ನ. 5ರಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ 12ನೇ ಘಟಿಕೋತ್ಸವ

Upayuktha
0

ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು ನವೆಂಬರ್ 5, 2022ರಂದು ಬೆಳಿಗ್ಗೆ 10ಕ್ಕೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ 12ನೇ ಘಟಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.


ಮಾನ್ಯ ಕುಲಾಧಿಪತಿಗಳಾದ ಶ್ರೀ ಎನ್.ವಿನಯ ಹೆಗ್ಡೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆಯಲಿದೆ. ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷರಾದ ಪ್ರೊ.ಮಮದಿಲ ಜಗದೀಶ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಘಟಿಕೋತ್ಸವ ಭಾಷಣವನ್ನು ಮಾಡಲಿರುವರು.


ಪ್ರೊ.ಡಾ. ಮಮದಿಲ ಜಗದೀಶ್ ಕುಮಾರ್ ಅವರು ನ್ಯಾನೋಟೆಕ್ನಾಲಜಿ ಕ್ಷೇತ್ರದಲ್ಲಿ ಸಂಶೋಧಕರಾಗಿ ಹೆಸರುವಾಸಿಯಾದವರು. ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಹಾಲಿ, ಯುಜಿಸಿಯ ಅಧ್ಯಕ್ಷರಾಗಿರುವ ಮಾನ್ಯರು, ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಟಿಬದ್ಧರಾಗಿದ್ದಾರೆ. ಅಲ್ಲದೇ ಇವರು, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಹೆಚ್ಚುವರಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಲು ಅವರು ಉತ್ಸುಕರಾಗಿದ್ದಾರೆ.


ಘಟಿಕೋತ್ಸವದ ಈ ದಿನದಂದು ಒಟ್ಟು 994 ಅಭ್ಯರ್ಥಿಗಳು ಸ್ನಾತಕ, ಸ್ನಾತಕೋತ್ತರ, ಡಾಕ್ಟೊರಲ್ ಪದವಿ ಹಾಗೂ ಫಲೋಶಿಪ್ ಪಡೆಯಲಿದ್ದಾರೆ. ಒಟ್ಟು 21 ಡಾಕ್ಟೊರಲ್, 324 ಸ್ನಾತಕೋತ್ತರ, 647 ಸ್ನಾತಕ ಪದವಿ ಹಾಗೂ 2 ಫೆಲೋಶಿಪ್ ನೀಡಲಾಗುವುದು. ವೈದ್ಯಕೀಯ, ದಂತ ವೈದ್ಯಕೀಯ, ಔಷಧ ವಿಜ್ಞಾನ, ಅನ್ವಯಿಕ ಆರೋಗ್ಯ ವಿಜ್ಞಾನ, ನರ್ಸಿಂಗ್, ಮಾಧ್ಯಮ ಮತ್ತು ಸಂವಹನ, ವಾಸ್ತುಶಿಲ್ಪ ಹಾಗೂ ಇತರ ವಿಷಯಗಳಲ್ಲಿ ಈ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಅಲ್ಲದೇ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ದತ್ತಿ ಚಿನ್ನದ ಪದಕ, ಪ್ರಶಂಸಾ ಪ್ರಮಾಣಪತ್ರಗಳನ್ನೂ ಇದೇ ಸಂದರ್ಭದಲ್ಲಿ ನೀಡಲಾಗುತ್ತಿದೆ. ಒಟ್ಟು 20 ಚಿನ್ನದ ಪದಕಗಳು, 9 ದತ್ತಿ ಪದಕಗಳು ಹಾಗೂ 11 ವಿಶ್ವವಿದ್ಯಾಲಯ ಪದಕಗಳನ್ನು ವಿತರಿಸಲಾಗುವುದು.


ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಡಾ. ಬಿ. ಸತೀಶ್ ಕುಮಾರ್ ಭಂಡಾರಿ ಅವರು ಸ್ವಾಗತ ಭಾಷಣ ಮಾಡಲಿದ್ದಾರೆ. ಆಸ್ಪತ್ರೆ ಆಡಳಿತ ವಿಭಾಗದ ಸಹ ಕುಲಾಧಿಪತಿಗಳಾದ ಪ್ರೊ.ಡಾ.ಎಂ. ಶಾಂತಾರಾಮ್ ಶೆಟ್ಟಿ, ಆಡಳಿತ ವಿಭಾಗದ ಸಹ ಕುಲಾಧಿಪತಿಗಳಾದ ಶ್ರೀ ವಿಶಾಲ್ ಹೆಗ್ಡೆ, ಸಹ ಕುಲಪತಿ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ, ಕುಲಸಚಿವ ಪ್ರೊ.ಡಾ. ಹರ್ಷ ಹಾಲಹಳ್ಳಿ, ಪರೀಕ್ಷಾ ನಿಯಂತ್ರಕ ಪ್ರೊ. ಡಾ. ಪ್ರಸಾದ್ ಬಿ.ಶೆಟ್ಟಿ ಭಾಗವಹಿಸಲಿರುವರು.


ಇದೇ ಸಂದರ್ಭದಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ನಿವೃತ್ತ ಹಿರಿಯ ಸಲಹೆಗಾರ ಪ್ರೊ.ಟಿ.ಎಸ್.ರಾವ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಲಾಗುತ್ತಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪ್ರೊ.ರಾವ್ ಅವರು, ರಾಷ್ಟ್ರೀಯ ಪೋಲಿಯೊ ನಿರ್ಮೂಲನಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. 2014ರಲ್ಲಿ ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರವನ್ನಾಗಿಸುವಲ್ಲಿ ಪ್ರೊ.ರಾವ್ ಅವರ ಪಾತ್ರ ಹಿರಿದು. ಜೊತೆಗೆ, ಇವರು ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮದ ಅಡಿಯಲ್ಲಿ ದೇಸೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ರೋಟಾವೈರಸ್ ಅನ್ವೇಷಣೆಯ ಹಿಂದೆಯೂ ಇವರ ಶ್ರಮವಿದೆ.


ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು 2008ರಲ್ಲಿ ಪ್ರಾರಂಭಗೊಂಡಿದ್ದು, ಅಂದಿನಿಂದಲೂ ಶಿಕ್ಷಣದಲ್ಲಿ ಗುಣಮಟ್ಟ ಹಾಗೂ ಮೌಲ್ಯಗಳನ್ನು ಜಾರಿಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ಕಾರ್ಕಳದ ನಿಟ್ಟೆಯಲ್ಲಿ ತನ್ನ ಮೊದಲ ಬಾಹ್ಯ ಕ್ಯಾಂಪಸ್ ಅನ್ನು ಪ್ರಾರಂಭಿಸುವ ಮೂಲಕ ಬಹು - ವಿಷಯ ಅಧ್ಯಯನ ವಿಶ್ವವಿದ್ಯಾನಿಲಯವಾಗಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು ಹೊರಹೊಮ್ಮಿದೆ. ೨೦೨೨ರಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಚೌಕಟ್ಟು (ಎನ್ಐ.ಆರ್.ಎಫ್) ವತಿಯಿಂದ 75ನೇ ರ‍್ಯಾಂಕ್ ಗಳಿಸಿದೆ. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿ (ನ್ಯಾಕ್) ಯಿಂದ ಎ - ಪ್ಲಸ್ ಸಹಾ ವಿಶ್ವವಿದ್ಯಾನಿಲಯವು ಗಳಿಸಿದೆ. ಏಷ್ಯಾದ ಕ್ಯೂ - ಎಸ್ ವಿಶ್ವ ವಿಶ್ವವಿದ್ಯಾನಿಲಯ ರ‍್ಯಾಂಕಿಂಗ್ ಪಟ್ಟಿಯಲ್ಲಿ 401 ರಿಂದ 450ರ ಸ್ಥಾನವನ್ನು ಪಡೆದಿದೆ. ತನ್ನ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳಿಂದಾಗಿ ಟೈಮ್ಸ್ ಉನ್ನತ ಶಿಕ್ಷಣ ಪರಿಣಾಮ ರ‍್ಯಾಂಕಿಂಗ್ ಪಟ್ಟಿಯಲ್ಲಿ ವಿಶ್ವದ 300 ವಿಶ್ವವಿದ್ಯಾನಿಲಯಗಳ ಸಾಲಿಗೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು ಸೇರಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top