ಬೆಳ್ತಂಗಡಿ ತಾಲೂಕಿನ ಕಲ್ಮಂಜದ ಪರಾರಿ ವಾಳ್ಯದ ಭಿಡೆ ತೋಟದ ಶ್ರೀ ಧನಂಜಯ ಭಿಡೆ ಹಾಗೂ ಶ್ರೀಮತಿ ಚಿತ್ರಾ ಭಿಡೆಯವರ ಸುಪುತ್ರಿಯೆ ಧರಿತ್ರಿ. ಸಾಹಿತ್ಯ, ಸಂಗೀತ, ನಾಟ್ಯ, ಚಿತ್ರಕಲೆ, ನಾಟಕ ಇತ್ಯಾದಿ ಅನೇಕ ಕಲೆಗಳನ್ನು ಸಿದ್ದಿಸಿಕೊಂಡು ಶೈಕ್ಷಣಿಕವಾಗಿ ಸಹ ತನ್ನ ಛಾಪನ್ನು ಒತ್ತಿರುವ ಬಹುಮುಖ ಪ್ರತಿಭೆಯೇ ಧರಿತ್ರಿ ಭಿಡೆ.
ಸಿದ್ದಬೈಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮಾಡಿ, ಪ್ರಸ್ತುತ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಾಣಿಜ್ಯಶಾಸ್ತ್ರ ವಿದ್ಯಾರ್ಥಿನಿಯಾಗಿದ್ದಾಳೆ.
ಪುತ್ತೂರಿನ ವಿದುಷಿ ಶ್ಯಾಮಲಾ ನಾಗರಾಜ್ ಅವರ ಬಳಿ ಸಂಗೀತದಲ್ಲಿ ಜೂನಿಯರ್, ಮಂಗಳೂರಿನ ವಿದುಷಿ ಸುಮಂಗಲಾ ರತ್ನಾಕರ ರಾವ್ ಇವರಲ್ಲಿ ಭರತನಾಟ್ಯ ಕಲಿತು ಭರತನಾಟ್ಯದಲ್ಲಿ ಜ್ಯೂನಿಯರ್ ಹಾಗೂ ಸೀನಿಯರ್ ಮುಗಿಸಿದ್ದಾಳೆ. ಬೆಂಗಳೂರಿನ ಶ್ರೀಮತಿ ನಿರುಪಮಾ ರಾಜೇಂದ್ರ ಅವರಲ್ಲಿ ದೇಸಿ ಮಾರ್ಗ ಅಡವು ಮತ್ತು ಕರಣಗಳನ್ನು ಕಲಿತು ಅದರಲ್ಲೂ ಸೈ ಅನಿಸಿಕೊಂಡವಳು ಈಕೆ. ಸಂಗೀತ ಹಾಗೂ ಭರತನಾಟ್ಯದಲ್ಲಿ ಪ್ರಬುದ್ಧ ಕಲಾವಿದೆಯಾಗಿ ಅನೇಕ ಕಾರ್ಯಕ್ರಮ ನೀಡಿ ಜನಮನ್ನಣೆಯನ್ನೂ ಕೂಡ ಗಳಿಸಿದ್ದಾಳೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ಜ್ಞಾನವಿಕಾಸ ಯೂಟ್ಯೂಬ್ ಚಾನಲ್ ಮೂಲಕ ಭರತನಾಟ್ಯ ಕಾರ್ಯಕ್ರಮ ನೀಡಿದ್ದಾಳೆ. ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಮೂರನೆಯ ರಾಜ್ಯ ಅಧಿವೇಶನದಲ್ಲಿ ಕೀಚಕ ವಧೆ ನೃತ್ಯ ರೂಪಕ, ತಾಲೂಕು ಮಟ್ಟದ ಗಮಕ ಸಮ್ಮೇಳನದಲ್ಲಿ ಕುಮಾರವ್ಯಾಸ ಭಾರತದ ಕರ್ಣಪರ್ವಕ್ಕೆ ಅಭಿನಯ, ನೃತ್ಯ ಗುರುಗಳೊಂದಿಗೆ ಅನೇಕ ಪ್ರಮುಖ ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮ ನೀಡಿದ್ದಾಳೆ. ಅಲ್ಲದೇ ಪೋಷಕರ ಸಹಕಾರದಿಂದ ತನ್ನ ಸಹೋದರಿ ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಹಂಸಿನಿ ಭಿಡೆಯೊಂದಿಗೆ ನೃತ್ಯ ತಂಡ ರಚಿಸಿಕೊಂಡು ವಿವಿಧ ಕಡೆ ನೃತ್ಯ ಪ್ರದರ್ಶನ ನೀಡಿದ್ದಾಳೆ.
ಶಾಲಾ ಹಾಗೂ ಕಾಲೇಜು ಶಿಕ್ಷಣದಲ್ಲಿ ಇಲ್ಲಿಯ ತನಕ ಉನ್ನತ ದರ್ಜೆ ಅಂಕಗಳನ್ನು ಪಡೆಯುತ್ತಾ ಶೈಕ್ಷಣಿಕವಾಗಿಯೂ ಈಕೆ ಗಮನಾರ್ಹ ಸಾಧನೆ ಮಾಡುತ್ತಿದ್ದಾಳೆ. ಸಿರಿಗನ್ನಡ ಬಳಗ ನಡೆಸುವ ಕನ್ನಡ ಪ್ರತಿಭಾ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಪಡೆದವಳು ಇವಳು. ಒಲಿಂಪಿಯಾಡ್ ಇಂಡಿಯನ್ ಟ್ಯಾಲೆಂಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 137 ನೆಯ ಸ್ಥಾನ ಪಡೆದು ಕೀರ್ತಿ ತಂದಿದ್ದಾಳೆ. ಇತ್ತೀಚೆಗೆ ಅನೇಕ ತಾಲೂಕು ಹಾಗೂ ಜಿಲ್ಲಾ ಮಟ್ಟದ ಬಹುಮಾನ ಪಡೆದಿದ್ದಾಳೆ.
ಇವಳು ಅನೇಕ ಹವ್ಯಾಸಗಳನ್ನು ಮೈಗೂಡಿಸಿಕೊಂಡವಳು. ಕೃಷಿ ಕೆಲಸದಿಂದ ಹಿಡಿದು ಕಂಪ್ಯೂಟರ್ ವರೆಗೆ ಗೊತ್ತಿಲ್ಲದ ವಿಷಯಗಳು ಇಲ್ಲ. ಕಥೆ ಕಾದಂಬರಿ ಓದುವುದು, ಪ್ರಬಂಧ ರಚನೆ, ಭಾಷಣ, ಉಪನ್ಯಾಸ ಅವಧಾನ ಕೇಳುವುದು, ನಾಟಕದಲ್ಲಿ ಪಾತ್ರ ವಹಿಸುವುದು, ಏಕವ್ಯಕ್ತಿ ಪ್ರದರ್ಶನ ನೀಡುವುದು, ಸಂಗೀತ, ಚಿತ್ರಕಲೆ, ರಂಗೋಲಿ, ಕಾರ್ಯಕ್ರಮ ನಿರೂಪಣೆ ಮಾಡುವುದು, ತಾಳಮದ್ದಳೆಯಲ್ಲಿ ಅರ್ಥಧಾರಿಯಾಗಿ ಭಾಗವಹಿಸುವುದು, ನೃತ್ಯ ಕಾರ್ಯಕ್ರಮ ವೀಕ್ಷಣೆ ಇತ್ಯಾದಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ.
ವಿದ್ಯಾರ್ಥಿ ಸಂಘಟನೆಯಲ್ಲಿ ಕೂಡ ಹಿಂದೆ ಬಿದ್ದಿಲ್ಲ . ತನ್ನದೇ ಆದ ಗೆಳತಿಯರ ಜೊತೆ ಸೇರಿ ಅನೇಕ ಕಾರ್ಯಕ್ರಮ ನೀಡುತ್ತಿದ್ದಾಳೆ. ಪ್ರಸ್ತುತ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಸಂಸ್ಕೃತ ಸಂಘದ ಅಧ್ಯಕ್ಷೆಯಾಗಿ ಅನೇಕ ಕಾರ್ಯಕ್ರಮಗಳ ರೂಪುರೇಷೆಯನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ.
ಬಹುಮುಖಿ ಪ್ರತಿಭೆಯಾಗಿರುವ ಈಕೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಹಾಗೂ ಪುರಸ್ಕಾರಗಳನ್ನು ಕೂಡ ಪಡೆದಿದ್ದಾಳೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯಾಗಿರುವಾಗಲೆ ರಸಪ್ರಶ್ನೆ ಸ್ಪರ್ಧೆ, ಗೀತಾ ಸ್ಪರ್ಧೆ, ವಿವಿಧ ನೃತ್ಯ ಸ್ಪರ್ಧೆ, ಕಂಠಪಾಠ, ಭಾಷಣ, ಕಥೆ ಹೇಳುವುದು, ಛದ್ಮವೇಷ ಇತ್ಯಾದಿಯಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸುಮಾರು 35 ಪ್ರಥಮ ಹಾಗೂ ಅಷ್ಟೇ ದ್ವಿತೀಯ ಬಹುಮಾನಗಳನ್ನು ಪಡೆದವಳು. ಕೆಲವು ರಾಜ್ಯ ಮಟ್ಟದ ಬಹುಮಾನಗಳನ್ನು ಪಡೆದಿದ್ದಾಳೆ. 2018ರಲ್ಲಿ ಭುವನೇಶ್ವರದಲ್ಲಿ ನಡೆದ 26 ನೆಯ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಹಾಗೂ 2019 ರಲ್ಲಿ ಕೇರಳದ ತಿರುವನಂತಪುರದಲ್ಲಿ ನಡೆದ 27 ನೆಯ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಗಳಲ್ಲಿ ಪ್ರಯೋಗ ಮಂಡಿಸಿ ರಾಷ್ಟ್ರೀಯ ಸ್ತರದಲ್ಲಿ ಗುರುತಿಸಿಕೊಂಡಿದ್ದಾಳೆ.
ಒಟ್ಟಾರೆಯಾಗಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡು ಅನೇಕ ಹವ್ಯಾಸಗಳನ್ನು ಮೈಗೂಡಿಸಿಕೊಂಡು ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸುತ್ತಿರುವ ಧರಿತ್ರಿ ಭಿಡೆ ಇನ್ನಷ್ಟು ಸಾಧನೆ ಮಾಡಲಿ ಎಂಬುವುದೇ ಹಾರೈಕೆ.
- ಡಾ. ಪ್ರಸನ್ನಕುಮಾರ ಐತಾಳ್
ಸಂಸ್ಕೃತ ಭಾಷಾ ವಿಭಾಗ
ಎಸ್.ಡಿ.ಎಂ ಪ.ಪೂ ಕಾಲೇಜು, ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ