ಕಾಸರಗೋಡು: "ಗಮಕ ಕಲೆ ಅತ್ಯಂತ ಪ್ರಾಚೀನವಾದುದು, ಒಂದು ಕಾಲದಲ್ಲಿ ಅದಕ್ಕೆ ರಾಜಾಶ್ರಯವಿತ್ತು. ಜನಸಾಮಾನ್ಯರಿಗೆ ಪುರಾಣ ಕಥೆಗಳನ್ನು ಸುಲಭವಾಗಿ ಪರಿಚಯಿಸುವ ಕಲೆಗಳಲ್ಲಿ ಗಮಕವೇ ಪ್ರಧಾನವಾದುದು.ಇಂತಹ ಶ್ರೇಷ್ಠ ಕಲೆಯನ್ನು ಮುಂದಿನ ತಲೆಮಾರಿನವರಿಗೆ ಉಳಿಸಿ ಬೆಳೆಸುವಂತೆ ಮಾಡುತ್ತಿರುವ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟನೆಯ ಸಾಧನೆ ದೊಡ್ಡದು" ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅಭಿಪ್ರಾಯ ಪಟ್ಟರು.
ಅವರು ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕವು ಕಾಸರಗೋಡಿನ ಹವ್ಯಕ ಭವನದಲ್ಲಿ ಹಮ್ಮಿಕೊಂಡ ಎರಡು ದಿನಗಳ "ಕಲೋಪಾಸನೆ" ಸಮಾರಂಭದ ಪ್ರಥಮ ದಿನದಂದು ದೀಪಬೆಳಗಿಸಿ ಉದ್ಘಾಟಿಸಿ ಮಾತಾಡುತ್ತಿದ್ದರು. ಗಮಕ ಪರಿಷತ್ತಿನ ಅಧ್ಯಕ್ಷ ಶ್ರೀ ಟಿ.ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಗೀತ ನೃತ್ಯ ಎಕಾಡೆಮಿ ಹಾಗೂ ಯಕ್ಷಗಾನ ಎಕಾಡೆಮಿಯ ರಿಜಿಸ್ಟ್ರಾರ್ ಶ್ರೀ ಶಿವರುದ್ರಪ್ಪನವರು ಭಾಗವಹಿಸಿ ಗಡಿನಾಡು ಕಾಸರಗೋಡಿನಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ಸೂಚಿಸಿ ಪ್ರೋತ್ಸಾಹದ ಮಾತುಗಳನ್ನಾಡಿದರು.
ಕರ್ನಾಟಕ ಯಕ್ಷಗಾನ ಎಕಾಡೆಮಿಯ ಸದಸ್ಯರಾದ ನ್ಯಾಯವಾದಿ ಶ್ರೀ ದಾಮೋದರ ಶೆಟ್ಟಿ ಮತ್ತು ಕಾಸರಗೋಡಿನ ಕರ್ನಾಟಕ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಶ್ರೀ ಕೆ.ಎಂ.ಬಳ್ಳಕ್ಕುರಾಯ ಹಾಗೂ ಗಮಕಿ ಕಲಾಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಶುಭಾಶಂಸನೆ ಗೈದರು.
ಗಮಕ ಕಲಾಧರೆ ಕು|ಶ್ರದ್ಧಾ ಭಟ್ ಅವರು "ಶ್ರೀರಾಮ ನಿರ್ಯಾಣ" ಎಂಬ ಕಥಾಭಾಗವನ್ನು ಹರಿಕಥೆಯ ರೂಪದಲ್ಲಿ ಪ್ರಸ್ತುತಪಡಿಸಿದರು.
ಅನಂತರ ಜರಗಿದ ಗಮಕ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತದಿಂದಾಯ್ದ "ಕರ್ಣ ಭೇದನ" ಎಂಬ ಭಾಗದ ವಾಚನ-ವ್ಯಾಖ್ಯಾನಗಳನ್ನು ಶ್ರೀ ಗೋಪಾಲಕೃಷ್ಣ ಭಟ್, ಕೊಚ್ಚಿ ಮತ್ತು ಶ್ರೀ ಶ್ರೀಹರಿ ಭಟ್,ಪೆಲ್ತಾಜೆ ಅವರು ನೆರವೇರಿಸಿದರು.
ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶ್ರೀ ವಿ.ಬಿ.ಕುಳಮರ್ವ ಅವರು ಗಮಕ ಪರಿಷತ್ತಿನ ಕೇರಳ ಗಡಿನಾಡ ಘಟಕವು ನಡೆದು ಬಂದ ದಾರಿಯನ್ನು ಪ್ರಸ್ತಾವನೆ ಮಾಡುತ್ತಾ ಸ್ವಾಗತಿಸಿದರು.
ಕು|ತ್ರಯೀ ಭಟ್ ಪ್ರಾರ್ಥನೆ ಗೈದರು.ಜತೆಕಾರ್ಯದರ್ಶಿ ಶ್ರೀ ಶಿವರಾಮ ಪಿ.ವಿ. ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಭೀಮ್ ರವಿ ತೆಕ್ಕೆಕೆರೆ ವಂದನಾರ್ಪಣೆ ಮಾಡಿದರು.
ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ , ಕರ್ನಾಟಕ ಯಕ್ಷಗಾನ ಎಕಾಡೆಮಿ ಮತ್ತು ಸಂಗೀತ ನೃತ್ಯ ಎಕಾಡೆಮಿಗಳು ಕಲೋಪಾಸನೆಗೆ ಸಹಯೋಗ ನೀಡಿದ್ದುವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ