ಮಡಿಕೇರಿ: ಕಾವೇರಿ ನದಿಯ ಉಗಮ ಸ್ಥಾನವಾಗಿರುವ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಈಗಾಗಲೇ ಪುಣ್ಯಕ್ಷೇತ್ರದಲ್ಲಿ ಎಲ್ಲಾ ರೀತಿಯ ತಯಾರಿಗಳು ಪೂರ್ಣಗೊಂಡಿದೆ. ರಾಜ್ಯ ಮತ್ತು ಹೊರ ರಾಜ್ಯದ ಸಾವಿರಾರು ಭಕ್ತರು ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲು ಆಗಮಿಸುವ ನಿರೀಕ್ಷೆ ಇದೆ.
ಇಂದು ರಾತ್ರಿ (ಅ.17 ಸೋಮವಾರ) 7.21 ಗಂಟೆಯ ಶುಭ ಮೇಷ ಲಗ್ನದಲ್ಲಿ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಜಿಲ್ಲಾಡಳಿತ ವತಿಯಿಂದ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇವಾಲಯದ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರ ಮುಂದಾಳತ್ವದಲ್ಲಿ ಭಾಗಮಂಡಲದಿಂದ ತಲಕಾವೇರಿಗೆ ಶಾಸ್ತ್ರೋಕ್ತವಾಗಿ ಚಿನ್ನಾಭರಣಗಳನ್ನು ಕೊಂಡೊಯ್ದು ಹೋಗಿ ತಾಯಿ ಶ್ರೀ ಕಾವೇರಿ ಮಾತೆಗೆ ತೊಡಿಸಲಾಯಿತು. ದೇವಾಲಯದ ಎಲ್ಲೆಡೆ ಹೂವಿನ ಅಲಂಕಾರವನ್ನು ಮಾಡಲಾಗಿದೆ.
ಭಾಗಮಂಡಲದಲ್ಲಿ ಕೇಶ ಮುಂಡನ, ಪಿಂಡ ಪ್ರದಾನಕ್ಕೆ ಪ್ರತ್ಯೇಕ ಸ್ಥಳಗಳನ್ನು ನಿಗದಿ ಮಾಡಲಾಗಿದೆ. ಪುಣ್ಯ ಸ್ನಾನಕ್ಕೆ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ಈಗಾಗಲೇ ತ್ರಿವೇಣಿ ಸಂಗಮದಲ್ಲಿ ಇದ್ದಂತಹ ಮರಳು ಮಿಶ್ರಿತ ಹೂಳನ್ನು ತೆಗೆಯಲಾಗಿದೆ. ಸೇತುವೆ ಸಮೀಪ ಮರದ ಹಲಗೆಗಳನ್ನು ಉಪಯೋಗಿಸಿ ನೀರನ್ನು ತಡೆ ಹಿಡಿಯಲಾಗಿದೆ.
ಭಾಗಮಂಡಲದಿಂದ ಹಿಡಿದು ತಲಕಾವೇರಿ ವರೆಗಿನ 8 ಕಿ.ಮೀ ರಸ್ತೆಯ ಉದ್ದಕ್ಕೂ ವಿದ್ಯುತ್ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ. ಕಾಲ್ನಡಿಗೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಇದರಿಂದ ಸಹಾಯವಾಗಲಿದೆ. ರಸ್ತೆ ಬದಿಯಲ್ಲಿ ಬೆಳೆದಿದ್ದ ಕುರುಚಲು ಗಿಡ, ಪೊದೆಗಳನ್ನು ತೆರವು ಮಾಡಲಾಗಿದೆ. ಹೀಗಾಗಿ ದಟ್ಟ ಮಂಜು ಮುಸುಕುವ ವಾತಾವರಣದ ಮಧ್ಯೆ ವಾಹನ ಸವಾರರು ಸಂಚರಿಸಲು ಸುಲಭವಾಗಲಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ಬಿಗಿ ಭದ್ರತೆ
ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಹೆಚ್ಚುವರಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಮೂವರು ಡಿವೈಎಸ್‌ಪಿಗಳು, 7 ಇನ್ಸ್‌ಪೆಕ್ಟರ್, 17 ಸಬ್ ಇನ್ಸ್‌ಪೆಕ್ಟರ್, 300 ಪೊಲೀಸರು, 100 ಮಂದಿಯ ಮೀಸಲು ಪೊಲೀಸ್ ಸಶಸ್ತ್ರ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಜಾತ್ರೆಗೆ 60 ಲಕ್ಷ ರೂ. ಬಿಡುಗಡೆ
ಕಳೆದ 3 ವರ್ಷಗಳಿಂದ ಪ್ರವಾಹ, ಕೋವಿಡ್ ಸೇರಿದಂತೆ ಇನ್ನಿತರ ಕಾರಣಗಳಿಂದ ಕಾವೇರಿ ಜಾತ್ರೆಗೆ ಕೆಲವು ನಿಯಮ, ನಿರ್ಬಂಧಗಳನ್ನು ಹೇರಲಾಗಿತ್ತು. ಆದರೆ ಈ ಬಾರಿ ಅವೆಲ್ಲವನ್ನೂ ತೆರವುಗೊಳಿಸಿ ಎಲ್ಲರಿಗೂ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಮಾಹಿತಿ ನೀಡಿದ್ದಾರೆ. ಪವಿತ್ರ ಕೊಳದಲ್ಲಿ ತೀರ್ಥ ಸ್ನಾನಕ್ಕೂ ಅವಕಾಶ ನೀಡಲಾಗಿದೆ. ಅಲ್ಲದೇ ಜಾತ್ರೆಗೆ ಈಗಾಗಲೇ ಕಾವೇರಿ ನೀರಾವರಿ ನಿಗಮವು 60 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಭಕ್ತರ ಅನುಕೂಲಕ್ಕಾಗಿ ಭಾಗಮಂಡಲದಿಂದ ತಲಕಾವೇರಿಗೆ ನಿರಂತರ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬಾರಿಯ ತೀರ್ಥೋದ್ಭವಕ್ಕೆ ಅಂದಾಜು 25 ಸಾವಿರ ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ತಾತ್ಕಾಲಿಕ ಕ್ಲಿನಿಕ್, ಶ್ರೀ ಕಾವೇರಿ ಮಾತೆ ಧಾರ್ಮಿಕ ಗೀತಗಾಯನ ಕಾರ್ಯಕ್ರಮ, ತಲಕಾವೇರಿಯಲ್ಲಿ ಶುಚಿತ್ವಕ್ಕೆ ಒತ್ತು ನೀಡುವ ಸಲುವಾಗಿ ಅಲ್ಲಲ್ಲಿ ಡಸ್ಟ್‌ಬಿನ್ ಇಡುವುದು, ಹೀಗೆ ಹಲವು ಸಿದ್ಧತೆಗಳು ನಡೆದಿವೆ. ತಲಕಾವೇರಿ ಮತ್ತು ಭಾಗಮಂಡಲ ಭಗಂಡೇಶ್ವರ ದೇವಾಲಯಗಳ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ, ಕಾರ್ಯನಿರ್ವಹಣಾಧಿಕಾರಿ ಬಿ.ಎಂ.ಕೃಷ್ಣಪ್ಪ ಅವರು ತಲಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ಸಂಬಂಧಿಸಿದಂತೆ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಗಮನ ವಹಿಸಲಾಗಿದೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿಕೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ