ಉಳ್ಳಾಲ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರು ಶನಿವಾರದಂದು ಕುತ್ತಾರು ಕೊರಗಜ್ಜನ ಆದಿಸ್ಥಳ ಮತ್ತು ರಕ್ತೇಶ್ವರಿ, ಎಳ್ವೆರ್ ಸಿರಿಕುಲು ಆದಿಸ್ಥಳಗಳಿಗೆ ಕುಟುಂಬ ಸಮೇತರಾಗಿ ಭೇಟಿಯನ್ನಿತ್ತರು. ಮತ್ತು ಪ್ರಾರ್ಥನೆಯನ್ನು ಸಲ್ಲಿಸಿದರು.
ದೈವಶಕ್ತಿಗಳು ಎಲ್ಲರಿಗೂ ಒಳಿತನ್ನೇ ಕರುಣಿಸಲಿ. ನಮ್ಮ ದೇಶಕ್ಕೆ ಬಾಧಿಸಿರುವ ಸಾಂಕ್ರಾಮಿಕ ರೋಗ ದೂರವಾಗಲಿ. ಎಲ್ಲರೂ ಪರಿಸರದ ಜೊತೆಗಿನ ಕಾಳಜಿಯೊಂದಿಗೆ, ನೆಮ್ಮದಿಯ ಸುಖಕರ ಜೀವನ ನಡೆಸುವಂತಾಗಲಿ. ಪ್ರಕೃತಿ ಆರಾಧನೆಯೇ ದೈವಾರಾಧನೆ ಎಂದು ತಿಮ್ಮಕ್ಕ ಹೇಳಿದರು.
ಅವರ ಸಾಕುಮಗ ಉಮೇಶ್ ಮಾತನಾಡಿ, ಈ ಹಿಂದೆ ಆದಿಸ್ಥಳಕ್ಕೆ ಬಂದು ನೆರವೇರಿಸಿದ ಪ್ರಾರ್ಥನೆಗಳಿಗೆ ಫಲ ಸಿಕ್ಕಿತ್ತು. ಹೀಗಾಗಿ ಈ ಬಾರಿ ತಾಯಿ ಜತೆಗೆ ಬಂದಿದ್ದೇನೆ. ದೈವ ಶಕ್ತಿಗಳು ಅವರಿಗೂ ಇನ್ನಷ್ಟು ಶಕ್ತಿ, ಆರೋಗ್ಯ ನೀಡಲಿ, ಜೊತೆಗೆ ಸರ್ವರಿಗೂ ಒಳಿತನ್ನು ಕರುಣಿಸಲಿ ಎಂದರು.
ಮುನ್ನೂರು ಗ್ರಾ.ಪಂ. ಅಧ್ಯಕ್ಷ ವಿಲ್ಫೆಡ್ ಡಿ’ಸೋಜಾ ಅವರು ಸಾಲುಮರದ ತಿಮ್ಮಕ್ಕ ಅವರನ್ನು ಸಮ್ಮಾನಿಸಿ ಗೌರವಿಸಿದರು. ಕಂದಾಯ ಅಧಿಕಾರಿ ಮಂಜುನಾಥ್, ಪಿ.ಡಿ.ಒ ರಾಜೀವ್ ನಾಯ್ಕ, ಗ್ರಾಮಕರಣಿಕೆ ರೇಷ್ಮಾ, ಕುತ್ತಾರು ಶ್ರೀ ಕೊರಗಜ್ಜ ರಕ್ತೇಶ್ವರಿ ಎಳ್ವೆರ್ ಸಿರಿಕುಲು ದೈವಸ್ಥಾನದ ಹರೀಶ್ ಕುತ್ತಾರು ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ