ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟ ಸಮಾರೋಪ ಸಮಾರಂಭ
ಮೇರಿಹಿಲ್: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟ 2022 ಇದರ ಸಮಾರೋಪ ಸಮಾರಂಭವು ದಿನಾಂಕ: 12-11-2022, ಶನಿವಾರದಂದು ಜಿಲ್ಲಾ ಗೃಹರಕ್ಷಕದಳದ ಕಛೇರಿ ಆವರಣದ ಮೇರಿಹಿಲ್ ಇಲ್ಲಿ ನಡೆಯಿತು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಡಾ|| ಕಿಶನ್ ರಾವ್, ಬಾಳಿಲ, ಜನರಲ್ ಸರ್ಜನ್ ಎ.ಜೆ. ಆಸ್ಪತ್ರೆ, ಮಂಗಳೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಗೃಹರಕ್ಷಕರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳಲ್ಲಿ ಹೆಗಲು ಕೊಟ್ಟು ಕೆಲಸ ನಿರ್ವಹಿಸುವ ಗೃಹರಕ್ಷಕರಿಗೆ ದೈಹಿಕ ಕ್ಷಮತೆ ಅತೀ ಅಗತ್ಯ ಈ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳು ಅತೀ ಅವಶ್ಯಕ, ಮಾನಸಿಕ ಒತ್ತಡದಿಂದಾಗಿ ದೇಹಕ್ಕೆ ಹೆಚ್ಚಿನ ರೋಗಗಳು ಬರುತ್ತದೆ ಇಂತಹ ಕ್ರೀಡಾಕೂಟಗಳಿಂದ ಮಾನಸಿಕ ಒತ್ತಡ ಕಡಿಮೆ ಆಗಿ ಮಾನಸಿಕ ಆರೋಗ್ಯ ವೃದ್ದಿಸುತ್ತದೆ, ಆಟದಲ್ಲಿ ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು, ಎಂದು ನುಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಮಾತನಾಡಿ ದೈಹಿಕ ಕ್ಷಮತೆ ಎನ್ನುವುದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರಬೇಕು. ಯಾವುದೇ ವೃತ್ತಿ ಅಥವಾ ಯಾವುದೇ ಕೆಲಸ ಮಾಡುವಾಗ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಅವಶ್ಯಕ. ಆರೋಗ್ಯಕ್ಕಿಂತ ಉತ್ತಮವಾದ ಸಂಪತ್ತು ಬೇರೆ ಯಾವುದೂ ಇಲ್ಲ. ಈ ಆರೋಗ್ಯವನ್ನು ಕಾಪಾಡಿಕೊಳ್ಳಲು, ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ನಿರಂತರವಾದ ದೈಹಿಕ ಚಟುವಟಿಕೆಗಳು ಪೂರಕವಾದಂತಹ ಕ್ರೀಡಾಕೂಟಗಳು ಅಗತ್ಯ.
ನಮ್ಮ ದಿನನಿತ್ಯದ ಕೆಲಸದ ಜೊತೆಗೆ ಒಂದಷ್ಟು ದಿನ ನಮ್ಮ ಮನಸ್ಸನ್ನು ಉಲ್ಲಸಿತರಾಗಿಸಲು, ಒತ್ತಡವನ್ನು ನಿಯಂತ್ರಿಸಲು ಈ ಕ್ರೀಡಾಕೂಟ ಅವಶ್ಯಕ. ಸೋಲೇ ಗೆಲುವಿನ ಸೋಪಾನ, ಗೆದ್ದವರಿಗೂ ಶುಭಾಶಯಗಳು, ಸೋತವರಿಗೂ ಶುಭಾಶಯಗಳು. ಯಾಕೆಂದರೆ ಆಟದಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ. ಒಬ್ಬ ಗೆಲ್ಲಬೇಕಾದರೆ ಇನ್ನೊಬ್ಬ ಸೋಲಲೇ ಬೇಕು. ಕ್ರೀಡೆಯಲ್ಲಿ ವ್ಯಕ್ತಿ ಗೆಲ್ಲುವುದಲ್ಲ, ಕ್ರೀಡೆ ಗೆಲ್ಲಬೇಕು. ಗೆದ್ದವರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ನಮ್ಮ ಜಿಲ್ಲೆಯ ಗೌರವವನ್ನು ಮಗದಷ್ಟು ಎತ್ತರಕ್ಕೆ ಏರಿಸಿ, ಅಲ್ಲಿಂದ ಗೆದ್ದು, ರಾಜ್ಯಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಿ ನಮ್ಮ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿ ಎಂದು ನುಡಿದರು.
ಶ್ರೀ ರಮೇಶ್ ಡೆಪ್ಯೂಟಿ ಕಮಾಂಡೆಂಟ್ ಸ್ವಾಗತಿಸಿದರು. ಶ್ರೀಮತಿ ಸುಖಿತಾ, ಉಪ್ಪಿನಂಗಡಿ ಘಟಕ ರವರು ಪ್ರಾರ್ಥನೆ ಮಾಡಿದರು. ಮಂಗಳೂರು ಘಟಕದ ಘಟಕಾಧಿಕಾರಿ ಶ್ರೀ ಮಾರ್ಕ್ ಶೇರಾ ರವರು ವಂದನಾರ್ಪಣೆ ಮಾಡಿದರು. ಜಿಲ್ಲಾ ಗೃಹರಕ್ಷಕದಳದ 35 ಮಂದಿ ಗೃಹರಕ್ಷಕರು ಆಯ್ಕೆಯಾಗಿ ಪಶ್ಚಿಮ ವಲಯದ ಕ್ರೀಡಾಕೂಟಕ್ಕೆ ಆಯ್ಕೆಯಾದರು. ಈ ಕಾರ್ಯಕ್ರಮದಲ್ಲಿ ಕಛೇರಿ ಅಧೀಕ್ಷರಾದ ರತ್ನಾಕರ್, ಪ್ರಥಮ ದರ್ಜೆ ಸಹಾಯಕರಾದ ಅನಿತಾ ಟಿ.ಎಸ್ ಹಾಗೂ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ