ದೇಶಕ್ಕೇ ವಿನೂತನ ಈ ಮಲ್ಲೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರ

Upayuktha
0

ಬೆಂಗಳೂರು: ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗಳೆಂದರೆ ಜನರಲ್ಲಿ ಒಳ್ಳೆಯ ಭಾವನೆ ಇಲ್ಲ. ಇನ್ನೊಂದೆಡೆಯಲ್ಲಿ, ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರ ಕೈಗೆಟುಕುತ್ತಿಲ್ಲ. ಇದನ್ನು ಮನಗಂಡು, ಸಾರ್ವಜನಿಕ ಆಸ್ಪತ್ರೆಗಳ ಮೇಲೆ ಪುನಃ ವಿಶ್ವಾಸ ಮೂಡಿಸುವಂತಹ ವಿನೂತನವಾದ ಕ್ರಮವನ್ನು ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಹಾಗೂ ಸಚಿವರೂ ಆಗಿರುವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಕೈಗೊಂಡಿದ್ದಾರೆ.


ಸೂಕ್ತ ತಪಾಸಣೆ, ಪ್ರಯೋಗಾಲಯ, ಚಿಕಿತ್ಸೆ ಮತ್ತು ಔಷಧಿಗಳು ಉಚಿತವಾಗಿ ಇಲ್ಲವೇ ಕೈಗೆಟುಕುವ ದರದಲ್ಲಿ ಒಂದೇ ಕಡೆ ಲಭ್ಯವಾಗುವಂತಹ ‘ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ವು (ಸಿಯುಪಿಎಚ್‌ಸಿ) ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇಡೀ ದೇಶದಲ್ಲೇ ವಿನೂತನವಾಗಿರುವ ಈ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿಯವರ 72ನೇ ಹುಟ್ಟುಹಬ್ಬವಾದ ಶನಿವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ.


ಬೆಂಗಳೂರು ನಗರದಲ್ಲಿ ಪ್ರಪ್ರಥಮವಾಗಿ ಬಿಬಿಎಂಪಿ ಮತ್ತು ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸ್ ಸಹಯೋಗದಲ್ಲಿ ಈ ವಿನೂತನ ಮತ್ತು ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗಿದೆ. ಇದಕ್ಕೆ ಹಲವು ಸಾರ್ವಜನಿಕರು ಕೂಡ ದೇಣಿಗೆ ನೀಡಿದ್ದಾರೆ. ಇಲ್ಲಿ ಪ್ರಯೋಗಾಲಯ, ಡಿಜಿಟಲ್ ಎಕ್ಸ್‌ರೇ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಪಿಎಫ್‌ಟಿ ಮತ್ತು ಇಸಿಜಿ ಸೌಲಭ್ಯಗಳು ಸಿಗುತ್ತವೆ. ಇದಲ್ಲದೆ, ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತಹ ಕಣ್ಣಿನ ಪರೀಕ್ಷೆ, ದಂತ ಪರೀಕ್ಷೆ, ತುರ್ತು ಚಿಕಿತ್ಸಾ ಘಟಕ, ಫಿಸಿಯೋಥೆರಪಿ, ಪ್ರಧಾನಮಂತ್ರಿಗಳ ಜನೌಷಧ ಕೇಂದ್ರ ಎಲ್ಲವೂ ಇಲ್ಲಿ ಲಭ್ಯವಿರಲಿದ್ದು, ಒಳರೋಗಿಗಳ ವಿಭಾಗವೂ ಇದೆ. ಅಲ್ಲದೆ ಆಸ್ಪತ್ರೆಯಲ್ಲಿ ಇಎಂಆರ್ (ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್) ವ್ಯವಸ್ಥೆಯೂ ಇದೆ.


ಆಸ್ಪತ್ರೆಗೆ ಬರುವವರಿಗೆ ಹೆಚ್ಚಿನ ಚಿಕಿತ್ಸೆ ಬೇಕಿದ್ದಲ್ಲಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯ ಒದಗಿಸಲಾಗುವುದು. ಇಲ್ಲಿ ವೈದ್ಯಕೀಯ ಗ್ಯಾಸ್‌ ಪೈಪ್‌ಲೈನ್‌ ಸಹಿತ ಆಕ್ಸಿಜನ್ ಜನರೇಟರ್ ಸೌಲಭ್ಯವನ್ನೂ ಅಳವಡಿಸಿಕೊಳ್ಳಲಾಗಿದೆ. ಹಾಗೆಯೇ ಪರಿಣತ ವೈದ್ಯರು ಹೊರರೋಗಿಗಳ ವಿಭಾಗದಲ್ಲಿ ನೆರವು ನೀಡಲಿದ್ದಾರೆ. ಬಿಬಿಎಂಪಿ ಮತ್ತು ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಗಳಡಿ ಈ ಆಸ್ಪತ್ರೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಬ್ಬ ವೈದ್ಯರು ರಜೆಯ ಮೇಲಿದ್ದಾಗ ಮತ್ತೊಬ್ಬ ವೈದ್ಯರು ಕರ್ತವ್ಯದ ಮೇಲಿರುತ್ತಾರೆ. ಯುನೈಟೆಡ್ ವೇ ಎನ್ನುವ ಕಂಪನಿಯವರು ಈ ಆಸ್ಪತ್ರೆಗೆ ಬೇಕಾದ ಉಪಕರಣಗಳನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ.


ದಂತ ಪರೀಕ್ಷೆ, ಕಣ್ಣಿನ ಪರೀಕ್ಷೆ, ಹೃದ್ರೋಗ ಪರೀಕ್ಷೆ, ಡಿಜಿಟಲ್‌ ಎಕ್ಸ್‌ರೇ, ಪ್ರಯೋಗಾಲಯಗಳು, ಮಲ, ಮೂತ್ರ, ರಕ್ತ ಮತ್ತು ಕಫ ಪರೀಕ್ಷೆ, ಪಿಎಫ್‌ಟಿ ಪರೀಕ್ಷೆ ಫಿಸಿಯೋಥೆರಪಿ, ತುರ್ತು ಚಿಕಿತ್ಸಾ ಸೌಲಭ್ಯ, ಹೊರರೋಗಿಗಳ ವಿಭಾಗ, ಒಳರೋಗಿಗಳ ವಿಭಾಗ, ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್, ಇಸಿಜಿ, ವೈದ್ಯಕೀಯ ಪೈಪ್‌ಲೈನ್‌ ಸಹಿತ ಆಕ್ಸಿಜನ್ ಜನರೇಟರ್ ಮತ್ತು ಜನೌಷಧಿ ಕೇಂದ್ರ ಹಾಗೂ ತಜ್ಞ ವೈದ್ಯರ ಲಭ್ಯತೆ. ಮಲ್ಲೇಶ್ವರಂ ಶಾಸಕ , ಸಚಿವರೂ ಆದ ಡಾ.ಸಿಎನ್ ಅಶ್ವತ್ಥ ನಾರಾಯಣ್ ಅವರ ಒತ್ತಾಸೆ, ಕಾಳಜಿಯಿಂದ ಈ ಯೋಜನೆ ಜಾರಿಗೆ ಬಂದಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top