ಯಕ್ಷಗಾನ ಎಂಬುದು ಒಂದು ಗಂಡುಕಲೆ, ಮೇರುಕಲೆ. ಎಲ್ಲಾ ಕಲಾಪ್ರಕಾರಗಳಿಗೂ ಅದರದ್ದೇ ಆದ ವೈಶಿಷ್ಟ್ಯವಿದೆ. ಆದರೂ, ಇಂದು ಆಕಾಶಕ್ಕೆ ಆಕಾಶವೇ ಸಾಟಿ; ಸಾಗರಕ್ಕೆ ಸಾಗರವೇ ಸಾಟಿ ಎಂಬಂತೆ ಯಕ್ಷಗಾನವು ರಂಜಿಸುತ್ತಿದೆ. ಗಗನಸದೃಶವಾದ ಯಕ್ಷಗಾನವೆಂಬ ಕಲೆಯಲ್ಲಿ ಕಲಾವಿದರೆಂಬ ಅದೆಷ್ಟೋ ನಕ್ಷತ್ರಗಳು ಕಾಣಬಹುದು. ಇದೊಂದು ಅಂತಹ ಕಲಾವಿದರೊಬ್ಬರ ಕಿರುಪರಿಚಯದ ಪ್ರಯತ್ನ.
ಡಾ. ಪ್ರದೀಪ ವಿ. ಸಾಮಗ ಅವರು ಸುಪ್ರಸಿದ್ಧ ಕಲಾವಿದರೂ, ಅರ್ಥಧಾರಿಗಳೂ ಆದ ಎಂ. ಆರ್. ವಾಸುದೇವ ಸಾಮಗ ಮತ್ತು ಮೀರಾ.ವಿ. ಸಾಮಗ ಇವರ ಮಗ. ಮೈಕ್ರೊಬಯಾಲಜಿಯಲ್ಲಿ ಪಿಎಚ್ ಡಿ ಮಾಡಿದ್ದಾರೆ. ಪ್ರಸ್ತುತ ಉಡುಪಿಯ ಆಕಾಶ್ ಬೈಜುಸ್ ನಲ್ಲಿ ಪ್ರಾಣಿಶಾಸ್ತ್ರದ ಉಪನ್ಯಾಸಕ. ಕೋಟದ ಅಧ್ಯಾಪಕರಾದ ಎಂ.ಎನ್. ಮಧ್ಯಸ್ಥರು ಇವರ ಯಕ್ಷಗಾನದ ಗುರು. ತಂದೆ, ಅಜ್ಜ, ಅಮ್ಮ ಇವರೆಲ್ಲಾ ಪ್ರದೀಪ ಸಾಮಗರು ರಂಗಕ್ಕೆ ಬರುವುದಕ್ಕೆ ಮೂಲ ಕಾರಣ, ಪ್ರೇರಣಾ ಶಕ್ತಿಗಳು.
ತಂದೆಯ ಒತ್ತಾಸೆಯಂತೆ 11 ನೇ ವಯಸ್ಸಿಗೆ ಶೃಂಗೇರಿಯಲ್ಲಿ ನಡೆದ ಶಿರಸಿ ಮೇಳದ ಮಧು ಮಾಲತಿ ಪ್ರಸಂಗದಲ್ಲಿ ಎರಡು ಪಾತ್ರಗಳನ್ನು ಮಾಡುವ ಮೂಲಕ ಪ್ರಥಮ ರಂಗ ಪ್ರವೇಶ. ನಾಟಕರಂಗದತ್ತ ಆಸಕ್ತಿ ಬೆಳೆಸಿಕೊಂಡ ಇವರು, ತೀರ್ಥಹಳ್ಳಿಯ ಕಟ್ಟೆಹಕ್ಕಲಿನಲ್ಲಿ ಸಮಾನ ಮನಸ್ಕ ಯುವಕರ ಆರ್ಕೇಶ್ಟ್ರಾ ತಂಡದಲ್ಲಿ ಹಾಡು, ನಿರೂಪಣೆ, ಡೋಲಕ್ ಮತ್ತು ಕಾಂಗೋ ಪ್ಲೇಯರ್ ಆಗಿ ತೊಡಗಿಸಿಕೊಂಡರು.
ತಂದೆಯ ಜತೆ ಕಾಟಿಪಳ್ಳ, ಬಗ್ವಾಡಿ ಮುಂತಾದ ಮೇಳಗಳಲ್ಲಿ ಪಾತ್ರನಿರ್ವಹಿಸಿದರು. ದ್ವಿತೀಯ ಬಿ.ಎಸ್ಸಿ ವ್ಯಾಸಂಗದ ರಜಾವಧಿಯಲ್ಲಿ ಕೊಂಡದಕುಳಿಯವರ 'ಪೂರ್ಣಚಂದ್ರ' ಕಾಲಮಿತಿ ಮೇಳದಲ್ಲಿಯೂ ವಿವಿಧ ಪಾತ್ರಗಳಾಗಿ ಕಾಣಿಸಿಕೊಂಡರು. ಕೊಂಡದಕುಳಿ, ತೋಟಿಮನೆ ಗಣಪತಿ ಹೆಗಡೆ, ಸುಜಯೀಂದ್ರ ಹಂದೆಯವರಲ್ಲಿ ಪಾತ್ರಕ್ಕೆ ಬೇಕಾದಷ್ಟೇ ನಾಟ್ಯವನ್ನು ಕಲಿತು ಪಾತ್ರವನ್ನು ಮಾಡುತ್ತಿದ್ದರೂ ವಿಭಿನ್ನ ಪಾತ್ರಗಳನ್ನು ಮಾಡುವ ಅವಕಾಶ ದೊರೆಯಿತು. ಎಂ.ಎನ್ ಮಧ್ಯಸ್ಥರು ಗಿಳಿಯಾರು ಶಾಂಭವಿ ವಿದ್ಯಾದಾಯಿನಿ ಶಾಲೆಯಲ್ಲಿ ನಡೆಸುತ್ತಿದ್ದ ಯಕ್ಷಗಾನ ತರಗತಿಯಲ್ಲಿ ಬಡಗಿನ ನಾಟ್ಯಾಭ್ಯಾಸ, ಹಂದಟ್ಟು ಗೋವಿಂದ ಉರಾಳರಿಂದ ಪ್ರಸಾದನ, ಕೆ.ಪಿ.ಹೆಗಡೆ, ಸದಾನಂದ ಐತಾಳರಲ್ಲಿ ಭಾಗವತಿಕೆಯನ್ನೂ ಕಲಿತರು. ಅಲ್ಲದೆ, ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯರಲ್ಲಿ ಮದ್ದಲೆಯ ಪ್ರಾಥಮಿಕ ಪಾಠ, ಗುಂಡ್ಮಿ ಪದ್ಮನಾಭ ಐತಾಳರಿಂದ ಕರ್ನಾಟಕ ಸಂಗೀತ ಕಲಿತರು. ಆಮೇಲೆ ಸಾಲಿಗ್ರಾಮ, ಪೆರ್ಡೂರು, ಸೌಕೂರು ಮೇಳಗಳಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಹವ್ಯಾಸಿಯಾಗಿ ಅನೇಕ ಕಡೆಗಳಲ್ಲಿ ಬಡಗು - ತೆಂಕುಗಳೆರಡರಲ್ಲೂ ಸ್ತ್ರೀ, ಪುರುಷ ಹಾಸ್ಯ ಮೊದಲಾದ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. 'ಸಂಯಮಂ' ತಂಡದಿಂದಾಗಿ ತಾಳಮದ್ದಳೆಯಲ್ಲಿಯೂ ತೊಡಗಿಸಿಕೊಳ್ಳುವಂತಾಯ್ತು ಎಂದು ಹೇಳುತ್ತಾರೆ ಸಾಮಗರು.
ಅಭಿನಯಕ್ಕೆ ಮತ್ತು ಮಾತಿಗೆ ಅವಕಾಶವಿರುವ ಎಲ್ಲಾ ಪಾತ್ರಗಳು (ಸ್ತ್ರೀ, ಪುರುಷ, ಹಾಸ್ಯ ಇತ್ಯಾದಿ) ಹಾಗೂ ಒಳ್ಳೆಯ ಕಥೆ ಮತ್ತು ಸಂಘರ್ಷವಿರುವ ಎಲ್ಲಾ ಪೌರಾಣಿಕ ಹಾಗೂ ಕಾಲ್ಪನಿಕ ಪ್ರಸಂಗಗಳು ಇವರ ನೆಚ್ಚಿನವು. ಭೀಷ್ಮ ವಿಜಯದ ಅಂಬೆ, ಪರಶುರಾಮ, ಸಾಲ್ವ; ಸಂಧಾನದ ಕೃಷ್ಣ, ವಿದುರ, ದ್ರೌಪದಿ; ಜ್ವಾಲಾ ಪ್ರತಾಪದಲ್ಲಿ ಜ್ವಾಲೆ, ನೀಲಧ್ವಜ; ಪಟ್ಟಾಭಿಷೇಕದ ರಾಮ, ಕೈಕೇಯಿ, ಮಂಥರೆ; ವಾಲಿ ವಧೆಯ ಸುಗ್ರೀವ, ರಾಮ; ಬೇಡರ ಕಣ್ಣಪ್ಪದ ಕಾಶಿಮಾಣಿ, ಕವಿರತ್ನ ಕಾಳಿದಾಸದ ಕಾಳ, ದಕ್ಷಯಜ್ಞದ ದಾಕ್ಷಾಯಿಣಿ, ವೀರಭದ್ರ, ಬ್ರಾಹ್ಮಣ, ಈಶ್ವರ; ಹರಿಶ್ಚಂದ್ರದ ವಿಶ್ವಾಮಿತ್ರ, ನಕ್ಷತ್ರಿಕ, ಚಂದ್ರಮತಿ; ರಾವಣ ವಧೆಯ ರಾಮ, ಮಂಡೋದರಿ; ಅಂಗದ ಸಂಧಾನದ ರಾವಣ, ಅಂಗದ, ಪ್ರಹಸ್ತ; ಲಂಕಾದಹನದ ರಾಮ, ಸರಮೆ, ಸೀತೆ, ಇಂದ್ರಜಿತು; ಸೌಭರೀ ಚರಿತೆಯ ಸೌಭರೀ ಮುನಿ, ಮಧ್ವ ವಿಜಯದಲ್ಲಿ ಮಧ್ವಾಚಾರ್ಯ, ಗದಾಯುದ್ಧದ ಕೃಷ್ಣ, ದ್ರೌಪದೀ ಪ್ರತಾಪದ ದ್ರೌಪದಿ, ಜಾಬಾಲಿ ನಂದಿನಿಯ ನಂದಿನಿ, ಪಂಚವಟಿಯ ಮಾಯಾ ಶೂರ್ಪನಖಿ, ಸೀತೆ, ರಾಮ; ರುಕ್ಮಾಂಗದ ಚರಿತ್ರೆಯಲ್ಲಿ ವಿಂಧ್ಯಾವಳಿ, ಧರ್ಮಾಂಗದ, ಮೋಹಿನಿ; ಜಾಂಬವತಿ ಕಲ್ಯಾಣದ ಕೃಷ್ಣ, ಕರ್ಣ ಬೇಧನದ ಕರ್ಣ, ಕೃಷ್ಣ, ಕುಂತಿ, ಸೂರ್ಯ; ವಿಶ್ವಾಮಿತ್ರ ಮೇನಕೆಯಲ್ಲಿ ಮೇನಕೆ, ವಿರಾಟ ಪರ್ವದ ಸೈರಂದ್ರಿ, ಸುದೇಷ್ಣೆ, ಉತ್ತರ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಯಕ್ಷಗಾನವು ಪ್ರೇಕ್ಷಕರಿಗೆ ಅತೀ ಸಮೀಪವರ್ತಿ ಕಲಾಮಾಧ್ಯಮ. ಜನರ ಜೀವನ ವಿಧಾನ, ಚಿಂತನೆಗಳು ಬದಲಾದಂತೆ ಯಕ್ಷಗಾನದ ಕಲಾವಂತಿಕೆಯೂ ಬದಲಾಗುತ್ತದೆ. ಈ ಬದಲಾವಣೆಗಳು ಕೇವಲ ಕಾಲೋಚಿತವಾಗದೆ, ಕಲೋಚಿತವಾಗಬೇಕು. ಹೊಟ್ಟೆಪಾಡಿಗೆ ಯಕ್ಷಗಾನದ ಅನಿವಾರ್ಯತೆಯಿಲ್ಲದ ಹವ್ಯಾಸಿಗಳು ಕಲೆಯ ವ್ಯಾಕರಣಕ್ಕೆ ಪೂರಕವಾದ ಬದಲಾವಣೆಗೆ ಅಥವಾ ಪೂರ್ವಕ್ರಮಗಳನ್ನು ಉಳಿಸಿಕೊಳ್ಳುವ ಕಡೆ ಮನಸ್ಸು ಮಾಡಬೇಕು. ಪ್ರೇಕ್ಷಕ ಗಡಣ ಯಾವತ್ತೂ ವೈವಿಧ್ಯಮಯ ಮನಸ್ಥಿತಿಯಲ್ಲಿರುತ್ತದೆ. ಪ್ರಜ್ಞಾವಂತ ಪ್ರೇಕ್ಷಕರು ಹೆಚ್ಚಿದಷ್ಟೂ, ಯಕ್ಷಗಾನದ ಸತ್ವ ಸಮೃದ್ಧಿ ಸಾಧ್ಯ. ವಿಮರ್ಶಿಸದ ಪ್ರೇಕ್ಷಕರು, ವಿಮರ್ಶೆಗೆ ತೆರೆದುಕೊಳ್ಳದ ಕಲಾವಿದರು ಇಬ್ಬರೂ ಕಲೆಗೆ ಪೂರಕವಲ್ಲ ಎಂಬುದು ಇವರ ಅಭಿಪ್ರಾಯ.
ಔಚಿತ್ಯ ಪ್ರಜ್ಞೆಯ ಸಮಾನ ಮನಸ್ಕರ ತಂಡವನ್ನು ಕಟ್ಟಿ, ನಿರ್ದೇಶಿತವಾದ ರಸಪೋಷಕ ಪ್ರದರ್ಶನಗಳನ್ನು ನೀಡಿ, ಯಕ್ಷಗಾನಕ್ಕೆ ರಸಗ್ರಾಹಿ ಪ್ರೇಕ್ಷಕರನ್ನು ಆಕರ್ಷಿಸುವುದು ಇವರ ಮುಂದಿನ ಯೋಜನೆ.
ರಂಗಕ್ಕೆ ಹೋಗುವ ಮೊದಲು ನಡೆಸುವ ತಯಾರಿ ಬಗ್ಗೆ ಹೇಳುತ್ತಾ, ಅಧ್ಯಯನ ಇಲ್ಲ. ಹಾಗಾಗಿ ಕನಿಷ್ಠ ಪ್ರಸಂಗದ ಪದ್ಯಗಳಾದರೂ ಗೊತ್ತಿರಲಿ ಎಂದು ಪ್ರಸಂಗ ಪುಸ್ತಕ ಓದುತ್ತೇನೆ. ಜೊತೆಗೆ ರಾಮಾಯಣ, ಮಹಾಭಾರತ ಭಾಗವತದ ಪ್ರಸಂಗಗಳಾದರೆ ಉಪಯೋಗಕ್ಕಿರಲಿ ಎಂದು ಮೂಲದಲ್ಲಿ ಕಥೆ ಹೇಗಿದೆ ಎಂದು ಒಮ್ಮೆ ಓದುತ್ತೇನೆ. ಮತ್ತೆ ನಾನೇ ಆ ಪಾತ್ರದ ಸ್ಥಿತಿಯಲ್ಲಿದ್ದಿದ್ದರೆ ಹೇಗಿರುತ್ತಿದ್ದೆ ಎಂದು ಸ್ವಲ್ಪ ಆಲೋಚಿಸುತ್ತೇನೆ ಎಂದು ವಿವರಿಸುತ್ತಾರೆ.
ಮೈಸೂರಿನ ಕರಾವಳಿ ಯಕ್ಷಗಾನ ಕೇಂದ್ರದಲ್ಲಿ ಐದು ವರ್ಷ ಬಡಗುತಿಟ್ಟಿನ ಗುರುವಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಮ್ಮಾನ ಯೋಗ್ಯ ಎತ್ತರವನ್ನು ಇನ್ನೂ ಏರಿಲ್ಲ. ಹಾಗಾಗಿ ಯಾವುದೇ ಪ್ರಶಸ್ತಿ ಸನ್ಮಾನಗಳಿಲ್ಲ ಎಂಬ ಮಾತು ಇವರ ಸಜ್ಜನಿಕೆಗೆ ಸಾಕ್ಷಿ.
ಯಕ್ಷಗಾನವೇ ಮುಖ್ಯ ಹವ್ಯಾಸ. ಜತೆಗೆ ಕೀಬೋರ್ಡ್, ಹಾಡುವುದು, ಟೇಬಲ್ ಟೆನಿಸ್, ಶಟಲ್, ಬ್ಯಾಡ್ಮಿಂಟನ್, ಕವನ ರಚನೆ ಇತರ ಹವ್ಯಾಸಗಳು.
ಡಾ.ಪ್ರದೀಪ ವಿ.ಸಾಮಗ ಅವರು ಪತ್ನಿ ದೀಪಿಕಾ, ಮಗಳು ಆರಭಿ ಜತೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ, ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ ಎಂಬುದು ಕಲಾಭಿಮಾನಿಗಳ ಹಾರೈಕೆಗಳು.
-ಶ್ರವಣ್ ಕಾರಂತ್ ಕೆ
ಫೋಟೋ: ಸುಬ್ರಹ್ಮಣ್ಯ Vattelsu, ಸುದರ್ಶನ ಮಂದಾರ್ತಿ, ಷಣ್ಮುಖ ಫೋಟೋಗ್ರಫಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ