ಉಪ್ಪಳ : ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಶ್ರೀ ವಿಷ್ಣುಸಹಸ್ರನಾಮ ಪಾರಾಯಣದ 1008 ನೇ ದಿನದ ಅಂಗವಾಗಿ ಶ್ರೀ ವಿಷ್ಣು ಸಹಸ್ರನಾಮ ಹವನ ಕಾರ್ಯಕ್ರಮ ವಿವಿಧ ವೈದಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು. ವೇ.ಮೂ. ಹರಿನಾರಾಯಣ ಮಯ್ಯ ಇವರ ನೇತೃತ್ವದಲ್ಲಿ ಶ್ರೀ ವಿಷ್ಣುಸಹಸ್ರನಾಮ ಹವನ ಕಾರ್ಯಕ್ರಮ ನಡೆಯಿತು.
ಈ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಮಂದಿರದ ಗೌರವಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀನಿವಾಸ ಯುನಿವರ್ಸಿಟಿ ಮುಕ್ಕ ಇದರ ಸಂಸ್ಕೃತ ವಿಭಾಗದ ಉಪನ್ಯಾಸಕ ಸೋಂದಾ ಭಾಸ್ಕರ್ ಭಟ್ ಧಾರ್ಮಿಕ ಭಾಷಣ ಗೈದರು.ಕಾರ್ಯಕ್ರಮದಲ್ಲಿ ಚಂದ್ರಹಾಸ ಕುಳೂರು,ಮಂದಿರದ ಅಧ್ಯಕ್ಷ ಶ್ರೀಧರ್.ರಾವ್, ಮಂದಿರದ ಗುರುಸ್ವಾಮಿ ರಂಜಿತ್ ಕುಮಾರ್ ಜೋಡುಕಲ್ಲು ಹಾಗೂ ಮಂದಿರದ ಸಂಘಟನಾ ಕಾರ್ಯಧ್ಯಕ್ಷ ದಿವಾಕರ್ ರೈ ಮುನ್ನಿಪ್ಪಾಡಿ ಉಪಸ್ಥಿತರಿದ್ದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಠಲ ನಾಯ್ಕ್ ಕಲ್ಲಡ್ಕ ಹಾಗೂ ಬಳಗದವರಿಂದ ವಿನೂತನ ಗೀತ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಜರಗಿತು.ಕಾರ್ಯಕ್ರಮವನ್ನು ಮಂದಿರದ ಪ್ರಧಾನ ಸಂಚಾಲಕರಾದ ತಿಮ್ಮಪ್ಪ ಮೈತಾಳ್ ಸ್ವಾಗತಿಸಿ,ಅಧ್ಯಾಪಕ ಚಂದ್ರಶೇಖರ್ ನಾಯಕ್ ವಂದಿಸಿದರು. ಕಾರ್ಯಕ್ರಮವನ್ನು ಅಧ್ಯಾಪಕ ರಾಮಚಂದ್ರ.ಕೆ.ಎಂ ನಿರೂಪಿಸಿದರು.