ವಿದ್ಯಾಭ್ಯಾಸವೆಂದರೆ ಜ್ಞಾನದ ನಿರಂತರ ಹುಡುಕುವಿಕೆ : ಚಂದ್ರಕಾಂತ ಗೋರೆ
ಪುತ್ತೂರು: ವಿದ್ಯಾಭ್ಯಾಸವೆಂದರೆ ಜ್ಞಾನದ ನಿರಂತರ ಹುಡುಕುವಿಕೆ. ನಮಗೆ ಏನೂ ಗೊತ್ತಿಲ್ಲ ಎಂದು ಗೊತ್ತಾಗುವುದೇ ಜ್ಞಾನ. ನಿರಂತರ ಬದಲಾಗುತ್ತಿರುವ ಸಮಾಜದಲ್ಲಿ ಮಕ್ಕಳು ಕೇವಲ ಪುಸ್ತಕ ಜ್ಞಾನ ಅಥವಾ ವಿಷಯ ಜ್ಞಾನವನ್ನು ಹೊಂದಿದ್ದರೆ ಸಾಲದು. ವರ್ತನೆಗಳನ್ನು ಕೂಡ ಮಾರ್ಪಡು ಮಾಡಿಕೊಳ್ಳುವಂತಹ ಅವಶ್ಯಕತೆಯಿದೆ ಎಂದು ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಸತಿಯುತ ವಿದ್ಯಾಲಯದಲ್ಲಿ ದಿನಾಂಕ ಬುಧವಾರ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ ವತಿಯಿಂದ ಆಯೋಜಿಸಲಾದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ನಮ್ಮ ಶರೀರವು ನಮ್ಮ ಮನಸ್ಸಿನಲ್ಲಿ ಮೂಡುವ ಆಲೋಚನೆಗಳನ್ನು ವ್ಯಕ್ತ ಪಡಿಸುವ ಸಾಧನವಾಗಿದೆ. ಆದ್ದರಿಂದ ನಾವು ಸುಳ್ಳು ಹೇಳಿದರೂ ನಮ್ಮ ಶರೀರ ಸುಳ್ಳು ಹೇಳುವುದಿಲ್ಲ. ಇಂದಿನ ಯಾಂತ್ರಿಕ ಯುಗದಲ್ಲಿ ಹಲವಾರು ಯಂತ್ರಗಳ ಜೊತೆ ಕೆಲಸ ಮಾಡುವಂತಹ ಚತುರತೆಯನ್ನು ಬೆಳೆಸಿಕೊಂಡಿದ್ದೇವೆ. ಆದರೆ ನಮ್ಮ ಶರೀರ ಹಾಗೂ ಮನಸ್ಸಿನ ಲಯವನ್ನು ಅರಿಯುವುದರಲ್ಲಿ ಸೋತಿದ್ದೇವೆ. ಯಾವಾಗ ಮನಸ್ಸು ಮತ್ತು ಶರೀರದ ಲಯವನ್ನು ಅರಿತು ಅದಕ್ಕೆ ಅನುಗುಣವಾಗಿ ವ್ಯಕ್ತಿತ್ವವನ್ನು ರೂಪಿಸಿಕೊಂಡಾಗ ನಾವು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಮಕ್ಕಳು ಮೊಬೈಲ್ ಬಳಸುವುದರಲ್ಲಿ ಹೆಚ್ಚು ಉತ್ಸುಕರಾಗದೆ, ಪುಸ್ತಕಗಳನ್ನು ಓದುವತ್ತ ಒಲವು ಹರಿಸಬೇಕು ಏಕೆಂದರೆ ತಲೆಬಗ್ಗಿಸಿ ಪುಸ್ತಕವನ್ನು ಓದಿದರೆ ಅದು ನಮ್ಮನ್ನು ತಲೆಯೆತ್ತಿ ನಿಲ್ಲುವಂತೆ ಮಾಡುತ್ತದೆ ಹಾಗೂ ಬೇರೆಯವರ ಸಲಹೆ ಸೂಚನೆಗಳಿಗೆ ಹೆಚ್ಚಿನ ಮಹತ್ವ ನೀಡದೆ ನಮ್ಮ ಮನಸ್ಸು ಶರೀರ ಸೂಚನೆಗಳಿಗೆ ಕಿವಿಯಾಗಬೇಕು ಎಂದು ಹೇಳಿದರಲ್ಲದೆ ನಮ್ಮ ಮನಸ್ಸಿನ ನಿಯಂತ್ರಣದ ಜೊತೆ ಶರೀರವನ್ನು ಆಗಾಗ ಗಮನಿಸುತ್ತಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ಪ್ರಭು ಉಪಸ್ಥಿತರಿದ್ದು ಕಾಲೇಜಿನ ಎಲ್ಲಾ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವರ್ಗದವರು ಭಾಗವಹಿಸಿದರು. ಗಣಕಶಾಸ್ತ್ರ ವಿಭಾಗದ ಜಯಂತಿ ಹೊನ್ನಮ್ಮ ನಿರೂಪಿಸಿ ವಂದನಾರ್ಪಣೆಗೈದರು.