ಹೊಸದಿಲ್ಲಿ: ಸಮಾಜವಾದಿ ಪಕ್ಷದ ಸಂಸ್ಥಾಪಕ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು ಇಂದು (ಸೋಮವಾರ, 10 ಅಕ್ಟೋಬರ್ 2022) ತಮ್ಮ 82 ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ನಿಧನರಾದರು. ಯಾದವ್ ಅವರನ್ನು ಅನಾರೋಗ್ಯದ ಕಾರಣ ಹರ್ಯಾಣದ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಇಂದು ಕೊನೆಯುಸಿರೆಳೆದರು.
ಮುಲಾಯಂ ಸಿಂಗ್ ಯಾದವ್ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ನಿನ್ನೆ ಮೇದಾಂತ ಆಸ್ಪತ್ರೆಯ ಪ್ರಕಟಣೆ ತಿಳಿಸಿತ್ತು. ಮೇದಾಂತ ಆಸ್ಪತ್ರೆಯ ಆರೋಗ್ಯ ಬುಲೆಟಿನ್‌ನಲ್ಲಿ “ಮುಲಾಯಂ ಸಿಂಗ್ ಯಾದವ್ ಜಿ ಅವರ ಸ್ಥಿತಿ ಇಂದು ಸಾಕಷ್ಟು ಗಂಭೀರವಾಗಿದೆ ಮತ್ತು ಅವರು ಜೀವ ಉಳಿಸುವ ಔಷಧಿಗಳಲ್ಲಿದ್ದಾರೆ. ಅವರಿಗೆ ಸಮಗ್ರ ತಜ್ಞರ ತಂಡದಿಂದ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ'' ಎಂದು ಹೇಳಿಕೆ ಬಿಡುಗಡೆ ಮಾಡಿತ್ತು. ಆಗಸ್ಟ್ 22 ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಅಕ್ಟೋಬರ್ 2 ರಂದು ಐಸಿಯುಗೆ ಸ್ಥಳಾಂತರಿಸಲಾಯಿತು.
ಮುಲಾಯಂ ಸಿಂಗ್ ಯಾದವ್ ಅವರು ನವೆಂಬರ್ 22, 1939 ರಂದು ಭಾರತದ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಸೈಫೈ ಗ್ರಾಮದಲ್ಲಿ ಮೂರ್ತಿ ದೇವಿ ಮತ್ತು ಸುಗರ್ ಸಿಂಗ್ ಯಾದವ್ ದಂಪತಿಯ ಪುತ್ರನಾಗಿ ಜನಿಸಿದರು. ಸರ್ವಶ್ರೀ ಮಧು ಲಿಮಾಯೆ, ಕರ್ಪೂರಿ ಠಾಕೂರ್, ರಾಮ್ ಸೇವಕ್ ಯಾದವ್, ರಾಜ್ ನಾರಾಯಣ್ ಮತ್ತು ಜನೇಶ್ವರ್ ಮಿಶ್ರಾ ಅವರನ್ನು ಭೇಟಿಯಾದ ನಂತರ ಅವರು ರಾಜಕೀಯ ಪ್ರವೇಶಿಸಿದರು. ಅವರು ಡಾ ರಾಮ್ ಮನೋಹರ್ ಲೋಹಿಯಾ ಅವರ ಸಮಾಜವಾದಿ ವಿಚಾರಗಳು ಮತ್ತು ನಂಬಿಕೆಗಳಿಂದ ಪ್ರೇರಿತರಾಗಿದ್ದರು.
ಮುಲಾಯಂ ಸಿಂಗ್ ಯಾದವ್ ಅವರು 1967 ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನಸಭೆಗೆ ಆಯ್ಕೆಯಾದರು. 1989 ರಲ್ಲಿ ಯಾದವ್ ಅವರು ಮೊದಲ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಯಾದವ್ ಅವರು 1992 ರಲ್ಲಿ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಅವರು ನವೆಂಬರ್ 1993 ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವೇಳೆಗೆ ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು.
ಅವರ ರಾಜಕೀಯ ಜೀವನದುದ್ದಕ್ಕೂ, ಮುಲಾಯಂ ಸಿಂಗ್ ಹಲವಾರು ವಿವಾದಗಳಲ್ಲಿ ಸಿಲುಕಿದ್ದರು. ಅವರು 1990 ರಲ್ಲಿ ಅಯೋಧ್ಯೆಯಲ್ಲಿ ಕರಸೇವಕರ ಮೇಲೆ ಗುಂಡಿನ ದಾಳಿಗೆ ಆದೇಶ ನೀಡಿದಾಗ ಅತ್ಯಂತ ವಿವಾದಾತ್ಮಕವಾದದ್ದು. ಆ ಸಮಯದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯಾದವ್, ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರವನ್ನು ನಿರ್ಮಿಸಲು ಅಯೋಧ್ಯೆಯಲ್ಲಿ ಸಮಾವೇಶಗೊಂಡ ಕರಸೇವಕರ ಮೇಲೆ ಗುಂಡು ಹಾರಿಸಲು ಆದೇಶಿಸಿದರು. ನವೆಂಬರ್ 1990 ರಲ್ಲಿ, ವಿವಾದಿತ ಕಟ್ಟಡದ ಧ್ವಂಸಕ್ಕೆ ಎರಡು ವರ್ಷಗಳ ಮೊದಲು ಈ ಘಟನೆ ನಡೆದಿತ್ತು. ಹಲವಾರು ಕರಸೇವಕರ ಸಾವಿಗೆ ಕಾರಣವಾದ ಸಮಾಜವಾದಿ ಪಕ್ಷದ ವರಿಷ್ಠರ ಆದೇಶವು ಅವರಿಗೆ 'ಮುಲ್ಲಾ ಮುಲಾಯಂ' ಎಂಬ ಕಳಂಕ ತಂದುಕೊಟ್ಟಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ