ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಜನವರಿ 2 ರ ಸೋಮವಾರದಂದು ವಯ್ಯಾಲಿಕಾವಲ್ ನ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನ(ಟಿಟಿಡಿ)ದ ಬೃಹತ್ ವೇದಿಕೆಯಲ್ಲಿ ನೃತ್ಯ ದಿಶಾ ಟ್ರಸ್ಟ್ ನ ಕಲಾವಿದರಿಂದ ನೃತ್ಯ ಸೇವೆ ಜರುಗಿತು. ಗುರು ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನಡೆದ ಈ ಕಾರ್ಯಕ್ರಮ ಸುಂದರವಾಗಿ ಮೂಡಿ ಬಂತು.
ಮೊದಲಿಗೆ ಸಾಂಪ್ರದಾಯಿಕ ಪುಷ್ಪಾಂಜಲಿ ಇಂದ ಕಾರ್ಯಕ್ರಮ ಪ್ರಾರಂಭವಾಗಿ, ವಿಘ್ನ ವಿನಾಶಕ ಗಣಪನ ವಂದಿಸಿತು. ನಂತರ ಸಿಂಧುಭೈರವಿ ರಾಗದ ಪುರಂದರದಾಸರ ವೆಂಕಟಾಚಲನಿಲಯಂ, ನರಸಿಂಹ, ಸುಬ್ರಹ್ಮಣ್ಯನ ಕೃತಿಗಳು, ಕೃಷ್ಣನ ರಾಸಲೀಲೆಗಳು, ಕೃಷ್ಣ ಭಜನ್, ಕೊರವಂಜಿ ನೃತ್ಯಗಳನ್ನು ಪ್ರಸ್ತುತಪಡಿಸಿದರು. ಅದ್ಭುತವಾದ ನೃತ್ಯ ಸಂಯೋಜನೆಯಲ್ಲಿ ಪ್ರಸ್ತುತಪಡಿಸಲಾದ ವಿಶೇಷವಾದ ಅಷ್ಟಲಕ್ಷ್ಮಿ ವೈಭವ ನೃತ್ಯ ರೂಪಕ ಎಲ್ಲರ ಮೆಚ್ಚುಗೆ ಪಡೆಯಿತು. ಸಂಸ್ಥೆಯ ಕಲಾವಿದರು ನೆರೆದಂತಹ ಭಕ್ತಾದಿಗಳ ಮೆಚ್ಚುಗೆಗೆ ಪಾತ್ರರಾದರು.
ಸಂಸ್ಥೆಯ ವಿದ್ಯಾರ್ಥಿಗಳಾದ ಮನಿಷಾ, ಸಹನ, ನಮಿತಾ, ದೀಪರಾಣಿ, ಸಹನಾ ಎಚ್. ಬಿ, ಸಂಧ್ಯಾ, ಸ್ಪೂರ್ತಿ, ದಿಶಾ, ದೇಷಿಕಾ, ಭೂಮಿಕಾ, ಲಿಜ, ನಿಹಾರಿಕ, ಕೀರ್ತನ, ಮಿತ್ರಶ್ರೀ, ಸುಹನಿ, ಶ್ರಾವಣಿ, ವಾನ್ಯ, ಖುಷಿ, ದಶಮಿ, ಮಾನ್ಯತಾ, ಚಾರ್ವಂಗಿ, ಲಿಖಿತ ಇವರು ಭಾಗವಹಿಸಿದ್ದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಟಿಟಿಡಿಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಟಿ ಟಿ ಡಿ ಹೆಚ್ ಡಿ ಪಿ ಪಿ ಯ ಕಾರ್ಯಕ್ರಮಗಳ ನಿರ್ವಹಣಾಧಿಕಾರಿ ಡಾ|| ಪಿ. ಭುಜಂಗರಾವ್ ಅವರು ಸ್ವಾಗತ ಮತ್ತು ವಂದನಾರ್ಪಣೆಯನ್ನು ಮಾಡಿದರು.