ಮಂಗಳೂರು ವಿವಿಯಲ್ಲಿ ವೇಲ್ ಶಾರ್ಕ್ ಉಳಿಸಿ ಅಭಿಯಾನ

Upayuktha
0

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗವು, ಭಾರತೀಯ ವನ್ಯಜೀವಿ ಟ್ರಸ್ಟ್ (ಡಬ್ಲ್ಯುಟಿಐ) ಆಶ್ರಯದಲ್ಲಿ, ಒರಾಕಲ್ ಬೆಂಬಲದೊಂದಿಗೆ ತಿಮಿಂಗಿಲ ಶಾರ್ಕ್ ಮತ್ತು ಇತರ ಸಮುದ್ರದ ಜಲಚರಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ "ವೇಲ್ ಶಾರ್ಕ್ ಉಳಿಸಿ" ಅಭಿಯಾನದ ಅಂಗವಾಗಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಿತ್ತು.


ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಮುದ್ರ ಜೀವಿಗಳು ಸೇರಿದಂತೆ ಸಸ್ಯ ಸಂಕುಲ ಸಂರಕ್ಷಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯ, ಎಂದರು. ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ (ಡಬ್ಲ್ಯುಟಿಐ) - ಮಾಲಿನ್ಯ, ಆವಾಸಸ್ಥಾನ ನಷ್ಟ ಮತ್ತು ಹಡಗು ಸಂಚಾರದಂತಹ ಮನುಷ್ಯನ ಚಟುವಟಿಕೆಗಳಿಂದ ತಿಮಿಂಗಿಲ ಶಾರ್ಕ್ ಪ್ರಭೇದ ಅಪಾಯದಲ್ಲಿದೆ, ಎಂದು ತಿಮಿಂಗಿಲ ಶಾರ್ಕ್ ಸಂರಕ್ಷಣಾ ಯೋಜನೆಯ ಮುಖ್ಯಸ್ಥ ಚರಣ್ ಕುಮಾರ್ ಪೈಡಿ ಹೇಳಿದರು. ಹಿಂದೂ ಮಹಾಸಾಗರದಲ್ಲಿ ತಿಮಿಂಗಿಲ ಶಾರ್ಕ್ಗಳ ಚಲನೆಯ ಮಾಹಿತಿ ಮತ್ತು ಸಂರಕ್ಷಣಾ ಕಾರ್ಯತಂತ್ರಗಳ ಅನುಷ್ಠಾನದ ಕುರಿತು ಮಾಹಿತಿಯ ತುರ್ತು ಅಗತ್ಯವಿದೆ, ಎಂದು ಅವರು ಅಭಿಪ್ರಾಯಪಟ್ಟರು.


ಸಂಪನ್ಮೂಲ ವ್ಯಕ್ತಿ, ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಮಾಜಿ ಡೀನ್ ಪ್ರೊ.ಎಸ್.ಎಂ.ಶಿವಪ್ರಕಾಶ್ ಮಾತನಾಡಿ, ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಸಮುದ್ರದ ಪ್ರಕ್ಷುಬ್ಧತೆಯಿಂದಾಗಿ ಮೀನುಗಾರಿಕೆ ನಿಷೇಧವನ್ನು ಕಳೆದ ಎರಡು ವರ್ಷಗಳಲ್ಲಿ 100 ದಿನಗಳಿಗಿಂತ ಹೆಚ್ಚು ದಿನಗಳವರೆಗೆ ವಿಸ್ತರಿಸಲಾಗಿದೆ. ಇದು ಮೀನು ಸಂತತಿಯ ಪುನರುಜ್ಜೀವನಕ್ಕೆ ಸಹಾಯ ಮಾಡಿತು. ದೊಡ್ಡ ಪ್ರಮಾಣದ ಅಪ್ರಾಪ್ತ ಮೀನನ್ನು ಸೆರೆಹಿಡಿಯುವುದನ್ನು ತಡೆಯಲು ಟ್ರಾಲರ್ಗಳಲ್ಲಿ 35 ಎಂಎಂ ಗಾತ್ರದ ಮೆಶ್ ಅಳವಡಿಸಿಕೊಳ್ಳುವುದು ಉತ್ತಮ, ಎಂದರು.


ಜೈವಿಕ ವಿಜ್ಞಾನ ಪ್ರಾಧ್ಯಾಪಕ ಡಾ.ಪ್ರಶಾಂತ ನಾಯ್ಕ್ ಅವರು ತಮ್ಮ ವಿಶೇಷ ಉಪನ್ಯಾಸದಲ್ಲಿ ಪ್ಲಾಸ್ಟಿಕ್ ವಸ್ತುಗಳು ವಿಶೇಷವಾಗಿ ಏಕ-ಬಳಕೆಯ ಪ್ಲಾಸ್ಟಿಕ್ಗಳಾದ ಕ್ಯಾರಿ ಬ್ಯಾಗ್ಗಳು, ಸಿಕ್ಸ್ ಪ್ಯಾಕ್ ರಿಂಗ್ಗಳು, ನೀರಿನ ಬಾಟಲಿಗಳು, ಸಿಗರೇಟ್ ತುಂಡುಗಳು ಮತ್ತು ಇತರ ತ್ಯಾಜ್ಯಗಳು ಜಲಚರಗಳಿಗೆ ಕಂಟಕವಾಗಿವೆ. "ಸಮುದ್ರ ಪ್ರಾಣಿಗಳನ್ನು ಸಂರಕ್ಷಿಸಲು, ಮತ್ತು ಪರಿಸರ ಮತ್ತು ನಮ್ಮ ಉತ್ತಮ ಆರೋಗ್ಯದ ಸಲುವಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವುದು ನಮ್ಮ ಕರ್ತವ್ಯವಾಗಿದೆ" ಎಂದು ಅವರು ಹೇಳಿದರು.


ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಎಂ.ಎಸ್.ಮುಷ್ತಾಕ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ವೈಜ್ಞಾನಿಕ ಜ್ಞಾನದ ಉನ್ನತಿಗೆ ಕೊಡುಗೆ ನೀಡುವುದು ಮತ್ತು ವೈಜ್ಞಾನಿಕ ಸಮುದಾಯ ಮತ್ತು ಸಾರ್ವಜನಿಕರಿಗೆ ಕೊಡುಗೆ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ, ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೋಸ್ಟರ್ ಪ್ರದರ್ಶನ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಡಲ ಜೀವಿಗಳ ಮಹತ್ವ ಮತ್ತು ಸಂರಕ್ಷಣೆ ಕುರಿತು ಅರಿವು ಮೂಡಿಸಲು ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿದರು.


ಸುಮಾ ಕೋಟೆ ಸಮಾರಂಭವನ್ನು ನಿರೂಪಿಸಿದರು. ಸಂಶೋಧನಾರ್ಥಿ ಬಿ.ಎಸ್. ಚಂದನ್ ವಂದಿಸಿದರು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಅಧ್ಯಾಪಕರು ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ದೊಡ್ಡ ತಿಮಿಂಗಿಲ ಶಾರ್ಕ್ ಮಾದರಿಯನ್ನು ಪ್ರದರ್ಶಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top