ಮೊದಲ ಸುದ್ದಿ
ಇದು 05.10.2022 ರಂದು ಮಾಧ್ಯಮಗಳಲ್ಲಿ ಬಂದ ಸುದ್ದಿ:
ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ರಾಜ್ಯ ಸರಕಾರದಿಂದ, ನಾಲ್ಕು ಕೋಟಿ ರೂಪಾಯಿಗಳಷ್ಟು ಅನುದಾನ ಘೋಷಣೆ!!
- ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.
ಬೆಂಗಳೂರು: ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ, ರಾಜ್ಯ ಸರಕಾರ ಒಟ್ಟು ಎಂಟು ಕೋಟಿ ರೂಪಾಯಿಗಳಷ್ಟು ಅನುದಾನ ನಿಗಡಿಮಾಡಿ, ನಾಲ್ಕು ಕೋಟಿ ರೂಪಾಯಿಗಳನ್ನು ರೈತರಿಗೆ ವಿತರಿಸಲು, ಬಿಡುಗಡೆ ಮಾಡಲಾಗಿದೆ.
ಈ ಕುರಿತು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರರವರು ಹೇಳಿಕೆ ನೀಡಿದ್ದು, ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮತ್ತು ಕೊಡಗು, ಹಾಸನ ಜಿಲ್ಲೆಯಲ್ಲಿ ಒಟ್ಟು ಇಪ್ಪತ್ತು ಸಾವಿರ ಹೆಕ್ಟೇರ್ ಅಡಿಕೆ ಬೆಳೆ ಪ್ರದೇಶದಲ್ಲಿ ಎಲೆ ಚುಕ್ಕೆ ರೋಗ ಹಬ್ಬಿದ್ದು, ಇದರ ನಿಯಂತ್ರಣ ಬಗ್ಗೆ, ತೋಟಗಾರಿಕೆ ಇಲಾಖೆ ಔಷದಿ ಹಾಗೂ *ಸಿಂಪರಣೆ ವೆಚ್ಚ ಭರಿಸಲು ಅನುದಾನ ಬಿಡುಗಡೆ ಗೊಳಿಸಿದ್ದು, ರೈತ ಬಾಂಧವರು ಇದರ ಸದುಪಯೋಗ ಪಡೆಯಬೇಕು* ಎಂದು ವಿನಂತಿಸಿದ್ದಾರೆ.
ರೋಗ ನಿಯಂತ್ರಣಕ್ಕೆ, ಉತ್ತಮ ಗುಣ ಮಟ್ಟದ ಸಸ್ಯ ಸಂರಕ್ಷಣೆ ಔಷಧ ಕೊಳ್ಳಲು, ಪ್ರತಿ ಹೆಕ್ಟೇರ್ ಗೆ, 4000 ರೂಪಾಯಿ ಅನುದಾನವನ್ನು, ಮೊದಲ ಸಿಂಪರಣೆಗಾಗಿ 1.5 ಹೆಕ್ಟೇರ್ ತೋಟಗಾರಿಕಾ ಪ್ರದೇಶ ಮಿತಿಗೊಳಪಟ್ಟು ರೈತರಿಗೆ, ಅನುದಾನ ಒದಗಿಸಲಾಗುವುದು.
ಎಲೆ ಚುಕ್ಕೆ ಬಾಧೆ ಕುರಿತು, ಕಳೆದ ವಾರ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ತೋಟಗಾರಿಕಾ ಸಚಿವ ಶ್ರೀ ಮುನಿರತ್ನ, ಮೀನುಗಾರಿಕೆ ಸಚಿವ ಶ್ರೀ ಅಂಗಾರ ಅವರೊಂದಿಗೆ, ಸಭೆ ನಡೆಸಿ, ರೋಗ ನಿಯಂತ್ರಣದ ಅಗತ್ಯದ ಬಗ್ಗೆ ಚರ್ಚಿಸಿದ್ದರು.
ಸುಮಾರು 20000 ಹೆಕ್ಟೇರ್ ಅಡಿಕೆ ಬೆಲೆ ಪ್ರದೇಶದಲ್ಲಿ ಎಲೆ ಚುಕ್ಕೆ ರೋಗ ಭಾದಿಸುತ್ತಿದ್ದು ರೈತರಲ್ಲಿ ಆತಂಕ ಮೂಡಿಸಿದೆ, ಹಾಗೂ ರೋಗ ನಿಯಂತ್ರಣಕ್ಕೆ ಒಟ್ಟು ಎಂಟು ಕೋಟಿ ರೂಪಾಯಿಗಳ ಅನುದಾನದ ಅಗತ್ಯವಿದೆ ಎಂದು ತೋಟಗಾರಿಕಾ ತಜ್ಞರು, ಶಿಫಾರಸು ಮಾಡಿದ್ದಾರೆ.
**
ಎರಡನೇ ಸುದ್ದಿ
ಇದು 07.11.2022 ರಂದು ಮಾಧ್ಯಮಗಳಲ್ಲಿ ಬಂದ ಸುದ್ದಿ:
ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಹೆಚ್ಚುವರಿಯಾಗಿ ಹತ್ತು ಕೋಟಿ ರೂಪಾಯಿಗಳ ಅನುದಾನ ಘೋಷಣೆ ಮಾಡಿದ ಮುಖ್ಯ ಮಂಮತ್ರಿಗಳು
ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ, ರೈತರ ಆರ್ಥಿಕ ಬೆನ್ನೆಲುಬು ಆಗಿರುವ, ಅಡಕೆ ತೋಟ ಗಳು, ಎಲೆ ಚುಕ್ಕೆ ರೋಗದಿಂದ ಭಾದಿತ ವಾಗಿದ್ದು ಈಗಾಗಲೇ ರಾಜ್ಯ ಸರಕಾರ ಎಂಟು ಕೋಟಿ ರೂಪಾಯಿಗಳ ನೆರವನ್ನು ಔಷಧಿ ಸಿಂಪರಣೆ ಗೆಂದು, ಘೋಷಣೆ ಮಾಡಿ ಸುಮಾರು ನಾಲ್ಕು ಕೋಟಿ ರೂಪಾಯಿಗಳನ್ನು ಬಿಡುಗಡೆ ಗೊಳಿಸಿದೆ.
ಇಂದು ಬೈಂದೂರುನಲ್ಲಿ, ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು, ತೀರ್ಥಹಳ್ಳಿಯ ರೈತ ಪ್ರತಿನಿಧಿಗಳ ನಿಯೋಗ ಭೇಟಿ ನೀಡಿದ ಸಂದರ್ಭದಲ್ಲಿ, ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಹೆಚ್ಚುವರಿಯಾಗಿ ಹತ್ತು ಕೋಟಿ ರೂಪಾಯಿಗಳ ಅನುದಾನ ಘೋಷಿಸಿದ್ದಾರೆ.
ಎಲೆ ಚುಕ್ಕೆ ರೋಗದ ತೀವ್ರತೆಯನ್ನು ಅರಿತು, ಹಾಗೂ ಅದರಿಂದ ಆತಂಕಕ್ಕೆ ಒಳಗಾಗಿರುವ ರೈತ ಸಮುದಾಯದ ರಕ್ಷಣೆಗೆ, ಮುಖ್ಯಮಂತ್ರಿಗಳು ಮುಂದಾಗಿದ್ದಾರೆ.
ಇದಕ್ಕಾಗಿ, ಮುಖ್ಯಮಂತ್ರಿ ಗಳಿಗೆ, ರೈತರ ಪರವಾಗಿ, ಧನ್ಯವಾದಗಳು.
-ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.
**
ರಿಯಾಲಿಟಿ ಚಕ್ ಆಗಬೇಕಾದ್ದು ಮತ್ತು ಅದಕ್ಕೆ ಬೇಕಾದ ಟೂಲ್ಸ್!!
೧) ಘೋಷಣೆಯಾದ, ಘೋಷಣೆ ಮಾಡಿ ಬಿಡುಗಡೆಯಾದ, ಬಿಡುಗಡೆಯಾಗಿ ವಿತರಣೆಯಾದ, ವಿತರಣೆಯಾಗಿ ..........ಯಾದ ಕೋಟಿ ಕೋಟಿ ಹಣ ಎಲ್ಲಿಗೆ ಹೋಗಿದೆ?
೨) ಮೊದಲ ವರದಿಯಲ್ಲಿ ಎಲೆ ಚುಕ್ಕಿ ರೋಗಕ್ಕೆ ಎಂದು ಬಿಡುಗಡೆಯಾದ ಹಣದಲ್ಲಿ ರೈತರಿಗೆ ಪ್ರತಿ ಹೆಕ್ಟೇರ್ ಗೆ, 4000 ರೂಪಾಯಿ ಅನುದಾನವನ್ನು, ಮೊದಲ ಸಿಂಪರಣೆಗಾಗಿ ಅನುದಾನ ಒದಗಿಸಲಾಗುವುದು ಎಂದಿದೆ. ಆ ಹಣ ನೇರವಾಗಿ ರೈತರ ಖಾತೆಗೆ ಸಂದಾಯವಾಗುತ್ತದೋ? ಅಥವಾ ಪೂರ್ತಿ ₹4,000 ವನ್ನು ಔಷಧಿ ರೂಪದಲ್ಲಿ ಕೊಡಲಾಗುತ್ತದೆಯೋ ಎಂಬ ಬಗ್ಗೆ ವರದಿಯಲ್ಲಿಲ್ಲ, ಮತ್ತೆ ವರದಿಯೂ ಬಂದಿಲ್ಲ. ತೋಟಗಾರಿಕೆ ಇಲಾಖೆಯಲ್ಲಿ ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ.
3) ಸಲ್ಫರ್ ಮಿಲ್ಸ್ ಲಿಮಿಟೆಡ್ ಕಂಪನಿಯ Flo Max ಬ್ರಾಂಡಿನ ಹೆಕ್ಸಾಕೊನಾಜೋಲ್ ಔಷಧಿಯನ್ನು ಪ್ರತಿ ರೈತರಿಗೆ ಎರಡು ಲೀಟರ್‌ನಂತೆ ಉಚಿತವಾಗಿ ಕೊಡಲಾಗುತ್ತಿದೆ. ಇದರ MRP ಲೀಟರ್‌ಗೆ ₹ 563. ಎರಡು ಲೀಟರ್‌ಗೆ ₹ ಯಾವ ಕ್ಯಾಲಿಕ್ಯುಲೇಟರ್‌ನಲ್ಲಿ ಲೆಕ್ಕ ಹಾಕಿದರೂ ₹ 1,126 ಮಾತ್ರ. ಸರಕಾರವೇ ನೇರವಾಗಿ ಕಂಪನಿಯಿಂದ ಪಡೆದು, ತೋಟಗಾರಿಕೆ ಇಲಾಖೆ ಮೂಲಕ ಕೊಡುತ್ತಿರುವುದರಿಂದ ಯಾವುದೇ ಟ್ಯಾಕ್ಸ್, ಡ್ಯುಟಿ ಇಲ್ಲದೇನೆ ಕಂಪನಿಯಿಂದ ಪಡೆದು ರೈತರಿಗೆ ನೀಡುತ್ತಿರಬಹುದು ಅಲ್ಲವೆ? ಆಗ ₹ 1,126 ಕ್ಕಿಂತ ಕಡಿಮೆ ಮೊತ್ತವಾಗುತ್ತದೆ.
4) ಸುದ್ದಿಯಲ್ಲಿ ಪ್ರಕಟಗೊಂಡಂತೆ- ಪ್ರತಿ ಹೆಕ್ಟೇರ್‌ಗೆ, 4000 ರೂಪಾಯಿ ಅನುದಾನವನ್ನು, ಮೊದಲ ಸಿಂಪರಣೆಗಾಗಿ ಕೊಡಲಾಗುತ್ತದೆ ಎಂದಾದರೆ, ಎರಡು ಲೀಟರ್ Flo Max ಬ್ರಾಂಡಿನ ಹೆಕ್ಸಾಕೊನಾಜೋಲ್ ಔಷಧಿಯನ್ನು ಈ ಅನುದಾನದಲ್ಲಿಯೇ ಕೊಡಲಾಗುತ್ತಿದೆಯೆ? ಹೌದಾದರೆ ಪ್ರತೀ ರೈತನಿಗೆ ಯೋಜಿತ ₹ 4,000 ದಲ್ಲಿ ಹೆಕ್ಸಾಕೊನಾಜೋಲ್‌ನ ಎರಡು ಲೀಟರ್ MRP ಯನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ ಉಳಿದ ₹.2,874 ಯಾವ ರೂಪದಲ್ಲಿ ರೈತರಿಗೆ ಕೊಡಲಾಗುತ್ತದೆ? ಇದು ಔಷಧಿ ಸಿಂಪಡಣೆಗಾಗಿ ತಗಲುವ ಖರ್ಚಿನ ಅನುದಾನವೆ? ವರದಿಯಲ್ಲೂ ಕೂಡ ಸಿಂಪರಣೆ ವೆಚ್ಚ ಭರಿಸಲು ಎಂದಿದೆ. ಇದನ್ನು ಯಾವಾಗ ಕೊಡಲಾಗುತ್ತದೆ? ಅದಕ್ಕೆ ಅರ್ಜಿ ಸ್ವೀಕಾರ ಕಾರ್ಯಕ್ರಮ ಇದೆಯಾ? ಇದ್ದರೆ ಅರ್ಜಿ ಜೊತೆ ಆಧಾರ್, ಪಹಣಿ, ಜಾತಿ ಪತ್ರ (ಅರ್ಜಿದಾರನದು ಫಂಗಸ್ಸಿನದಲ್ಲ!!), ಅರ್ಜಿದಾರನ ಫೋಟೋ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ಎಲೆ ಚುಕ್ಕಿ ಬಂದು ಕ್ಯುಆರ್ ಕೋಡ್ ರೀತಿ ಕಾಣುತ್ತಿರುವ ಅಡಿಕೆ ಮರದ ಫೋಟೋ (ಬಹುಶಃ ಎಲ್ಲ ದ್ವಿ ಪ್ರತಿಯಲ್ಲಿ !!?) ಕೊಡಬೇಕಾ?
(ಪ್ರತೀ ಬಾರಿ ಪಹಣಿ, ಆಧಾರ್, ಅಂತ ಅನೇಕ ದಾಖಲಾತಿಗಳನ್ನು ರೈತರಿಂದ ಪಡೆಯುವ ವಿಚಿತ್ರ ಪದ್ದತಿ ಡಿಜಿಟಲ್ ಮತ್ತು ಪೇಪರ್ ಲೆಸ್ ಕಾಲದಲ್ಲಿ ಬೇಕಾ? ರೈತರಿಗೆ ಈ ದಾಖಲಾತಿಗಳನ್ನು ಸರದಿಯಲ್ಲಿ ಕಾಯುತ್ತ ನಿಂತು ಪಡೆಯುವುದು, ಅದನ್ನು ಜೆರಾಕ್ಸ್ ಮಾಡುವುದು ಕೂಡ ಒಂದು ವೇದನೆ. ಆ ದಾಖಲಾತಿಗಳ ಖರ್ಚು, ದಾಖಲಾತಿಗಳನ್ನು ತೋಟಗಾರಿಕೆಗೆ ಸಲ್ಲಿಸಲು ಬಂದು ಹೋಗುವ ಖರ್ಚು ಮತ್ತು ರೈತನ ಸಮಯಕ್ಕೆ ಬೆಲೆಯೇ ಇಲ್ವಾ))
5) ಮೊದಲ ಸುದ್ದಿಯಲ್ಲಿ ಇರುವ ಮಾಹಿತಿ "ರಾಜ್ಯ ಸರಕಾರ ಒಟ್ಟು ಎಂಟು ಕೋಟಿ ರೂಪಾಯಿಗಳಷ್ಟು ಅನುದಾನ ನಿಗದಿಮಾಡಿ, ನಾಲ್ಕು ಕೋಟಿ ರೂಪಾಯಿಗಳನ್ನು ರೈತರಿಗೆ ವಿತರಿಸಲು, ಬಿಡುಗಡೆ ಮಾಡಲಾಗಿದೆ. ಉಳಿದ ನಾಲ್ಕು ಕೋಟಿ ಬಿಡುಗಡೆ ಯಾವಾಗ? ಅದನ್ನು ಹೇಗೆ ವಿತರಿಸಲಾಗುತ್ತದೆ? ಅಲ್ಲದೆ ಎರಡನೆ ಸುದ್ದಿಯಲ್ಲಿ ಇರುವಂತೆ ಈಗ ಮುಖ್ಯಮಂತ್ರಿಗಳು ಹೆಚ್ಚುವರಿಯಾಗಿ ಬಿಡುಗಡೆ ಮಾಡಿರುವ ಹತ್ತು ಕೋಟಿ ಅನುದಾನ ಯಾವಾಗ? ಹೇಗೆ? ಎಷ್ಟರಂತೆ ಬಿಡುಗಡೆ ಆಗುತ್ತದೆ? ಕೊಡಲಾಗುತ್ತದೆ?
6) ಉಚಿತವಾಗಿ ಕೊಡುತ್ತಿರುವ ಎರಡು ಲೀಟರ್ ಫಂಗಸ್ ನಿರ್ಮೂಲನಾ ವಿಷ ಹೆಕ್ಸಾಕೊನಾಜೋಲ್‌ಗೂ ಈ ಅನುದಾನಗಳ ವಿಷಯ ಕ್ಕೂ ಸಂಬಂಧ ಇಲ್ವಾ? ಇಲ್ಲಾಂತಾದರೆ, ಈ ಎಲ್ಲ ಅನುದಾನಗಳು ರೈತರಿಗೆ ಯಾವಾಗ ಸಿಗುತ್ತವೆ? ಯಾವಾಗ ರೈತ ಸ್ಪ್ರೇ ಮಾಡುವುದು?
ಫಂಗಸ್‌ಗಳು ಅಡಿಕೆ ಸ್ವಾಗೆ, ಅಡಿಕೆ ಕಾಯಿಗಳನ್ನು ತಿಂದು ಭಾದಿಸುತ್ತಿರುವಾಗ, ಅಡಿಕೆ ಮರದ ಕೆಳಗೆ ಆತಂಕದಿಂದ ನಿಂತ ಅಡಿಕೆ ರೈತನಿಗೆ ಈ ಸುದ್ದಿಗಳೇ ವಾಸನೆಯೊಂದಿಗೆ ಭಾದಿಸುತ್ತಿವೆ!!.
ಅಥವಾ ರೈತರೇ ಅಲ್ಲದವರು ಈ ಅನುದಾನ ಪಡೆದು ಪರೋಕ್ಷವಾಗಿ ರೈತರನ್ನು ಭಾದಿಸುತ್ತಿದ್ದಾರಾ?
ರಿಯಾಲಿಟಿ ಚೆಕ್ ಮಾಡಿ ಸತ್ಯ ಹೇಳುವವರು ಯಾರು?
ನಿವೇದನೆ, ಬೇಡಿಕೆ, ಅಳಲನ್ನು ಯಾರೊಟ್ಟಿಗೆ ಹೇಳಿಕೊಳ್ಳುವುದು? ಹೋರಾಟ ಮಾಡುವುದಾದರೂ ಯಾರ ವಿರುದ್ದ ಮಾಡುವುದು?
ಬೇಸಾಯಕ್ಕೆ ಅಂತ ಇಟ್ಟುಕೊಂಡಿದ್ದ ಪುಡಿಗಾಸನಲ್ಲಿ ನಾಲ್ಕು ಸೆಟ್ ಪಹಣಿ, ಹತ್ತಾರು ಜೆರಾಕ್ಸ್ ಪ್ರತಿಗಳನ್ನು ಇಟ್ಟಕೊಂಡ ಅತಿ ಸಣ್ಣ ಅಡಿಕೆ ಬೆಳೆಗಾರ, ಸುಡು ಬಿಸಿಲನ್ನು ನೋಡಿ ಖುಷಿ ಪಡುತ್ತಿದ್ದಾನೆ!! ಬಿರು ಬಿಸಿಲಿಗಾದರೂ ಭ್ರಷ್ಟ ಫಂಗಸ್‌ಗಳು, ಭ್ರಷ್ಟ ಕ್ರಿಮಿಗಳು ಸಾಯಲಿ, ತೋಟ ಉಳಿಯಲಿ, ಬಡ ರೈತ ಬದುಕುವಂತಾಗಲಿ ಅಂತ!!!. ಆದರೆ ಭ್ರಷ್ಟ ಫಂಗಸ್‌ಗಳು ಅಡಿಕೆ ಬೆಳೆಗಾರನ ಮೇಲೆ ದಾಳಿ ಇಡುತ್ತಿವೆ, ಬೇರೆ ಬೇರೆ ರೂಪದಲ್ಲಿ!!.
ತೋಟ ಯಲ್ಲೋ ಅಲರ್ಟ್ ಆಗುತ್ತಿದೆ!!!
-ಅರವಿಂದ ಸಿಗದಾಳ್, ಮೇಲುಕೊಪ್ಪ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ