ಸಿಲ್ಹೆಟ್: ಬಾಂಗ್ಲಾದೇಶದ ಸಿಲ್ಹೆಟ್ ನಗರದ ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಏಷ್ಯಾ ಕಪ್ 2022 ಫೈನಲ್ ನಲ್ಲಿ ಶ್ರೀಲಂಕಾ ವನಿತೆಯರನ್ನು, ಭಾರತದ ವನಿತೆಯರು ಎಂಟು ವಿಕೆಟ್ ಗಳಿಂದ ಸೋಲಿಸುವ ಮುಖಾಂತರ ಟೀಂ ಇಂಡಿಯಾ ದಾಖಲೆ ಬರೆದಿದೆ. 7ನೇ ಬಾರಿಗೆ ಮಹಿಳಾ ಏಷ್ಯಾಕಪ್ ಗೆದ್ದ ಸಾಧನೆಯನ್ನು ಮಾಡಿದೆ.
2004 ರಿಂದ ಪ್ರಾರಂಭಗೊಂಡ ಈ ಟೂರ್ನಿಯಲ್ಲಿ 6 ಬಾರಿ ಸತತವಾಗಿ ಗೆಲುವು ಸಾಧಿಸಿ, ಏಷ್ಯಾಕಪ್ ಚಾಂಪಿಯನ್ನರ ಪಟ್ಟಿಯಲ್ಲಿ ಅಜೇಯರಾಗಿ ಉಳಿದಿದ್ದ ಭಾರತವು ಕಳೆದ ಆವೃತ್ತಿಯಲ್ಲಿ ಬಾಂಗ್ಲಾ ವಿರುದ್ಧದ ಫೈನಲ್ನಲ್ಲಿ ಸೋತಿತ್ತು. ಈ ಬಾರಿ ಮತ್ತೆ ಛಲದಲ್ಲಿ ಹೋರಾಡಿದ ಭಾರತ ತನ್ನ ಏಷ್ಯನ್ ಚಾಂಪಿಯನ್ ಪಟ್ಟವನ್ನು ಮರಳಿ ಪಡೆದುಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡವು ಆರಂಭದಲ್ಲೇ ಆಘಾತ ಅನುಭವಿಸಿತು. ಲಂಕಾ 3.5 ಓವರ್ ಗಳಲ್ಲಿ ಕೇವಲ 9 ರನ್ ಗೆ 5 ವಿಕೆಟ್ ಕಳೆದುಕೊಂಡಿತ್ತು. ಭಾರತದ ಪರ ಮಾರಕ ದಾಳಿ ಸಂಘಟಿಸಿದ ರೇಣುಕಾ ಸಿಂಗ್ (5ಕ್ಕೆ, 3 ವಿಕೆಟ್), ದೀಪ್ತಿ ಶರ್ಮಾ (4 ಓವರ್, 7 ರನ್) ಎಸೆತಗಳಿಗೆ ನಲುಗಿದ ಲಂಕಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 65 ರನ್ ಕಲೆ ಹಾಕಲು ಶಕ್ತವಾಯಿತು.
ಭಾರತದ ಹರ್ಮನ್‌ಪ್ರೀತ್ ಕೌರ್ ತಂಡದ ಪರವಾಗಿ ಸ್ನೇಹ ರಾಣಾ ಮತ್ತು ರಾಜೇಶ್ವರಿ ಗಾಯಕ್‌ವಾಡ್ ಕ್ರಮವಾಗಿ ಎರಡು ವಿಕೆಟ್ ಗಳನ್ನು ಕಬಳಿಸಿದರು. 66 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ ಏಕಪಕ್ಷೀಯವಾಗಿ ಪಂದ್ಯವನ್ನು ಗೆದ್ದುಕೊಂಡಿತು. 8.3 ಓವರ್‌ಗಳಲ್ಲಿ 2 ವಿಕೆಟ್‌ಗೆ 71 ರನ್ ಗಳಿಸಿ ವಿಜಯೋತ್ಸವ ಆಚರಿಸಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 25 ಎಸೆತಗಳಲ್ಲಿ 51 ರನ್ ಗಳಿಸಿ ಅಜೇಯ ಅರ್ಧಶತಕವನ್ನು ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
"ಗೆಲುವಿನ ಶ್ರೇಯವು ಬೌಲರ್‌ಗಳು ಹಾಗೂ ಫೀಲ್ಡರ್‌ಗಳಿಗೆ ಸಲ್ಲಬೇಕು. ಶ್ರೀಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ್ದರಿಂದ ಬ್ಯಾಟರ್‌ಗಳಿಗೆ ಗುರಿ ಸಾಧನೆಯು ಮತ್ತಷ್ಟು ಸುಲಭವಾಯಿತು. ಈ ಟ್ರೋಫಿ ಜಯದಿಂದಾಗಿ ನಮ್ಮ ತಂಡದ ಆತ್ಮಬಲ ವೃದ್ಧಿಸಿದೆ" ಎಂದು ಹರ್ಮನ್‌ಪ್ರೀತ್ ಕೌರ್ ಪ್ರತಿಕ್ರಿಯಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ