ಮಂಗಳೂರು: ತುಳುನಾಡಿನ ಇತಿಹಾಸದ ಅಧ್ಯಯನಕ್ಕೆ ಆಸಕ್ತಿಯ ಕೊರತೆಯೇ ಹೊರತು ಆಕರ ಗ್ರಂಥಗಳು ಅಥವಾ ಸಂಶೋಧನೆಯ ಕೊರತೆಯಲ್ಲ. ಧರ್ಮ ನಿಷ್ಠೆ, ಜಾತಿ ನಿಷ್ಠೆ, ಸಿದ್ಧಾಂತ ನಿಷ್ಠೆಗಳೆಲ್ಲವನ್ನೂ ಬದಿಗಿರಿಸಿ ಇತಿಹಾಸ ನಿಷ್ಠೆಯಿಂದ ಸಂಶೋಧನೆಗೈದಾಗ ಮಾತ್ರ ಅದು ಉತ್ತಮ ಅಧ್ಯಯನವಾಗುತ್ತದೆ, ಎಂದು ಮೂಡಬಿದಿರೆಯ ಧವಳಾ ಕಾಲೇಜಿನ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾದ ನಡೆದ ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಶಿಕ್ಷಕರ ಸಂಘ (ಮಾನುಷ) ದ ಜಂಟಿ ಸಹಯೋಗದಲ್ಲಿ ನಡೆದ ತುಳುನಾಡು ಮತ್ತು ಕೊಡಗಿನ ಇತಿಹಾಸ ಕುರಿತ ಉಪನ್ಯಾಸ ಮಾಲಿಕೆಯ ಸಮಾಪನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಈಗಿನ ವಿದ್ಯಾರ್ಥಿಗಳಿಗೆ ಇತಿಹಾಸದ ಬಗ್ಗೆ ಆಸಕ್ತಿ ಕಡಿಮೆ ಎನ್ನುವ ಆರೋಪವಿದೆ. ಯಾವುದೋ ದೇಶದ ಇತಿಹಾಸವನ್ನು ಕಲಿಯುವುದರ ಬದಲು ನಮ್ಮದೇ ಊರಿನ ಇತಿಹಾಸ ಕಲಿಸಿದ್ದಿದ್ದರೆ ಈ ಆರೋಪ ಬರುತ್ತಿರಲಿಲ್ಲವೇನೋ, ಎಂದು ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ಕೋವಿಡ್-19 ಕಾರಣದಿಂದ ಅಂತರ್ಜಾಲದ ಮೂಲಕ ಆರಂಭವಾದ ಈ ಉಪನ್ಯಾಸ ಸರಣಿ ಒಂದು ವರ್ಷಗಳ ಕಾಲ ನಡೆದಿರುವುದು ಒಂದು ಅಪೂರ್ವ ಸಾಧನೆ. ಈ ಉಪನ್ಯಾಸ ಮಾಲಿಕೆ ಇನ್ನಷ್ಟು ಜನರನ್ನು ತಲುಪುವಂತೆ ಮಾಡಲು ಪ್ರಸಾರಾಂಗದ ಮೂಲಕ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು, ಎಂದು ಭರವಸೆ ನೀಡಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ತುಳುನಾಡಿನ ಇತಿಹಾಸ ಅಧ್ಯಯನಕ್ಕೆ ಇನ್ನಷ್ಟು ಜನರು ಆಸಕ್ತಿ ವಹಿಸಬೇಕು, ಎಂದರು.
ಮಾನುಷದ ಅಧ್ಯಕ್ಷ ಡಾ. ಜಯರಾಮ್ ಶೆಟ್ಟಿಗಾರ್, ಕಾರ್ಯದರ್ಶಿ ಡಾ. ನವೀನ್ ಕೊಣಾಜೆ ಮಾತನಾಡಿದರು. ಉಪನ್ಯಾಸ ಸರಣಿಯ ಸಂಚಾಲಕ ಡಾ. ಗಣಪತಿ ಗೌಡ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ಡಾ. ಕುಮಾರಸ್ವಾಮಿ ಎಂ ಧನ್ಯವಾದ ಸಮರ್ಪಿಸಿದರು. ಇತಿಹಾಸ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಎಂ. ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ