ಕುಂಬಳೆ : ಮುಜುಂಗಾವು ಶ್ರೀ ಪಾರ್ಥಸಾರಥಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಅಕ್ಟೋಬರ್ 17ರಂದು ಕಾವೇರಿ ತೀರ್ಥ ಸ್ನಾನ ಜರಗಲಿದ್ದು, ತುಲಾ ಸಂಕ್ರಮಣದಂದು ಪ್ರತೀ ವರ್ಷ ಸಹಸ್ರಾರು ಮಂದಿ ಭಕ್ತಾದಿಗಳು ಶ್ರೀಕ್ಷೇತ್ರದ ಮುಂಭಾಗದಲ್ಲಿರುವ ವಿಶಾಲವಾದ ಕೆರೆಯಲ್ಲಿ ಮಿಂದು ಪುನೀತರಾಗಲಿದ್ದಾರೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ.
ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಗೆ ತುಂಬಾ ಪ್ರಾಮುಖ್ಯತೆ ಇದ್ದು, ಇಲ್ಲಿರುವ ಅನೇಕ ದೇವಾಲಯಗಳು, ಮಂದಿರಗಳು ಸಾಕ್ಷಿ. ಹಾಗೆಯೇ ಈ ಸೀಮೆಯ ನಾಲ್ಕು ದೇವಾಲಯಗಳ ಪಟ್ಟಿಯಲ್ಲಿ ಅಡೂರು, ಮಧೂರು, ಮುಜುಂಗಾವು, ಕುಂಬಳೆಗೂ ತುಂಬಾ ಪ್ರಾಮುಖ್ಯತೆಗಳಿವೆ. ಮುಜುಂಗಾವು ಪಾರ್ಥಸಾರಥಿ ದೇವಾಲಯ, ಕಾವು, ಮುಜುಂಗರೆ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ.
ಈ ದೇಗುಲದ ಹಿನ್ನೆಲೆ ಕೆದಕಿದಾಗ ಪುರಾಣಗಳಲ್ಲಿ ಹೇಳುವಂತೆ, ಸೂರ್ಯವಂಶದ ಮಾಂಧಾತ ರಾಜನ ಮಗನಾದ ಮುಚುಕುಂದ ಅರಸು ಪ್ರಬಲನಾದುದರಿಂದ ದೇವತೆಗಳು ಮುಚುಕುಂದ ರಾಜನ ಸಹಾಯ ಯಾಚಿಸುತ್ತಿದ್ದರು. ಆತನ ಪರಾಕ್ರಮಕ್ಕೆ ಮನಸೋತ ದೇವತೆಗಳು ಮುಚುಕುಂದನನ್ನು ಅದೆಷ್ಟೋ ಯುದ್ಧಗಳಲ್ಲಿ ದೇವತೆಗಳ ಸೇನಾನಿಯನ್ನಾಗಿ ಮಾಡಿದ್ದರು. ಹೀಗೆ ಹಲವಾರು ಸಮಯ ಕಳೆಯಲು ಮುಚುಕುಂದ ಅರಸನು ದೇವ ಸೇನಾನಿಯ ಪಟ್ಟವನ್ನು ಸುಬ್ರಹ್ಮಣ್ಯನಿಗೆ ಬಿಟ್ಟುಕೊಟ್ಟು ಇಲ್ಲಿನ ಕಾವೇರಿ ತೀರ್ಥದ ಪ್ರಶಾಂತ ಸ್ಥಳದಲ್ಲಿ ವಿಶ್ರಾಂತಿಗೆ ಹೊಂದಿಕೊಂಡು ಕಠಿಣ ತಪಸ್ಸನ್ನಾಚರಿಸಿದ. ಹೀಗಿರುವಾಗ ಶ್ರೀಕೃಷ್ಣನು ವಿಹಾರಾರ್ಥವಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿರುವಾಗ ಹಿಂಬಾಲಿಸಿ ಬಂದ ಕಾಲಯವನು ಗುಹೆಯೊಳಗೆ ತಪಸ್ಸುಮಾಡುತ್ತಿದ್ದ ಮುಚುಕುಂದ ಮುನಿಯನ್ನು ಶ್ರೀಕೃಷ್ಣನೆಂದು ಭಾವಿಸಿ ಕಾಲಿನಿಂದ ಒದೆದನಂತೆ. ಮುಚುಕುಂದ ಕಣ್ಣು ತೆರೆದಾಗ ಕಾಲಯವನು ಭಸ್ಮನಾದನು. ಆಗ ಪ್ರತ್ಯಕ್ಷನಾದ ಶ್ರೀಕೃಷ್ಣನಿಗೆ ಮುಚುಕುಂದನು ಮುಳ್ಳುಸೌತೆಯನ್ನು ಅರ್ಪಿಸಿದ ಎಂದು ಪ್ರತೀತಿಯಿದೆ.
ಈ ಕ್ಷೇತ್ರದಲ್ಲಿ ಈಗಲೂ ಮುಳ್ಳುಸೌತೆ ಸಮರ್ಪಣೆ ವಿಶೇಷ. ಮುಚುಕುಂದ ಕೇಳಿಕೊಂಡಂತೆ ಶ್ರೀಕೃಷ್ಣ ಇಲ್ಲಿ ನೆಲೆ ನಿಂತಿರುವುದಾಗಿ ಹೇಳಲಾಗಿದೆ. ಕಾವು ಎಂಬ ಪದಕ್ಕೆ ಕೋಪ, ಸಿಟ್ಟು ಎಂಬ ಅರ್ಥಗಳಿವೆ. ಮುಚುಕುಂದನಿಗೆ ಕಾವು ಏರಿ ಕೋಪದಿಂದ ಕಾಲಯವನನ್ನು ಭಸ್ಮಮಾಡಿದ ಸ್ಥಳ ಎಂಬ ಅರ್ಥದಲ್ಲಿ "ಮುಚುಕುಂದ ಕಾವು" ಅನಂತರ ಮುಜುಂಗಾವು ಎಂದು ಕರೆಯಲ್ಪಟ್ಟಿತು. ಶ್ರೀಕೃಷ್ಣನನ್ನು ಕರೆದು ಪ್ರಾರ್ಥಿಸಿದ ಕಾರಣ "ಮುಚುಕುಂದ ಕೆರೆ" ಎಂಬ ಹೆಸರು ಬಂದು ಅದುವೇ ಕ್ರಮೇಣ ಮುಜುಂಗರೆ ಆಯಿತು ಎಂದೂ ಊಹಿಸಬಹುದಾಗಿದೆ. ಕುಂಭ ಸಂಕ್ರಮಣದಂದು 'ಧ್ವಜಾರೋಹಣವಾಗಿ ಸತತ 7 ದಿನಗಳ ಪರ್ಯಂತ ಇಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ.
"ತೀರ್ಥ ಸ್ನಾನ "ವಿಶೇಷ
ದಕ್ಷಿಣ ಗಂಗೆ ಎಂಬ ಹೆಸರಿನ ಕಾವೇರಿ ಸಾನಿಧ್ಯ ತೀರ್ಥಸ್ನಾನ ಇಲ್ಲಿಯ ವಿಶೇಷ. ಇದನ್ನು ಮುಚುಕುಂದ ತೀರ್ಥ ಎಂದೂ ಕರೆಯುತ್ತಾರೆ. ಧ್ಯಾನ ಮಗ್ನರಾಗಿ 3 ಬಾರಿ ಈ ತೀರ್ಥದಲ್ಲಿ ಮುಳುಗಿ ಏಳುವುದರಿಂದ ಶಾರೀರಿಕ ತೊಂದರೆಗಳಾದ ಬೆಮ್ಮುಕ್ಕುಳ, ಕೆಡು, ಕಾಲಿನ ಆಣಿ,ಸಿಬ್ಬ ಇತ್ಯಾದಿಗಳು ಗುಣ ಹೊಂದುತ್ತದೆ. ತೀರ್ಥಸ್ನಾನ ಮಾಡುವ ಭಕ್ತಾದಿಗಳು ಮೊದಲು ಮನೆಯಲ್ಲಿ ಸ್ನಾನ ಮಾಡಿ ಶುಚಿರ್ಭೂತರಾಗಿ ಬಂದು ಮುಷ್ಠಿ ಅಕ್ಕಿ ಮತ್ತು ಹುರುಳಿಯನ್ನು ಹಿಡಿದುಕೊಂಡು ಕೆರೆಗೆ ಅರ್ಪಿಸಬೇಕು. ಅನಂತರ ಪೂರ್ವಾಭಿಮುಖವಾಗಿ 3 ಬಾರಿ ಮುಳುಗಿ ಏಳಬೇಕು. ಮತ್ತೆ 1 ಮುಷ್ಠಿ ಅಕ್ಕಿ, ಹುರುಳಿಯನ್ನು ಸ್ವಲ್ಪ ಸ್ವಲ್ಪವೇ ಕೆರೆಗೆ ಅರ್ಪಿಸುತ್ತಾ 3 ಪ್ರದಕ್ಷಿಣೆ ಬರಬೇಕು. ಬಳಿಕ ಉಳಿದ ಅಕ್ಕಿ, ಹುರುಳಿ ಮಿಶ್ರಣವನ್ನು ದೇಗುಲದ ಮುಂಭಾಗದ ಕೊಪ್ಪರಿಗೆಯಲ್ಲಿ ಹಾಕಬೇಕು.
ಪ್ರತೀ ವರ್ಷ ತುಲಾಸಂಕ್ರಮಣದಂದು ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಮಿಂದು ಪುನೀತರಾಗುತ್ತಾರೆ. ಈ ಹುರುಳಿ ಮತ್ತು ಬೆಳ್ತಿಗೆ ಅಕ್ಕಿಯ ಮಿಶ್ರಣವನ್ನು ಉಪಯೋಗಿಸುವುದಕ್ಕೂ ವಿಶೇಷ ಅರ್ಥವಿದೆ. ನವಗ್ರಹದಲ್ಲಿ ಕೇತುವೂ ಒಬ್ಬನಾಗಿದ್ದು. ಕೇತುವು ರೋಗದ ಅಧಿ ದೇವತೆಯೆಂಬ ನಂಬಿಕೆಯಿದೆ. ಕೇತುವಿಗೆ ಪ್ರಿಯವಾದ ಧಾನ್ಯ ಹುರುಳಿ. ಆತನ ಅನುಗ್ರಹ ದೊರಕಿ ರೋಗ ಮುಕ್ತರಾಗಲು ಹುರುಳಿಯ ಸಮರ್ಪಣೆಗೆ ಔಚಿತ್ಯಪೂರ್ಣವಾಗಿದೆ. ಅಂತೆಯೇ ಶ್ರೀದೇವಿಗೆ ಅಂದರೆ ಕಾವೇರಮ್ಮನಿಗೆ ಬೆಳ್ತಿಗೆ ಅಕ್ಕಿಯೆಂದರೆ ಪ್ರೀತಿ. ಆ ಅಮ್ಮನ ಅನುಗ್ರಹಕ್ಕಾಗಿ ಬೆಳ್ತಿಗೆ ಅಕ್ಕಿಯನ್ನು ತೀರ್ಥಸ್ನಾನದಲ್ಲಿ ಉಪಯೋಗಿಸಲಾಗುತ್ತದೆ.
ಸೋಮವಾರ ಬೆಳಗ್ಗೆ 3.30ಕ್ಕೆ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರು ಕೆರೆಯ ದಡದಲ್ಲಿ ಕಾವೇರಿ ಅಮ್ಮನನ್ನು ಪೂಜಿಸಿ ಕೆರೆಯಿಂದ ತೀರ್ಥವನ್ನು ತಂದು ಶ್ರೀ ದೇವರಿಗೆ ಅಭಿಷೇಕವನ್ನು ಮಾಡುತ್ತಾರೆ. ನಂತರ ಭಕ್ತಾದಿಗಳು ಕೆರೆಯಲ್ಲಿ ಮಿಂದು ಅಕ್ಕಿ ಹುರುಳಿ ಮಿಶ್ರಣವನ್ನು ಕೆರೆಗೆ ಅರ್ಪಿಸುತ್ತಾ ಸುತ್ತುಬರುವುದು ವಾಡಿಕೆಯಾಗಿದೆ. ನಂತರ ಉಳಿದ ಅಕ್ಕಿ ಹುರುಳಿಯ ಮಿಶ್ರಣವನ್ನು ಶ್ರೀಕ್ಷೇತ್ರಕ್ಕೆ ತೆರಳಿ ದೇವರಿಗೆ ಅರ್ಪಿಸಿ ಪ್ರಸಾದ ಪಡೆಯಲಾಗುತ್ತಿದೆ. ಭೋಜನದ ವ್ಯವಸ್ಥೆಗೆ ಕ್ಷೇತ್ರದ ಮುಂಭಾಗದಲ್ಲಿ ವಿಶಾಲವಾದ ಚಪ್ಪರವನ್ನು ಹಾಕಲಾಗಿದೆ. ತೀರ್ಥಸ್ನಾನದ ದಿನದಂದು ಕುಂಬಳೆ , ಮುಳ್ಳೇರಿಯ ರಸ್ತೆಯಲ್ಲಿ ಸಾಗುವ ಹೆಚ್ಚಿನ ಎಲ್ಲಾ ಬಸ್‌ಗಳೂ ಮುಜುಂಗಾವು ದಾರಿಯಾಗಿ ಸಂಚರಿಸುತ್ತಿವೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ