ಮಂತ್ರಾಲಯ: ಇಲ್ಲಿನ ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನ ಸನ್ನಿಧಾನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಶ್ರೀಮನ್ನ್ಯಾಯಸುಧಾ ಮಂಗಳ ಮಹೋತ್ಸವ’ಕ್ಕೆ ಗುರುವಾರ ವೈಭವದ ಚಾಲನೆ ದೊರೆಯಿತು.
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಸುಬುಧೇಂದ್ರ ತೀರ್ಥರು ಹಾಗೂ ಅವರ ವಿದ್ಯಾ ಗುರುಗಳಾದ ಪಂಡಿತ ಕೇಸರಿ ರಾಜಾ ಎಸ್. ಗಿರಿಯಾಚಾರ್ಯರು ನೂರು ಮಂದಿ ಸುಧಾ ಪಂಡಿತರೊಂದಿಗೆ ವಾಕ್ಯಾರ್ಥ ಮತ್ತು ಸುಧಾನುವಾದ ಚರ್ಚಾ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸುಬುಧೇಂದ್ರ ತೀರ್ಥರು, ಶ್ರೀಮನ್ನ್ಯಾಯಸುಧಾಗ್ರಂಥವು ಪರಮ ಪವಿತ್ರ ಹಾಗೂ ಸಂಪತ್ಭರಿತ ಗ್ರಂಥವಾಗಿದೆ. ಸುಧಾ ಗ್ರಂಥದ ಮಹತ್ವವು ಅಧ್ಯಯನದಿಂದ ಮಾತ್ರ ತಿಳಿಯಲು ಸಾಧ್ಯ. ಪ್ರತಿ ವಾಕ್ಯವೂ ಅರ್ಥಗರ್ಭಿತ ವಾಗಿದೆ ಎಂದರು.
ವೇದಾಧ್ಯಯನ ನಿರತರು ಸದಾಚಾರಿಗಳಾಗಿ ತಮ್ಮ ಪಾಂಡಿತ್ಯವನ್ನು ತಮ್ಮ ಶಿಷ್ಯರಿಗೆ ಧಾರೆ ಎರೆದುಕೊಡುವ ಕಾರ್ಯ ಮಾಡಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಮಂತ್ರಾಲಯ ಶ್ರೀ ಮಠವು ವಿದ್ಯಾಮಠವೆಂದೇ ಖ್ಯಾತಿ ಪಡೆದಿದೆ. ಹಾಗಾಗಿ ವಿದ್ವಾಂಸರು ಮತ್ತು ಪಂಡಿತರ ಕಷ್ಟ ಕಾರ್ಪಣ್ಯಗಳಿಗೆ ಮಂತ್ರಾಲಯ ಮಠ, ನೆರವಾಗಿ ನಿಲ್ಲಲಿದೆ ಶ್ರೀರಾಘವೇಂದ್ರ ಸ್ವಾಮಿಗಳು ವೇದ ವಿದ್ವಾಂಸರಿಗೆ ಆಶ್ರಯಧಾತರು ಎಂದು ನುಡಿದರು.
ಸುಧಾಪಾಠ ಅಧ್ಯಯನ ಪೂರೈಸಿದ ಎಲ್ಲ ವಿದ್ವಾಂಸರ ಲೌಕಿಕ ಜೀವನಕ್ಕೆ ನೆರವಾಗುವ ನಿಟ್ಟಿನಲ್ಲಿ ಮಂತ್ರಾಲಯ ಸಂಸ್ಕೃತ ವಿದ್ಯಾಪೀಠದಲ್ಲೇ ಅಧ್ಯಾಪಕ ಹುದ್ದೆ ನೀಡಿ ಆರ್ಥಿಕವಾಗಿ ಸಹಾಯ ಮಾಡಲಾಗುತ್ತಿದೆ ಎಂದು ಹೇಳಿದರು.
ಪೇಜಾವರ ಮಠದ ವಿದ್ವಾಂಸರಾದ ಪಂ. ಶ್ರೀಹರಿದಾಸ ಭಟ್ಟರು, ಶ್ರೀ ಕನಕಾಚಲ ಆಚಾರ್ಯ, ಡಾ.ಎನ್. ವಾದಿರಾಜಾಚಾರ್ಯರು ಸೇರಿದಂತೆ ತ್ರಿಮತಸ್ಥ ಬ್ರಾಹ್ಮಣ ಸಮಾಜದ ವಿದ್ವಾಂಸರು ವಿದ್ವತ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಂಸ್ಥಾನ ಪೂಜೆ: ಶ್ರೀ ಸುಬುಧೇಂದ್ರ ತೀರ್ಥರು ಬೆಳಗ್ಗೆ ಶ್ರೀಮೂಲ ರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದರು. ರಾಯರ ಮೂಲಬೃಂದಾವನಕ್ಕೆ ಎಂದಿನಂತೆ ಅಭಿಷೇಕ ಅರ್ಚಾನಾದಿಗಳು ನೆರವೇರಿ ಬೃಂದಾವನಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.
ದೇಶದ ನಾನಾ ಕಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸುಧಾ ಮಂಗಳ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ