ಉಜಿರೆ: ಸ್ವಾತಂತ್ರ್ಯದ 75 ವರ್ಷಗಳಲ್ಲಿ ಭಾರತೀಯರು ಸಾಕ್ಷರತೆ, ಆರೋಗ್ಯಸುಧಾರಣೆ, ಆಯಸ್ಸು ಹಾಗೂ ಆರ್ಥಿಕ ಸಬಲೀಕರಣದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದೇವೆ. ಅಂತೆಯೇ 21 ನೇ ಶತಮಾನಕ್ಕೆ ಯುವಜನಾಂಗ ಜ್ಞಾನ, ಕೌಶಲ ಬೆಳೆಸಿಕೊಳ್ಳಬೇಕಾಗಿದೆ. ರಾಷ್ಟ್ರ ಕಟ್ಟುವ ಲ್ಲಿ ನಾವೆಲ್ಲ ಜವಾಬ್ದಾರಿಯುತ ಹೊಣೆಗಾರರಾಗಬೇಕು ಎಂದು ಉಜಿರೆ ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಪ್ರೊ. ದಿನೇಶ್ ಚೌಟ ನುಡಿದರು.
ಅವರು ಆ. 6 ರಂದು ಉಜಿರೆ ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ಪ್ರಯುಕ್ತ "ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಅಭಿಯಾನ" ಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಶ್ರೀಮತಿ ದಿವ್ಯಾಕುಮಾರಿ ಶುಭಾಶಂಸನೆಗೈದು ಸ್ವಾತಂತ್ರ್ಯ ಅಮೃತವರ್ಷಾಚರಣೆ ಅರ್ಥಪೂರ್ಣವಾಗಲು "ಹರ್ ಘರ್ ತಿರಂಗಾ" ಅಭಿಯಾನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಜವಾಬ್ದಾರಿಯುತ ಸ್ವಯಂಸೇವಕರಾಗಿ ರಾಷ್ಟ್ರಾಭಿಮಾನದ ದ್ಯೋತಕವಾಗಿ ಪ್ರತಿ ಮನೆಗಳಲ್ಲಿ ಆ. 13 ರಿಂದ 15 ರ ವರೆಗೆ ಅಹರ್ನಿಶಿ ರಾಷ್ಟ್ರಧ್ವಜಾರೋಹಣ ನಡೆಯುವಂತೆ ಮಾಹಿತಿ ನೀಡಿ ರಾಷ್ಟ್ರದ ಘನತೆ, ಗೌರವವನ್ನು ಎತ್ತಿಹಿಡಿಯಬೇಕು. ಪ್ಲಾಸ್ಟಿಕ್ ಧ್ವಜ ಹೊರತುಪಡಿಸಿ ರೇಷ್ಮೆ, ಉಣ್ಣೆ ಬಟ್ಟೆಯ ಧ್ವಜವು ನೆಲಕ್ಕೆ ತಾಗದಂತೆ, ಎಲ್ಲೆಂದರಲ್ಲಿ ಎಸೆಯದಂತೆ, ದುರುಪಯೋಗವಾಗದೆ ಜೋಪಾನ ವಹಿಸುವಂತೆ ನಾಗರಿಕರಿಗೆ ಜಾಗೃತಿಯ ಮಾಹಿತಿ ನೀಡಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ವಿನಂತಿಸಿಕೊಂಡರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ!ಪ್ರಸನ್ನಕುಮಾರ್ ಐತಾಳ್ ಸ್ವಾಗತಿಸಿ, ಪ್ರಸ್ತಾವಿಸಿ ರಾಷ್ಟ್ರದ 75 ನೇ ಸ್ವಾತಂತ್ರ್ಯ ವರ್ಷದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ 50 ನೇ ವರ್ಷದಲ್ಲಿ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದು ರಾಷ್ಟ್ರಧ್ವಜ ಮಾಹಿತಿ ಅಭಿಯಾನದಲ್ಲಿ 150 ಸ್ವಯಂ ಸೇವಕರ ತಂಡಗಳು ಉಜಿರೆ ಗ್ರಾಮದ ಮನೆ ಮನೆಗಳಿಗೆ ರಾಷ್ಟ್ರಧ್ವಜದ ಬಗ್ಗೆ ಮಾಹಿತಿ ನೀಡಲಿವೆ ಎಂದರು.
ವೇದಿಕೆಯಲ್ಲಿ ಸಹ ಯೋಜನಾಧಿಕಾರಿ ಚೇತನಾ ಕುಮಾರಿ ಹಾಗೂ ಪೂರ್ವ ಯೋಜನಾಧಿಕಾರಿ ರಾಜು ಅವರು ಉಪಸ್ಥಿತರಿದ್ದರು.