ದೇಶ ಕಂಡ ಅಪರೂಪದ ಸಂಸ್ಕೃತ ಪಂಡಿತ ರಾಮಕೃಷ್ಣ ಭಟ್ಟರು
ಉಡುಪಿ/ ಮಂಗಳೂರು: ಶ್ರೀ ರಾಮಚಂದ್ರಾಪುರ ಮಠದ 35ನೇ ಪೀಠಾಧಿಪತಿ ರಾಘವೇಂದ್ರ ಭಾರತೀ ಮಹಾಸ್ವಾಮೀಜಿಯವರ ಆರಾಧನೆಯ ಸಂದರ್ಭದಲ್ಲಿ ನೀಡಲಾಗುವ ರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರಕ್ಕೆ ಈ ಬಾರಿ ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ರಾಮಕೃಷ್ಣ ಭಟ್ಟರು ಆಯ್ಕೆಯಾಗಿದ್ದಾರೆ. ಕೊಲ್ಲೂರಿನಲ್ಲಿ ಡಿಸೆಂಬರ್ 1ರಂದು ನಡೆಯುವ ಸಮಾರಂಭದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡುವರು.
ಕೊಲ್ಲೂರು ಮೂಕಾಂಬಿಕಾ ದೇವಾಲಯದ ಮುಖ್ಯ ಅರ್ಚಕ ಶ್ರೀಧರ ಅಡಿಗ ಅವರ ಮನೆಯಲ್ಲಿ ನಡೆಯುವ ಶ್ರೀರಾಘವೇಂದ್ರಭಾರತೀಸ್ವಾಮೀಜಿಯವರ ಆರಾಧನಾ ಮಹೋತ್ಸವದಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪರಂಪರಾಗತ ವೈದಿಕ ವೃತ್ತಿ ಕಲಿತರೂ ಅದನ್ನು ಬಿಟ್ಟು, ಸಂಸ್ಕøತ ಶಾಸ್ತ್ರ- ವೇದಾಂತಗಳಲ್ಲಿ ಸಾಧನೆ ಮಾಡುವ ಹಂಬಲದೊಂದಿಗೆ ಎಳವೆಯಲ್ಲೇ ಕಾಶಿಗೆ ತೆರಳಿ ಉನ್ನತ ಅಧ್ಯಯನ ಕೈಗೊಂಡ ಭಟ್ಟರದ್ದು ಬಹುಮುಖ ಪ್ರತಿಭೆ. ಕನ್ನಡ, ಸಂಸ್ಕøತ, ಹಿಂದಿ, ತೆಲುಗು, ತಮಿಳು, ಮರಾಠಿ, ಇಂಗ್ಲಿಷ್, ಮಲೆಯಾಳಂ ಹಾಗೂ ತುಳು ಹೀಗೆ ಎಂಟು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರಾದರೂ ಮಿತಭಾಷಿಯಾಗಿ, ಎಲೆ ಮರೆಯ ಕಾಯಿಯಾಗಿ ಸಂಸ್ಕøತ ಅಧ್ಯಾಪನಾ ಕ್ಷೇತ್ರಕ್ಕೆ ಸಮರ್ಪಿಸಿಕೊಂಡ ಅಪೂರ್ವ ಪಂಡಿತರು.
ಸಂಸ್ಕøತ ಮೀಮಾಂಸೆ ಕಲಿಯುವ ಹಂಬಲದೊಂದಿಗೆ ಚೆನ್ನೈನ ಮೈಲಾಪುರ ವಿಶ್ವವಿದ್ಯಾನಿಲಯಕ್ಕೆ ತೆರಳಿದರು. ಆದರೆ ಬಳಿಕ ಹಲವು ವರ್ಷಗಳ ಕಾಲ ಅವರ ಮಾಹಿತಿಯೇ ಇಲ್ಲದೇ ಕುಟುಂಬದವರು ಚಿಂತಿತರಾಗಿದ್ದರು. ನಿರಂತರ ಪರಿಶ್ರಮದಿಂದ ಕಾಶಿಯಲ್ಲಿ ಸಂಸ್ಕøತದಲ್ಲಿ ಪಾಂಡಿತ್ಯ ಸಾಧಿಸಿದ ಬಳಿಕವಷ್ಟೇ, ಪತ್ರಬರೆದು ಕುಟುಂಬದ ಜತೆ ಮರು ಸಂಪರ್ಕ ಸಾಧಿಸಿದ ಭಟ್ಟರ ಕಲಿಕಾ ಪ್ರೀತಿ ಅನನ್ಯ.
"ಮೈಲಾಪುರ ವಿವಿಯಲ್ಲಿ ಪ್ರವೇಶಾವಕಾಶ ಸಿಗದಿದ್ದಾಗ, ಮನೆಯಲ್ಲೂ ಹೇಳದೇ ನೇರವಾಗಿ ರೈಲಿನಲ್ಲಿ ಕಾಶಿಗೆ ಬಂದಿದ್ದೆ. ಅಧ್ಯಯನದ ಸಮಯ ಹಲವು ವರ್ಷಗಳ ಕಾಲ ಕುಟುಂಬದ ಸಂಪರ್ಕವೇ ಇರಲಿಲ್ಲ. ಸಂಪರ್ಕ ಸಾಧ್ಯತೆಗಳೂ ಕಡಿಮೆ ಇದ್ದ ಕಾರಣ ನಾನು ಬದುಕಿ ಉಳಿದ ಬಗ್ಗೆಯೇ ಮನೆಯವರಿಗೆ ಸಂಶಯ ಮೂಡಿತ್ತು" ಎಂದು ಭಟ್ಟರು ನೆನಪಿಸಿಕೊಳ್ಳುತ್ತಾರೆ.
ವಾರಣಾಸಿ ವೈದಿಕ ಮನೆತನದಲ್ಲಿ 1948ರಲ್ಲಿ ವಿ.ಕೃಷ್ಣಭಟ್- ಸರಸ್ವತಿ ದಂಪತಿಯ ಪುತ್ರರಾಗಿ ಜನಿಸಿದ ಭಟ್ಟರು, ಮಡಿಪು ಕೃಷ್ಣಭಟ್ಟರ ಮನೆಯಲ್ಲಿದ್ದುಕೊಂಡೇ ಕೃಷ್ಣ ಯಜುರ್ವೇದ ಅಭ್ಯಾಸ ಮಾಡಿದರು. ಬಳಿಕ ಶೃಂಗೇರಿ ಶ್ರೀ ಸದ್ವಿದ್ಯ ಸಂಜೀವಿನೀ ಪಾಠಶಾಲೆಯಲ್ಲಿ ಪ್ರಾಥಮಿಕ ಸಂಸ್ಕøತ ಕಲಿತ ನಂತರ ಕಾಶೀ ಶ್ರೀವಲ್ಲಭರಮ ಸಾಂಗವೇದ ವಿದ್ಯಾಲಯದಲ್ಲಿ ಗುರುಕುಲ ಪದ್ಧತಿಯಂತೆ ರಾಮಚಂದ್ರ ಶಾಸ್ತ್ರಿ ಹೊಸಮನೆ, ಗಣಪತಿ ಹೆಬ್ಬಾರ ಶಾಸ್ತ್ರಿ, ಸುಬ್ರಹ್ಮಣ್ಯ ಶಾಸ್ತ್ರಿಯವರಂಥ ಪ್ರಕಾಂಡ ಪಂಡಿತರ ಬಳಿ ನ್ಯಾಯ, ವೇದಾಂತ ಶಾಸ್ತ್ರಗಳನ್ನು ಅಧ್ಯಯನ ಮಾಡಿದರು. ಬಳಿಕ ಸಂಪೂರ್ಣಾನಂದ ಸಂಸ್ಕøತ ವಿಶ್ವವಿದ್ಯಾಲಯದಿಂದ ನ್ಯಾಯ ಮತ್ತು ವೇದಾಂತದಲ್ಲಿ ಎಂಎ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಪಿಎಚ್‍ಡಿ ಪದವಿ ಪಡೆದರು.
ಕಾಶಿಯ ಶ್ರೀ ದಕ್ಷಿಣಾಮೂರ್ತಿ ಸಂಸ್ಕøತ ಮಹಾವಿದ್ಯಾಲಯ, ಕಾಂಚಿ ಶ್ರೀ ಚಂದ್ರಶೇಖರ ಸರಸ್ವತಿ ವಿಶ್ವ ಹಾವಿದ್ಯಾಲಯ ಹಾಗೂ ಕಾಲಟೀ ಶ್ರೀ ಶಂಕರಾಚಾರ್ಯ ಸಂಸ್ಕøತ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪನಾ ಕಾರ್ಯ ನಡೆಸಿ, ಪ್ರೊಫೆಸರ್, ಸಂಕಾಯ ಪ್ರಮುಖರಾಗಿ ನಿರ್ವತ್ತರಾದರು. ತಮ್ಮ ವೃತ್ತಿಜೀವನದಲ್ಲಿ 10 ಎಂಫಿಲ್ ಹಾಗೂ 14 ಪಿಎಚ್‍ಡಿ ಪದವಿಗೆ ಮಾರ್ಗದರ್ಶನ ನೀಡಿದ ಹೆಗ್ಗಳಿಕೆ ಇವರದ್ದು. 2008ರಲ್ಲಿ ವೃತ್ತಿಯಿಂದ ನಿವೃತ್ತಿ ಹೊಂದಿದರೂ, ಅಧ್ಯಾಪನ ಮುಂದುವರಿಸಿರುವ ಇವರು ಪ್ರಸ್ತುತ ಕಾಲಟಿ ವಿವಿಯ ಶಾಸ್ತ್ರಸಂವರ್ಧಿನೀ ಕೇಂದ್ರದ ಅಧ್ಯಕ್ಷರಾಗಿ, ವಿಸಿಟಿಂಗ್ ಪ್ರೊಫೆಸರ್ ಆಗಿ ಶಾಸ್ತ್ರಾಧ್ಯಾಪನ ಮುಂದುವರಿಸಿದ್ದಾರೆ. ದೆಹಲಿ, ಅಲಹಾಬಾದ್, ಕೊಲ್ಕತ್ತಾ ವಿವಿಗಳಲ್ಲಿ ಪರೀಕ್ಷಾಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಜತೆಗೆ ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಸ್ಕೃತ ಸಮ್ಮೇಳನಗಳಲ್ಲಿ ಹಲವು ಪ್ರಬಂಧಗಳನ್ನು ಮಂಡಿಸಿ ಮನ್ನಣೆ ಗಳಿಸಿದ್ದಾರೆ.
ರಾಷ್ಟ್ರಪತಿ ಪುರಸ್ಕಾರಕ್ಕೆ ಭಾಜನರಾದ ರಾಜ್ಯದ ಬೆರಳೆಣಿಕೆಯ ವಿದ್ವಾಂಸರಲ್ಲಿ ರಾಮಕೃಷ್ಣ ಭಟ್ಟರು ಒಬ್ಬರು. ವಾಚಸ್ಪತಿ ಪುರಸ್ಕಾರ, ಪರಮೇಶ್ವರ ಭಾರತೀ ಸ್ಮಾರಕ ಸುವರ್ಣ ಮುದ್ರಾ ಪುರಸ್ಕಾರ, ರಾಜವಂಶದ ರೇವತೀಪಟ್ಟತ್ತಾನ ಪುರಸ್ಕಾರ, ಶ್ರಿದೇವಿ ಪುರಸ್ಕಾರ ಹೀಗೆ ಹತ್ತು ಹಲವು ಪ್ರಸ್ತಿಗಳಿಗೆ ಭಾಜನರಾಗಿದ್ದಾರೆ.
ಶ್ರೀರಾಮಚಂದ್ರಾಪುರ ಮಠದ 35ನೇ ಪೀಠಾಧಿಪತಿಗಳಾಗಿದ್ದ ಶ್ರೀ ರಾಘವೇಂದ್ರ ಭಾರತೀ ಸ್ವಾಮೀಜಿವರು ಹಾಗೂ ಭಟ್ಟರು ಶಾಸ್ತ್ರ ಕಲಿತದ್ದು ಕಾಶಿಯಲ್ಲಿ ಒಬ್ಬರೇ ಗುರುಗಳ ಬಳಿಯಲ್ಲಿ. ಶ್ರೀ ರಾಘವೇಂದ್ರಭಾರತೀಸ್ವಾಮೀಜಿಯವರಿಗೆ ಆಪ್ತರಾಗಿದ್ದ ಭಟ್ಟರಿಗೆ ಇದೀಗ ಅವರದ್ದೇ ಹೆಸರಿನಲ್ಲಿ ನೀಡಲಾಗುವ ಪಾಂಡಿತ್ಯ ಪುರಸ್ಕಾರ ಸಂದಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ