ಕರ್ಕೆರರು ಉತ್ತಮ ಕವಿ, ನಾಟಕಕಾರ ಮತ್ತು ಕಲಾ ರಾಧಕರು: ಡಾ.ದಂಡಕೇರಿ
ಮಂಗಳೂರು: 'ಅಪಾರ ಸ್ನೇಹಿತ ವರ್ಗವನ್ನು ಸಂಪಾದಿಸಿದ ಅತ್ತಾವರ ಶಿವಾನಂದ ಕರ್ಕೆರರು ಕನ್ನಡ ಹಾಗೂ ತುಳು ಭಾಷೆಯಲ್ಲಿ ಕವಿಯಾಗಿ, ನಾಟಕಕಾರರಾಗಿ ಮತ್ತು ಕಲಾರಾಧಕರಾಗಿ ನಿರಂತರ ಕ್ರಿಯಾಶೀಲರಾಗಿದ್ದರು. ಇಳಿ ವಯಸ್ಸಿನಲ್ಲಿ ತುಳು ಸ್ನಾತಕೋತ್ತರ ಪದವಿಯ ಪ್ರಥಮ ತಂಡದಲ್ಲಿ ವಿದ್ಯಾರ್ಥಿಯಾಗಿ ಉತ್ತೀರ್ಣರಾಗಿದ್ದ ಅವರು ಫಲಿತಾಂಶ ನೋಡುವ ಮುನ್ನವೇ ದುರಂತಕ್ಕೀಡಾದುದು ಬಂಧು ಮಿತ್ರರಿಗೆ ಅಪಾರ ನೋವನ್ನುಂಟು ಮಾಡಿದೆ' ಎಂದು ಹಿರಿಯ ನಾಟಕಕಾರ ಮತ್ತು ಉದ್ಯಮಿ ಡಾ. ಸಂಜೀವ ದಂಡಕೇರಿ ಹೇಳಿದ್ದಾರೆ.
ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ - ಮಂಥನ ಮತ್ತು ಪ್ರದರ್ಶನ ವೇದಿಕೆಯು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರ ಸಹಯೋಗದೊಂದಿಗೆ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಏರ್ಪಡಿಸಿದ್ದ 'ಯಕ್ಷಗಾನ ತಾಳಮದ್ದಳೆ ಸಪ್ತಾಹ - 2022' ಕನ್ನಡ ನುಡಿ ಹಬ್ಬದ ನಾಲ್ಕನೇ ದಿನ ದಿ.ಅತ್ತಾವರ ಶಿವಾನಂದ ಕರ್ಕೇರ ಸಂಸ್ಮರಣ ಕಾರ್ಯಕ್ರಮದಲ್ಲಿ ದೀಪ ಬೆಳಗಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ದಿ. ಕರ್ಕೇರರ ಪತ್ನಿ ಪ್ರಫುಲ್ಲ ಶಿವಾನಂದ ಕರ್ಕೇರ ಉಪಸ್ಥಿತರಿದ್ದರು.
ಕುಡುಮಲ್ಲಿಗೆ ಸಮ್ಮಾನ:
ಸಮಾರಂಭದಲ್ಲಿ ಲೇಖಕ, ಪತ್ರಕರ್ತ ಮತ್ತು ಯಕ್ಷಗಾನ ಕಲಾವಿದ ಕೃಷ್ಣ ಶೆಟ್ಟಿ ಕುಡುಮಲ್ಲಿಗೆ ಅವರನ್ನು ಶಾಲು,ಸ್ಮರಣಿಕೆ, ಗೌರವ ನಿಧಿಯೊಂದಿಗೆ ಸನ್ಮಾನಿಸಲಾಯಿತು.ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಯಕ್ಷಗಾನ ಕಲಾವಿದ ಅಶೋಕ ಶೆಟ್ಟಿ ಸರಪಾಡಿ ಅವರನ್ನು ಅಭಿನಂದಿಸಿ ಯಕ್ಷಾಂಗಣ ವತಿಯಿಂದ ಗೌರವಿಸಲಾಯಿತು.
ಭಾರತೀಯ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ, ಕಲಾಸಂಘಟಕ - ಉದ್ಯಮಿ ಸ್ವರ್ಣ ಸುಂದರ್ ಡಿಂಕಿ ಡೈನ್, ವಿಶ್ರಾಂತ ಪ್ರಾಚಾರ್ಯ ಪ್ರೊ.ಸೀತಾರಾಮ ಪೂಜಾರಿ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕುವಳ್ಳಿ ಸ್ವಾಗತಿಸಿದರು; ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ವಂದಿಸಿದರು. ಮಹಿಳಾ ಕಾರ್ಯದರ್ಶಿ ಸುಮ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಪದಾಧಿಕಾರಿಗಳಾದ ಬೆಟ್ಟಂಪಾಡಿ ಸುಂದರ ಶೆಟ್ಟಿ, ಲಕ್ಷ್ಮೀನಾರಾಯಣ ರೈ ಹರೇಕಳ, ಉಮೇಶ ಆಚಾರ್ಯ ಗೇರುಕಟ್ಟೆ, ರವೀಂದ್ರ ರೈ ಕಲ್ಲಿಮಾರು, ಸಿದ್ದಾರ್ಥ ಅಜ್ರಿ ಉಪಸ್ಥಿತರಿದ್ದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.
'ಸ್ವಾತಂತ್ರ್ಯ ವಿಜಯ' ತಾಳಮದ್ದಳೆ:
ಸಪ್ತಾಹದ ವಿಶೇಷ ಪರಿಕಲ್ಪನೆಯಲ್ಲಿ 'ಸಪ್ತ ವಿಜಯ' ತಾಳಮದ್ದಳೆ ಸರಣಿಯನ್ನು ಆಯೋಜಿಸಲಾಗಿದ್ದು ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಆಧರಿಸಿ ಭಾಸ್ಕರ ರೈ ಕುಕ್ಕುವಳ್ಳಿ ಅವರು ಸಯೋಜಿಸಿದ ಕಥಾ ಹಂದರಕ್ಕೆ ಡಾ.ದಿನಕರ ಎಸ್. ಪಚ್ಚನಾಡಿ ಪದ್ಯ ರಚಿಸಿದ 'ಸ್ವರಾಜ್ಯ ಸ್ವಾತಂತ್ರ್ಯ ವಿಜಯ' ಪ್ರಸಂಗವನ್ನು ಪ್ರಸ್ತುತಪಡಿಸಲಾಯಿತು. ಮಹಿಳಾ ಭಾಗವತೆ ಅಮೃತ ಆಡಿಗ ಅವರ ಹಾಡುಗಾರಿಕೆಯಲ್ಲಿ ಯಕ್ಷಗಾನದ ನುರಿತ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರು ಅರ್ಥಧಾರಿಗಳಾಗಿ ಭಾಗವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ