಕಳು ಸಂಸ್ಕಾರವಂತರಾಗುವುದಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ರಾಮಾಯಣ, ಮಹಾಭಾರತ, ಭಗವದ್ಗೀತೆ, ನಮ್ಮ ದೇಶದ ಮಹಾನ್ ಚೇತನಗಳೆನಿಸಿಕೊಂಡ ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜೀ ಮಹಾರಾಜ್, ತಿಲಕರು, ರಾಜಾ ರಾಣಾಪ್ರತಾಪ್ ಮುಂತಾದವರ ಜೀವನಗಾಥೆಯನ್ನು ತಿಳಿಹೇಳಿದರೆ, ಮಕ್ಕಳೂ ಶೂರರೂ ಧೀರರೂ ರಾಷ್ಟ್ರಪ್ರೇಮಿಗಳೂ ಆಗುವುದಕ್ಕೆ ಸಂಶಯವಿಲ್ಲ.
- ಮಂಗಳಾ ಕೆ., ಶಿಕ್ಷಕಿ
ಗುರುವಾಯನಕೆರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ