ಜನ ಮೆಚ್ಚಿದ ಜನಜನಿತ ನುಡಿ- ಕನ್ನಡ

Upayuktha
0

ರಾಜ್ಯೋತ್ಸವ ವಿಶೇಷ: ಕರುನಾಡ ತಾಯಿ ಸದಾ ಚಿನ್ಮಯಿ


ಕನ್ನಡ ಬರಿಯ ಭಾಷೆಯಲ್ಲ. ಹೂವಿಂದ ಹೂವಿಗೆ ಹಾರುವ ಪಾತರಗಿತ್ತಿಯಂತೆ, ಮಕರಂದವ ಹೀರಿ ಇನ್ನೇನು ತೆರಳಲು ಸಿಧ್ದವಾದ ದುಂಬಿಯ ಬಾಯಿಯಲ್ಲಿನ ಸವಿ ಜೇನಿನಂತೆ, ತಾಯಿಯೊಬ್ಬಳು ತನ್ನ ಮಗುವಿಗೆ ಹಾಲುಣಿಸುವಂತೆ ಕಾಣುವ, ಕೇಳುವ, ಅನುಭವಿಸುವ ಭಾವ. ಭಾವನೆಗಳ ಮೂಲಕ ಬಂಧಗಳು ಬೆಸೆಯುತ್ತವೆ. ಅಂತೆಯೇ ಭಾಷೆಯ ಮೂಲಕ ಸಾಹಿತ್ಯ ಕೃಷಿ ಉದಯಿಸಿ ಹೆಮ್ಮರವಾಗಿ ಬೆಳೆದು ನಿಲ್ಲುತ್ತದೆ. ಕನ್ನಡವೆಂಬುದು ನಿಂತ ನೀರಲ್ಲ. ಅದು ಹರಿವ ನಿಷ್ಕಲ್ಮಶ ಜಲ. ಎಲ್ಲಿಯವರೆಗೆ ಕನ್ನಡವನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವವರಿರುತ್ತಾರೋ ಅಲ್ಲಿಯವರೆಗೂ ಕನ್ನಡ ಶಾಶ್ವತವಾಗಿರುತ್ತದೆ. 


ಕನ್ನಡ ಭಾಷೆ ಕೇವಲ ಇಂತಿಷ್ಟೇ ಭೌಗೋಳಿಕ ಪ್ರದೇಶಕ್ಕೆ ಅಥವಾ ಇಂತಿಷ್ಟೇ ಜನ ಸಮುದಾಯಕ್ಕೆಂದು ಸೀಮಿತವಾಗಿಲ್ಲ.ಜನಮನಗಳಲ್ಲಿ ಅಚ್ಚಳಿಯದೆ ಉಳಿದ ಭಾಷೆಯಿದು.ಯಾವುದೇ ರಾಜ್ಯವಾಗಲೀ,ಯಾವುದೇ ದೇಶವಾಗಲೀ  ಮುಗ್ಧ ಮನಸ್ಸಿನ ಕುಡಿ ಕಂದಮ್ಮಗಳಿಂದ ಹಿಡಿದು ಜ್ಞಾನ ವೃದ್ಧರೂ, ವಯೋವೃದ್ಧರಾದಿಯಾಗಿ ಕನ್ನಡ ನುಡಿಯುವ ಪ್ರತಿಯೋರ್ವರೂ ಕನ್ನಡಿಗರೇ. ಭಾಷೆ ಎಂದಿಗೂ ಯಾರ ಸ್ವತ್ತಲ್ಲ. ಭಾಷೆ ಇರುವುದು ಸಂವಹನಕ್ಕಾಗಿ. ಭಾವನೆಗಳನ್ನು ವ್ಯಕ್ತಪಡಿಸುವುದಕ್ಕಾಗಿ. ಹೀಗಾಗಿ ಕೇವಲ ಕನ್ನಡ ಮಾತನಾಡುವವರನ್ನಷ್ಟೇ ಅಲ್ಲ, ಕನ್ನಡವನ್ನು ಗೌರವಿಸುವ, ಕನ್ನಡವನ್ನು ಪೂಜಿಸುವ ಪ್ರತಿಯೊಬ್ಬನನ್ನೂ ಕನ್ನಡಾಂಬೆ ತನ್ನ ಮಗುವೆಂದೇ ಪರಿಗಣಿಸುತ್ತಾಳೆ. ಕನ್ನಡಮ್ಮನ ದೇಗುಲವಿರುವುದು ಪ್ರತಿ ಮನಗಳಲ್ಲಿ, ಸಾರಸ್ವತ ನುಡಿಗಳಲ್ಲಿ. ಕನ್ನಡಾಂಬೆ ಮಾತೃ ಸ್ವರೂಪಳು.ನಮ್ಮನ್ನುದ್ಧರಿಸುವವಳು ಆಕೆ. 


ಕನ್ನಡ ಕಲಿಕೆ ಎಂದಿಗೂ ಯಾರಿಗೂ ಒತ್ತಾಯಪೂರ್ವಕವಾಗಿರಬಾರದು. ಐಚ್ಚಿಕವಾಗಿ ಅಥವಾ ಸ್ವ -ಭಾಷಾ ಪ್ರೇಮದಿಂದ ಅದನ್ನು ಕಲಿಯಬೇಕು ಹೊರತು ಹೇರಿಕೆಯಿಂದಲ್ಲ. ಯಾವುದೇ ವಸ್ತುವಾಗಲಿ ವಿಚಾರವಾಗಲಿ ಪೂರ್ಣ ಪ್ರಮಾಣದಲ್ಲಿ ಅದನ್ನು ಗೌರವಿಸಿ ಅದರಲ್ಲಿ ಒಂದಾಗಿ ಕಲಿತರೆ ಅದು ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತದೆ .ಕನ್ನಡ ಕಲಿಕೆಯೂ ಹಾಗೆಯೇ .ಸ್ವ- ಅಭಿರುಚಿಯಿಂದ ಕಲಿತರೆ ಮಾತ್ರವೇ ಅದರ ಆಳವು ತಿಳಿಯುವುದು .ಕನ್ನಡವೆಂಬುದು ಸಾಗರವಿದ್ದಂತೆ. ಆಳವಾಗಿಯೂ ವಿಶಾಲವಾಗಿಯೂ ತನ್ನ ರೆಂಬೆ ಕೊಂಬೆಗಳನ್ನ ಹರಡಿಕೊಂಡಿರುವ ಅಪಾರವಾದ ಜ್ಞಾನದ ನಿಧಿಯದು. ಬಗೆದಷ್ಟು ಮೊಗೆಯದ ಕಲಿತಷ್ಟು ಮುಗಿಯದ ಸಿರಿಸಂಪತ್ತನ್ನು ಕಾಪಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಪ್ರತಿಯೊಬ್ಬ ಕನ್ನಡಿಗನಿಗಿದೆ. ಭಾಷಾ ಪ್ರೇಮ ಕೇವಲ ಒಂದು ದಿನಕ್ಕೆ ಸೀಮಿತವಾಗದಿರಲಿ. ಕನ್ನಡದ ಜಯಭೇರಿಯು ಪ್ರಚಂಡವಾಗಿ ಮೊಳಗಲಿ.ಕಸ್ತೂರಿ ಕನ್ನಡವು ಜನಮಾನಸದಲ್ಲಿ ರಾರಾಜಿಸಲಿ. ಕನ್ನಡಾಂಬೆಯ ಕೀರ್ತಿ ಉತ್ತುಂಗಕ್ಕೇರಲಿ.

- ಅನ್ನಪೂರ್ಣ ಯನ್ ಕುತ್ತಾಜೆ

'ಅನುಗ್ರಹ' ಕುತ್ತಾಜೆ ಮನೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top